More

    ಖಾಸಗಿ ಶಾಲಾ ಶುಲ್ಕ ಶೇ.10ರಿಂದ 15 ಹೆಚ್ಚಳ: ಮಕ್ಕಳಿಗೆ ಶುಲ್ಕ ಬರೆ

    ಬೆಂಗಳೂರು ರಾಜ್ಯದ ಖಾಸಗಿ ಶಾಲೆಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಶೇ.10ರಿಂದ 15 ಶುಲ್ಕ ಹೆಚ್ಚಳ ಮಾಡಲು ನಿರ್ಧರಿಸಿವೆ.

    ಶಾಲೆಗಳಲ್ಲಿನ ಮೂಲ ಸೌಕರ್ಯ, ಶಿಕ್ಷಕರ ವೇತನ, ತಂತ್ರಜ್ಞಾನ ಆಧಾರಿತ ಉಪಕರಣಗಳು ಮತ್ತು ಭದ್ರತೆ, ಸುರಕ್ಷತೆ ಸೇರಿ ಎಲ್ಲ ಆಯಾಮಗಳಲ್ಲಿಯೂ ಬೆಲೆ ಏರಿಕೆಯಾಗುತ್ತಿದೆ. ಪರಿಣಾಮ, ಶಾಲಾ ಶುಲ್ಕದಲ್ಲಿಯೂ ಏರಿಕೆ ಮಾಡಲಾಗುತ್ತಿದೆ ಎಂದು ಖಾಸಗಿ ಶಾಲೆಗಳು ತಿಳಿಸಿವೆ.

    ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿಲ್ಲ. ಆದರೆ. ಶಾಲೆಗಳ ಸಂಖ್ಯೆ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲೆ ಇವೆ. ಅದೇ ರೀತಿ ಶುಲ್ಕವನ್ನು ಕೂಡ ಹೆಚ್ಚಳ ಮಾಡಲಾಗುತ್ತಿದೆ. ಇದರಿಂದ ಪಾಲಕ/ಪೋಷಕರಿಗೆ ಮಾತ್ರ ಹೊರೆಯಾಗುತ್ತಿದೆ.

    ಶುಲ್ಕ ಹೆಚ್ಚಳಕ್ಕೆ ಕಾರಣವೇನು?

    ಸಾಮಾನ್ಯವಾಗಿ ಪ್ರತಿ ವರ್ಷ ಶೇ.10ರಿಂದ 15ರಷ್ಟು ಶುಲ್ಕ ಹೆಚ್ಚಳ ಮಾಡಲೇಬೇಕು. ಆದರೆ, ಶೇ.25ರಿಂದ 30 ಹೆಚ್ಚಳ ಮಾಡುವುದು ಸರಿಯಲ್ಲ. ಶೇ.30ರಷ್ಟು ಹೆಚ್ಚಳ ಮಾಡುವಂತಹ ಶಾಲೆಗಳ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಾರೆ ಖಾಸಗಿ ಶಾಲಾ ಆಡಳಿತ ಮಂಡಳಿಗಳು.

    ನಿರ್ವಹಣೆ ವೆಚ್ಚದಲ್ಲಿ ಅಷ್ಟೇನೂ ಬದಲಾವಣೆಯಾಗುವುದಿಲ್ಲ. ಆದರೆ, ಶಿಕ್ಷಕರಿಗೆ ವೇತನ ಹೆಚ್ಚಳ ಮಾಡಬೇಕು, ಮೂಲ ಸೌಕರ್ಯ ಹೆಚ್ಚಳ ಮಾಡಲೇಕು. ತಂತ್ರಜ್ಞಾನ ಆಧಾರಿತ ಕಂಪ್ಯೂಟರ್ ಸೇರಿ ಇತರೆ ಎಲೆಕ್ಟ್ರಾನಿಕ್ ಉಪಕರಣಗಳೂ, ಭದ್ರತೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ವಿಷಯಗಳು ದಿನೇ ದಿನೇ ಸೂಕ್ಷ್ಮವಾಗುತ್ತಿವೆ. ಇದಕ್ಕೆ ಮೊದಲ ಆದ್ಯತೆ ನೀಡಲೇಬೇಕಿದೆ ಎನ್ನುತ್ತಾರೆ ಖಾಸಗಿ ಶಾಲಾ ಮಾಲೀಕ ರಾಮಚಂದ್ರ.

    ಇನ್ನು ಸರ್ಕಾರದ ವತಿಯಿಂದ ಪಠ್ಯಪುಸ್ತಕ, ಶಾಲಾ ನೋಂದಣಿ ಮತ್ತು ನವೀಕರಣ ಶುಲ್ಕ, ಪರೀಕ್ಷಾ ಶುಲ್ಕವನ್ನು ಹೆಚ್ಚಳ ಮಾಡುತ್ತಿದೆ. ಪ್ರತಿಯೊಂದಕ್ಕೂ ಲಿಂಕ್ ಇದ್ದು, ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ.

    ಯಾವ ಶಾಲೆಗಳು ನಷ್ಟ ಅನುಭವಿಸಿವೆ? ಪಾಲಕರ ಪ್ರಶ್ನೆ

    ಇತ್ತೀಚಿನ ದಿನಗಳಲ್ಲಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಅದೇ ಸಮಯದಲ್ಲಿ ಖಾಸಗಿ ಶಾಲೆಗಳು ಕೂಡ ಪ್ರತಿ ವರ್ಷ ಶುಲ್ಕ ಮಾಡುತ್ತಿರುವುದು ಪಾಲಕರನ್ನು ಹೈರಾಣಾಗಿಸುತ್ತಿದೆ. ಇದನ್ನು ಸಹ ಖಾಸಗಿ ಶಾಲೆಗಳು ಪರಿಗಣಿಸಬೇಕು. ಹೆಚ್ಚು ಮಕ್ಕಳಿರುವ ಯಾವುದೇ ಶಾಲೆಗಳು ನಷ್ಟದಲ್ಲಿ ನಡೆಯುತ್ತಿಲ್ಲ. ಕಡಿಮೆ ಮಕ್ಕಳಿರುವ ಮತ್ತು ಸರಿಯಾಗಿ ಗುಣಮಟ್ಟ ಕಾಪಾಡಿಕೊಳ್ಳದ ಶಾಲೆಗಳು ಮಾತ್ರ ನಷ್ಟ ಅನುಭವಿಸುತ್ತಿವೆ. ಆದರೆ, ದೊಡ್ಡ ದೊಡ್ಡ ಶಾಲೆಗಳೇ ಪ್ರತಿ ವರ್ಷ ಮನಬಂದಂತೆ ಶುಲ್ಕ ಹೆಚ್ಚಳ ಮಾಡುತ್ತಿವೆ. ಶಾಲೆಗಳ ಲಾಭಾಂಶವನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಬಳಸಬೇಕೆಂಬ ನಿಯಮವಿದೆ. ಇದನ್ನು ಎಷ್ಟು ಶಾಲೆಗಳು ಪಾಲನೆ ಮಾಡುತ್ತಿವೆ ಎಂದು ಪಾಲಕ ಮೂರ್ತಿ ಪ್ರಶ್ನಿಸಿದ್ದಾರೆ.

    ಮೂಲಸೌಕರ್ಯ, ವೇತನ, ಭದ್ರತೆಗೆ ಸಂಬಂಧಿಸಿದ ಖರ್ಚು ವೆಚ್ಚಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದರಿಂದ ಶುಲ್ಕ ಹೆಚ್ಚಳ ಕೂಡ ಅನಿವಾರ್ಯವಾಗಿದೆ. ಶೇ.10ರಿಂದ 15 ರಷ್ಟು ಶುಲ್ಕ ಹೆಚ್ಚಳ ಮಾಡಬೇಕು. ಅದಕ್ಕಿಂತ ಹೆಚ್ಚಳ ಮಾಡಬಾರದು.
    – ಡಿ. ಶಶಿಕುಮಾರ್, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts