More

    ದಸರಾ ‘ಗಜಪಯಣ’ಕ್ಕೆ ಸಿದ್ಧತೆ

    ಆ. 7ರಂದು ಮೈಸೂರಿಗೆ 9 ಆನೆಗಳ ಆಗಮನ
    ಕ್ಯಾಪ್ಟನ್ ಅಭಿಮನ್ಯು ನೇತೃತ್ವ


    ಅವಿನಾಶ್ ಜೈನಹಳ್ಳಿ
    ಮೈಸೂರು
    ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಮುನ್ನುಡಿ ಎಂದೇ ಬಿಂಬಿತವಾಗಿರುವ ‘ಗಜಪಯಣ’ಕ್ಕೆ ಜಿಲ್ಲಾಡಳಿ ಮತ್ತು ಅರಣ್ಯ ಇಲಾಖೆ ಸಕಲ ಸಿದ್ಧತೆ ಕೈಗೊಂಡಿವೆ.


    ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಗೆ ಗಜಪಡೆಯನ್ನು ಕರೆತರಲು ಅಗತ್ಯ ಸಿದ್ಧತೆ ಮಾಡಲಾಗಿದ್ದು, ಆಗಸ್ಟ್ 7ರಂದು ಗಜಪಯಣ ನಡೆಯಲಿದೆ. ಮೊದಲ ತಂಡದಲ್ಲಿ ‘ಕ್ಯಾಪ್ಟನ್ ಅಭಿಮನ್ಯು’ ನೇತೃತ್ವದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸಲಿವೆ. ಅಭಿಮನ್ಯು ಜತೆ ಅರ್ಜುನ, ಧನಂಜಯ, ಗೋಪಾಲಸ್ವಾಮಿ, ವಿಕ್ರಮ, ಕಾವೇರಿ, ಚೈತ್ರಾ, ಲಕ್ಷ್ಮೀ, ವಿಜಯಾ ಮೈಸೂರಿನ ಕಡೆ ಪಯಣ ಬೆಳೆಸುವ ನಿರೀಕ್ಷೆ ಇದೆ. ವಿಶೇಷವೆಂದರೆ, ಸತತ 8 ಬಾರಿ ಚಿನ್ನದ ಅಂಬಾರಿ ಹೊತ್ತು ಗಮನ ಸೆಳೆದಿರುವ ‘ಅರ್ಜುನ’ ಈ ಬಾರಿ ದಸರಾ ಮಹೋತ್ಸವದಲ್ಲಿ ಮತ್ತೆ ಭಾಗವಹಿಸುವ ನಿರೀಕ್ಷೆ ಇದೆ.


    ಅರಣ್ಯ ಇಲಾಖೆ ಅಧಿಕಾರಿಗಳು ಮತ್ತಿಗೋಡು, ದುಬಾರೆ, ರಾಮಪುರ ಸೇರಿದಂತೆ ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯ ಆನೆ ಶಿಬಿರಗಳಿಗೆ ತೆರಳಿ ಎಲ್ಲ ಆನೆಗಳ ಆರೋಗ್ಯ, ಸಾಮರ್ಥ್ಯ ಮತ್ತು ಸ್ವಭಾವವನ್ನು ಪರೀಕ್ಷಿಸಿ 20 ಆನೆಗಳ ಪಟ್ಟಿಯನ್ನು ಸಿದ್ಧಪಡಿಸಿದ್ದರು. ಈ ಪೈಕಿ 14 ಆನೆಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಕಡೆಯ ಕ್ಷಣದಲ್ಲಿ ಒಂದು ಹೆಚ್ಚುವರಿ ಆನೆಯನ್ನು ಕರೆತರುವ ಸಾಧ್ಯತೆ ಇದೆ. ಮೊದಲ ತಂಡದಲ್ಲಿ 9 ಆನೆಗಳು ಹಾಗೂ ಎರಡನೇ ತಂಡದಲ್ಲಿ 5 ಅಥವಾ 6 ಆನೆಗಳು ಬರಲಿವೆ. ಎರಡನೇ ತಂಡದಲ್ಲಿ ದಸರಾಗೆ ಹೊಸ ಆನೆಗಳಾದ ಗಣೇಶ, ಭೀಮ, ಸುಗ್ರೀವ, ಅಜಯ, ಮಹೇಂದ್ರ ಬರುವ ಸಾಧ್ಯತೆ ಇದೆ.


    ಆಗಸ್ಟ್ 10ಕ್ಕೆ ಅರಮನೆ ಪ್ರವೇಶ: ಆ. 7ರಂದು ವೀರನಹೊಸಳ್ಳಿ ಗೆಟ್ ಬಳಿ ಗಜಪಯಣ ಕಾರ್ಯಕ್ರಮ ನಡೆಯಲಿದೆ. ಆನೆಗಳು ಅಲ್ಲಿಂದ ನೇರವಾಗಿ ಅಶೋಕಪುರಂನ ಅರಣ್ಯ ಭವನಕ್ಕೆ ಬಂದು ವಾಸ್ತವ್ಯ ಹೂಡಲಿವೆ. ಅಲ್ಲಿಂದ ಆಗಸ್ಟ್ 10 ರಂದು ಅರಮನೆ ಪ್ರವೇಶಿಸಲಿವೆ.ಅಭಿಮನ್ಯು
    ಅಂಬಾರಿ ಹೊರುವ ಜವಾಬ್ದಾರಿ ಅಭಿಮನ್ಯುವಿನ ಹೆಗಲಿಗೆ ಮೂರನೇ ಬಾರಿಗೆ ಬಂದಿದೆ. ಮತ್ತಿಗೋಡು ಶಿಬಿರದಲ್ಲಿರುವ 51 ವರ್ಷದ ಅಭಿಮನ್ಯುವನ್ನು 1970ರಲ್ಲಿ ಕೊಡಗು ಜಿಲ್ಲೆ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. ಇದು ಪುಂಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಪಳಗಿದ್ದು, 2012ರಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಾ ಬರುತ್ತಿದೆ. 2015ರಲ್ಲಿ ಕರ್ನಾಟಕ ವಾದ್ಯಗೋಷ್ಠಿ ತಂಡದ ಗಾಡಿಯನ್ನು ಜಂಬೂಸವಾರಿ ಮೆರವಣಿಗೆಯಲ್ಲಿ ಎಳೆದಿದ್ದು, 2020ರಿಂದ ಚಿನ್ನದ ಅಂಬಾರಿ ಹೊರುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ. 2.72 ಮೀಟರ್ ಎತ್ತರ ಇರುವ ಆನೆ, 5,000 ಕೆ.ಜಿ.ಗೂ ಹೆಚ್ಚಿನ ತೂಕವಿದೆ.

    ಅರ್ಜುನ: ಬಳ್ಳೆ ಆನೆ ಶಿಬಿರದ ಅರ್ಜುನನಿಗೆ ಈಗ 62 ವರ್ಷ. 5000ರಿಂದ 5100 ಕೆ.ಜಿ. ತೂಕವಿದ್ದು, 20 ವರ್ಷದಿಂದ ದಸರಾದಲ್ಲಿ ಭಾಗಿಯಾಗಿದ್ದಾನೆ. 2012ರಿಂದ 2019ರವರೆಗೆ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿದ್ದಾನೆ. ಶರೀರದ ಉದ್ದ 3.75 ಮೀಟರ್, ಎತ್ತರ 2.95 ಮೀಟರ್ ಇದೆ.

    ವಿಕ್ರಮ: ದುಬಾರೆ ಆನೆ ಶಿಬಿರದಲ್ಲಿರುವ 59 ವರ್ಷದ ವಿಕ್ರಮನನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. 19 ವರ್ಷದಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿಕೊಂಡು ಬರುತ್ತಿದೆ. 2015ರಿಂದ ಪಟ್ಟದ ಆನೆಯಾಗಿ ಅರಮನೆಯ ಪೂಜಾ ವಿಧಿವಿಧಾನದಲ್ಲಿ ಭಾಗವಹಿಸುತ್ತಿದೆ. 2.89 ಮೀಟರ್ ಎತ್ತರ ಇರುವ ಆನೆ, 3,820 ಕೆ.ಜಿ. ತೂಕವಿದೆ.

    ಧನಂಜಯ:ದುಬಾರೆ ಶಿಬಿರದಲ್ಲಿರುವ 44 ವರ್ಷದ ಧನಂಜಯ ಆನೆಯನ್ನು 2013ರಲ್ಲಿ ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಸೆರೆ ಹಿಡಿಯಲಾಯಿತು. ಕಾಡಾನೆ ಮತ್ತು ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಇದು ಭಾಗವಹಿಸುತ್ತಿದೆ. ಮೂರು ವರ್ಷದಿಂದ ದಸರಾದಲ್ಲಿ ಭಾಗವಹಿಸುತ್ತಿದೆ. 2.92 ಮೀಟರ್ ಎತ್ತರ ಇರುವ ಆನೆ, 4,050 ಕೆ.ಜಿ. ತೂಕವಿದೆ.

    ಗೋಪಾಲಸ್ವಾಮಿ: ಮತ್ತಿಗೋಡು ಶಿಬಿರದಲ್ಲಿರುವ 39 ವರ್ಷದ ಗೋಪಾಲಸ್ವಾಮಿ ಆನೆಯನ್ನು 2009ರಲ್ಲಿ ಸಕಲೇಶಪುರದ ಹೆತ್ತೂರಿನಲ್ಲಿ ಸೆರೆ ಹಿಡಿಯಲಾಯಿತು. ಕಾಡಾನೆ ಮತ್ತು ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿದೆ. 2012ರಿಂದ ದಸರಾದಲ್ಲಿ ಭಾಗವಹಿಸುತ್ತಿದೆ. 2.85 ಮೀಟರ್ ಎತ್ತರ, 4,420 ಕೆ.ಜಿ. ತೂಕ ಇರುವ ಗೋಪಾಲಸ್ವಾಮಿಯನ್ನು ಮುಂದಿನ ಕ್ಯಾಪ್ಟನ್ ಮಾಡಬಹುದೇ ಎನ್ನುವ ಚಿಂತನೆಯಲ್ಲಿ ಅರಣ್ಯ ಇಲಾಖೆ ಇದೆ.

    ಕಾವೇರಿ: ದುಬಾರೆ ಆನೆ ಶಿಬಿರದಲ್ಲಿರುವ 46 ವರ್ಷದ ಕಾವೇರಿಯನ್ನು ಸೋಮವಾರಪೇಟೆಯ ಅಡಿರಾಡೂರು ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. 2.60 ಮೀಟರ್ ಎತ್ತರ, 3,220 ಕೆ.ಜಿ. ತೂಕವಿರುವ ಈ ಆನೆ, 11 ವರ್ಷದಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

    ಚೈತ್ರಾ: ರಾಮಪುರ ಶಿಬಿರದಲ್ಲಿರುವ 49 ವರ್ಷದ ಚೈತ್ರಾ ಅರಣ್ಯ ಇಲಾಖೆಯ ಆನೆ ಶಿಬಿರದಲ್ಲಿಯೇ ಜನ್ಮ ತಾಳಿದೆ. ಗಂಗೆ ಆನೆಯ ಮಗಳಾದ ಚೈತ್ರಾ ಕೂಡ ಕಾಡಾನೆ, ಹುಲಿಗಳನ್ನು ಸೆರೆ ಹಿಡಿಯವ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದೆ. 2.30 ಮೀಟರ್ ಎತ್ತರ, 2,600 ಕೆ.ಜಿ. ತೂಕ ಇದೆ.

    ಲಕ್ಷ್ಮೀ: ರಾಮಪುರ ಶಿಬಿರದಲ್ಲಿರುವ 21 ವರ್ಷದ ಲಕ್ಷ್ಮೀ, ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವ ಆನೆಗಳಲ್ಲಿಯೇ ಅತ್ಯಂತ ಕಿರಿಯ ಆನೆ. ತಾಯಿಯಿಂದ ಬೇರ್ಪಟ್ಟು ಬಂದ ನಂತರ ಇದನ್ನು ಅರಣ್ಯ ಇಲಾಖೆಯ ಶಿಬಿರದಲ್ಲಿ ಆರೈಕೆ ಮಾಡಲಾಗುತ್ತಿದೆ. ಕಾಡಾನೆ, ಹುಲಿಗಳ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದೆ. 2019ರಿಂದ ದಸರಾದಲ್ಲಿ ಭಾಗವಹಿಸುತ್ತಿದ್ದು, ಈ ಆನೆಗೆ ಇದು ಎರಡನೇ ದಸರಾ. 2.32 ಮೀಟರ್ ಎತ್ತರ, 2,540 ಕೆ.ಜಿ. ತೂಕವಿದೆ.

    ಗಜಪಯಣಕ್ಕೆ ಮತ್ತು ಅರಮನೆ ಅಂಗಳದಲ್ಲಿ ಗಜಪಡೆಯ ವಾಸ್ತವ್ಯಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಈ ಬಾರಿ ದಸರಾ ಮಹೋತ್ಸವದಲ್ಲಿ 14 ಆನೆಗಳು ಭಾಗಿಯಾಗಲಿವೆ. ಈ ಪೈಕಿ ಮೊದಲ ತಂಡದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಆಗಮಿಸಲಿವೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಎರಡನೇ ತಂಡದಲ್ಲಿ 5 ಆನೆಗಳನ್ನು ಕರೆತರಲಾಗುತ್ತದೆ.
    -ಡಾ.ವಿ.ಕರಿಕಾಳನ್, ಡಿಸಿಎಫ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts