ರಾಜ್ಯದಲ್ಲಿ ಈಗಿರೋದು ಡೂಪ್ಲಿಕೇಟ್​ ಕಾಂಗ್ರೆಸ್: ಎಚ್​.ಡಿ.ರೇವಣ್ಣ

revanna
Published on

ವಿಜಯಪುರ: ಅಲ್ಪಸಂಖ್ಯಾತರಿಗೆ ಮನ್ನಣೆ ಕೊಟ್ಟು ಜೆಡಿಎಸ್​​ ಟಿಕೇಟ್​ ನೀಡಿದೆ. ಕಾಂಗ್ರೆಸ್​ ಆ ಕೆಲಸ ಮಾಡಿಲ್ಲ. ಅಲ್ಪಸಂಖ್ಯಾತರ ಬಗ್ಗೆ ಅವರಿಗೆ ಕಾಳಜಿ ಇಲ್ಲ. ರಾಜ್ಯದಲ್ಲಿ ಇಂದು ಇರೋದು ನಕಲಿ ಕಾಂಗ್ರೆಸ್ ಎಂದು ಜೆಡಿಎಸ್​ ನಾಯಕ ಎಚ್​.ಡಿ.ರೇವಣ್ಣ ಹೇಳಿದ್ದಾರೆ.

ಉಪಚುನಾವಣೆ ಎದುರಿಸುತ್ತಿರುವ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ದೇಶದಲ್ಲಿ ಕಾಂಗ್ರೆಸ್​ ಪರಿಸ್ಥಿತಿ ಹೀನಾಯಮಾನವಾಗಿದೆ ಎಂದರು. "ದೇಶದಲ್ಲಿ ಈಗ ಗಾಂಧೀಜಿ ಕಾಂಗ್ರೆಸ್ ಇಲ್ಲ, ನೆಹರೂ ಕಾಂಗ್ರೆಸ್​ ಇಲ್ಲ. ಇದೀಗ ಇರೋದು ಡೂಪ್ಲಿಕೇಟ್ ಕಾಂಗ್ರೆಸ್. 280 ಸೀಟ್ ಇದ್ದ ಕಾಂಗ್ರೆಸ್​ ಈಗ 40 ಸೀಟಿನ ಮಟ್ಟಕ್ಕೆ ಬಂದಿದೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಕಾಂಗ್ರೆಸ್​ನ ಎಷ್ಟೋ ಅಭ್ಯರ್ಥಿಗಳಿಗೆ ಠೇವಣಿ ವಾಪಸ್​​ ಸಿಕ್ಕಿಲ್ಲ" ಎಂದು ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿದರು.

ಕೋಮುವಾದಿ ಬಿಜೆಪಿ ಸರ್ಕಾರ ಬರುವುದಕ್ಕೆ ಕಾಂಗ್ರೆಸ್​​ನವರೇ ಕಾರಣ. ಬಿಜೆಪಿ ಜೊತೆ ಸೇರಿಕೊಂಡು ಪ್ರಾದೇಶಿಕ ಪಕ್ಷವಾದ ಜೆಡಿಎಸ್​ನ ಕೆಡವಲು ನೋಡುತ್ತಿದ್ದಾರೆ ಎಂದ ರೇವಣ್ಣ, "ಆರ್‌ಎಸ್ಎಸ್ ನನಗೆ ಗೊತ್ತಿಲ್ಲ. ಬೆಳಗ್ಗೆ ಎದ್ದ ಕೂಡಲೇ ರಾಗಿ ಮುದ್ದೆ ತಿನ್ನೋದು ಅಷ್ಟೇ ಗೊತ್ತು. ಜನರ ಸೇವೆ ಮಾಡೋದು ಅಷ್ಟೆ ನನಗೆ ಗೊತ್ತು" ಎಂದರು.

ಪೊಲೀಸ್​​ ಠಾಣೆ ಕೇಸರಿಮಯ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ರೇವಣ್ಣ, "ಕಾಂಗ್ರೆಸೇ ಕೇಸರಿಮಯ. ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಲು ಕಷ್ಟ‌ಪಟ್ಟವರು ಯಾರು ಹೇಳಿ..." ಎಂದು ಕೈ ನಾಯಕರ ವಿರುದ್ಧ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net