More

    ಬಿಜೆಪಿಯಿಂದ ಒತ್ತಡದ ರಾಜಕಾರಣ: ಕೆ.ಎಸ್.ಈಶ್ವರಪ್ಪ

    ಶಿವಮೊಗ್ಗ: ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಏ.12ರಂದು ನಾಮಪತ್ರ ಸಲ್ಲಿಸುವುದಾಗಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಘೋಷಿಸಿದ್ದು, ನಾಮಪತ್ರ ಸಲ್ಲಿಸುವ ದಿನದಂದು 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವರು ಎಂದು ಹೇಳಿದರು.

    ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸುವ ತೀರ್ಮಾನದಿಂದ ಹಿಂದಕ್ಕೆ ಸರಿಯುವಂತೆ ಬಿಜೆಪಿ ರಾಷ್ಟ್ರೀಯ ನಾಯಕರು ಪದೇಪದೆ ಫೋನ್ ಮಾಡಿ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಮೊದಲ ದಿನವೇ ನಾಮಪತ್ರ ಸಲ್ಲಿಸಲಿದ್ದೇನೆ ಎಂದರು.
    ನನ್ನ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರ ಮೇಲೆ ಒತ್ತಡ ಹೇರಲಾಗುತ್ತಿದೆ. ನರೇಂದ್ರ ಮೋದಿ ಹಾಗೂ ಬಿಜೆಪಿ ಹೆಸರು ಹೇಳಿ ಭಾವನಾತ್ಮಕವಾಗಿ ಬ್ಲಾೃಕ್‌ಮೇಲ್ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಅನೇಕರು ಪರೋಕ್ಷವಾಗಿ ನನ್ನ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
    ರಾಜ್ಯದಲ್ಲಿ ಹಿಂದುತ್ವದ ಪ್ರಬಲ ಪ್ರತಿಪಾದಕರು, ಕಾರ್ಯಕರ್ತರಿಗೆ ಹಿನ್ನಡೆಯಾಗುತ್ತಿದೆ. ಈ ಕಾರಣಕ್ಕಾಗಿಯೇ ನನ್ನ ಸ್ಪರ್ಧೆ. ನನಗೆ ಕಾಂಗ್ರೆಸ್‌ನ ಅನೇಕರು ಬೆಂಬಲ ಸೂಚಿಸುತ್ತಿದ್ದಾರೆ. ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಕಾರಣದಿಂದ ಕಾಂಗ್ರೆಸ್‌ನಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಡಮ್ಮಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ ಎಂಬ ವಾಸ್ತವ ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿದಿದೆ ಎಂದರು.
    ರಾಜ್ಯದಲ್ಲಿ ಒಂದು ಬಾರಿ ಗರಿಷ್ಠ 108 ಸ್ಥಾನ ಪಡೆದೆವು. ಎಂದಿಗೂ ಸ್ವತಂತ್ರವಾಗಿ ಅಧಿಕಾರ ನಡೆಸಲು ಸಾಧ್ಯವಾಗಲಿಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿ ಶಕ್ತಿ 66ಕ್ಕೆ ಕುಸಿಯಿತು. ಇದಕ್ಕೆ ಕಾರ್ಯಕರ್ತರು ಕಾರಣರಲ್ಲ. ರಾಜ್ಯ ಮುಖಂಡರು ಕಾರ್ಯಕರ್ತರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ನೋವು ನಿಷ್ಠಾವಂತ ಕಾರ್ಯಕರ್ತರಲ್ಲಿದೆ ಎಂದು ಹೇಳಿದರು.
    ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಬಗ್ಗೆ ಒಲವಿಲ್ಲ. ಅವರ ಜತೆಗಿದ್ದು ಜೈ ಎನ್ನುವವರು, ಸ್ವಜಾತಿಯವರಿಗೆ ಮಾತ್ರ ಬೋರ್ಡ್‌ಗಳಲ್ಲಿ ಮೆಂಬರ್ ಮಾಡಿದ್ದಾರೆ. ಹೀಗಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಅನೇಕ ನಿಷ್ಠಾವಂತರು ನನಗೆ ಬೆಂಬಲ ಸೂಚಿಸಿದ್ದಾರೆ.
    ಶಿಕಾರಿಪುರ ಕ್ಷೇತ್ರದಲ್ಲಿ ಬಿಜೆಪಿ ಲೀಡ್ ತೀವ್ರ ಕುಸಿದಿದೆ. ಅಲ್ಲಿ ಹೊಂದಾಣಿಕೆ ರಾಜಕಾರಣದಿಂದ ಲಿಂಗಾಯತ ಸಮಾಜದ ಯುವಕ ಹಾಗೂ ಹಿಂದುಳಿದ ಯುವಕನೊಬ್ಬನಿಗೆ ವಿಧಾನಸಭೆ ಚುನಾವಣೆಯಲ್ಲಿ ಅನ್ಯಾಯವಾಗಿದೆ. ಅಪ್ಪ-ಮಕ್ಕಳು ವಿಚಿತ್ರ ರಾಜಕೀಯ ಮಾಡುತ್ತಾರೆ ಎಂದು ಶಿಕಾರಿಪುರದ ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಈಗ ಶಿಕಾರಿಪುರದಲ್ಲಿ ದುಡ್ಡು, ಜಾತಿ ಯಾವುದೂ ನಡೆಯಲ್ಲ. ನಾನು ಅಲ್ಲಿ ಸಭೆ ನಡೆಸಿದಾಗ ನನಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದರು.
    ಮಾಜಿ ಮೇಯರ್ ಏಳುಮಲೈ, ಲಕ್ಷ್ಮೀ ಶಂಕರನಾಯ್ಕ, ನಗರಪಾಲಿಕೆ ಮಾಜಿ ಸದಸ್ಯರಾದ ಆರತಿ ಪ್ರಕಾಶ್, ಸತ್ಯನಾರಾಯಣ್, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಪ್ರಮುಖ ಮಂಡನೇಕೊಪ್ಪ ಗಂಗಾಧರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts