More

    ಪ್ರಧಾನಿ ಮೋದಿ ಬೇಡಿದ್ದೆಲ್ಲ ಕೊಟ್ಟಿದ್ದಾರೆ, ಶೋಕಿಗಾಗಿ ಪ್ರಶ್ನೆ ಕೇಳುವ ಜಾಯಮಾನದವನಲ್ಲ, ಸಂಸದ ರಮೇಶ ಜಿಗಜಿಣಗಿ ಟಾಂಗ್ !

    ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರು ನಾನು ಕೇಳಿದ ಎಲ್ಲ ಕೆಲಸ ಮಾಡಿಕೊಟ್ಟಿದ್ದಾರೆ, ಕೇಳಿದಷ್ಟು ಅನುದಾನ ಮಂಜೂರಿಸಿದ್ದಾರೆ, ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದಾರೆ, ಹೀಗಿರುವಾಗ ಸಂಸತ್‌ನಲ್ಲಿ ಸುಖಾಸುಮ್ಮನೇ ಪ್ರಶ್ನೆ ಕೇಳುವುದರಲ್ಲಿ ಅರ್ಥವೇನಿದೆ? ಎಂದು ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯಿಸಿದರು.

    ಸಂಸತ್‌ನಲ್ಲಿ ಒಂದೇ ಒಂದು ಪ್ರಶ್ನೆ ಕೇಳಿಲ್ಲ, ಚರ್ಚೆಯಲ್ಲಿ ಭಾಗವಹಿಸಿಲ್ಲ ಎಂಬ ಟೀಕೆಗಳಿಗೆ ಸಂಬಂಧಿಸಿದಂತೆ ಸೋಮವಾರ ರೈಲ್ವೆ ನಿಲ್ದಾಣ ಉದ್ಘಾಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಯಾವುದೇ ಸಮಸ್ಯೆ ತೆಗೆದುಕೊಂಡು ಹೋದರೂ ಪ್ರಧಾನಿ ನರೇಂದ್ರ ಮೋದಿ ಆಗಲ್ಲ ಎಂದಿಲ್ಲ. ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಹೀಗಿರುವಾಗಿ ಯಾವ ಪ್ರಶ್ನೆ ಕೇಳಲಿ? ಎಂದರು.

    ನನಗೂ ಇಂಗ್ಲಿಷ್ ಬರುತ್ತದೆ, ಹಿಂದಿ ಚೆನ್ನಾಗಿ ಮಾತನಾಡುತ್ತೇನೆ. ಸುಖಾ ಸುಮ್ಮನೇ ಪ್ರಶ್ನೆ ಕೇಳಿದರೆ ಮಾನಗೇಡಿ ಎನ್ನುತ್ತಾರೆ. ಯಾರನ್ನೋ ಮೆಚ್ಚಿಸಲು ಪ್ರಶ್ನೆ ಕೇಳುವ ಜಾಯಮಾನ ನನ್ನದಲ್ಲ. ಆಡಿರುವ ಕೆಲಸಗಳಿಗೆ ಪ್ರಚಾರ ಬಯಸದ ನಾನು ಪ್ರಚಾರಕ್ಕಾಗಿ ಪ್ರಶ್ನೆ ಕೇಳಲಾ? ಎಲ್ಲಿಯಾದರೂ ನನ್ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಚಾರ ಮಾಡಿಕೊಂಡಿದ್ದೇನಾ? ಹೆಸರು ಸಹ ಹಾಕಿಸಿಕೊಂಡಿಲ್ಲ. ಹೀಗಿರುವಾಗ ಪ್ರಶ್ನೆ ಕೇಳಿ ಯಾರನ್ನು ಮೆಚ್ಚಿಸಲಿ? ಎಂದರು.

    ಅಭ್ಯರ್ಥಿ ನಾನೇ

    ಈಗಾಗಲೇ ಪಕ್ಷದಿಂದ ಸೂಚನೆ ಬಂದಿದೆ. ನಾನೇ ಪಕ್ಷದ ಅಭ್ಯರ್ಥಿ. ಜೆಡಿಎಸ್ ಮೈತ್ರಿ ಹಿನ್ನೆಲೆ ಅವರೂ ಟಿಕೆಟ್ ಕೇಳುವುದು ಸ್ವಾಭಾವಿಕ. ಆದರೆ, ಬಿಜೆಪಿ ಎಂದಿಗೂ ಕ್ಷೇತ್ರ ಬಿಟ್ಟುಕೊಡಲ್ಲ. ಹಾಗೊಂದು ವೇಳೆ ಜೆಡಿಎಸ್‌ಗೆ ಕೊಟ್ಟರೂ ಪ್ರಚಾರ ಮಾಡುತ್ತೇನೆ ಎಂದರು.

    ಆಸ್ತಿ ಏರಿಕೆ ವಿಚಾರ

    ಆಸ್ತಿ ಪ್ರಮಾಣ ಹೆಚ್ಚಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜಿಗಜಿಣಗಿ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಈ ಹಿಂದೆ ಕಡಿಮೆ ದರದಲ್ಲಿ ನನ್ನ ಮಡದಿ ಆಸ್ತಿ ಖರೀದಿಸಿದ್ದಳು. ಇದೀಗ ಆ ಆಸ್ತಿ ನಗರ ವ್ಯಾಪ್ತಿಯಲ್ಲಿ ಬಂದಿದ್ದರಿಂದ ಸಹಜವಾಗಿಯೇ ಮೌಲ್ಯ ಹೆಚ್ಚಾಗಿದೆ. ಮಾಧ್ಯಮಗಳಲ್ಲಿ ಉಲ್ಲೇಖಿಸಿದ ಆಸ್ತಿ ಇನ್ನೂ ಕಡಿಮೆ. ಅದಕ್ಕಿಂತಲೂ ಹೆಚ್ಚಿದೆ. ನನ್ನದು ಪ್ರಾಮಾಣಿಕ ದುಡಿಮೆ. ನಗರದ ಮಧ್ಯಭಾಗದಲ್ಲಿ ಅಂಗಿ ಕಳೆದು ಕುಳಿತ ಗಾಂಧಿ ಮುತ್ಯಾನಷ್ಟೇ ನಿಚ್ಚಳವಾಗಿದ್ದೇನೆ ಎಂದು ಜಿಗಜಿಣಗಿ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts