More

    ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಸಿದ್ಧತೆ ಚುರುಕು

    ಪರಶುರಾಮ ಕೆರಿ ಹಾವೇರಿ

    ಕರೊನಾ ಹಾವಳಿ ಕ್ರಮೇಣ ತಗ್ಗುತ್ತಿರುವುದರ ನಡುವೆಯೇ ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದಿಂದ ಸಿದ್ಧತೆ ನಡೆದಿದೆ.

    ಫೆ. 26ರಿಂದ 28ರವರೆಗೆ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ವಿವಿಧ ಸಿದ್ಧತೆಯಲ್ಲಿ ಕಸಾಪ ಪದಾಧಿಕಾರಿಗಳು ತೊಡಗಿದ್ದಾರೆ. ಸಮ್ಮೇಳನವನ್ನು ಶಿಸ್ತಿನಿಂದ ನಿರ್ವಹಿಸಲು ಮೊದಲ ಹಂತದಲ್ಲಿ 17 ಉಪ ಸಮಿತಿಗಳನ್ನು ರಚಿಸಲಾಗಿದೆ.

    ಜಿಲ್ಲೆಯಲ್ಲಿ ಕರೊನಾ ಸೋಂಕು ತಗ್ಗಿದ್ದು, ಕಳೆದ 3ದಿನಗಳಿಂದ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 11ರಷ್ಟಿದೆ. ಇದು ಸಹ ಸಮ್ಮೇಳನ ಆಯೋಜಕರಿಗೆ ಹುರುಪು, ಉತ್ಸಾಹ ತುಂಬಿದೆ. ಉಪ ಸಮಿತಿಗಳಿಗೆ ಚುನಾಯಿತ ಪ್ರತಿನಿಧಿಗಳಿಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ, ಸರ್ಕಾರಿ ಅಧಿಕಾರಿಗಳಿಗೆ ಸದಸ್ಯ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ. ಇನ್ನುಳಿದಂತೆ ಅಧಿಕಾರೇತರ ಸದಸ್ಯರನ್ನು ನೇಮಿಸಲಾಗಿದೆ.

    ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಲು ಸಂಕಲ್ಪ ಮಾಡಿದ್ದಾರೆ. ಅಚ್ಚುಕಟ್ಟಾಗಿ ಆಯೋಜನೆ ಮಾಡಲು ಕಸಾಪ ಪದಾಧಿಕಾರಿಗಳ ಜೊತೆಗೆ ಅನೇಕರು ಕೈಜೋಡಿಸಿದ್ದಾರೆ.

    ಜಾಗ ಅಂತಿಮ: ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಸಾಪ ಪದಾಧಿಕಾರಿಗಳು ಪಿಬಿ ರಸ್ತೆಯಲ್ಲಿ ಗುರುತಿಸಿರುವ ಸುವರ್ಣಕಾರರ ಸಂಘದ ಖಾಲಿ ನಿವೇಶನ ಜಾಗವನ್ನು ಸಮ್ಮೇಳನಕ್ಕೆ ಅಂತಿಮಗೊಳಿಸಿದ್ದಾರೆ.

    ಅನುದಾನಕ್ಕೆ ಪ್ರಸ್ತಾವನೆ: ಈಗ ರಚನೆಯಾಗಿರುವ ವಿವಿಧ ಉಪ ಸಮಿತಿಗಳು ಸಮ್ಮೇಳನದ ಖರ್ಚುವೆಚ್ಚದ ಅಂದಾಜು ಪಟ್ಟಿ ತಯಾರಿಸಿ ಕೊಟ್ಟ ಮೇಲೆ ಅದನ್ನೆಲ್ಲ ಕ್ರೋಡೀಕರಿಸಿ ಸರ್ಕಾರಕ್ಕೆ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲು ಕಸಾಪ ನಿರ್ಧರಿಸಿದೆ. ಈವರೆಗೆ ಖರ್ಚು ವೆಚ್ಚವಿಲ್ಲದ ಸಿದ್ಧತೆಗಳನ್ನು ಮಾತ್ರ ಕೈಗೊಳ್ಳಲಾಗಿದೆ. ಸಮ್ಮೇಳನಕ್ಕೆ 36 ದಿನ ಬಾಕಿಯಿದ್ದು, ಉಪ ಸಮಿತಿ ಸದಸ್ಯರು ಸಿದ್ಧತಾ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.

    ಕರೊನಾಕ್ಕೆ ಲಸಿಕೆ ಹಂಚಿಕೆ ಆರಂಭವಾಗಿರುವುದರಿಂದ ಸಮ್ಮೇಳನ ಸಂಘಟಿಸಲು ಎದುರಾಗಿದ್ದ ಭೀತಿ ದೂರವಾಗಿದೆ. ಈಗಾಗಲೇ ಮೊದಲ ಹಂತದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜ. 22ರಂದು ಕಸಾಪ ಕೇಂದ್ರ ಸಮಿತಿ ಸಭೆಯಲ್ಲಿ ಸರ್ವಾಧ್ಯಕ್ಷರ ಆಯ್ಕೆ ನಡೆಯಲಿದೆ. ಉಪ ಸಮಿತಿಗಳ ಅಧ್ಯಕ್ಷರು ಅಂದಾಜು ವೆಚ್ಚದ ಪಟ್ಟಿ ಮಾಡಿ ಕೊಟ್ಟ ಕೂಡಲೇ ಅನುದಾನಕ್ಕೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು.

    | ಎಚ್.ಬಿ. ಲಿಂಗಯ್ಯ, ಕಸಾಪ ಜಿಲ್ಲಾಧ್ಯಕ್ಷರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts