More

    1280 ಸ್ಥಾನಕ್ಕೆ 4420 ಉಮೇದುವಾರಿಕೆ ಸಲ್ಲಿಕೆ

    ಕಾರವಾರ: ಎರಡನೇ ಹಂತದಲ್ಲಿ ನಡೆಯಲಿರುವ ಗ್ರಾಪಂ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 1280 ಸ್ಥಾನಗಳಿಗೆ 4420 ನಾಮಪತ್ರಗಳು ಸಲ್ಲಿಕೆಯಾಗಿವೆ. ಗುರುವಾರ ನಾಮಪತ್ರ ಪರಿಶೀಲನೆ ನಡೆಯಿತು. ಡಿ.19 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

    ಘಟ್ಟದ ಮೇಲಿನ 7 ತಾಲೂಕುಗಳ ಒಟ್ಟು 126 ಗ್ರಾಪಂಗಳ 1282 ಸ್ಥಾನಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಿಗದಿಯಾಗಿದೆ. ಶಿರಸಿ ಹಾಗೂ ಜೊಯಿಡಾದ ತಲಾ 1 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಎಸ್​ಸಿ ಮೀಸಲಾತಿಯಡಿ 440, ಎಸ್​ಟಿ ಮೀಸಲಾತಿಯಡಿ 304, ಹಿಂದುಳಿದ ಅ ವರ್ಗದ ಮೀಸಲಾತಿಯಡಿ 736, ಹಿಂದುಳಿದ ಬ ವರ್ಗದ ಮೀಸಲಾತಿಯಡಿ 171, ಸಾಮಾನ್ಯ ಕ್ಷೇತ್ರದಿಂದ 2769 ನಾಮಪತ್ರಗಳು ಸಲ್ಲಿಕೆಯಾಗಿವೆ. ಒಟ್ಟಾರೆ ಸಲ್ಲಿಕೆಯಾದ ನಾಮಪತ್ರಗಳಲ್ಲಿ ಮಹಿಳಾ ಮೀಸಲಾತಿಯಡಿ 1754 ನಾಮಪತ್ರಗಳಿವೆ.

    ತಾಲೂಕುವಾರು ವಿವರ: ಶಿರಸಿಯ 32 ಗ್ರಾಪಂಗಳ 322 ಸ್ಥಾನಗಳಿಗೆ 1040, ಸಿದ್ದಾಪುರದ 23 ಗ್ರಾಪಂಗಳ 221 ಸ್ಥಾನಗಳಿಗೆ 831, ಯಲ್ಲಾಪುರದ 15 ಗ್ರಾಪಂಗಳ 158 ಸ್ಥಾನಗಳಿಗೆ 529, ಮುಂಡಗೋಡಿನ 16 ಗ್ರಾಪಂಗಳ 194 ಸ್ಥಾನಗಳಿಗೆ 697, ಹಳಿಯಾಳದ 20 ಗ್ರಾಪಂಗಳ 212 ಸ್ಥಾನಗಳಿಗೆ 685, ದಾಂಡೇಲಿಯ 4 ಗ್ರಾಪಂಗಳ 37 ಸ್ಥಾನಗಳಿಗೆ 117, ಜೊಯಿಡಾದ 16 ಗ್ರಾಪಂಗಳ 137 ಸ್ಥಾನಗಳಿಗೆ 521 ನಾಮಪತ್ರಗಳು ಸಲ್ಲಿಕೆಯಾಗಿವೆ.

    ನಾಮಪತ್ರ ತಿರಸ್ಕರಿಸಲು ನಕಾರ

    ಮುಂಡಗೋಡ: ತಾಲೂಕಿನ ಕಾತೂರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರ ವಿರುದ್ಧ ಉದ್ಯೋಗ ಖಾತ್ರಿ ಯೋಜನೆ ಅವ್ಯವಹಾರದ ಕುರಿತು ಕ್ರಮ ಜರುಗಿಸುವ ಆದೇಶವಿದ್ದು, ಇವರ ನಾಮಪತ್ರ ತಿರಸ್ಕರಿಸಬೇಕು ಎಂದು ಸಲ್ಲಿಸಲಾಗಿದ್ದ ತಕರಾರು ಅರ್ಜಿಯನ್ನು ಚುನಾವಣಾಧಿಕಾರಿ ಗುರುವಾರ ತಿರಸ್ಕರಿಸಿದ್ದಾರೆ.

    ಕಾತೂರ ಗ್ರಾ.ಪಂ. ಮಾಜಿ ಅಧ್ಯಕ್ಷ ಪೀರಣ್ಣ ಲಕ್ಮಾಪುರ ಘೊಷಣಾ ಪ್ರಮಾಣ ಪತ್ರ ಸರಿಯಾದ ರೀತಿಯಲ್ಲಿ ತುಂಬಿರುವುದಿಲ್ಲ. ಅವರ ವಿರುದ್ಧ ಕ್ರಮ ಜರುಗಿಸುವಂತೆ 2020 ಜನವರಿ 1ರಂದು ಬೆಂಗಳೂರು ಓಂಬಡ್ಸ್​ಮನ್ ಪ್ರಾಧಿಕಾರವು ಕಾರವಾರ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಆದೇಶ ನೀಡಿದೆ. ಹೀಗಾಗಿ ಇವರ ವಿರುದ್ಧ ಮುಂದಿನ ದಿನಗಳಲ್ಲಿ ಕಾನೂನು ಕ್ರಮವಾದರೆ ಈ ಅಭ್ಯರ್ಥಿ ಆಯ್ಕೆಯಾದಲ್ಲಿ ಮುಂದೆ ಅವರ ಸದಸ್ಯತ್ವ ರದ್ದಾಗುತ್ತದೆ. ಕಾರಣ ಈಗಲೇ ಅವರ ನಾಮಪತ್ರ ತಿರಸ್ಕಾರ ಮಾಡಬೇಕು ಎಂದು ತಾ.ಪಂ. ಮಾಜಿ ಅಧ್ಯಕ್ಷ ಮೋಹನ ಕೇದಾರ ತಕರಾರು ಅರ್ಜಿ ಸಲ್ಲಿಸಿದ್ದರು.

    ಚುನಾವಣೆ ಅಧಿಕಾರಿಗಳು ಈ ಹಿಂದೆ ಅವರ ವಿರುದ್ಧ ಕೈಗೊಂಡ ಕ್ರಮಗಳ ದಾಖಲೆಗಳು ಇದ್ದರೆ ಹಾಜರುಪಡಿಸಲು ಕೇಳಿದಾಗ ಅಂಥ ಯಾವ ದಾಖಲೆಗಳನ್ನೂ ಹಾಜರುಪಡಿಸಿದ ಕಾರಣ ಮತ್ತು ಇಬ್ಬರಿಗೂ ವಾದ-ಪ್ರತಿವಾದದ ಅವಕಾಶ ನೀಡಿ ತಕರಾರು ಅರ್ಜಿ ತಿರಸ್ಕಾರ ಮಾಡಿ ಕ್ರಮಬದ್ಧವಾಗಿ ನಾಮಪತ್ರ ಅಂಗೀಕಾರ ಮಾಡಲಾಯಿತು. ಇದೇ ವೇಳೆ 54 ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳನ್ನು ಅಂಗೀಕಾರ ಮಾಡಲಾಯಿತು ಎಂದು ಕಾತೂರ ಗ್ರಾ.ಪಂ. ಚುನಾವಣೆ ಅಧಿಕಾರಿ ಅಜಯ ನಾಯ್ಕ ತಿಳಿಸಿದರು.

    ಜಾತಿ ಪ್ರಮಾಣಪತ್ರ ಕಸಿದು ಪರಾರಿ

    ಸಿದ್ದಾಪುರ: ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಸಲುವಾಗಿ ಪಡೆದ ಜಾತಿ ಪ್ರಮಾಣ ಪತ್ರವನ್ನು ಕಸಿದು ಪರಾರಿಯಾದ ಘಟನೆ ಪಟ್ಟಣದಲ್ಲಿ ನಡೆದಿದೆ.

    ಸೋವಿನಕೊಪ್ಪದ ಸುಮಾ ಗೌಡ ಅವರು ತಹಸೀಲ್ದಾರ್ ಕಚೇರಿಯಿಂದ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ರಾಜಶೇಖರ ಗೌಡ ಕಬ್ಬಗಾರ ಎಂಬಾತ ಸುಮಾ ಅವರ ಕೈಯಲ್ಲಿದ್ದ ಪ್ರಮಾಣ ಪತ್ರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ರಾಜಶೇಖರ ಗೌಡ ಮತ್ತು ಕೃತ್ಯಕ್ಕೆ ಸಹಕಾರ ನೀಡಿದ ಕಾರ್ ಚಾಲಕ ಮಂಜುನಾಥ ಗೌಡ ಕಿಲವಳ್ಳಿ ಅವರ ಮೇಲೆ ಸುಮಾ ಗೌಡ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಬಳಿಕ ಸುಮಾ ಅವರು ಮತ್ತೊಂದು ಪ್ರಮಾಣ ಪತ್ರ ಪಡೆದು ನಾಮಪತ್ರ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts