More

    ಮರಗಳನ್ನು ತೆರವುಗೊಳಿಸದೆ ಅಂತಾರಾಜ್ಯ ರಸ್ತೆ ಅಭಿವೃದ್ಧಿಗೆ ವಿಘ್ನ

    ಶಶಿ ಈಶ್ವರಮಂಗಲ

    ಬ್ರಿಟಿಷರ ಕಾಲದ ರಸ್ತೆಯಾಗಿದ್ದರೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಅಭಿವೃದ್ಧಿ ಕಾಣದೆ ದುಸ್ಥಿತಿಯಲ್ಲಿದ್ದ ಈಶ್ವರಮಂಗಲ- ಸುಳ್ಯಪದವು ಅಂತಾರಾಜ್ಯ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದೆ. ಆದರೆ ರಸ್ತೆ ಬದಿಯಲ್ಲಿರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾಗದಿರುವುದು ಕಾಮಗಾರಿ ಮುಂದುವರಿಸಲು ಅಡ್ಡಿಯಾಗಿದೆ.

    ಕರ್ನಾಟಕ- ಕೇರಳ ಗಡಿಪ್ರದೇಶದ ಜನತೆಗೆ ಈಶ್ವರಮಂಗಲ- ಸುಳ್ಯಪದವು ರಸ್ತೆ ಉಪಯುಕ್ತ ರಸ್ತೆಯಾಗಿದೆ. ಗ್ರಾಮೀಣ ಪ್ರದೇಶದ ಬಹಳಷ್ಟು ಹೊಸ ರಸ್ತೆಗಳು ಅಭಿವೃದ್ಧಿ ಕಂಡಿದ್ದರೂ ಬ್ರಿಟಿಷರ ಕಾಲದಲ್ಲೇ ಖಾಸಗಿ ಬಸ್ ಓಡಾಟ ವ್ಯವಸ್ಥೆಯಿದ್ದ ಪುತ್ತೂರು- ಈಶ್ವರಮಂಗಲ- ಸುಳ್ಯಪದವು ರಸ್ತೆಯ ಈಶ್ವರಮಂಗಲ- ಸುಳ್ಯಪದವು ನಡುವಿನ ರಸ್ತೆ ಮಾತ್ರ ಅಭಿವೃದ್ಧಿ ಕಾಣುವಲ್ಲಿ ನಿರ್ಲಕ್ಷೃಕ್ಕೊಳಗಾಗಿತ್ತು. ಈಗ ಶಾಸಕ ಸಂಜೀವ ಮಠಂದೂರು ಮುತುವರ್ಜಿಯಿಂದಾಗಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 4.29 ಕೋಟಿ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದೆ. ಈಶ್ವರಮಂಗಲದಿಂದ ಮಡ್ಯಾಲಮೂಲೆ, ಪರಮೂಲೆ ತನಕ ರಸ್ತೆ ವಿಸ್ತರಿಸಿ, ಜಲ್ಲಿ ಹಾಸುವ ಕೆಲಸ ನಡೆದಿದೆ. ರಸ್ತೆ ಬದಿಯಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಿಸಲಾಗುತ್ತಿದೆ.

    ಮಡ್ಯಲಮೂಲೆಯಿಂದ ಪದಡ್ಕ ತನಕ ರಸ್ತೆ ರಕ್ಷಿತಾರಣ್ಯದ ನಡುವೆ ಹಾದು ಹೋಗುತ್ತಿದ್ದು, ರಸ್ತೆ ಬದಿಯಲ್ಲಿರುವ ಮರಗಳನ್ನು ತೆರವುಗೊಳಿಸಬೇಕಿದೆ. ಆದರೆ ಅರಣ್ಯ ಇಲಾಖೆಯವರು ಮರಗಳ ತೆರವಿಗೆ ಸಮ್ಮತಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಆ ಭಾಗದ ಕೆಲವು ಕಡೆ ರಸ್ತೆ ವಿಸ್ತರಣೆ ಕಾಮಗಾರಿ ಮುಂದುವರಿಸಲು ಗುತ್ತಿಗೆದಾರರಿಗೆ ಸಮಸ್ಯೆಯಾಗಿದೆ

    ಅಪಾಯಕಾರಿ ಸ್ಥಿತಿಯಲ್ಲಿ ಮರಗಳು: ಈಶ್ವರಮಂಗಲ- ಸುಳ್ಯಪದವು ರಸ್ತೆಯ ಮೀನಾವು ಭಾಗದಲ್ಲಿ ರಸ್ತೆ ವಿಸ್ತರಣೆ ವೇಳೆ ರಸ್ತೆ ಬದಿಯ ಎತ್ತರ ಭಾಗಲ್ಲಿರುವ ಕೆಲವೊಂದು ಮರಗಳ ಬುಡದ ತನಕ ಮಣ್ಣು ಅಗೆಯಲಾಗಿದೆ. ಮೂರ‌್ನಾಲ್ಕು ಕಡೆಗಳಲ್ಲಿ ಮರದ ಬೇರುಗಳ ತನಕವೂ ಮಣ್ಣು ಅಗೆಯಲಾಗಿದ್ದು, ಮರಗಳ ಆಧಾರ ಕಳಚಿಕೊಂಡಿರುವುದರಿಂದ ಬೀಳುವ ಸ್ಥಿತಿಗೆ ತಲುಪಿವೆ. ಒಂದೆರಡು ಕಡೆಗಳಲ್ಲಿ ಈಗಾಗಲೇ ಅಗೆದ ಮರಗಳ ಬುಡದ ಮಣ್ಣು ಬಿರುಕು ಬಿಟ್ಟು ನಿಂತಿದೆ. ಮಳೆ ಸುರಿದಲ್ಲಿ ಆ ಮರಗಳು ರಸ್ತೆ ಮೇಲೆ ಉರುಳಿಬಿದ್ದು ಅಪಾಯ ಸಂಭವಿಸುವ ಸಾಧ್ಯತೆ ಅಧಿಕವಾಗಿದೆ.

    ರಸ್ತೆ ಬದಿಯಲ್ಲೇ ಕೆರೆ: ಪ್ರಸ್ತುತ ರಸ್ತೆ ವಿಸ್ತರಣೆಗಾಗಿ ನೆಲ ಸಮತಟ್ಟುಗೊಳಿಸಿದ ಪರಮೂಲೆ ಭಾಗದಲ್ಲಿ ರಸ್ತೆ ಬದಿಯ 30 ಅಡಿ ಕೆಳಭಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಕುಡಿಯುವ ನೀರಿಗಾಗಿ ಬಳಸುವ ಕೆರೆ ಇದೆ. ಕೆರೆಯ ಬದಿಯ ತನಕವೂ ರಸ್ತೆಗೆ ಮಣ್ಣು ಹಾಕಿ ಸಮತಟ್ಟುಗೊಳಿಸ ಲಾಗಿದೆ. ರಸ್ತೆ ತಿರುವು ಭಾಗದಲ್ಲಿ ಕೆರೆ ಇದ್ದು, ಪೊದೆ ಮರಗಳು ತುಂಬಿಕೊಂಡು ಪ್ರಯಾಣಿಕರ ಗಮನಕ್ಕೆ ಬಾರದಂತಾಗಿದೆ. ಪ್ರಸ್ತುತ ರಸ್ತೆ ಬದಿಗೆ ಹಾಕಿರುವ ಮಣ್ಣು ಮಳೆಗಾಲದಲ್ಲಿ ಕುಸಿದು ಕೆರೆಗೆ ಬೀಳುವ ಸಾಧ್ಯತೆಯೂ ಇದೆ. ಆದ್ದರಿಂದ ಕೆರೆಬದಿ ತಡೆಗೋಡೆ ಅಥವಾ ತಡೆಬೇಲಿ ನಿರ್ಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಈಶ್ವರಮಂಗಲ- ಸುಳ್ಯಪದವು ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ರಸ್ತೆ ಬದಿಯಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಕೆಲವೊಂದು ಮರಗಳನ್ನು ತೆರವುಗೊಳಿಸಬೇಕಾಗಿದೆ. ಈ ವಿಚಾರವನ್ನು ಶಾಸಕರ ಗಮನಕ್ಕೂ ತರಲಾಗಿದೆ. ಈಗಾಗಲೇ ಶಾಸಕರು ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
    – ಜನಾರ್ದನ್, ಇಂಜಿನಿಯರ್, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts