More

    ಶಿವಮೊಗ್ಗದಲ್ಲಿ 18ರಂದು ಪ್ರಧಾನಿ ಮೋದಿ ಬೃಹತ್ ಸಭೆ

    ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಮಾ.18ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಅಲ್ಲಮಪ್ರಭು ಮೈದಾನ (ಹಳೇ ಜೈಲು ಆವರಣ)ದಲ್ಲಿ ಮಧ್ಯಾಹ್ನ 2 ಗಂಟೆಗೆ ಆಯೋಜಿಸಿರುವ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಾಲ್ಕು ಲೋಕಸಭಾ ಕ್ಷೇತ್ರಗಳ ಸುಮಾರು 4 ಲಕ್ಷ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.

    ಸಾರ್ವಜನಿಕ ಸಭೆಯ ವೇದಿಕೆ ನಿರ್ಮಾಣಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಿವಮೊಗ್ಗ ಜಿಲ್ಲೆಯ ಸುಮಾರು 1.50 ಲಕ್ಷ ಮಂದಿ ಪಾಲ್ಗೊಳ್ಳಲಿದ್ದಾರೆ. ಚಿತ್ರದುರ್ಗ, ದಾವಣಗೆರೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಿಂದ ಎರಡು ಲಕ್ಷಕ್ಕೂ ಅಧಿಕ ಮಂದಿ ಆಗಮಿಸಲಿದ್ದಾರೆ ಎಂದರು.
    ಲೋಕಸಭಾ ಚುನಾವಣೆಯ ಮೊದಲ ಪ್ರಚಾರ ಸಭೆಯನ್ನು ನರೇಂದ್ರ ಮೋದಿ ಶಿವಮೊಗ್ಗದಲ್ಲಿ ನಡೆಸುತ್ತಿರುವುದು ಕಾರ್ಯಕರ್ತರ ಉತ್ಸಾಹಕ್ಕೆ ಕಾರಣವಾಗಿದೆ. ಮೋದಿ ಕಾರ್ಯಕ್ರಮಕ್ಕೆ ಸೇರುವ ಜನರನ್ನು ಕೂರಿಸಲು ಈ ಮೈದಾನವೂ ಸಾಕಾಗುವುದಿಲ್ಲ. ಹೀಗಾಗಿ ಮೈದಾನದ ಪಕ್ಕದ ಜೈಲು ಆವರಣದಲ್ಲಿ ಎಲ್‌ಇಡಿ ಅಳವಡಿಸಿ ಭಾಷಣದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
    ಮೋದಿ ಸಾರ್ವಜನಿಕ ಸಭೆಯಲ್ಲಿ ಪಕ್ಷದ ಯಾವ ನಾಯಕರು ಭಾಗವಹಿಸುತ್ತಾರೆ ಎಂಬುದು ಇನ್ನಷ್ಟೇ ತೀರ್ಮಾನ ಆಗಬೇಕಿದೆ. ಈಗ ಕಾರ್ಯಕ್ರಮ ಸಿದ್ಧತೆ ಬಗ್ಗೆ ಹೆಚ್ಚಿನ ಗಮನಹರಿಸಿದ್ದೇವೆ. ಭಾಗವಹಿಸುವ ನಾಯಕರ ಬಗ್ಗೆ ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ತಿಳಿಸಿದರು.
    ವಿಧಾನಪರಿಷತ್ ಸದಸ್ಯರಾದ ನವೀನ್, ಭಾರತಿ ಶೆಟ್ಟಿ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಚಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಚಿತ್ರದುರ್ಗದ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಂ.ಬಿ.ಭಾನುಪ್ರಕಾಶ್, ಆರ್.ಕೆ.ಸಿದ್ದರಾಮಣ್ಣ ಇತರರಿದ್ದರು.
    ನಮಗೆ ಮೋದಿಯೇ ಗ್ಯಾರಂಟಿ:ನಾವು ರಾಜ್ಯ ಸರ್ಕಾರದ ಗ್ಯಾರಂಟಿಯನ್ನು ನಕಲು ಮಾಡಿಲ್ಲ. ನಮಗೆ ಮೋದಿಯೇ ಗ್ಯಾರಂಟಿ. ಮೋದಿ ಎಂದಿಗೂ ಸಾರ್ವತ್ರಿಕವಾಗಿ ಉಚಿತ ಯೋಜನೆಗಳನ್ನು ನೀಡಿಲ್ಲ. ಬದಲಿಗೆ ರಾಷ್ಟ್ರಕ್ಕೆ ಭದ್ರತೆ ಒದಗಿಸಿದ್ದಾರೆ. ಹಣಕಾಸು ಸ್ಥಿತಿಯನ್ನು ಉತ್ತಮಗೊಳಿಸಿದ್ದಾರೆ. ವಿಶ್ವ ಮಟ್ಟದಲ್ಲಿ ದೇಶದ ಪ್ರತಿಷ್ಠೆ ಹೆಚ್ಚಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆ, ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ್ದಾರೆ. ಅತಂತ್ರವಾಗಿರುವ ಲಕ್ಷಾಂತರ ಮಂದಿಗೆ ಪೌರತ್ವ ನೀಡುವ ಸಲುವಾಗಿ ಪೌರತ್ವ ಕಾಯ್ದೆ ಜಾರಿಗೊಳಿಸಿದ್ದಾರೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.
    ಅಡಕೆ ರಕ್ಷಣೆ ಹೊಣೆ ನಮ್ಮದು:ಅಡಕೆಗೆ ಯಾವುದೇ ಸಮಸ್ಯೆಯಾಗದಂತೆ ಅಡಕೆ ಹಾಗೂ ಬೆಳೆಗಾರರನ್ನು ರಕ್ಷಿಸುವುದು ನಮ್ಮ ಹೊಣೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವೊಂದು ಒಡಂಬಡಿಕೆಗಳು ಏರ್ಪಟ್ಟಿರುತ್ತವೆ. ಹೀಗಾಗಿ ಆಮದು, ರಫ್ತು ಎಲ್ಲವನ್ನೂ ಏಕಾಏಕಿ ನಿಯಂತ್ರಿಸುವುದು ಸಾಧ್ಯವಿಲ್ಲ. ಆದರೆ ಅಡಕೆ ಆಮದಿನಿಂದ ಯಾವುದೇ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಪರೋಕ್ಷವಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಡಕೆ ಆಮದು ಸುಂಕ ಹೆಚ್ಚಿಸಲಾಗಿದೆ. ಈಗ ಕಳ್ಳಮಾರ್ಗದಿಂದ ಅಡಕೆ ಆಮದಾಗುತ್ತಿದೆ ಎಂಬ ಸಂದೇಹ ಎದುರಾಗಿದೆ. ಹೀಗಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ ಮಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts