ಮಂಗಳೂರು: ಕರಾವಳಿಯ 7 ಸಾಧಕರಿಗೆ ರಾಜ್ಯ ಸರ್ಕಾರ ನೀಡುವ ಕ್ರೀಡಾ ಪ್ರಶಸ್ತಿ ಲಭಿಸಿವೆ.
ಕಂಬಳ ಸಾಧಕರಾದ ಮೂಡುಬಿದಿರೆಯ ಮಿಜಾರಿನ ಶ್ರೀನಿವಾಸ ಗೌಡ (2017), ಬೆಳ್ತಂಗಡಿ ಹಕ್ಕೇರಿಯಯ ಸುರೇಶ್ ಶೆಟ್ಟಿ (2018), ಪ್ರವೀಣ್ ಕೆ (2019), ಮೂಡುಬಿದರೆಯ ಬಾಲ್‌ಬ್ಯಾಡ್ಮಿಂಟನ್ ಪಟು ಎಸ್.ಕೆ.ಪಲ್ಲವಿ ಕ್ರೀಡಾ ರತ್ನ ಪ್ರಶಸ್ತಿ ಪಡೆದಿದ್ದಾರೆ. ಕಾರ್ಕಳದ ಅಭಿನಯಾ ಶೆಟ್ಟಿ, ಪುತ್ತೂರಿನ ಅಭಿಷೇಕ್ ಶೆಟ್ಟಿ ಏಕಲವ್ಯ ಪ್ರಶಸ್ತಿ ಗಳಿಸಿದರೆ, ಬಂಟ್ವಾಳದ ಜಿ.ಜಯಲಕ್ಷ್ಮೀ ಜೀವಮಾನ ಸಾಧನೆಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಕ್ರೀಡೆಗೆ ಪ್ರೋತ್ಸಾಹ ನೀಡುವ ಸಂಸ್ಥೆಗೆ ನೀಡಲಾಗುವ ಪ್ರಶಸ್ತಿ ಮಂಗಳೂರು ವಿವಿ ಪಾಲಾಗಿದೆ.
ಚಿನ್ನದ ಓಟಗಾರ ಶ್ರೀನಿವಾಸ ಗೌಡ: ಕಂಬಳ ಕ್ರೀಡೆಯಲ್ಲಿ 8 ವರ್ಷಗಳಿಂದ ತೊಡಗಿಸಿಕೊಂಡು 2019-20ರಲ್ಲಿ ಕಂಬಳದ ಚಿನ್ನದ ಓಟಗಾರನೆಂದು ದಾಖಲೆ ನಿರ್ಮಿಸಿ ರಾಷ್ಟ್ರ-ಅಂತಾರಾಷ್ಟ್ರೀಯ ಸುದ್ದಿಯಾಗಿದ್ದ ಮೂಡುಬಿದಿರೆ ಅಶ್ವಥಪುರ ನಿವಾಸಿ ಶ್ರೀನಿವಾಸ ಗೌಡ ಪ್ರತೀ ಕಂಬಳದಲ್ಲಿಯೂ 3 ಅಥವಾ 4 ಜೋಡಿ ಕೋಣಗಳನ್ನು ಓಡಿಸುತ್ತಿದ್ದರು. ಆದರೆ 2019-20ರಲ್ಲಿ ಬಂಗಾಡಿಕೊಲ್ಲಿಯಲ್ಲಿ 5 ಜೊತೆ ಕೋಣಗಳನ್ನು ಓಡಿಸಿದ್ದರು. ಉಪ್ಪಿನಂಗಡಿ ಕಂಬಳದಲ್ಲಿ 6 ಜೊತೆ ಕೋಣ ಓಡಿಸುವ ಮೂಲಕ ದಾಖಲೆ ನಿರ್ಮಿಸಿದ್ದರು. ಅಲ್ಲದೆ ಒಂದೇ ಸೀಸನ್‌ನಲ್ಲಿ 3 ಕಂಬಳಗಳಲ್ಲಿ ತಲಾ 4 ಬಹುಮಾನ ಪಡೆದು ಹೊಸ ದಾಖಲೆ ನಿರ್ಮಿಸಿದ್ದರು. ಬಹುಭಾಷಾ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದು, ಬಾಹುಬಲಿ ಸಿನಿಮಾದಲ್ಲಿ ಗೂಳಿ ಓಡಿಸಿದ್ದರು.
ಪದಕಗಳ ಸರದಾರ ಪ್ರವೀಣ್ ಕೋಟ್ಯಾನ್: ಮೂಡುಬಿದಿರೆ ತಾಲೂಕಿನ ಪಣಪಿಲ ಗ್ರಾಮದ ಪ್ರವೀಣ್ ಕೋಟ್ಯಾನ್ 2019ನೇ ಸಾಲಿನ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಳೆದ 8 ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ಕೋಣಗಳನ್ನು ಓಡಿಸಿ ಸರಣಿ ಶ್ರೇಷ್ಠ ಬಹುಮಾನಗಳನ್ನು ಪಡೆದಿದ್ದಾರೆ. 2013ರಲ್ಲಿ ಕಂಬಳ ಓಟಗಾರರಾಗಿ ಗುರುತಿಸಿಕೊಂಡಿದ್ದ ಪ್ರವೀಣ್ ಅವರು 25 ಚಿನ್ನದ ಪದಕ, 20 ಬೆಳ್ಳಿ ಪದಕ ಪಡೆದಿದ್ದಾರೆ.
ಮೂರು ತಲೆಮಾರಿನ ಕೊಂಡಿ ಗೋಪಾಲಕೃಷ್ಣ ಪ್ರಭು:
ಸುರತ್ಕಲ್: ಇಲ್ಲಿನ ಕೊಡಿಪಾಡಿಯ ಕೃಷಿಕ ಕುಟುಂಬದ ಕೆ.ಗೋಪಾಲಕೃಷ್ಣ ಪ್ರಭು ಮೂರು ತಲೆಮಾರುಗಳಿಂದ ಕಂಬಳದ ಕೋಣ ಸಾಕುತ್ತಿರುವ ಕುಟುಂಬದ ಕೊಂಡಿ. ಇವರ ಅಜ್ಜ ಕೆ.ಮಾಧವ ಪ್ರಭು ಹಿಂದೆ ಕಂಬಳದ ಕೋಣ ಕಟ್ಟಿ ಕಂಬಳ ಪರಂಪರೆ ಆರಂಭಿಸಿದ್ದು ಬಳಿಕ ಅವರ ಪುತ್ರ ಸರ್ವೋತ್ತಮ ಪ್ರಭು ಈ ಪರಂಪರೆ ಮುಂದುವರಿಸಿದ್ದರು. ಸರ್ವೋತ್ತಮ ಪ್ರಭುಗಳ ಪುತ್ರ ಕೆ.ಗೋಪಾಲಕೃಷ್ಣ ಪ್ರಭು ಕಂಬಳ ಕ್ಷೇತ್ರದ ಆರೂ ವಿಭಾಗಗಳಲ್ಲಿ ಸ್ಪರ್ಧಿಸಿದ ಕೋಣ ಸಾಕಿ ಬಹುಮಾನ ಪಡೆದಿದ್ದಾರೆ. ಇವರ ಮನೆಯಲ್ಲಿ ಅಜ್ಜನ ಕಂಬಳ ಯಾತ್ರೆಯ ಸವಿನೆನಪಿಗೆ 2012ರಿಂದ ಕಂಬಳದ ಕ್ರೀಡಾಂಗಣ ನಿರ್ಮಿಸಿ ಕಂಬಳ ಆರಂಭಿಸಲಾಗಿದೆ. ಪ್ರಗತಿಪರ ಕೃಷಿಕರಾಗಿದ್ದು 2007-08ರಲ್ಲಿ ಕೃಷಿ ಇಲಾಖೆ ನಡೆಸಿದ್ದ ಜಿಲ್ಲಾ ಮಟ್ಟದ ಭತ್ತದ ಕೃಷಿಯಲ್ಲಿ ಸಾವಯವ ಗೊಬ್ಬರ ಬಳಸಿ ಪ್ರಥಮ ಬಹುಮಾನ ಪಡೆದಿದ್ದರು.
ಅಭಿನಯಾ ಶೆಟ್ಟಿ ‘ಎತ್ತರದ ಜಿಗಿತ’: ಕಾರ್ಕಳ ತಾಲೂಕಿನ ಕ್ರೀಡಾ ಸಾಧಕಿ ಅಭಿನಯಾ ಶೆಟ್ಟಿ ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಎತ್ತರ ಜಿಗಿತದಲ್ಲಿ ರಾಷ್ಟ್ರ ಮಟ್ಟದ ಸಾಧಕಿಯಾಗಿರುವ ಅಭಿನಯಾ ಕುಕ್ಕುಜೆ ಗ್ರಾಮದ ಸುಧಾಕರ ಶೆಟ್ಟಿ-ಸಂಜೀವಿ ದಂಪತಿಯ ಪುತ್ರಿ. ಪುಣೆಯಲ್ಲಿ ನಡೆದ ಖೇಲೋ ಭಾರತ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಹೈಜಂಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದರು. 2018ರಲ್ಲಿ ಜಪಾನ್‌ನಲ್ಲಿ ನಡೆದ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಕಂಚಿನ ಪದಕ, 2018ರಲ್ಲಿ ಕೊಯಮತ್ತೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಜೂನಿಯರ್ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಹೈಜಂಪನ್‌ಲ್ಲಿ ಚಿನ್ನದ ಪದಕ, 2017ರಲ್ಲಿ 20 ವಯೋಮಾನದೊಳಗಿನ ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕ ಸಹಿತ ಹಲವು ಪ್ರಶಸ್ತಿ ಪಡೆದಿದ್ದರು.
ಮಂಗಳೂರು ವಿವಿಗೆ ಕ್ರೀಡಾ ಪೋಷಕ ಸಂಸ್ಥೆ ಪ್ರಶಸ್ತಿ: ಮಂಗಳೂರು ವಿವಿಯ 2019-20ನೇ ಸಾಲಿನ ಕರ್ನಾಟಕ ಕ್ರೀಡಾ ಪೋಷಕ ಸಂಸ್ಥೆ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಅವಧಿಯಲ್ಲಿ ವಿವಿ ಅಖಿಲ ಭಾರತ ಮಟ್ಟದಲ್ಲಿ 6ನೇ ಸ್ಥಾನ ಗಳಿಸಿದೆ. ಒಟ್ಟು 800 ವಿಶ್ವವಿದ್ಯಾಲಯಗಳು ಸ್ಪರ್ಧಾ ಕಣದಲ್ಲಿದ್ದು, ಮಂಗಳೂರು ವಿವಿ ಗಮನಾರ್ಹ ಸಾಧನೆ ತೋರಿದೆ. ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಅವಧಿಯಲ್ಲಿ ರೂಪಿಸಿದ ಕ್ರೀಡಾ ನೀತಿ, ಕ್ರೀಡಾಪಟು ವಿದ್ಯಾರ್ಥಿಗಳಿಗೆ ಆರಂಭಿಸಿ 3 ಲಕ್ಷ ರೂ. ತನಕದ ವಿದ್ಯಾರ್ಥಿವೇತನ, ಅಂತರ್ ಕಾಲೇಜು, ಅಂತರ್ ವಿವಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವಿವಿ ವಿದ್ಯಾರ್ಥಿಗಳು ತೋರಿದ ನಿರ್ವಹಣೆ ಮತ್ತಿತರ ಅನೇಕ ಅಂಕಗಳು ಪ್ರಶಸ್ತಿಗೆ ಪರಿಗಣಿಸಲ್ಪಟ್ಟಿವೆ.