More

    ಪತಿ ಮೃತರಾದರೂ ವಿಚ್ಛೇದನ ಡಿಕ್ರಿ ರದ್ದಾಗದು

    ಬೆಂಗಳೂರು: ಕೌಟುಂಬಿಕ ನ್ಯಾಯಾಲಯವು ಪತಿ ಪರವಾಗಿ ವಿಚ್ಛೇದನ ಮಂಜೂರು ಮಾಡಿರುವ ಡಿಕ್ರಿ ಪ್ರಶ್ನಿಸಿ ಪತ್ನಿಯು ಸಲ್ಲಿಸಿರುವ ಮೇಲ್ಮನವಿಯು ಪತಿ ಸಾವನ್ನಪ್ಪಿದರೆ ರದ್ದಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

    ಪತ್ನಿ ಕ್ರೌರ್ಯ ಎಸಗುತ್ತಿದ್ದಾಳೆ ಎಂದು ಆಕ್ಷೇಪಿಸಿ ಪತಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿ ವಿಚ್ಛೇದನ ಮಂಜೂರು ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಅನಂತ್ ರಾಮನಾಥ್ ಹೆಗ್ಡೆ ಅವರ ನೇತೃತ್ವದ ವಿಭಾಗೀಯ ಪೀಠವು ಅನೂರ್ಜಿತಗೊಳಿಸಿದೆ. ಜತೆಗೆ ಅರ್ಜಿದಾರರ ಮೇಲ್ಮನವಿಯನ್ನು ಪುರಸ್ಕರಿಸಿದೆ.

    ವಿಚಾರಣೆ ವೇಳೆ ಪತ್ನಿ ಪರ ವಕೀಲ ಪಿ.ಬಿ.ಅಜಿತ್, ಪ್ರಕರಣದಲ್ಲಿ ಪತ್ನಿಯು ಪತಿಯ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಸೂಕ್ತ ದಾಖಲೆಗಳು ಇಲ್ಲ. ಮೇಲ್ಮನವಿದಾರೆ ಪತ್ನಿಯ ತಂದೆಯ ಮೇಲೆ ದೈಹಿಕ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಪತಿ ಹಾಗೂ ಅವರ ಸ್ನೇಹಿತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆಯೇ ವಿನಾಃ ಪತಿಯ ಮೇಲೆ ಆಕೆ ಕ್ರೌರ್ಯ ಎಸಗಿಲ್ಲ. ಇಲ್ಲಿ ಆಕೆ ತನ್ನ ಮಗು ಹಾಗೂ ತನಗೆ ಜೀವನಾಂಶ ಕೋರಿ ದಾವೆ ಹೂಡುವುದನ್ನು ಕ್ರೌರ್ಯವಾಗಿ ಪರಿಗಣಿಸಲಾಗದು ಎಂದು ವಾದ ಮಂಡಿಸಿದರು.

    ಅಲ್ಲದೆ, ಮೇಲ್ಮನವಿ ಬಾಕಿ ಇರುವಾಗ ಪತಿ ಸಾವನ್ನಪ್ಪಿದರೂ ಪತ್ನಿಯ ವಿಧವೆ ಸ್ಥಾನದ ಹಕ್ಕುಗಳು ಹಾಗೂ ಆ ನಂತರ ಆಸ್ತಿಯ ಮೇಲಿನ ಹಕ್ಕು ಮತ್ತು ನಿವೃತ್ತಿ ಸೌಲಭ್ಯಗಳು ಚಾಲ್ತಿಯಲ್ಲಿರಲಿವೆ ಎಂಬುದನ್ನು ಪೀಠದ ಗಮನಕ್ಕೆ ತಂದರು.

    ಈ ವೇಳೆ ಪತಿ ಪರ ವಕೀಲ ಸಯ್ಯದ್ ಖಲೀಲ್ ಪಾಷಾ, ಅರ್ಜಿದಾರೆಯು (ಪತ್ನಿ) ಪತಿಗೆ ಅಸಾಧ್ಯವಾದ ಕಿರುಕುಳ ನೀಡಿದ್ದಾಳೆಂದು ಆತ ಹೇಳಿಕೊಂಡಿದ್ದನ್ನು ಕೌಟುಂಬಿಕ ನ್ಯಾಯಾಲಯ ಒಪ್ಪಿಕೊಂಡಿದೆ. ಹೀಗಾಗಿ, ಕೌಟುಂಬಿಕ ನ್ಯಾಯಾಲಯದ ಆದೇಶವು ಸೂಕ್ತ ಮತ್ತು ಸಿಂಧುವಾಗಿದೆ. ಪತ್ನಿಗೆ ವಿಚ್ಛೇದನ ನೀಡಿರುವುದರಿಂದ ಅವರು ಕೌಟುಂಬಿಕ ಪಿಂಚಣಿಗೆ ಅರ್ಹರಲ್ಲ ಎಂದು ವಾದ ಮಂಡಿಸಿದರು.

    ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ, ಡಿಕ್ರಿ ಹೊಂದಿರುವ ಪತಿ ಸಾವನ್ನಪ್ಪಿದರೂ ಮಾಲೀಕತ್ವದ ಹಕ್ಕುಗಳು ಪರಿಣನೆಗೆ ಬಾಕಿ ಇರುವುದರಿಂದ ಮೇಲ್ಮನವಿ ರದ್ದಾಗಿದೆ ಎಂಬ ಪ್ರತಿವಾದಿ ಪರ ವಕೀಲರ ವಾದವನ್ನು ಒಪ್ಪಲಾಗದು ಎಂದು ಸ್ಪಷ್ಟಪಡಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts