More

    ಖಾಸಗಿ ಶಾಲೆಗಳಿಂದ ಡಿ. 2ರಂದು ಪ್ರತಿಭಟನೆ

    ಧಾರವಾಡ: ಸರ್ಕಾರ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ನಡುವೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಶುಲ್ಕಕ್ಕೆ ಒತ್ತಾಯಿಸಿದರೆ ಶಾಲೆಗಳ ಮಾನ್ಯತೆ ರದ್ದು ಮಾಡಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ದಿನಕ್ಕೊಂದು ಹೇಳಿಕೆ ನೀಡುತ್ತ ಶಿಕ್ಷಣ ವ್ಯವಸ್ಥೆಯನ್ನು ಗೊಂದಲದ ಗೂಡು ಮಾಡಿರುವ ಸರ್ಕಾರದ ನೀತಿ ಖಂಡಿಸಿ, ಡಿ. 2ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ಅನುದಾನ ರಹಿತ ಖಾಸಗಿ ಶಾಲಾ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶಂಕರ ಹಲಗತ್ತಿ ಹೇಳಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಸಚಿವರು ಬೆಂಗಳೂರು ಕೇಂದ್ರೀಕರಿಸಿ ಖಾಸಗಿ ಶಾಲೆಗಳ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಖಂಡನೀಯ. ಅವರು ಮೊದಲು ಖಾಸಗಿ ಶಾಲೆಗಳ ಬಗೆಗಿನ ಭಾವನೆ ಸ್ಪಷ್ಟಪಡಿಸಬೇಕು. ವಿಶೇಷವಾಗಿ ಉತ್ತರ ಕರ್ನಾಟಕದ ಖಾಸಗಿ ಶಾಲೆಗಳು ಪಡೆಯುವ ಶುಲ್ಕದ ಬಗ್ಗೆ ಅಧ್ಯಯನ ಮಾಡಬೇಕು ಎಂದು ಕೋರಿದರು.

    ಸಚಿವರು ಕೇವಲ ಪಾಲಕರನ್ನು ಕೇಂದ್ರೀಕರಿಸಿ ಯೋಚಿಸುವುದನ್ನು ಬಿಟ್ಟು ಅನುದಾನ ರಹಿತ ಖಾಸಗಿ ಶಾಲೆಗಳ ಬಗ್ಗೆಯೂ ಯೋಚಿಸಬೇಕು. ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಮಕ್ಕಳ ಬಗೆಗಿನ ಮಲತಾಯಿ ಧೋರಣೆ ಬಿಡಬೇಕು, ಶಿಕ್ಷಣ ಸಂಸ್ಥೆಗಳು ಶುಲ್ಕ ಪಡೆಯದೆ ಶಿಕ್ಷಕರ ಮೂಲವೇತನ, ಶಾಲಾ ಕಟ್ಟಡದ ಟ್ಯಾಕ್ಸ್, ಕಟ್ಟಡ ಬಾಡಿಗೆ, ನೀರು, ವಿದ್ಯುತ್ ಶುಲ್ಕ, ಪಿಎಫ್- ಇಎಸ್​ಐ, ಪ್ರೊಫೆಷನಲ್ ಟ್ಯಾಕ್ಸ್, ಶಾಲೆಯ ನಿರ್ವಹಣೆ ವೆಚ್ಚ, ಶಾಲಾ ವಾಹನ ರಸ್ತೆ ತೆರಿಗೆ, ಇನ್ಶುರನ್ಸ್, ಪಠ್ಯಪುಸ್ತಕ ವೆಚ್ಚ ಭರಿಸುವುದಾದರೂ ಹೇಗೆ ಎಂದು ಹಲಗತ್ತಿ ಪ್ರಶ್ನಿಸಿದರು.

    ಕರೊನಾ ಸಂದಿಗ್ಧತೆಯಿಂದ ಅನುದಾನ ರಹಿತ ಖಾಸಗಿ ಶಾಲೆಗಳು ಸಂಕಷ್ಟದ ಸುಳಿಗೆ ಸಿಲುಕಿವೆ. ಶಾಲೆಗಳ ವಿವಿಧ ಟ್ಯಾಕ್ಸ್ ಹಾಗೂ ನವೀಕರಣ ಶುಲ್ಕದಿಂದ ವಿನಾಯತಿ, ವಿಶೇಷ ಪ್ಯಾಕೇಜ್ ಘೋಷಣೆಗೆ ಒತ್ತಾಯಿಸಿ ಡಿ. 2ರಂದು ಧರಣಿ ನಡೆಸಲಾಗುವುದು ಎಂದರು.

    ಸುದ್ದಿಗೋಷ್ಠಿಯಲ್ಲಿ ಮಹಾವೀರ ಉಪಾಧ್ಯೆ, ಲಕ್ಷ್ಮ್ಮ ಉಪ್ಪಾರ, ಎಸ್.ವಿ. ಸಾಲಿಮಠ, ರಾಜೇಂದ್ರ ಮಾಳೋದೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts