More

    ಮಂತ್ರಿ ಮಾಲ್‌ಗೆ ಮತ್ತೆ ಬೀಗ: ಆಸ್ತಿತೆರಿಗೆ ಬಾಕಿ ಹಿನ್ನೆಲೆ ಪಾಲಿಕೆ ಕ್ರಮ

    ಬೆಂಗಳೂರು: ನಗರದ ಪ್ರಮುಖ ವಾಣಿಜ್ಯ ಕೇಂದ್ರ ಮಂತ್ರಿ ಮಾಲ್ ಆಡಳಿತ ಮಂಡಳಿ ಆಸ್ತಿತೆರಿಗೆಯ ಬಾಕಿ ಮೊತ್ತವನ್ನು ಪಾವತಿಸದ ಕಾರಣ ಬಿಬಿಎಂಪಿಯು ಶುಕ್ರವಾರ ಮಾಲ್‌ಗೆ ಬೀಗ ಹಾಕಿ ಬಿಸಿ ಮುಟ್ಟಿಸಿದೆ.

    ಪಾಲಿಕೆಯ ಪಶ್ಚಿಮ ವಲಯದ ಪ್ರಮುಖ ಆದಾಯ ಮೂಲವಾಗಿರುವ ಮಂತ್ರಿ ಮಾಲ್ ಹಲವು ವರ್ಷಗಳಿಂದ ತೆರಿಗೆ ಬಾಕಿಯನ್ನು ಉಳಿಸಿಕೊಂಡು ಬರುತ್ತಿದೆ. 2020-21ನೇ ಸಾಲಿನಿಂದ ಆಸ್ತಿತೆರಿಗೆ ಪಾವತಿಸಿಲ್ಲ. ಈ ಕಾರಣದಿಂದ ಪಾಲಿಕೆಯಿಂದಲೇ ಸದರಿ ಸ್ವತ್ತಿನ್ನು ಟೋಟಲ್ ಸ್ಟೇಷನ್ ಸರ್ವೆಗೆ ಒಳಪಡಿಸಿದಾದ 2009-10ರಿಂದ 2019-20ರ ವರೆಗೆ ಸ್ವಯಂಘೋಷಣೆ ಆಸ್ತಿತೆರಿಗೆ ಪದ್ಧತಿ ಅಡಿಯಲ್ಲಿ ಘೋಷಿಸಿಕೊಂಡಿರುವ ಮೊತ್ತಕ್ಕಿಂತ ಕಡಿಮೆ ಇದೆ. ಹೀಗಾಗಿ ಪಾಲಿಕೆಯ ಹಲವು ಬಾರಿ ಮಾಲ್ ಮುಖ್ಯಸ್ಥರಿಗೆ ನೋಟಿಸ್ ನೀಡಿ ಬಾಕಿ ಪಾವತಿಗೆ ಒತ್ತಾಯಿಸುತ್ತಲೇ ಬಂದಿದೆ. ಆದರೂ, ನೋಟಿಸ್‌ಗೆ ಪ್ರತಿಯಾಗಿ ಕಾಲಾವಕಾಶವನ್ನು ಕೇಳುತ್ತಲೇ ಬಂದಿದೆ. ಜತೆಗೆ ಒಂದೆರಡು ಬಾರಿ ಕೋರ್ಟ್ ಮೆಟ್ಟಿಲು ಹತ್ತಿ ತೆರಿಗೆ ಬಾಕಿ ಮೊತ್ತ ಕಡಿಮೆ ಮಾಡುವಂತೆ ಪಾಲಿಕೆಗೆ ಸೂಚಿಸಲು ಅಹವಾಲು ಸಲ್ಲಿಸಿತ್ತು. ಆದರೆ, ನಿಯಮ ಪ್ರಕಾರ ಮಾಲ್ ತನ್ನ ನಿರ್ಮಿತ ಕಟ್ಟಡಕ್ಕೆ ನಿಗದಿ ಪಡಿಸಿರುವ ತೆರಿಗೆಯನ್ನು ಕಟ್ಟದೇ ಮೀನ-ಮೇಷ ಎಣಿಸುತ್ತಿದೆ ಎಂಬ ಆಕ್ಷೇಪ ಕೇಳಿಬಂದಿದೆ.

    51.95 ಕೋಟಿ ರೂ. ತೆರಿಗೆ ಬಾಕಿ:

    ಮಂತ್ರಿ ಮಾಲ್ ಈ ತಿಂಗಳವರೆಗೆ ಪಾವತಿಸಬೇಕಿರುವ ಒಟ್ಟು ತೆರಿಗೆ ಮೊತ್ತ 51.95 ಕೋಟಿ ರೂ. ಇದರಲ್ಲಿ ಹಿಂಬಾಕಿ ಹಾಗೂ ದಂಡದ ಹಣವೂ ಸೇರಿದೆ. ಸ್ವತ್ತುಗಳಿಂದ ಪೂರ್ಣ ಬಾಕಿಯನ್ನು ವಸೂಲು ಮಾಡುವ ನಿಟ್ಟಿನಲ್ಲಿ ಪಾಲಿಕೆಯು ಒಂದು ಬಾರಿ ವಸೂಲಿ ಕ್ರಮ (ಒಟಿಎಸ್) ನಿಯಮವನ್ನು ಅಳವಡಿಸಿಕೊಂಡಿದೆ. ಬಾಕಿ ಮೊತ್ತವನ್ನು ಒಮ್ಮೆಲೇ ಪಾವತಿಸಿದರೆ ದಂಡದ ಹಣ ಹಾಗೂ ಇತರ ರಿಯಾಯಿತಿ ಸೌಲಭ್ಯ ಸಿಗಲಿದೆ. ಮಂತ್ರಿ ಮಾಲ್ ತನ್ನ ಬಾಕಿಯನ್ನು ಒಮ್ಮೆಲೇ ಕಟ್ಟಿದರೆ 36.57 ಕೋಟಿ ರೂ. ಮಾತ್ರ ಪಾವತಿಸಬೇಕಾಗುತ್ತದೆ. ದೊಡ್ಡ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವ ಕಾರಣ ಮಾಲ್‌ಗೆ ಬೀಗ ಹಾಕಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

    ವಾಪಸಾದ ನಾಗರಿಕರು:

    ಬಸವ ಜಯಂತಿ ಕಾರಣ ಶುಕ್ರವಾರ ಸರ್ಕಾರಿ ರಜಾದಿನ ಇದ್ದ ಕಾರಣ ಹೆಚ್ಚಿನ ಜನರು ಮಂತ್ರಿ ಮಾಲ್‌ಗೆ ಬರತೊಡಗಿದ್ದರು. ಆದರೆ, ಬಂದವರು ಬೀಗ ಹಾಕಿರುವುದನ್ನು ಕಂಡು ಕಸಿವಿಸಿಗೊಂಡರು. ಕೆಲವರು ಅಲ್ಲಿ ಅಂಟಿಸಿದ್ದ ಪಾಲಿಕೆ ನೋಟಿಸ್ ಗಮನಿಸಿ ಪೆಚ್ಚು ಮೋರೆ ಹಾಕಿ ವಾಪಸಾದರು. ಮಧ್ಯಾಹ್ನದ ವರೆಗೂ ಹಲವು ಮಂದಿ ಮಾಲ್ ಬಳಿ ಬಂದು ಹಿಂದಿರುಗುತ್ತಿದ್ದ ದೃಶ್ಯ ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts