More

    ಬೀದಿನಾಯಿಗಳಿಗೆ ಮೈಕ್ರೋಚಿಪ್ ಅಳವಡಿಕೆಗೆ ಟೆಂಡರ್ : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

    ಬೆಂಗಳೂರು : ಬೀದಿನಾಯಿಗಳಿಗೆ ಮೈಕ್ರೋಚಿಪ್ ಅಳವಡಿಸುವ ಸಲುವಾಗಿ ಸೂಕ್ತ ಕ್ರಮ ಪಾಲಿಸದೆ ಬಿಬಿಎಂಪಿ ಟೆಂಡರ್ ಕರೆದಿದ್ದು, ಈ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸುವಂತೆ ಕೋರಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಸೇರಿ ಎಲ್ಲ ಪ್ರತಿವಾದಿಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

    ಹೆಬ್ಬಾಳ ನಿವಾಸಿ ಎಸ್. ಪ್ರಿಯದರ್ಶಿನಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ತ ಯಾದವ್ ಹಾಗೂ ವೆಂಕಟೇಶ್ ನಾಯ್ಕ ಟಿ. ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು, ಬಿಬಿಎಂಪಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸದೆ ಬೀದಿನಾಯಿಗಳ ಆರೋಗ್ಯ ಹಾಗೂ ಜೀವದೊಂದಿಗೂ ಚೆಲ್ಲಾಟವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು.

    ಹಲವೆಡೆ ನಾಯಿಗಳಿಗೆ ಶಸಚಿಕಿತ್ಸೆ ನಡೆಸಿ ಚಿಪ್ ಅಳವಡಿಸಲಾಗುತ್ತಿದ್ದು, ಇದಕ್ಕೆ ತಡೆ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ರಾಜ್ಯ ಸರ್ಕಾರ, ಬಿಬಿಎಂಪಿ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜೂನ್ ಮೊದಲ ವಾರಕ್ಕೆ ಮುಂದೂಡಿದೆ.

    ನಗರದಲ್ಲಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೊಳಪಡಿಸಿದ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆಗೆ ಬಿಬಿಎಂಪಿ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಟೆಂಡರ್ ಕರೆದಿದೆ. ಆದರೆ, ಕಾನೂನು ವ್ಯಾಪ್ತಿಯಲ್ಲಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆ ಮಾಡಲು ಅವಕಾಶವಿಲ್ಲ. ಅಲ್ಲದೆ ಈ ಬಗ್ಗೆ ಟೆಂಡರ್ ಕರೆಯುವ ಅಧಿಕಾರವನ್ನು ಕೂಡ ಬಿಬಿಎಂಪಿ ಹೊಂದಿಲ್ಲ.

    ಇದನ್ನು ಮೀರಿ ಪಾಲಿಕೆ ಕಾರ್ಯಾಚರಿಸುತ್ತಿದೆ. ಜತೆಗೆ ಲಸಿಕೆ ಮತ್ತು ಮೈಕ್ರೋ ಚಿಪಿಂಗ್ ಅಳವಡಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ ಪಡೆದಿದೆಯೇ ಎನ್ನುವ ಬಗ್ಗೆ ತಿಳಿಸಿಲ್ಲ. ಈ ವಿಚಾರವಾಗಿ ಬಿಬಿಎಂಪಿ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದೆ ಎಂದು ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಸಹಾನೂಭೂತಿಯಿಂದ ನೋಡಿ
    ಚುಚ್ಚುಮದ್ದು ಮತ್ತು ಮೈಕ್ರೋಚಿಪ್ಪಿಂಗ್ ಅಳವಡಿಕೆಯ ನಂತರ ನಾಯಿಗಳು ಹೆಚ್ಚು ಆಕ್ರಮಣಕಾರಿಯಾಗಬಹುದು ಮತ್ತು ಪ್ರತಿಸ್ಪಂದಕರ ಮೇಲೆ ಅನಗತ್ಯ ದಾಳಿ ನಡೆಸಬಹುದು. ವಿವರವಾದ ಯೋಜನೆ ಇಲ್ಲದೆ ಮತ್ತು ಕಾನೂನಿನ ಯಾವುದೇ ನಿಬಂಧನೆ ಇಲ್ಲದೆ ದೊಡ್ಡ ಪ್ರಮಾಣದಲ್ಲಿ ಚಿಪ್ ಮತ್ತು ಲಸಿಕೆ ಹಾಕುವುದು ಅತ್ಯಂತ ಅಪಯಕಾರಿ.

    ಇದು ನಾಯಿಗಳಿಗೆ ಅಗಾಧವಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಮುಗ್ಧ ಬೀದಿನಾಯಿಗಳನ್ನು ಮನುಷ್ಯರು ಸಹಾನುಭೂತಿಯಿಂದ ನಡೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts