More

    ಅರ್ಹರಿಗೆ ಹಕ್ಕುಪತ್ರ ನೀಡಲು ಸಿದ್ಧತೆ ಕೈಗೊಳ್ಳಿ

    ಬ್ಯಾಡಗಿ: ಪುರಸಭೆಯ 10 ಎಕರೆಯಲ್ಲಿ ಮಾಡಿರುವ ನಿವೇಶನಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆಗೊಳಿಸಿ ಹಕ್ಕುಪತ್ರ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸೂಚಿಸಿದರು.

    ಪಟ್ಟಣದ ಪುರಸಭೆಯಲ್ಲಿ ಶನಿವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಪಟ್ಟಣದ ಮಲ್ಲೂರು ರಸ್ತೆಯಲ್ಲಿ 10 ಎಕರೆ ಜಾಗ ಖರೀದಿಸಿ, 407 ನಿವೇಶನಗಳನ್ನು ರಚಿಸಲಾಗಿದೆ. ಹಿಂದಿನ ಜಿ ಪ್ಲಸ್ ಮಾದರಿಯ 814 ಫಲಾನುಭವಿಗಳ ಆಯ್ಕೆಪಟ್ಟಿ ರದ್ದುಗೊಳಿಸಿ, ಅರ್ಹರಿಗೆ ಹಕ್ಕುಪತ್ರ ನೀಡುವಂತೆ ಸದಸ್ಯರಿಂದ ಒತ್ತಾಯ ಕೇಳಿಬಂದಿತು. ಆಗ ಶಾಸಕರು, ಮುಂದಿನ ಸಭೆಗೂ ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ, ಹಕ್ಕುಪತ್ರ ವಿತರಿಸುವಂತೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಅವರಿಗೆ ಸೂಚಿಸಿದರು.

    ಬಸವೇಶ್ವರ ನಗರದಲ್ಲಿ ಮನೆ ನಿರ್ವಿುಸಿಕೊಂಡಿರುವವರಿಗೆ ಜಾಗದ ಮಾಲೀಕತ್ವ ನೀಡಲು ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ನಡೆದಿದೆ. ವಾರ್ಡ್​ಗಳ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರಾತಿ ಪಡೆಯಲು ಅಂದಾಜು ಪಟ್ಟಿ ನೀಡಬೇಕು ಎಂದು ಹೇಳಿದರು.

    ಶಿವರಾಜ ಅಂಗಡಿ ಹಾಗೂ ಶಂಕರ ಕುಸಗೂರು ಮಾತನಾಡಿ, ಅಜೆಂಡಾದಲ್ಲಿ ಹಿಂದಿನ ಕಾಮಗಾರಿಗೆ ಅನುದಾನ ಮಂಜೂರಾತಿ, ಅನುಮೋದನೆ, ಹೊಸ ಕಾಮಗಾರಿ, ವಿವಿಧ ಚರ್ಚೆ ಕುರಿತು ತಿಳಿಸಿಲ್ಲ. ಆದರೆ, ಮೂಲ ಸೌಲಭ್ಯಗಳು ಇತ್ಯಾದಿ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮುಖ್ಯಾಧಿಕಾರಿ ವಿ.ಎಂ. ಪೂಜಾರ ಪ್ರತಿಕ್ರಿಯಿಸಿ, ಸದಸ್ಯರಿಗೆ ಹಿಂದಿನ ಕಾಮಗಾರಿ ಕುರಿತು ಯಾವುದೇ ಮಾಹಿತಿ ಬೇಕಿದ್ದಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದಲ್ಲಿ ನೀಡಲಾಗುವುದು. ಸಭೆಯ ಅಜೆಂಡಾಕ್ಕೆ ವಿಷಯ ಸೇರ್ಪಡಿಸುವ ಮುನ್ನ ಅಧ್ಯಕ್ಷ, ಉಪಾಧ್ಯಕ್ಷರು ಸೇರಿ ಕೆಲವು ಸದಸ್ಯರ ಗಮನಕ್ಕೆ ತರಲಾಗಿದೆ. ಸದಸ್ಯರ ಎಲ್ಲ ಬೇಡಿಕೆ ಒಮ್ಮೆಲೆ ಈಡೇರಿಸಲು ಸಾಧ್ಯವಾಗಲ್ಲ ಎಂದು ಸ್ಟಷ್ಟಪಡಿಸಿದರು.

    ಒಳಚರಂಡಿ ಹಾಗೂ 24*7 ನೀರು ಪೂರೈಕೆ ಸಲುವಾಗಿ ತೆರೆದ ರಸ್ತೆ ಕಾಲುವೆ ಮುಚ್ಚದಿರುವುದು ಸಾರ್ವಜನಿಕರು ಓಡಾಟಕ್ಕೆ ತೊಂದರೆಯಾಗಿದೆ. ಕೂಡಲೆ ಕಾಮಗಾರಿ ಪೂರ್ಣಗೊಳಿಸುವಂತೆ ಸಭೆಯಲ್ಲಿ ಕೆಲವರು ಆಗ್ರಹಿಸಿದರು.

    ಇದಕ್ಕೆ ಸ್ಪಂದಿಸಿದ ಅಧ್ಯಕ್ಷೆ ಕವಿತಾ ಸೊಪ್ಪಿನಮಠ, ಹಲವು ಬಾರಿ ಯುಜಿಡಿ ಇಂಜಿನಿಯರ್​ಗೆ ದುರಸ್ತಿಗೆ ಸೂಚಿಸಿ ಸಾಕಾಗಿದೆ. ಇದರಿಂದ ವಾರ್ಡ್ ಸದಸ್ಯರು ಸಾರ್ವಜನಿಕರ ಆಕ್ರೋಶ ಎದುರಿಸುವಂತಾಗಿದೆ. ಸಂಬಂಧಿಸಿದವರು ತಕ್ಷಣ ಕಾಮಗಾರಿ ಪೂರ್ಣಗೊಳಿಸಬೇಕು. ನಿರ್ಲಕ್ಷ್ಯಿಸಿದಲ್ಲಿ ಸರ್ವಸದಸ್ಯರ ಸಭೆ ಏರ್ಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

    ಟೀಚರ್ಸ್ ಕಾಲನಿಯ ಗುರುಭವನ ಜಾಗದ ಸಮಸ್ಯೆ, ಕೊಳಚೆ ನಿಮೂಲನೆ ಮಂಡಳಿಗೆ ಕೆಲ ಪ್ರದೇಶ ಸೇರ್ಪಡೆ, ಸರ್ಕಾರಿ ನಿವೇಶನಗಳಿಗೆ ಹಕ್ಕುಪತ್ರ ನೀಡುವ ಮುನ್ನ ಮೂಲ ಸೌಲಭ್ಯ ಒದಗಿಸುವುದು, ನೀರು ಶುದ್ಧೀಕರಿಣ ಘಟಕ ದುರಸ್ತಿ, ಪಿಡಬ್ಲ್ಯುಡಿ ರಸ್ತೆ ಪಕ್ಕದಲ್ಲಿ ಕಟ್ಟಡ ಪರವಾನಗಿ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆದವು.

    ಉಪಾಧ್ಯಕ್ಷೆ ಕಲಾವತಿ ಬಡಿಗೇರ, ಸದಸ್ಯರಾದ ಬಾಲಚಂದ್ರಗೌಡ್ರ ಪಾಟೀಲ, ಬಸವರಾಜ ಛತ್ರದ, ರಾಮಣ್ಣ ಕೋಡಿಹಳ್ಳಿ, ಫಕೀರಮ್ಮ ಚಲವಾದಿ, ವಿನಯ ಹಿರೇಮಠ, ಈರಣ್ಣ ಬಣಕಾರ, ಚಂದ್ರಪ್ಪ ಶೆಟ್ಟರ, ಸರೋಜ ಉಳ್ಳಾಗಡ್ಡಿ, ಸುಭಾಸ ಮಾಳಗಿ, ಗಾಯತ್ರಿ ರಾಯ್ಕರ, ಗಂಗಮ್ಮ ಪಾಟೀಲ, ಮಂಜಣ್ಣ ರ್ಬಾ, ಮಹ್ಮದರಫೀಕ್ ಮುದಗಲ್ಲ, ಸಂಜೀವ ಮಡಿವಾಳರ, ಮಂಜು ಬಣಕಾರ, ಮಂಗಳಾ ಗೆಜ್ಜೆಹಳ್ಳಿ, ಗಣೇಶ ಅಚಲಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts