More

    ಪಿಎಚ್‌ಸಿ ಮೇಲ್ದರ್ಜೆಗೆ ಒತ್ತಾಯ, ಗಂಗೊಳ್ಳಿ ಗ್ರಾಮಸ್ಥರ ಹಕ್ಕೊತ್ತಾಯ

    ಗಂಗೊಳ್ಳಿ: ಬಂದರು ಪ್ರದೇಶ ಗಂಗೊಳ್ಳಿಯಲ್ಲಿ ಮೀನುಗಾರರೇ ಹೆಚ್ಚಿದ್ದು, ಇಲ್ಲಿನ ಜನರ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಇಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ ದಿನದ 24 ತಾಸು ಕಾರ್ಯನಿರ್ವಹಿಸಬೇಕೆನ್ನುವ ಬೇಡಿಕೆ ವ್ಯಕ್ತವಾಗಿದೆ.

    ಕುಂದಾಪುರ ತಾಲೂಕು ಕೇಂದ್ರದಿಂದ ಗಂಗೊಳ್ಳಿಗೆ ಸುಮಾರು 18 ಕಿ.ಮೀ.ದೂರವಿದ್ದು, ಸದಾ ಚಟುವಟಿಕೆಯಿಂದ ಕೂಡಿರುವ ಮೀನುಗಾರಿಕಾ ಬಂದರು ಪ್ರದೇಶವಾಗಿದೆ. ಪ್ರತಿನಿತ್ಯ ಸಹಸ್ರಾರು ಮಂದಿ ಮೀನುಗಾರರು, ಕಾರ್ಮಿಕರು ಗಂಗೊಳ್ಳಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಗಂಗೊಳ್ಳಿ ಭಾಗದಲ್ಲಿ ತುರ್ತು ಅಗತ್ಯದ ಚಿಕಿತ್ಸೆಗೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವುದು ಅನಿವಾರ‌್ಯವಾಗಿದೆ.

    2006-07ರಲ್ಲಿ ತೀರಾ ಹಿಂದುಳಿದ ಪ್ರದೇಶ ಎನ್ನುವ ನೆಲೆಯಲ್ಲಿ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸುವ ಪ್ರಸ್ತಾವನೆ ಇತ್ತು. ಆದರೆ ಜಾಗದ ಸಮಸ್ಯೆ ಇದ್ದುದರಿಂದ ಪ್ರಸ್ತಾವನೆ ನನೆಗುದಿಗೆ ಬಿದ್ದಿತ್ತು ಎನ್ನಲಾಗಿದೆ.
    ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಡಿಯಲ್ಲಿ ಒಟ್ಟು 7ಉಪ ಕೇಂದ್ರಗಳು ಬರುತ್ತವೆ. ಗಂಗೊಳ್ಳಿ ಎ ಮತ್ತು ಬಿ, ಕಟ್‌ಬೆಲ್ತೂರು, ತಲ್ಲೂರು, ಹೆಮ್ಮಾಡಿ, ಉಪ್ಪಿನಕುದ್ರು ಹಾಗೂ ದೇವಲ್ಕುಂದ ಈ ಉಪ ಕೇಂದ್ರಗಳಾಗಿವೆ.

    ವೈದ್ಯರಿಗೆ ಹೆಚ್ಚಿನ ಕಾರ್ಯೋತ್ತಡ: ಎಲ್ಲ ಕಡೆಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬರೇ ವೈದ್ಯರಿದ್ದು, ಅವರಿಗೆ ತರಬೇತಿ, ಸಭೆ, ಗ್ರಾಮಸಭೆ ಸೇರಿದಂತೆ ವಾರಕ್ಕೆ 2-3 ದಿನ ಜನರ ಸೇವೆಗೆ ಲಭ್ಯರಿರುವುದಿಲ್ಲ. ಈ ಕಾರಣಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಬ್ಬರು ಅಥವಾ ಮೂವರು ವೈದ್ಯರಿದ್ದರೆ ಅನುಕೂಲವಾಗುತ್ತದೆ.

    ಸಮಸ್ಯೆಯೇನು? : ಗಂಗೊಳ್ಳಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಲು ಜನಸಂಖ್ಯೆ ಕನಿಷ್ಠ 1ಲಕ್ಷ ಇರಬೇಕು ಹಾಗೂ ಕನಿಷ್ಠ 2 ಎಕರೆ ಜಾಗ ಇರಬೇಕು ಎನ್ನುವ ಮಾರ್ಗಸೂಚಿಯಿದೆ. ಇದಲ್ಲದೆ ತಿಂಗಳಿಗೆ 5ರಿಂದ 10 ಹೆರಿಗೆ ಪ್ರಕರಣ ಇರಬೇಕು ಎನ್ನುವ ನಿಯಮವಿದೆ. ಆದರೆ ಇದ್ಯಾವುದು ಇರದಿದ್ದರೂ, ಸಮುದಾಯ ಅಥವಾ ತಾಲೂಕು ಆಸ್ಪತ್ರೆ ತುಂಬಾ ದೂರದಲ್ಲಿರುವುದರಿಂದ, ಬಂದರು ಪ್ರದೇಶವಾಗಿರುವುದರಿಂದ ಸಮುದಾಯ ಕೇಂದ್ರ ಅಗತ್ಯವಿದೆ ಎನ್ನುವುದು ಜನರ ಅಭಿಪ್ರಾಯ.

    ಮೇಲ್ದರ್ಜೆಗೇರಿದರೆ ಪ್ರಯೋಜನವೇನು?: ಈಗ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲ. ಒಬ್ಬ ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಶಿಯನ್, ಫಾರ್ಮಾಸಿಸ್ಟ್ ಹಾಗೂ ಗ್ರೂಪ್-ಡಿ ಇಬ್ಬರು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 6-12 ಬೆಡ್‌ಗಳಿರುವ ಪ್ರಾಥಮಿಕ ಆರೋಗ್ಯ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವಾದಲ್ಲಿ ಬೆಡ್‌ಗಳ ಸಂಖ್ಯೆ 30 ಏರಲಿದೆ. 3 ವೈದ್ಯರು ಇರಲಿದ್ದು, ಸ್ಟಾಫ್ ನರ್ಸ್, ಇತರೆ ಸಹಾಯಕಿಯರ ಸಂಖ್ಯೆಯೂ ಹೆಚ್ಚಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ದಿನದ 24 ಗಂಟೆಯೂ ಕಾರ‌್ಯನಿರ್ವಹಿಸಲಿದೆ.

    ಸಮುದಾಯ ಅಥವಾ ತಾಲೂಕು ಆಸ್ಪತ್ರೆ ತುಂಬಾ ದೂರ ಹಾಗೂ ಬಂದರು ಪ್ರದೇಶವಾಗಿರುವುದರಿಂದ ಸಮುದಾಯ ಕೇಂದ್ರ ಅಗತ್ಯವಿದೆ. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ ಜನರಿಗೆ ಇದರ ಪ್ರಯೋಜನ ದೊರಕುವಂತೆ ಮಾಡಬೇಕು.
    -ಎಚ್.ಎಸ್.ಚಿಕ್ಕಯ್ಯ ಪೂಜಾರಿ, ಅಧ್ಯಕ್ಷರು, ನಾಗರಿಕ ಹೋರಾಟ ಸಮಿತಿ, ಗಂಗೊಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts