More

    ಉಳ್ಳಾಲ ಉರುಸ್‌ಗೆ ಭರದ ಸಿದ್ಧತೆ

    ಅನ್ಸಾರ್ ಇನೋಳಿ ಉಳ್ಳಾಲ

    ದಕ್ಷಿಣ ಭಾರತದ ಎರಡನೇ ಅಜ್ಮೀರ್ ಎಂದೇ ಖ್ಯಾತಿ ಪಡೆದಿರುವ ಉಳ್ಳಾಲ ಉರುಸ್‌ಗೆ ಸಿದ್ಧತೆ ಆರಂಭವಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಈ ಬಾರಿ ಕಾಮಗಾರಿಗಳಿಗೆ ಬಹಿರಂಗ ಟೆಂಡರ್ ಆಹ್ವಾನಿಸಿದ್ದು, ಪಾರದರ್ಶಕ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದೇ ವೇಳೆ ರೂಪಾಂತರಿತ ಕರೊನಾ ವೈರಸ್‌ನಿಂದ ಸರ್ಕಾರ ಕೈಗೊಳ್ಳುವ ನಿಯಮಗಳ ಬಗ್ಗೆಯೂ ಆತಂಕ ಎದುರಾಗಿದೆ.

    ದ.ಕ. ಜಿಲ್ಲೆಯಲ್ಲೇ ಸಾಕಷ್ಟು ದರ್ಗಾಗಳಿದ್ದು, ಇಲ್ಲೆಲ್ಲ ಪ್ರತಿವರ್ಷ ಇಲ್ಲವೇ ಎರಡು ಅಥವಾ ಮೂರು ವರ್ಷಕ್ಕೊಮ್ಮೆ ಉರುಸ್ ನಡೆಯುತ್ತದೆ. ಆದರೆ ಉಳ್ಳಾಲದಲ್ಲಿ ಐದು ವರ್ಷಕ್ಕೊಮ್ಮೆ ಉರುಸ್ ಆಚರಿಸಿಕೊಂಡು ಬರುತ್ತಿದ್ದು, ಶತಮಾನದ ಇತಿಹಾಸವೂ ಇದೆ. ಇಲ್ಲಿ ಕಳೆದ ವರ್ಷ ಏಪ್ರಿಲ್-ಮೇ ತಿಂಗಳಲ್ಲೇ ಉರುಸ್ ನಡೆಯಬೇಕಿತ್ತು. ಆದರೆ ಕರೊನಾದಿಂದ ಅಡ್ಡಿಯಾಗಿತ್ತು. ಕರೊನಾ ಎರಡನೇ ಅಲೆ ಆರಂಭಕ್ಕೆ ಐದಾರು ತಿಂಗಳ ಮೊದಲೇ ಉರುಸ್ ಮುಂದೂಡಿದ ಬಗ್ಗೆ ದರ್ಗಾ ಆಡಳಿತ ಸಮಿತಿ ತೀರ್ಮಾನ ಕೈಗೊಂಡಿತ್ತು.

    ಸದ್ಯ ಉರುಸ್ ಪ್ರಯುಕ್ತ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಪೇಂಟಿಂಗ್, ಲೈಟಿಂಗ್‌ಗೆ 28.50 ಲಕ್ಷ ರೂ. ಹಾಗೂ ಚಪ್ಪರಕ್ಕೆ 30 ಲಕ್ಷ ರೂ. ಮೀಸಲಿಡಲಾಗಿದೆ. ಇವೆಲ್ಲವೂ ಟೆಂಡರ್ ಮೂಲಕ ಗುತ್ತಿಗೆ ವಹಿಸಲಾಗಿದೆ. ಪೇಂಟಿಂಗ್ ಮುಕ್ತಾಯ ಹಂತದಲ್ಲಿದ್ದರೆ, ಚಪ್ಪರ ಕೆಲಸ ಆರಂಭಗೊಂಡಿದೆ. ಲೈಂಟಿಂಗ್ ಕೆಲಸವೂ ಆರಂಭಗೊಳ್ಳಲಿದೆ. ಕೇರಳ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಪ್ರತಿದಿನ ಸಾವಿರಾರು ಭಕ್ತರು ದರ್ಗಾಕ್ಕೆ ಬರುತ್ತಿದ್ದಾರೆ.

    ಈ ನಡುವೆ ಕರೊನಾ ಮೂರನೇ ಅಲೆಯ ಬಗ್ಗೆ ಕೇಳಿ ಬರುತ್ತಿದ್ದು, ಸರ್ಕಾರದ ನಿಯಮದ ಬಗ್ಗೆಯೂ ಭಕ್ತರಲ್ಲಿ ಚಿಂತೆಗೆ ಕಾರಣವಾಗಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಕೇರಳದ ಭಕ್ತರೇ ಇಲ್ಲಿಗೆ ಹೆಚ್ಚಾಗಿ ಬರುತ್ತಿದ್ದು, ಮುಂದಿನ ಪರಿಸ್ಥಿತಿ ಬಗ್ಗೆ ಪ್ರಶ್ನೆ ಎದ್ದಿದೆ.

    ಆಡುಗಳ ಆಗಮನ ಆರಂಭ: ಉರುಸ್‌ನ ಕೊನೆಯ ದಿನ ಅಹೋರಾತ್ರಿ ಸಾರ್ವಜನಿಕ ಅನ್ನದಾನ ಸಮರ್ಪಣೆ ಇರುವುದರಿಂದ ಜಾತಿ, ಧರ್ಮವಿಲ್ಲದೆ ಹೊರರಾಜ್ಯಗಳಿಂದಲೂ ಜನ ಬರುತ್ತಾರೆ. ಲಕ್ಷಾಂತರ ಮಂದಿ ಇಲ್ಲಿ ಹರಕೆ ರೂಪದಲ್ಲಿ ನೀಡುವ ತುಪ್ಪದನ್ನ, ಆಡಿನ ಪದಾರ್ಥವನ್ನು ಅಲ್ಲೇ ಸೇವಿಸುವ ಬದಲು ಕೊಂಡೊಯ್ಯುವುದು ವಾಡಿಕೆ. ಅನ್ನದಾನಕ್ಕಾಗಿ ಹರಕೆಯ ರೂಪದಲ್ಲಿ ಅಕ್ಕಿ, ತುಪ್ಪ, ಇತರ ವಸ್ತುಗಳು ಬರುತ್ತವೆ. ಹೊರೆಕಾಣಿಕೆಯ ರೂಪದಲ್ಲೂ ಆಹಾರ ವಸ್ತುಗಳು ಬರುತ್ತವೆ. ಪ್ರತಿ ಉರುಸ್ ಸಂದರ್ಭ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಹೊರೆಕಾಣಿಕೆ ಬರುವ ಪದ್ಧತಿಯೂ ಇದೆ. ಅದಕ್ಕಿಂತಲೂ ಮಿಗಿಲಾಗಿ ಮಾಂಸಕ್ಕಾಗಿ ಗುಣಮಟ್ಟ ಹಾಗೂ ಗಟ್ಟಿಮುಟ್ಟಾದ ಆಡುಗಳನ್ನು ಬಳಸಲಾಗುತ್ತದೆ. ಈ ವರ್ಷ ಒಂದೂವರೆ ಸಾವಿರಕ್ಕಿಂತ ಅಧಿಕ ಆಡುಗಳು ಬೇಕಾಗುವ ಬಗ್ಗೆ ಆಡಳಿತ ಸಮಿತಿ ಲೆಕ್ಕ ಹಾಕಿದೆ. ಅವೆಲ್ಲವೂ ಹರಕೆ ರೂಪದಲ್ಲೇ ಬರುತ್ತದೆ. ಆಡುಗಳ ಆರೈಕೆಗಾಗಿ ಪ್ರತ್ಯೇಕ ಚಪ್ಪರ ಅಳವಡಿಸಲಾಗಿದೆ. ಈಗಾಗಲೇ 40 ಆಡುಗಳು ಬಂದಿದ್ದು, ಅದರಲ್ಲಿರುವ ದೊಡ್ಡ ಮಟ್ಟದ ಆಡುಗಳು ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ.

    ಡಿಸೆಂಬರ್ ಮೊದಲ ವಾರ ಸಭೆ: ಕರೊನಾ ದೂರವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಅನುಮತಿ ಮೇರೆಗೆ ದಿನಾಂಕ ಘೋಷಿಸಲಾಗಿದೆ. ಡಿ.23ರಿಂದ ಜ.16ರವರೆಗೆ ಧಾರ್ಮಿಕ ಉಪನ್ಯಾಸ, ಸರ್ವಧರ್ಮ ಸಮ್ಮೇಳನ, ವೈದ್ಯಕೀಯ ಶಿಬಿರ ಸಹಿತ ಹಲವಾರು ಕಾರ್ಯಕ್ರಮಗಳೊಂದಿಗೆ ಉರುಸ್ ನಡೆಯಲಿದೆ. ಡಿಸೆಂಬರ್ ಮೊದಲ ವಾರ ವಿವಿಧ ಧರ್ಮಗಳ ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಯಲಿದೆ.

    ಸರ್ಕಾರ ರೂಪಿಸಿರುವ ಕರೊನಾ ಸಂಬಂಧಿತ ಎಲ್ಲ ನಿಯಮಗಳನ್ನು ದರ್ಗಾದಲ್ಲಿ ಪಾಲಿಸಲಾಗುವುದು. ಸಾರ್ವಜನಿಕರೂ ನಿಯಮಗಳನ್ನು ಅನುಸರಿಸಿ ಕರೊನಾ ದೂರಗೊಳಿಸಲು ಸಹಕಾರ ನೀಡಬೇಕು. ಉರುಸ್ ಯಶಸ್ಸಿಗೆ ಸಮಿತಿಯವರು, ಎಲ್ಲ ಜಮಾತರು ಸಹಕಾರ ನೀಡುತ್ತಿದ್ದಾರೆ. ಉರುಸ್ ಮೂಲಕ ಜಿಲ್ಲೆಯಲ್ಲಿ ಶಾಂತಿ, ಸಾಮರಸ್ಯ ನೆಲೆಸುವಂತಾಗಲಿ.

    ಅಬ್ದುಲ್ ರಶೀದ್
    ಉಳ್ಳಾಲ ದರ್ಗಾ ಅಧ್ಯಕ್ಷ

    ಉಳ್ಳಾಲ ದರ್ಗಾ ಅತಿ ಪುರಾತನ ಧರ್ಮ ಕೇಂದ್ರವಾಗಿದ್ದು, ಇಲ್ಲಿ ನಡೆಯುವ ಕಾರ್ಯಕ್ರಮಗಳ ಮೂಲಕ ಜನರಿಗೆ ಇನ್ನಷ್ಟು ಅನುಗ್ರಹ, ಸಾಮರಸ್ಯ ಗಟ್ಟಿಯಾಬೇಕು. ನ್ಯಾಯಬದ್ಧ ಉಳ್ಳಾಲ ನಿರ್ಮಾಣವಾಗಬೇಕು. ಯಾವುದೇ ಕಾರಣಕ್ಕೂ ಉರುಸ್ ನಿಲ್ಲಬಾರದು. ಸರ್ಕಾರದಿಂದ ಸಿಗಬೇಕಾದ ಎಲ್ಲ ರೀತಿಯ ಸಹಕಾರ ನೀಡಲೂ ನಾವು ಬದ್ಧ.

    ಚಂದ್ರಹಾಸ ಪಂಡಿತ್‌ಹೌಸ್
    ಬಿಜೆಪಿ ಮಂಡಲ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts