More

    ಇಂದು ಐಸಿಸಿ ಮಂಡಳಿ ಮಹತ್ವದ ಸಭೆ

    ದುಬೈ: ಕಳೆದ ಎರಡೂ ತಿಂಗಳಿಂದ ಹಗ್ಗಜಗ್ಗಾಟದಲ್ಲೇ ಕಾಲಕಳೆಯುತ್ತಿರುವ ಟಿ20 ವಿಶ್ವಕಪ್ ಮುಂದೂಡಿಕೆ ಕುರಿತು ಸೋಮವಾರ ನಡೆಯಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮಂಡಳಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ. ಐಸಿಸಿ ತೀರ್ಮಾನಕ್ಕೆ ಕಾಯುತ್ತಿರುವ ಬಿಸಿಸಿಐ, ಒಂದು ವೇಳೆ ಟಿ20 ವಿಶ್ವಕಪ್ ಮುಂದೂಡಿದರೆ 13ನೇ ಆವೃತ್ತಿಯ ಐಪಿಎಲ್ ಹಾದಿ ಸುಗಮನವಾಗಲಿದೆ. ಪೂರ್ವನಿಗದಿಯಂತೆ ಟಿ20 ವಿಶ್ವಕಪ್ ಟೂರ್ನಿಯೂ ಆಸ್ಟ್ರೇಲಿಯಾ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಡೆಯಬೇಕಿದೆ. ಕೋವಿಡ್-19 ಪಿಡುಗಿನಿಂದ ತತ್ತರಿಸಿರುವ ಆಸ್ಟ್ರೇಲಿಯಾ ವಿಶ್ವಕಪ್ ಆಯೋಜಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
    ಭಾರತದಲ್ಲೂ ಕೋವಿಡ್-19 ತಾಂಡವಾಡುತ್ತಿದ್ದು, 10 ಲಕ್ಷಕ್ಕೂ ಅಧಿಕ ಪ್ರಕರಣಗಳಿವೆ. 26 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಯುಎಇಯಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ರೂಪುರೇಷೆ ಸಿದ್ಧಪಡಿಸಿಕೊಂಡಿದೆ. ಈ ಕುರಿತು ಶನಿವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲೂ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ.
    ‘ಏಷ್ಯಾಕಪ್ ಕೂಡ ಮುಂದೂಡಿಕೆಯಾಗಿದ್ದು, ಐಸಿಸಿ ಕೂಡ ಟಿ20 ವಿಶ್ವಕಪ್ ಮುಂದೂಡಿಕೆ ಕುರಿತು ಅಧಿಕೃತ ನಿರ್ಧಾರ ಕೈಗೊಂಡರೆ, ನಮ್ಮ ಯೋಜನೆಯಂತೆ ಮುಂದುವರಿಯಲು ಅನುಕೂಲವಾಗುತ್ತದೆ’ ಎಂದು ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರೊಬ್ಬರು ತಿಳಿಸಿದ್ದಾರೆ.
    ಪ್ರಸಕ್ತ ವರ್ಷ ನಿಗದಿಯಾಗಿರುವ ಟಿ20 ವಿಶ್ವಕಪ್ ಮುಂದೂಡಿಕೆಯಾದರೆ, 2022ರಲ್ಲಿ ಅದು ಆಸ್ಟ್ರೇಲಿಯಾದಲ್ಲೇ ನಡೆಯಲಿದೆ. 2021ರಲ್ಲಿ ನಿಗದಿಯಾಗಿರುವ ಟೂರ್ನಿಯನ್ನು ಭಾರತ ಬಿಟ್ಟುಕೊಡಲು ನಿರಾಕರಿಸಿದೆ. ಟಿ20 ವಿಶ್ವಕಪ್ ಆತಿಥ್ಯ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಹೇಳಿರುವ ಕ್ರಿಕೆಟ್ ಆಸ್ಟ್ರೇಲಿಯಾ ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಟಗಾರರನ್ನು ಸಜ್ಜುಗೊಳಿಸುತ್ತಿರುವುದಾಗಿ ಹೇಳಿಕೊಂಡಿದೆ. ಈಗಾಗಲೇ 26 ಸಂಭಾವ್ಯ ಆಟಗಾರರ ಪಟ್ಟಿಯನ್ನು ಸಿಎ ಬಿಡುಗಡೆ ಮಾಡಿದೆ.

    ಇದನ್ನೂ ಓದಿ: VIDEO: ಕರೊನಾದಿಂದ ಗುಣಮುಖರಾದ ಜೋಕೊವಿಕ್, ಅಭ್ಯಾಸಕ್ಕೆ ವಾಪಸ್

     ಚೇರ್ಮನ್ ಚುನಾವಣೆ ಪ್ರಕ್ರಿಯೆಗೆ ಚಾಲನೆ
    ಟಿ20 ವಿಶ್ವಕಪ್ ಮುಂದೂಡಿಕೆ ವಿಚಾರದ ಜತೆಗೆ ಐಸಿಸಿ ಚೇರ್ಮನ್ ಹುದ್ದೆಗೆ ಚುನಾವಣಾ ಪ್ರಕ್ರಿಯೆಗೂ ಚಾಲನೆ ನೀಡುವ ಸಾಧ್ಯತೆಗಳಿವೆ. ಭಾರತದ ಶಶಾಂಕ್ ಮನೋಹರ್ ರಾಜೀನಾಮೆಯಿಂದ ಈ ಹುದ್ದೆ ತೆರವಾಗಿದೆ. ಈ ಮೊದಲು ಈ ಹುದ್ದೆಗೆ ಅವಿರೋಧ ಆಯ್ಕೆ ಮಾಡುವುದಾಗಿ ಹೇಳಲಾಗುತ್ತಿತ್ತು. ಆದರೆ, ದಿನದಿಂದ ದಿನಕ್ಕೆ ಅಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯ ಕಾಲಿನ್ ಗ್ರೇವ್ಸ್ ಹಾಗೂ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಹೆಸರುಗಳು ಮುಂಚೂಣಿಗೆ ಬಂದಿವೆ. ಕೂಲಿಂಗ್ ಆ್ ಅವಧಿಗೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ಕೈಗೊಳ್ಳುವ ತೀರ್ಮಾನದ ಮೇಲೆ ಗಂಗೂಲಿ ಅವರು ಕಣಕ್ಕಿಳಿಯುವ ವಿಷಯ ಅವಲಂಬಿಸಿದೆ. ಇವರೊಂದಿಗೆ ನ್ಯೂಜಿಲೆಂಡ್‌ನ ಗ್ರೆಗೋರ್ ಬಾರ್ಕ್ಲೆ, ಹಾಂಕಾಂಗ್‌ನ ಇಮ್ರಾನ್ ಖವಾಜಾ ಕೂಡ ರೇಸ್‌ನಲ್ಲಿದ್ದಾರೆ. ಸದ್ಯ ಖವಾಜಾ ಐಸಿಸಿಯ ಹಂಗಾಮಿ ಅಧ್ಯಕ್ಷರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts