More

    ಪತ್ರಿಕಾ ವಿತರಿಕರಿಗೆ ಸಾಮಾಜಿಕ ಭದ್ರತೆ ಅಗತ್ಯ



    ಮಡಿಕೇರಿ : ಸಾಮಾಜಿಕ ಭದ್ರತೆಯ ಉದ್ದೇಶದಿಂದ ಪತ್ರಿಕಾ ವಿತರಕರಿಗಾಗಿ ಸರ್ಕಾರ ರೂಪಿಸಿರುವ ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯ ಅನುಕೂಲವನ್ನು ಎಲ್ಲ ಪತ್ರಿಕಾ ವಿತರಕರು ಪಡೆದುಕೊಳ್ಳುವಂತಾಗಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಎಲ್. ಹರ್ಷವರ್ಧನ್ ಹೇಳಿದರು.


    ಕಾರ್ಮಿಕ ಇಲಾಖೆ ಮತ್ತು ವಿಜಯವಾಣಿ ಪತ್ರಿಕೆ ಸಹಯೋಗದಲ್ಲಿ ಶುಕ್ರವಾರ ಮಡಿಕೇರಿಯ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾ ವಿತರಕರ ವಿಮೆ ನೋಂದಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


    ಮನೆ ಮನೆಗೆ ಪತ್ರಿಕೆಗಳನ್ನು ತಲುಪಿಸುವಲ್ಲಿ ಪತ್ರಿಕಾ ವಿತರಕರ ಶ್ರಮವಿರುತ್ತದೆ. ಕೊಡಗಿನಂತಹ ಗುಡ್ಡಗಾಡು ಪ್ರದೇಶದಲ್ಲಿ ಮಳೆ, ಚಳಿ ಮಧ್ಯೆಯೂ ವರ್ಷದ ಎಲ್ಲ ದಿನಗಳಲ್ಲೂ ಪತ್ರಿಕೆ ಹಂಚುವ ವಿತರಕರಿಗೆ ನೆರವಾಗಲಿ ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆ ಜಾರಿಗೆ ತಂದಿದೆ. ಅಸಂಘಟಿತ ವಲಯದಲ್ಲಿ ಬರುವ ದಿನಪತ್ರಿಕೆ ವಿತರಕರ ವೃತ್ತಿ ಅರೆಕಾಲಿಕವಾಗಿದೆ. ಇವರು ಹೆಚ್ಚು ದ್ವಿಚಕ್ರವಾಹನ ಬಳಸುವುದರಿಂದ ಅಪಘಾತ ಉಂಟಾದಾಗ ವೈದ್ಯಕೀಯ ಚಿಕಿತ್ಸೆ ಭದ್ರತೆ ನೀಡಬೇಕಾಗುತ್ತದೆ ಎಂದರು.


    ಪತ್ರಿಕಾ ವಿತರಣೆ ಮಾಡುವ 16-59ರ ವಯೋಮಾನದ ಕಾರ್ಮಿಕರು ಈ ಸೌಲಭ್ಯ ಪಡೆದುಕೊಳ್ಳಬಹುದು. ಕೇಂದ್ರ ಸರ್ಕಾರದ ಇ-ಶ್ರಮ ಪೋರ್ಟಲ್‌ನಲ್ಲಿ ನ್ಯೂಸ್ ಪೇಪರ್ ಬಾಯ್ ಎಂಬ ವರ್ಗದಡಿಯಲ್ಲಿ ನೋಂದಣಿ ಆಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇಎಸ್‌ಐ, ಇಪಿಎಫ್ ಸೌಲಭ್ಯ ಹೊಂದಿಲ್ಲದವರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅಪಘಾತದಲ್ಲಿ ಮರಣ ಹೊಂದಿದರೆ ನಾಮಿನಿಗೆ 2 ಲಕ್ಷ ರೂ., ಅಪಘಾತದಲ್ಲಿ ಶಾಶ್ವತ ದುರ್ಬಲತೆ ಹೊಂದಿದಲ್ಲಿ ಶೇಕಡವಾರು ದುರ್ಬಲತೆ ಆಧಾರದಲ್ಲಿ 2 ಲಕ್ಷ ರೂ.ತನಕ ಪರಿಹಾರ ಮತ್ತು ಅಪಘಾತ ಅಥವಾ ಮಾರಣಾಂತಿಕ ಕಾಯಿಲೆಗೆ ತುತ್ತಾದಲ್ಲಿ 1 ಲಕ್ಷ ರೂ.ತನಕ ಆಸ್ಪತ್ರೆ ವೆಚ್ಚ ಪಾವತಿ ಮಾಡಲಾಗುತ್ತದೆ ಎಂದರು.


    ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‌ಗೆ ಸಂಯೋಜನೆಗೊಂಡ ಮೊಬೈಲ್ ಸಂಖ್ಯೆ ನೀಡಿ ಇ-ಶ್ರಮ ಪೋರ್ಟಲ್, ಸೇವಾ ಕೇಂದ್ರ ಅಥವಾ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದರು.


    ವಿಜಯವಾಣಿ ವಿತರಕ ಟಿ.ಜಿ.ಸತೀಶ್ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 160 ಪತ್ರಿಕಾ ವಿತರಕರಿದ್ದಾರೆ. ಎಲ್ಲರನ್ನೂ ಯೋಜನೆಯ ವ್ಯಾಪ್ತಿಗೆ ತರಲಾಗುವುದು. ಕೊಡಗಿನಲ್ಲಿ ಪತ್ರಿಕಾ ವಿತರಣೆಯ ಕೆಲಸ ಇತರ ಕಡೆಗಳಿಗೆ ಹೋಲಿಸಿದರೆ ಹೆಚ್ಚು ಸವಾಲಿನಿಂದ ಕೂಡಿದೆ. ಸರ್ಕಾರದ ಈ ಯೋಜನೆ ಎಲ್ಲ ಪತ್ರಿಕಾ ವಿತರಕರಿಗೂ ಸಿಗುವಂತಾಗಬೇಕು ಎಂದು ಹೇಳಿದರು.


    ಮಡಿಕೇರಿ ವೃತ್ತದ ಹಿರಿಯ ಕಾರ್ಮಿಕ ನಿರೀಕ್ಷಕ ಯತ್ನಟ್ಟಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಲತಾ, ಹಿರಿಯ ಪತ್ರಿಕಾ ವಿತರಕ ಶಿವಪ್ರಸಾದ್, ಮಹೇಶ, ಉಮೇಶ್, ಸುರೇಶ್, ದರ್ಶನ್ ಮತ್ತಿತರರು ಇದ್ದರು.


    ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯನ್ನು ಪತ್ರಿಕಾ ವಿತರಕರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ವಿಜಯವಾಣಿ ಪತ್ರಿಕೆ ಕಾಳಜಿಯನ್ನು ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಎಲ್.ಹರ್ಷವರ್ಧನ್ ಶ್ಲಾಘಿಸಿದರು. ಇಲಾಖೆಗಳ ಜತೆಗೆ ಸಮುದಾಯದ ಸಹಭಾಗಿತ್ವ ಇದ್ದಾಗ ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಸಹಕಾರಿಯಾಗುತ್ತದೆ. ವಿಜಯವಾಣಿ ಸಹಕಾರದಿಂದ ಕೊಡಗಿನಲ್ಲೇ ಹೆಚ್ಚು ಪತ್ರಿಕಾ ವಿತರಕರ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts