More

    ಸಾಂಬಾರ್ ಸೌತೆ ಕೆಜಿಗೆ 70 ಪೈಸೆ !

    ಸಾಂಬಾರ್ ಸೌತೆ ಕೆಜಿಗೆ 70 ಪೈಸೆ !

    ಚಿಕ್ಕಮಗಳೂರು: ಕರೊನಾದಿಂದ ನಷ್ಟ ಅನುಭವಿಸುವ ಸರದಿ ಸಾಂಬಾರ್ ಸೌತೆ ಬೆಳೆದ ರೈತರದ್ದಾಗಿದೆ. ಬೇರೆ ಜಿಲ್ಲೆಗಳಿಂದ ಫಸಲು ಖರೀದಿಸಲು ಬಾರದಿದ್ದರಿಂದ ಕೆಜಿಗೆ ಪೈಸೆ ಲೆಕ್ಕದಲ್ಲಿ ಕೊಡುವಂತಾಗಿದೆ. ಸದ್ಯ ಕೆಜಿಗೆ 60ರಿಂದ 70 ಪೈಸೆಯಂತೆ ಮಾರಾಟವಾಗುತ್ತಿದೆ !

    ಲಾಕ್​ಡೌನ್ ಆರಂಭದಲ್ಲಿ ಚಿಕ್ಕಮಗಳೂರು, ಕಡೂರು ಹಾಗೂ ತರೀಕೆರೆ ತಾಲೂಕಿನ ರೈತರು ಬಿತ್ತಿದ್ದ ಸಾಂಬಾರ್ ಸೌತೆಯು ಬಂಪರ್ ಫಸಲು ಬಂದಿದೆ. ಪ್ರತಿ ವರ್ಷ ವರ್ತಕರು ಬೆಂಗಳೂರು, ಮಂಗಳೂರಿನಿಂದ ಬಂದು ಖರೀದಿ ಮಾಡುತ್ತಿದ್ದರು. ಸದ್ಯ ಕರೊನಾ ಇರುವುದರಿಂದ ಯಾರೂ ಬರುತ್ತಿಲ್ಲ. ಹೀಗಾಗಿ ಫಸಲು ಹೊಲದಲ್ಲೇ ಕೊಳೆಯುತ್ತಿದೆ.

    ಚಿಕ್ಕಮಗಳೂರಿನ ಮಾಚೇನಹಳ್ಳಿ, ಲಕ್ಯಾ, ಕಣಿವೆಹಳ್ಳಿ, ಕೊಟ್ಟಿಗೆನಹಳ್ಳಿ, ಬೆಳವಾಡಿ, ಸಖರಾಯಪಟ್ಟಣ, ಕಸಬಾ, ಗಾಣದಾಳು, ಕಳಸಾಪುರ, ಕಡೂರು ತಾಲೂಕಿನ ಹಿರೇನಲ್ಲೂರು, ಪಂಚನಹಳ್ಳಿ, ಸಿಂಗಟಗೆರೆ, ಯಗಟಿ, ಅಜ್ಜಂಪುರ ತಾಲೂಕಿನ ಚೌಳಹಿರಿಯೂರು, ತರೀಕೆರೆಯ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಸಾಂಬಾರ್ ಸೌತೆ ಬೆಳೆಯಲಾಗಿದೆ.

    ಕಡೂರು ತಾಲೂಕು ಸೋಮನಹಳ್ಳಿ ಸುತ್ತಮುತ್ತ ಹಲವು ರೈತರು ಫಸಲು ಕೀಳದಿರುವುದರಿಂದ ಕೆಲವಷ್ಟು ಹೊಲದಲ್ಲೇ ಕೊಳೆತು ಗೊಬ್ಬರವಾದರೆ, ಇನ್ನು ಕೆಲವರು ಜಾನುವಾರುಗಳಿಗೆ ತಿನ್ನಿಸಿದ್ದಾರೆ.

    ಶೇಖರಪ್ಪ ಗುರುವಣ್ಣ ಅವರು ಒಂದು ಎಕರೆಯಲ್ಲಿ ಬಿತ್ತಿದ್ದ ಸಾಂಬಾರ್ ಸೌತೆಯು ಖರೀದಿ ಮಾಡುವವರಿಲ್ಲದೆ ಹೊಲದಲ್ಲೇ ಕೊಳೆಯುತ್ತಿದೆ. ಸಿಂಗಟಗೆರೆ, ಮತ್ತಿಹಳ್ಳಿಗಳಲ್ಲಿ ರಂಗರಾಜಪ್ಪ, ಬಸವರಾಜು, ಹನುಮಂತಪ್ಪ, ಕೋಡಪ್ಪ ಅವರು ಸಾಂಬಾರ್ ಸೌತೆ ಬೆಳೆದು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.

    2.5 ಎಕರೆಯಲ್ಲಿ ಬಿತ್ತನೆ ಮಾಡಿದ್ದು, 300ರಿಂದ 400 ಚೀಲ ಫಸಲು ಬರುತ್ತದೆ. 180 ಚೀಲ ಕಟಾವಾಗಿದೆ. 75 ಕೆಜಿ ಚೀಲಕ್ಕೆ 50 ರೂ.ಗೆ ಕೇಳಿದ್ದಾರೆ. 3 ವರ್ಷದ ಹಿಂದೆ ಚೀಲಕ್ಕೆ 1500ರಿಂದ 1600 ರೂ.ನಂತೆ 1 ಟನ್​ಗೆ 18,500 ರೂ.ಗೆ ಮಾರಾಟ ಮಾಡಿದ್ದೆ. ಕಳೆದ ಶ್ರಾವಣದಲ್ಲಿ ಮೂಟೆಗೆ 450 ರೂ.ಗೆ ನೀಡಲಾಗಿತ್ತು. ಸದ್ಯ 40 ಸಾವಿರ ರೂ. ನಷ್ಟ ಅನುಭವಿಸುವ ಸ್ಥಿತಿ ಬಂದಿದೆ ಎಂದು ಸೋಮನಹಳ್ಳಿ ಕಲ್ಲೇಶ ಬೇಸರದಿಂದ ಹೇಳಿದರು.

    ಕೆಲ ರೈತರು ಹೊಲದಲ್ಲೇ ವರ್ತಕರಿಗೆ ಸೌತೆಕಾಯಿ ಕೊಟ್ಟು ಮಾರಾಟದ ನಂತರ ಹಣ ತಂದುಕೊಡಿ ಎಂದು ಹೇಳಿದ್ದಾರೆ. ವರ್ತಕರು ಕೊಟ್ಟಷ್ಟು ಹಣ ತೆಗೆದುಕೊಂಡು ಸಮಾಧಾನಪಟ್ಟುಕೊಳ್ಳುವಂತಾಗಿದೆ.

    ಎರಡೂವರೆ ತಿಂಗಳ ಹಿಂದೆ 5 ಎಕರೆಯಲ್ಲಿ ಸಾಂಬಾರ್ ಸೌತೆ ಬಿತ್ತಿದ್ದೆ. ಈಗ ಚೀಲಕ್ಕೆ 50 ರೂ.ಗೆ ಕೇಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ 100-150 ರೂ. ಬೆಲೆ ಇದೆ. ಈ ವರ್ಷ 1 ಲಕ್ಷ ರೂ. ಬಂಡವಾಳ ಹಾಕಿ 800ರಿಂದ ಸಾವಿರ ಚೀಲ ಫಸಲು ಬಂದು 40 ಸಾವಿರ ರೂ. ಸಿಕ್ಕಿದೆ. 60 ಸಾವಿರ ರೂ. ನಷ್ಟವಾಗಿದೆ ಎನ್ನುತ್ತಾರೆ ಸೋಮನಹಳ್ಳಿ ರೈತ ಮಲ್ಲಿಕಾರ್ಜುನ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts