More

    ಕೆಂಪುಕೋಟೆಯಲ್ಲಿ ಪುಷ್ಪಾವತಿ ಉಪಸ್ಥಿತಿ

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

    ಆ. 15ರಂದು ನವದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ 76ನೇ ಸ್ವಾತಂತ್ರೊೃೀತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲು ತಾಲೂಕಿನ ಚಿಕ್ಕಕುರುವತ್ತಿ ಗ್ರಾಪಂ ಮಹಿಳಾ ವಾಟರ್‌ಮನ್ (ನೀರಗಂಟಿ) ಪುಷ್ಪಾವತಿ ಹೊನ್ನತ್ತಿ ಅವರಿಗೆ ಅವಕಾಶ ಲಭಿಸಿದೆ.

    ಪ್ರಧಾನಿ ನರೇಂದ್ರಿ ಮೋದಿಯವರ ಜತೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪುಷ್ಪಾವತಿ ಹೊನ್ನತ್ತಿ ಆಯ್ಕೆಯಾಗಿದ್ದಾರೆ. ಪ್ರಧಾನಿ ಕಚೇರಿಯಿಂದ ಆಮಂತ್ರಣ ಬಂದಿದ್ದು, ಪುಷ್ಪಾವತಿ ಅವರ ಮುಖದಲ್ಲಿ ಮಂದಹಾಸ ಮೂಡಿಸಿದೆ.

    ಪುಷ್ಪಾವತಿ ಹೊನ್ನತ್ತಿ ಅವರು ತಾಲೂಕಿನ ಚೌಡಯ್ಯದಾನಪುರ ಗ್ರಾಮದವರು. 2000ನೇ ಸಾಲಿನಲ್ಲಿ ಪುಷ್ಪಾವತಿ ಅವರ ಪತಿ ಸೋಮಪ್ಪ ವಾಟರ್‌ಮನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಗ್ರಾಮದಲ್ಲಿ ವಿದ್ಯುತ್ ಕಂಬ ಅಳವಡಿಸುತ್ತಿದ್ದಾಗ ಆಯತಪ್ಪಿ ಬಿದ್ದು ದೇಹದ ಸಂಪೂರ್ಣ ಸ್ವಾಧೀನ ಕಳೆದುಕೊಂಡು ಮನೆ ಸೇರಿದ್ದರು. ಅಂದಿನಿಂದ ಪತಿಯ ಹುದ್ದೆಗೆ ಪುಷ್ಪಾವತಿ ನೇಮಕಗೊಂಡು ಸೇವೆ ಸಲ್ಲಿಸುತ್ತಿದ್ದಾರೆ.

    ಗ್ರಾಮದಲ್ಲಿ ಸಮಯಕ್ಕೆ ಸರಿಯಾಗಿ ನೀರು ಪೂರೈಸುವ ಮೂಲಕ ಪ್ರಾಮಾಣಿಕ ಕೆಲಸ ಮಾಡುತ್ತಾ ಬಂದಿದ್ದಾರೆ. ಜಲಜೀವನ್ ಮಿಷನ್ ಯೋಜನೆಯಿಂದ ಗ್ರಾಮ ಮಟ್ಟದ ಮುಂಚೂಣಿ ಕೆಲಸಗಾರರ ಕೌಶಲ ತರಬೇತಿಯನ್ನು ಪುಷ್ಪಾವತಿ ಹೊನ್ನತ್ತಿ ಪಡೆದಿದ್ದಾರೆ. ಮನೆಗಳಿಗೆ ನೀರಿನ ಸರಬರಾಜಿನಲ್ಲಿನ ಸಮಸ್ಯೆಗಳನ್ನು ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೂ ಗಂಗೆ ಕಾರ್ಯಕ್ರಮದಡಿ ಸರಿಪಡಿಸಿರುವ ಪುಷ್ಪಾವತಿ ಹೊನ್ನತ್ತಿ, ಎಲ್ಲರ ಮನೆಗೂ ಸಮಯಕ್ಕೆ ಸರಿಯಾಗಿ ನೀರು ಬರುವಂತೆ ಮಾಡಿದ್ದಾರೆ. ಇದು ರಾಜ್ಯದಲ್ಲಿಯೇ ಗಮನ ಸೆಳೆದಿತ್ತು.

    ಮಹಿಳೆಯಾಗಿ ಹಲವು ಕುಂದುಕೊರತೆಗಳ ಮಧ್ಯೆ ವಾಟರ್‌ವುಮೆನ್ ಕೆಲಸದ ಜತೆಗೆ ಪಂಚಾಯಿತಿಯ ಇತರ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಿರುವ ಪುಷ್ಪಾವತಿ ಹೊನ್ನತ್ತಿ ಅವರು ದೆಹಲಿಯ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗುತ್ತಿರುವುದು ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.
    ಜಲಜೀವನ್ ಮಿಷನ್ ಯೋಜನೆ ಸಂಪೂರ್ಣ ಅನುಷ್ಠಾನವಾದರೆ ಮಹಿಳಾ ವಾಟರ್‌ಮನ್‌ಗಳಿಗೆ ನಿರ್ವಹಣೆ ಸುಲಭವಾಗುತ್ತದೆ. ಮೊದಲಿಗಿಂತಲೂ ಕಡಿಮೆ ವಿದ್ಯುತ್ ಬಳಕೆಯಾಗುತ್ತದೆ. ಇದರಿಂದ ಬಿಲ್ ಉಳಿತಾಯವಾಗುತ್ತಿದೆ. ಎಲ್ಲ ವರ್ಗದವರಿಗೂ ನೀರು ಸಿಗುತ್ತದೆ. ವಿನಾಕಾರಣ ನೀರು ಪೋಲಾಗುವುದು ತಪ್ಪುತ್ತದೆ. ಇಂತಹ ಅಭೂತಪೂರ್ವ ಯೋಜನೆ ಜಾರಿಗೆ ತಂದಿರುವ ನರೇಂದ್ರ ಮೋದಿಯವರ ಕಾರ್ಯ ಶ್ಲಾಘನೀಯ ಎಂದು ಪುಷ್ಪಾವತಿ ಅವರು ಹೇಳುತ್ತಾರೆ.

    ನಗರ ಪ್ರದೇಶವನ್ನು ಸರಿಯಾಗಿ ನೋಡದ ನನಗೆ ದೆಹಲಿಗೆ ಹೋಗುವ ಅವಕಾಶ ಸಿಕ್ಕಿದೆ. ಪ್ರಧಾನಮಂತ್ರಿ ಮೋದಿಯವರು ನಡೆಸುವ ಧ್ವಜಾರೋಹಣ ಸಮಾರಂಭದಲ್ಲಿ ಭಾಗಿಯಾಗುತ್ತಿರುವುದು ನನ್ನ ಸೌಭಾಗ್ಯ. ಇದಕ್ಕೆಲ್ಲ ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರ ಸಹಕಾರ ಬಹಳವಾಗಿದೆ.
    I ಪುಷ್ಪಾವತಿ ಹೊನ್ನತ್ತಿ, ವಾಟರ್‌ವುಮೆನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts