More

    ತಿಮ್ಮಾಪುರ ಜನ್ಮದಿನೋತ್ಸವ ಅರ್ಥಪೂರ್ಣ ಆಚರಣೆಗೆ ಸಿದ್ಧತೆ – ಅಶೋಕ ಕಿವಡಿ ಹೇಳಿಕೆ “ಅಪಘಾತ ವಿಮೆ, ಈ ಶ್ರಮ ಕಾರ್ಡ್ ನೋಂದಣಿ ಕಾರ್ಯಕ್ಕೆ ಚಾಲನೆ”

    ಮುಧೋಳ: ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಅವರ 60ನೇ ವರ್ಷದ ಜನ್ಮದಿನವನ್ನು ಸೆ.28 ರಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ ಹೇಳಿದರು.

    ಪಟ್ಟಣದಲ್ಲಿರುವ ತಿಮ್ಮಾಪುರ ಅವರ ಗೃಹ ಕಚೇರಿಯಲ್ಲಿ ಅಪಘಾತ ವಿಮೆ ಹಾಗೂ ಈ ಶ್ರಮ ಕಾರ್ಡ್ ನೋಂದಣಿ ಕಾರ್ಯದ ಚಾಲನಾ ಸಭೆಯಲ್ಲಿ ಸೋಮವಾರ ಅವರು ಮಾತನಾಡಿದರು.

    ತಿಮ್ಮಾಪುರ ಅವರ 60ನೇ ಹುಟ್ಟು ಹಬ್ಬವನ್ನು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಈ ಕಾರ್ಯಕ್ರಮ ರೂಪಿಸಿದ್ದಾರೆ ಎಂದು ಹೇಳಿದರು.

    ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಮಾತನಾಡಿ, ತಾಲೂಕಿನ ನಗರ ಹಾಗೂ ಪಟ್ಟಣದ ಪ್ರತಿ ವಾರ್ಡ್‌ನಲ್ಲಿ ನೂರು ಜನರಂತೆ ಗ್ರಾಮಗಳಲ್ಲಿ ಪ್ರತಿ ಬೂತ್‌ದಲ್ಲಿ 50 ಜನರಂತೆ ಒಟ್ಟು 20 ಸಾವಿರ ಜನರಿಗೆ ಅಪಘಾತ ವಿಮೆ ಹಾಗೂ ಈ ಶ್ರಮ ಕಾರ್ಡ್ ಮೂಲಕ ಶ್ರಮಿಕರು, ಅಸಂಘಟಿತ ಕಾರ್ಮಿಕರಿಗೆ ನೆರವಾಗಲು ನಿರ್ಧರಿಸಲಾಗಿದೆ. ವಿಮೆ ವೆಚ್ಚವನ್ನು ಅಭಿಮಾನಿಗಳು ಭರಿಸಲಿದ್ದಾರೆ. ಸೆ.18 ರಿಂದ 25 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರಿಗೆ ಗೌರವ ಸಲಿಸಲಾಗುವುದು ಎಂದು ಹೇಳಿದರು.

    ಜನ್ಮೋತ್ಸವ ಆಚರಣಾ ಸಮಿತಿ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ ಮಾತನಾಡಿ, ಸೆ.28 ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಪಕ್ಷದ ಮುಖಂಡರಾದ ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ ಸೇರಿದಂತೆ ಜಿಲ್ಲೆಯ ಎಲ್ಲ ಹಾಲಿ ಹಾಗೂ ಮಾಜಿ ಶಾಸಕರು, ಮಾಜಿ ಸಂಸದರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

    ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಕಾರ್ಯಕರ್ತರು, ಅಭಿಮಾನಿಗಳು ಹುಟ್ಟುಹಬ್ಬ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಉತ್ಸಾಹದಿಂದ ಯೋಜನೆ ರೂಪಿಸಿದ್ದಕ್ಕಾಗಿ ಧನ್ಯವಾದ ತಿಳಿಸಿದರು. ಅಪಘಾತ ವಿಮೆ ಹಾಗೂ ಈ ಶ್ರಮ ಕಾರ್ಡ್ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಮುಖಂಡರಾದ ಗೋವಿಂದಪ್ಪ ಗುಜ್ಜನ್ನವರ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಪಾಟೀಲ, ಭೀಮಸಿ ಸರ್ಕಾರಕುರಿ, ಎಸ್.ಪಿ.ದಾನಪ್ಪಗೋಳ, ಸವಿತಾ ಚಾವಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts