More

    ಭಾರತೀಯ ಸೇನೆ ಸೇರ್ಪಡೆಗೆ ತಯಾರಾಗಿ

    ಕುಶಾಲನಗರ: ವಿದ್ಯಾರ್ಥಿಗಳು ದೈನಂದಿನ ಬದುಕಿನಲ್ಲಿ ನಾಯಕತ್ವ, ಧೈರ್ಯ, ವೃತ್ತಿಪರ ಜ್ಞಾನ, ನಿಷ್ಠೆ, ಸ್ವಯಂ ಶಿಸ್ತು ಮತ್ತು ಆತ್ಮವಿಶ್ವಾಸದೊಂದಿಗೆ ಸಂವಹನ ಕೌಶಲಗಳನ್ನು ಮೈಗೂಡಿಸಿಕೊಂಡು ಭವಿಷ್ಯದ ನಾಯಕರಾಗಬೇಕೆಂದು ಕೂಡಿಗೆ ಸೈನಿಕ ಶಾಲೆ ಪ್ರಾಂಶುಪಾಲ ಅಮರ್ ಜೀತ್ ಸಿಂಗ್ ಕರೆ ನೀಡಿದರು.


    ಕೊಡಗು ಜಿಲ್ಲೆಯ ಕೂಡಿಗೆಯಲ್ಲಿರುವ ಸೈನಿಕ ಶಾಲೆಯ ಜನರಲ್ ತಿಮ್ಮಯ್ಯ ಪರೇಡ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಮತ್ತು 12ನೇ ತರಗತಿಯ ವಿದ್ಯಾರ್ಥಿಗಳ ಅಂತಿಮ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿ, ಸೈನಿಕ ಶಾಲೆ ಕೊಡಗು ಭಾರತೀಯ ಸೇನೆಯ ಅಧಿಕಾರಿಯಲ್ಲಿರಬೇಕಾದ ಗುಣಗಳನ್ನು ವೃದ್ಧಿಸುವಲ್ಲಿ ಅವಿರತವಾಗಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.


    ವಿದ್ಯಾರ್ಥಿಗಳು ಕೊಡಗಿನ ಸ್ಥಳೀಯ ಸಂಸ್ಕೃತಿಯನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲು ಬೇಕಾದ ಸಮಗ್ರ ಪೂರ್ವ ತಯಾರಿಯನ್ನು ಮಾಡಿಕೊಳ್ಳುವಂತೆ ಕರೆ ನೀಡಿದರು.


    ಶಾಲೆಯ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ ದೇಶದ ಸಂಸ್ಕೃತಿಯ ವೈಶಿಷ್ಟೃವನ್ನು ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ದಿವ್ಯಾ ಸಿಂಗ್ ದೀಪ ಬೆಳಗಿಸಿ ಉದ್ಘಾಟಿಸಿದರು.


    ಕೆಡೆಟ್ ದೀಪ್ತಿ ಮತ್ತು ತಂಡದವರಿಂದ ಸ್ವಾಗತ ನೃತ್ಯ, ಕೆಡೆಟ್ ಸಂಪ್ರೀತ್ ಶಿಂಧೆ ನೇತೃತ್ವದಲ್ಲಿ ಇನ್‌ಕ್ರೆಡಿಬಲ್ ಇಂಡಿಯಾ ಶಿರೋನಾಮೆಯ ಆತ್ಮಸ್ಥೈರ್ಯ ತುಂಬುವ ಸಮೂಹ ಗೀತೆ ಗಾಯನ ಹಾಗೂ ಕೆಡೆಟ್ ಪ್ರಗತಿ ಮತ್ತು ತಂಡ ಪ್ರದರ್ಶಿಸಿದ ಇನ್‌ಕ್ರೆಡಿಬಲ್ ಇಂಡಿಯಾ ಶಿರೋನಾಮೆಯ ವಿವಿಧ ರಾಜ್ಯಗಳ ಸಮೂಹ ನೃತ್ಯವನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


    ಶಾಲೆಯ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ.ಪ್ರಕಾಶ್ ಇದ್ದರು.


    ಮುಖ್ಯ ಅತಿಥಿಗಳು ಶಾಲೆಯಲ್ಲಿರುವ ಯುದ್ಧದಲ್ಲಿ ಮಡಿದ ವೀರರ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಅರ್ಪಿಸುವುದರ ಮೂಲಕ ಗೌರವ ಸಮರ್ಪಿಸಿ ನಂತರ ಜನರಲ್ ತಿಮ್ಮಯ್ಯ ಪರೇಡ್ ಮೈದಾನದಲ್ಲಿ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಿದರು.


    ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ಪ್ರದರ್ಶಿಸುವುದರೊಂದಿಗೆ, 12ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಅಂತಿಮ ಪಥಸಂಚಲನವನ್ನು ಪ್ರದರ್ಶಿಸಿದರು. ಈ ಅಂತಿಮ ಪಥಸಂಚಲನವು ಶಾಲೆಯಲ್ಲಿ 12ನೇ ತರಗತಿಯ ವಿದ್ಯಾರ್ಥಿಗಳ ತಮ್ಮ 7 ವರ್ಷಗಳ ವಿದ್ಯಾಭ್ಯಾಸದ ಅಂತಿಮ ಪಥಸಂಚಲನವಾಗಿತ್ತು.


    ಶಾಲೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಕಂಪ್ಯೂಟರ್ ಶಿಕ್ಷಕ ಕೆ.ಗೋವಿಂದರಾಜ ಹಾಗೂ ನೌಕರ ಮಂಜುನಾಥ್ ಅವರಿಗೆ ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷರು ಪ್ರಶಂಸನಾ ಪ್ರಮಾಣ ಪತ್ರವನ್ನು ವಿತರಿಸಿ ಗೌರವಿಸಲಾಯಿತು.


    ಅಂತರ ನಿಲಯ ಡ್ರಿಲ್ ಸ್ಪರ್ಧೆಯ ವಿಜೇತ ತಂಡವಾಗಿ ಶಾಲೆಯ ಸುಬ್ರತೋ ನಿಲಯವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
    ಉಪ ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮನ್ ಪ್ರೀತ್ ಸಿಂಗ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts