More

    ತನಿಖೆ ನೆಪ, ಮೂಲಸೌಕರ್ಯ ಕಾಮಗಾರಿ ಸ್ಥಗಿತ: ಕೆಂಪೇಗೌಡ ಲೇಔಟ್​​ನಲ್ಲಿ ಸಿವಿಲ್ ಕೆಲಸಗಳಿಗೆ ಹಿನ್ನಡೆ

    ಆರ್​​.ತುಳಸಿಕುಮಾರ್​

    ಬೆಂಗಳೂರು: ಬಿಡಿಎ ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಯೋಜನೆ ಅಪೂರ್ಣಗೊಂಡಿದ್ದು, ಗುತ್ತಿಗೆದಾರರು ಕೈಗೊಂಡಿರುವ ಕೆಲಸದ ಕುರಿತು ಮೌಲ್ಯೀಕರಣ (ಆಡಿಟ್) ವಿಳಂಬದಿಂದಾಗಿ ಬಹುತೇಕ ಕಾಮಗಾರಿ ಸ್ಥಗಿತಗೊಂಡಿದೆ.

    ಕಳೆದ ಆರು ವರ್ಷಗಳಿಂದ ನಡೆಯುತ್ತಿರುವ ಮೂಲಸೌಕರ್ಯ ಅನುಷ್ಠಾನದ ಕಾಮಗಾರಿ ವಿವಿಧ ಹಂತಗಳಲ್ಲಿವೆ. ಪ್ಯಾಕೇಜ್‌ಗಳಲ್ಲಿ ಗುತ್ತಿಗೆ ವಹಿಸಿದ್ದರೂ, ಕಂಟ್ರ್ಯಾಕ್ಟರ್‌ಗಳು ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿಲ್ಲ. ಇವರಿಂದ ಕೆಲಸ ತೆಗೆಸುವಲ್ಲಿ ಸಲವಾಗದ ಪ್ರಾಧಿಕಾರವು ಮತ್ತೆ ಮತ್ತೆ ಗಡುವು ವಿಸ್ತರಿಸುತ್ತಾ ಬಂದಿದೆ. ಲೇಔಟ್‌ಗೆ ಮೂಲಸೌಕರ್ಯ ಒದಗಿಸುವ ಮೊದಲ ಡೆಡ್‌ಲೈನ್ 2018ಕ್ಕೆ ಕೊನೆಗೊಂಡಿತ್ತು. ಮೇಲ್ವಿಚಾರಣೆ ವೈಲ್ಯ ಹಾಗೂ ಗುತ್ತಿಗೆದಾರರಿಗೆ ಸಕಾಲದಲ್ಲಿ ಬಿಲ್ ಪಾವತಿಸದ ಕಾರಣ ಕಾಮಗಾರಿ ಚುರುಕು ಪಡೆಯಲಿಲ್ಲ. ಇದರಿಂದಾಗಿ 2021, 2022, 2023ರ ಗಡುವು ಮೀರಿದೆ. ಈಗ ಕಟ್ಟಕಡೆಯದಾಗಿ 2024ರ ವರ್ಷಾಂತ್ಯದೊಳಗೆ ಸಕಲ ಮೂಲಸೌಕರ್ಯವನ್ನು ಕಲ್ಪಿಸಿಯೇ ಸಿದ್ಧ ಎಂದು ಬಿಡಿಎ ಹೇಳಿಕೆಯನ್ನು ಸರ್ಕಾರ ಅನುಮೋದಿಸಿದೆ.

    ಆದರೆ, ಈವರೆಗೆ ಆಗಿರುವ ಕಾಮಗಾರಿಗಳ ದೃಢೀಕರಣದ ಬಗ್ಗೆ ನಡೆದಿರುವ ಆಡಿಟ್ ಎರಡೂವರೆ ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. 2021ರ ಫೆಬ್ರವರಿಯಲ್ಲಿ ಆಗಿನ ಅಧ್ಯಕ್ಷರು ದೂರೊಂದನ್ನು ಆಧರಿಸಿ ಆಡಿಟ್‌ಗೆ ಸೂಚಿಸಿದ್ದರು. ಇದರ ಹೊಣೆಯನ್ನು ಮೆ. ಬ್ಯುರೋ ವೆರಿಟಾಸ್ ಕಂಪನಿಗೆ ವಹಿಸಲಾಗಿತ್ತು. ಇದಕ್ಕಾಗಿ 9 ಕೋಟಿ ರೂ. ಶುಲ್ಕ ಪಾವತಿಸುವ ಪ್ರಸ್ತಾಪವನ್ನು ಬಿಡಿಎ ತಿರಸ್ಕರಿಸಿ 2 ಕೋಟಿ ರೂ. ನೀಡುವುದಾಗಿ ಹೇಳಿತ್ತು. ಇದನ್ನು ಒಪ್ಪದ ಕಂಪನಿಯು ತಾನು ಮಾಡಿದ್ದ ಅಪೂರ್ಣ ಕೆಲಸದ ವರದಿಯನ್ನೂ ಸಲ್ಲಿಸದೆ ಅರ್ಧಕ್ಕೆ ಹೊರನಡೆಯಿತು. ಮತ್ತೆ ಆರೇ ತಿಂಗಳಲ್ಲಿ ಮೆ. ಅಲ್ಕಾನ್ ಸಿಸ್ಟಮ್ಸ್‌ಗೆ ಹೊಣೆ ವಹಿಸಿದ್ದರೂ ಕೋವಿಡ್ ಹಾಗೂ ಇತರ ಕಾರಣ ನೀಡಿ ವರದಿ ವಿಳಂಬಿಸಿದೆ. ಜತೆಗೆ ನಿಕಟಪೂರ್ವ ಆಯುಕ್ತರು ಆಡಿಟ್ ಕಾರ್ಯ ಸಮರ್ಪಕವಾಗಿ ನಡೆದಿಲ್ಲವೆಂದು ಆಕ್ಷೇಪಿಸಿ ಮರು ಆಡಿಟ್‌ಗೆ ಸೂಚಿಸಿದ್ದರು. ಪ್ರಸ್ತುತ ತನ್ನ ಕೆಲಸಕ್ಕೆ ಸ್ವಲ್ಪ ಹಣವನ್ನು ಪಡೆದಿದ್ದರೂ ಈ ಕಂಪನಿ ಪೂರ್ಣ ವರದಿಯನ್ನು ಸಲ್ಲಿಸಲು ತಿಣುಕಾಡುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

    ವರದಿ ಕೈಸೇರದೆ ಬಿಲ್ ಪಾವತಿಗೆ ತಡೆ:

    ಮರು ಆಡಿಟ್ ಕಾರ್ಯ ಆರು ತಿಂಗಳಿನಿಂದ ನಡೆಯುತ್ತಿದ್ದರೂ, ಈವರೆಗೂ ಪೂರ್ಣಗೊಳಿಸಿಲ್ಲ. ಹೊಸ ಸರ್ಕಾರ ಅಧಿಕಾರಕ್ಕೇರಿದ ಬಳಿಕವೂ ಕೆಲಸ ಚುರುಕುಗೊಳಿಸುವಂತೆ ಸೂಚಿಸಿದ್ದರೂ, ಅಲ್ಕಾನ್ ಸಿಸ್ಟಮ್ಸ್ ಪ್ರತಿನಿಧಿಗಳು ಸಬೂಬು ಹೇಳುತ್ತಲೇ ಬಂದಿದ್ದಾರೆ. ಈ ವರದಿ ಆಧರಿಸಿಯೇ ಬಿಲ್ ಪಾವತಿ ಮಾಡಬೇಕಿರುವ ಕಾರಣ ಗುತ್ತಿಗೆದಾರರು ತಮಗೆ ಹಣ ನೀಡದಿದ್ದಕ್ಕಾಗಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಕಾಟಾಚಾರಕ್ಕೆ ಎಂಬಂತೆ ಅಲ್ಲೊಂದು ಇಲ್ಲೊಂದು ಸ್ಥಳದಲ್ಲಿ ಮಾತ್ರ ಬೆರಳೆಣಿಕೆಯಷ್ಟು ಕಾರ್ಮಿಕರನ್ನು ನಿಯೋಜಿಸಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಕೆಲಸ ಆಗುತ್ತಿಲ್ಲ. ಇತ್ತೀಚಿಗೆ ಕೆಂಪೇಗೌಡ ಬಡಾವಣೆ ಕಾಮಗಾರಿ ಮೇಲ್ವಿಚಾರಣೆಗೆ ನಿಯೋಜಿಸಿದ್ದ ಇಂಜಿನಿಯರ್‌ಗಳಲ್ಲಿ ಹೆಚ್ಚಿನವರನ್ನು ಶಿವರಾಮ ಕಾರಂತ ಲೇಔಟ್ ಯೋಜನೆ ನಿಯೋಜಿಸಲಾಗಿದೆ. ಇದು ಕೂಡ ಆಡಿಟ್ ಕಾರ್ಯ ಸಕಾಲದಲ್ಲಿ ಪೂರ್ಣಗೊಳ್ಳಲು ಹಿನ್ನೆಡೆ ಉಂಟಾಗಿರುವಂತಿದೆ.

    ತಪ್ಪು ಲೆಕ್ಕಾಚಾರದಿಂದ ಸಮಸ್ಯೆ ಸೃಷ್ಟಿ:

    ಬಿಡಿಎ ಕೆಂಪೇಗೌಡ ಲೇಔಟ್ ನಿರ್ಮಿಸುವ ಮುನ್ನ ಮೂಲಸೌಕರ್ಯ ಸಹಿತ ಇತರ ವೆಚ್ಚವನ್ನು ಲೆಕ್ಕಹಾಕಿತ್ತು. ಇದರನ್ವಯ 4040 ಎಕರೆ ವಿಸ್ತೀರ್ಣದಲ್ಲಿ 7-8 ಸಾವಿರ ಸೈಟ್‌ದಾರರಿಗೆ ರಸ್ತೆ, ನೀರು, ಒಳಚರಂಡಿ, ವಿದ್ಯುತ್ ಸೌಕರ್ಯಕ್ಕಾಗಿ 2,600 ಕೋಟಿ ರೂ. ವೆಚ್ಚವಾಗುವುದೆಂದು ಅಂದಾಜಿಸಿತ್ತು. ಈಗ ಸೈಟ್‌ಗಳ ಸಂಖ್ಯೆ 26 ಸಾವಿರಕ್ಕೆ ಏರಿಕೆಯಾಗಿದ್ದು, ಇಲ್ಲೂ ಸೌಕರ್ಯ ಕಲ್ಪಿಸಲಾಗುತ್ತಿದೆ. ಈವರೆಗೆ ಭೂಸ್ವಾಧೀನ ವ್ಯಾಜ್ಯವಿಲ್ಲದ 2,694 ಎಕರೆ ಪೈಕಿ 2,200 ಎಕರೆ ಪ್ರದೇಶದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಉಳಿದ 1,300 ಎಕರೆ ಕೋರ್ಟ್ ವ್ಯಾಜ್ಯ ಹಾಗೂ ಭೂಸ್ವಾಧೀನ ಸಮಸ್ಯೆ ಎದುರಾಗಿದೆ. ಈ ತಪ್ಪು ಲೆಕ್ಕಾಚಾರವೇ ಬಿಡಿಎಯನ್ನು ಇಕ್ಕಟ್ಟಿಗೆ ಸಿಲುಕಿದೆ. ಜತೆಗೆ ಬಡಾವಣೆ ನಿರ್ಮಾಣದ ನಿಖರ ವೆಚ್ಚವನ್ನು ಅಂದಾಜಿಸಲು ಸಾಧ್ಯವಾಗತ್ತಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.

    ಸದನಕ್ಕೆ ತಪ್ಪು ಮಾಹಿತಿ ಸಲ್ಲಿಕೆ?:

    ಕೆಂಪೇಗೌಡ ಬಡಾವಣೆಯಲ್ಲಿ ಸೈಟ್‌ದಾರರು ಮನೆ ನಿರ್ಮಿಸಿಕೊಳ್ಳಲು ಕುಡಿಯುವ ನೀರು, ಒಳಚರಂಡಿ ಹಾಗೂ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗಿದೆ ಎಂಬ ಮಾಹಿತಿಯನ್ನು ಡಿಸಿಎಂ ಪರವಾಗಿ ಸಚಿವ ರಾಮಲಿಂಗಾರೆಡ್ಡಿ ಅವರು ನೀಡಿದ್ದಾರೆ. ಈ ಮಾಹಿತಿಯು ತಪ್ಪುಗಳಿಂದ ಕೂಡಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಡಿ.12ರಂದು ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಎಸ್.ಸುರೇಶ್‌ಕುಮಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ರಸ್ತೆಗೆ ಡಾಂಬರು ಹೊರತುಪಡಿಸಿ ಇನ್ನುಳಿದ ಸೌಕರ್ಯವನ್ನು ಒದಗಿಸಲಾಗಿದೆ. ಕೆಲವೆಡೆ ಪರ್ಯಾಯ ವ್ಯವಸ್ಥೆಯನ್ನೂ ತಾತ್ಕಾಲಿಕ ಒದಗಿಸಲಾಗಿದೆ ಎಂದಿದ್ದಾರೆ. ಆದರೆ, ಲೇಔಟ್‌ನಲ್ಲಿ ಪ್ರಸ್ತುತ ಕುಡಿಯುವ ನೀರು, ಒಳಚರಂಡಿ ಸೌಲಭ್ಯವನ್ನು ಕಲ್ಪಿಸಿಯೇ ಇಲ್ಲ. ಮನೆಗಳ ಬಳಿ ತಾತ್ಕಾಲಿಕ ಶೌಚಗುಂಡಿ ನಿರ್ಮಿಸಿಕೊಳ್ಳಲು ಮೌಖಿಕ ಸೂಚನೆ ನೀಡಿರುವುದನ್ನೇ ಸೌಕರ್ಯ ಒದಗಿಸಲಾಗಿದೆ ಎಂಬುದಾಗಿ ಬಿಂಬಿಸಲಾಗಿದೆ. ಬಿಡಿಎ ನೀಡಿದ್ದ ಮಾಹಿತಿಯನ್ನು ಯಥಾವತ್ ಸದನದಲ್ಲಿ ಮಂಡಿಸಿದ ಕಾರಣ ಈ ಅಚಾತುರ್ಯ ಘಟಿಸಿದೆ.

    ಖಾಸಗಿ ಬಡಾವಣೆಗಳಲ್ಲಿ ಮೂಸೌಕರ್ಯ ಕಲ್ಪಿಸಿದ ಬಳಿಕ ಸೈಟ್ ಹಂಚಬೇಕು ಎಂಬ ನಿಯಮ ರೂಪಿಸಿರುವ ಬಿಡಿಎ ತಾನು ನಿರ್ಮಿಸುವ ಲೇಔಟ್‌ಗಳಲ್ಲಿ ಸೌಲಭ್ಯ ಒದಗಿಸದೆ ಮಾತು ತಪ್ಪಿದೆ. ಸೌಕರ್ಯ ಒದಗಿಸುವವರೆಗೂ ಸೈಟ್‌ದಾರರಿಂದ ತೆರಿಗೆ ಸಂಗ್ರಹಿಸಬಾರದು. ಪ್ರಾಧಿಕಾರಕ್ಕೆ ನಷ್ಟ ಮಾಡುವ ಅಧಿಕಾರಿಗಳಿಗೆ ದಂಡ ವಿಧಿಸುವಂತಾಗಬೇಕು.
    – ಎಸ್.ಸುರೇಶ್‌ಕುಮಾರ್, ಶಾಸಕ (ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಉಲ್ಲೇಖ)

    ಕೆಂಪೇಗೌಡ ಲೇಔಟ್‌ನಲ್ಲಿ ಮೂಲಸೌಕರ್ಯ ಕಾಮಗಾರಿ ನಿಧಾನ ಆಗಿರುವುದರಿಂದ ನಮ್ಮಂತಹ ಸೈಟ್ ಹಂಚಿಕೆದಾರರು ಸೂರು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಿಡಿಎ ಕಾಮಗಾರಿಗಳ ಅನುಷ್ಠಾನಕ್ಕೆ ಗಡುವು ನೀಡಿದ್ದರೂ, ಗುತ್ತಿಗೆದಾರರು ಕೆಲಸ ಪೂರ್ಣಗೊಳಿಸಿಲ್ಲ. ಪ್ರಾಧಿಕಾರವು ಯಾವುದೇ ಸಬೂಬು ನೀಡದೆ ಲೇಔಟ್‌ಗೆ ಸೌಕರ್ಯ ಕಲ್ಪಿಸಿ ಜನರಿಗೆ ಅನುಕೂಲ ಮಾಡಿಕೊಡಲಿ.
    – ಸೂರ್ಯಕಿರಣ್, ಸೈಟ್ ಹಂಚಿಕೆದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts