More

    ಕರ್ನಾಟಕದ ಅಭಿವೃದ್ಧಿಗೆ ಕೆಲಸ ಮಾಡುವ ಮೂಲಕ ಜನರ ಪ್ರೀತಿಯ ಋಣ ತೀರಿಸುತ್ತೇನೆ; ಪ್ರಧಾನಿ ಮೋದಿ

    ಧಾರವಾಡ: ಜಗದ್ಗುರು ಬಸವೇಶ್ವರರಿಗೆ ನನ್ನ ನಮಸ್ಕಾರಗಳು. ಹುಬ್ಬಳ್ಳಿಯ ಜನರ ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಈ ವರ್ಷದ ಆರಂಭದಲ್ಲಿ ಹುಬ್ಬಳ್ಳಿಗೆ ಬರುವ ಅವಕಾಶ ಲಭಿಸಿತು. ಕನ್ನಡಿಗರು ನನಗೆ ಅಪಾರ ಪ್ರೀತಿ ತೋರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ, ಶ್ರೀ ಗುರು ಸಿದ್ಧಾರೂಢ ಅವರನ್ನು ಸ್ಮರಿಸಿದರು.

    ಪ್ರಧಾನಿ ಮೋದಿ ಧಾರವಾಡದಲ್ಲಿ ರಾಜ್ಯದ ಮೊದಲ ಐಐಟಿ ಕ್ಯಾಂಪಸ್ ಲೋಕಾರ್ಪಣೆ ಸೇರಿದಂತೆ ವಿವಿಧ ಮಹತ್ವದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಾ, ಕನ್ನಡಿಗರ ಋಣ ನನ್ನ ಮೇಲಿದೆ. ನಿಮಗೆ ಸೇವೆ ಸಲ್ಲಿಸುವ ಮೂಲಕ ಋಣ ತೀರಿಸುತ್ತೇನೆ. ಕರ್ನಾಟಕದ ಪ್ರತಿ ವ್ಯಕ್ತಿಯ ಜೀವನ ಮಟ್ಟ ಸುಧಾರಿಸುವ ಅವಕಾಶ ನನಗೆ ಲಭಿಸಿದೆ. ರಾಜ್ಯದ ಯುವಕರಿಗೆ ಉದ್ಯೋಗ ನೀಡಲು ಆದ್ಯತೆ ನೀಡಲಾಗುತ್ತಿದೆ ಹಾಗೂ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಶ್ರಮಿಸುತ್ತಿದೆ ಎಂದರು.

    ಇದನ್ನೂ ಓದಿ: ಮೈ-ಬೆಂ ಹೆದ್ದಾರಿ ನಿರ್ಮಾಣದ ಕ್ರೆಡಿಟ್ ಪಾಲಿಟಿಕ್ಸ್ ವಿಚಾರ: ಜ್ಯೋತಿಷಿ ಕತೆ ಹೇಳಿ ಸುಮಲತಾ ತಿರುಗೇಟು

    ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಉದ್ಘಾಟಿಸುವ ಅವಕಾಶ ನನಗೆ ಲಭಿಸಿದೆ. ಇಂದು ಧಾರವಾಡ ಐಐಟಿ ಉದ್ಘಾಟಿಸಲಾಗಿದೆ. 4 ವರ್ಷಗಳ ಹಿಂದೆ ಐಐಟಿ ಧಾರವಾಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದೆ. ಕೆಲ ದಿನಗಳ ಹಿಂದೆ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆಗೊಳಿಸಲಾಗಿತ್ತು ಎಂದು ಮೋದಿ ಹೇಳಿದರು.

    ಉತ್ತಮ ಶಿಕ್ಷಣ ಎಲ್ಲೆಡೆ ಸಿಗುವಂತಾಗಬೇಕು. ಸ್ವಾತಂತ್ರ್ಯದ ಬಳಿಕ ದೇಶದಲ್ಲಿ 90 ಮೆಡಿಕಲ್ ಕಾಲೇಜು ಇದ್ದವು. ಇದೀಗ ಕಳೆದ 9 ವರ್ಷಗಳ ಅವಧಿಯಲ್ಲಿ 250 ಮೆಡಿಕಲ್ ಕಾಲೇಜುಗಳ ಸ್ಥಾಪನೆ ಮಾಡಲಾಗಿದೆ. ಉತ್ತಮ ಶಿಕ್ಷಣ ಸಂಸ್ಥೆಗಳು ಇದ್ದಾಗ ಗುಣ ಮಟ್ಟದ ಶಿಕ್ಷಣ ಸಿಗುತ್ತವೆ. ಹೀಗಾಗಿ ದೇಶದ ಎಲ್ಲೆಡೆ ಉತ್ತಮ ದರ್ಜೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಕ್ರಾಂತಿ ಆಗಲಿದೆ ಎಂದರು.

    ಇದನ್ನೂ ಓದಿ: ಮಂಡ್ಯದಲ್ಲಿ ಮೋದಿ: ಮೈ-ಬೆಂ ದಶಪಥ ಹೆದ್ದಾರಿಯನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ

    ಹುಬ್ಬಳ್ಳಿ-ಧಾರವಾಡದಲ್ಲಿ ಲೋಕಾರ್ಪಣೆಗೊಳಿಸಿರುವ ಯೋಜನೆಗಳಿಂದ ಮತ್ತಷ್ಟು ಜನರಿಗೆ ಉದ್ಯೋಗ ಲಭಿಸಲಿದೆ. ಧಾರವಾಡದಿಂದ ಅಭಿವೃದ್ಧಿಯ ಶಕೆ ಆರಂವಾಗಿದ್ದು, ಇದು ರಾಜ್ಯದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿದೆ. ಬಿಜೆಪಿಯ ಸಂಕಲ್ಪ ಶಕ್ತಿಗೆ ಇಂದು ಉದ್ಘಾಟನೆಯಾಗಿರುವ ಐಐಟಿ ಸಾಕ್ಷಿ. ಡಬಲ್ ಇಂಜಿನ್ ಸರ್ಕಾರ ಇದೇ ಗತಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts