More

    ಪ್ರಿನ್ಸೆಸ್ ಮಿರಾಲ್ ಹಡಗಿನಿಂದ ತೈಲ ಸೋರಿಕೆ ತಡೆಗೆ ಕ್ರಮ; ವಿಶೇಷ ತಂತ್ರಜ್ಞ ನೌಕೆ ಆಗಮನ

    ಮಂಗಳೂರು: ಉಳ್ಳಾಲ ಸಮುದ್ರ ತೀರದ 1.5 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಮುಳುಗಿರುವ ಪ್ರಿನ್ಸೆಸ್ ಮಿರಾಲ್ ಸರಕು ಹಡಗಿನಿಂದ ತೈಲ ಸೋರಿಕೆಯ ಭೀತಿ ಹಿನ್ನೆಲೆಯಲ್ಲಿ ಗುಜರಾತ್‌ನಿಂದ ಸಮುದ್ರ ಪಾವಕ್ ಎಂಬ ವಿಶೇಷ ತಂತ್ರಜ್ಞ ನೌಕೆಯನ್ನು ಶನಿವಾರ ಮಂಗಳೂರಿಗೆ ಕರೆತರಲಾಗಿದೆ.

    ಸುಸಜ್ಜಿತ ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಇರುವ ಈ ನೌಕೆಯನ್ನು ಪೋರ್‌ಬಂದರ್‌ನಿಂದ ತರಲಾಗಿದೆ. ಈ ನೌಕೆ ಬಳಸಿ ಹೆಲಿಕಾಪ್ಟರ್ ಹಾಗೂ ಬೇರೆ ನೌಕೆಗಳ ಸಹಾಯದಲ್ಲಿ, ಪ್ರಿನ್ಸೆಸ್ ಮಿರಾಲ್‌ನಿಂದ ತೈಲ ಹೊರತೆಗೆಯುವ ಪ್ರಯತ್ನ ನಡೆಯಲಿದೆ. ಸಮುದ್ರ ಪಾವಕ್ ನೌಕೆ ಮುಳುಗಿದ ಹಡಗಿನ ಪ್ರದೇಶವನ್ನು ಸುತ್ತುವರಿದು ಪರಿಸ್ಥಿತಿಯ ಅವಲೋಕನ ನಡೆಸಿದೆ. ಸದ್ಯ ಪ್ರಿನ್ಸೆಸ್ ಮಿರಾಲ್ ಹಡಗು ಪೂರ್ತಿಯಾಗಿ ಮುಳುಗಿಲ್ಲ.

    ಆದ್ದರಿಂದ ತಕ್ಷಣದಲ್ಲಿ ಅದರಲ್ಲಿರುವ 150 ಮೆಟ್ರಿಕ್ ಟನ್ ತೈಲ ಹೊರಚೆಲ್ಲುವ ಸಾಧ್ಯತೆ ಇಲ್ಲ. ಆದರೂ ಸಮುದ್ರ ಪ್ರಕ್ಷುಬ್ಧಗೊಂಡು ಹಡಗು ಪೂರ್ಣ ಮುಳುಗಡೆಯಾದರೆ ತೈಲ ಸೋರಿಕೆಯ ಸಂಭವನೀಯತೆಯನ್ನು ಅಲ್ಲಗಳೆಯಲಾಗದು. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ತೈಲ ಹೊರತೆಗೆಯುವ ಪರಾಮರ್ಶೆ ನಡೆಸಲಿದೆ ಎಂದು ಕೋಸ್ಟ್‌ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರಮುಳುಗಿರುವ ಹಡಗಿನ ಬಗ್ಗೆ ಕೋಸ್ಟ್‌ಗಾರ್ಡ್ ನೌಕೆ ಹಾಗೂ ಹೆಲಿಕಾಪ್ಟರ್‌ಗಳು ಕಣ್ಗಾವಲು ಇರಿಸಿವೆ. ಒಂದು ವೇಳೆ ತೈಲ ಮಾಲಿನ್ಯ ಉಂಟಾದರೆ ಕೈಗೊಳ್ಳಬೇಕಾದರೆ ಕ್ರಮಗಳ ಬಗ್ಗೆ ಸಮುದ್ರ ಪಾವಕ್ ವಿಶೇಷ ನೌಕೆಯ ತಂತ್ರಜ್ಞರ ಜತೆ ದ.ಕ.ಜಿಲ್ಲಾಡಳಿತ ಸಮಾಲೋಚನೆ ನಡೆಸಿದೆ.

    ಜಿಲ್ಲಾಧಿಕಾರಿ ಡಾ.ರಾಜೇಂದ್ರ ಶನಿವಾರ ಕೋಸ್ಟ್‌ಗಾರ್ಡ್, ಕರಾವಳಿ ಕಾವಲು ಪೊಲೀಸ್, ನವಮಂಗಳೂರು ಬಂದರು ಪ್ರಾಧಿಕಾರ ಹಾಗೂ ಮೀನುಗಾರ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ. ತೈಲ ಸೋರಿಕೆ ಕಂಡು ಬಂದರೆ ವಿಶೇಷ ನೌಕೆಯ ತಂತ್ರಜ್ಞರು ಕೂಡ ಸೋರಿಕೆ ತಡೆ ಕಾರ್ಯಾಚರಣೆ ನಡೆಸಲು ಸನ್ನದ್ಧರಾಗಿರುವುದಾಗಿ ಹೇಳಿದ್ದಾರೆ.

    ಬೂಮ್ ಬ್ಯಾರಿಕೇಡ್ ಅಳವಡಿಕೆ: ಮುನ್ನೆಚ್ಚರಿಕೆ ಕ್ರಮವಾಗಿ ಮುಳುಗಿದ ಹಡಗಿನ ಸುತ್ತ ಗಾಳಿ ತುಂಬಿದ ಬೂಮ್‌ಗಳನ್ನು ಬಳಸಿ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಈಗಾಗಲೇ ಕೋಸ್ಟ್‌ಗಾರ್ಡ್ ನೌಕೆ, 9 ಹಡಗು, 3 ಕೋಸ್ಟ್‌ಗಾರ್ಡ್ ಹೆಲಿಕಾಪ್ಟರ್‌ಗಳು ಮುಳುಗಿದ ನೌಕೆಯ ಸುತ್ತ ಪರಿವೀಕ್ಷಣೆ ನಡೆಸುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts