More

    ರೈತರ ಬದುಕು ಬೀದಿಗೆ ತಂದ ಅಕಾಲಿಕ ಮಳೆ

    ಹಾವೇರಿ: ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆ ಹಿಂಗಾರಿ ಬೆಳೆದಿರುವ ರೈತರು ಬದುಕು ಬೀದಿಗೆ ಬರುವಂತೆ ಮಾಡಿದೆ. ಜಿಲ್ಲೆಯಾದ್ಯಂತ ಸುರಿದ ಮಳೆಯಿಂದ ಹಿಂಗಾರಿ ಜೋಳ, ಕಡಲೆ, ಹತ್ತಿ ಬೆಳೆಗಳಿಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.

    ಬಿಳಿಜೋಳದ ಬೆಳೆಯು ಕಾಳುಕಟ್ಟುವ ಹಂತದಲ್ಲಿತ್ತು. ಮಳೆಯಿಂದ ಅವೆಲ್ಲ ನೆಲಕ್ಕುರುಳಿದೆ. ಜೋಳದ ತೆನೆಯು ತೊಯ್ದು ಕಾಳು ಕಪ್ಪುಬಣ್ಣಕ್ಕೆ ತಿರುಗುವಂತಾಗಿದೆ.

    ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಅಂದಾಜು 30 ಸಾವಿರ ಹೆಕ್ಟೇರ್​ನಲ್ಲಿ ಜೋಳ, 6 ಸಾವಿರ ಹೆಕ್ಟೇರ್ ಕಡಲೆ ಬೆಳೆಯಲಾಗಿದೆ. ಶುಕ್ರವಾರ ಸುರಿದ ಮಳೆಯಿಂದಾಗಿ ಶೇ. 50ಕ್ಕೂ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಅಲ್ಲದೆ, ಕೊನೆಯ ಹಂತದ ಕಟಾವಿನಲ್ಲಿದ್ದ ಬಿಟಿ ಹತ್ತಿಯೂ ಮಳೆಗೆ ತೊಯ್ದು ನೆಲಕ್ಕೆ ಬಿದ್ದಿದೆ. ಬೀಜ, ಗೊಬ್ಬರ, ಔಷಧಕ್ಕಾಗಿ ಸಾವಿರಾರು ರೂ. ಖರ್ಚು ಮಾಡಿ ಹಿಂಗಾರಿ ಬಿತ್ತನೆ ಮಾಡಿ ಬೆಳೆ ಬೆಳೆದಿರುವ ರೈತರಿಗೆ ಈ ಮಳೆ ಆಘಾತ ತಂದಿದೆ.

    ಆಳೆತ್ತರ ಬೆಳೆದಿದ್ದ ಜೋಳ

    ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಾಗಿದ್ದರಿಂದ ಹಿಂಗಾರು ಬೆಳೆಯಾದ ಜೋಳಕ್ಕೆ ಉತ್ತಮ ತೇವಾಂಶ ದೊರೆತಿತ್ತು. ಆರರಿಂದ 7 ಅಡಿಗಳವರೆಗೆ ಜೋಳವು ಬೆಳೆದು ಉತ್ತಮ ಬೆಳೆಯ ನಿರೀಕ್ಷೆ ಮಾಡಿದ್ದೆವು. ಆದರೆ ಆ ಕನಸನ್ನು ಅಕಾಲಿಕ ಮಳೆ ಕನಸಾಗುವಂತೆ ಮಾಡಿದೆ ಎಂದು ರೈತರು ಗೋಳಾಡುತ್ತಿದ್ದಾರೆ.

    ಸದ್ಯ ಮಾರುಕಟ್ಟೆಯಲ್ಲಿ ಹತ್ತಿ ಬೆಳೆ ಕ್ವಿಂಟಾಲ್​ಗೆ 5 ಸಾವಿರದಿಂದ 5,600 ರೂ. ದರವಿದೆ. ಅಕಾಲಿಕ ಮಳೆಯಿಂದಾಗಿ ವ್ಯಾಪಾರಸ್ಥರು ಈಗಾಗಲೇ ಬಿಡಿಸಿಟ್ಟ ಹತ್ತಿಯನ್ನು ಮಾರಾಟಕ್ಕೆ ಒಯ್ದರೂ ಮಳೆಗೆ ಸಿಕ್ಕ ಹತ್ತಿ ಎಂದು ದರ ಕಡಿತಗೊಳಿಸುವ ಆತಂಕವೂ ರೈತರಿಗೆ ಆರಂಭವಾಗಿದೆ.

    ಸಿಡಿಲಿಗೆ ಸೋಯಾಬೀನ್ ಬಣವೆ ಭಸ್ಮ

    ಸಿಡಿಲು ಬಡಿದು ಸೋಯಾಬೀನ್ ಬಣವೆ ಸಂಪೂರ್ಣ ಭಸ್ಮವಾದ ಘಟನೆ ಹಾನಗಲ್ಲ ತಾಲೂಕಿನ ಕೋಡಿಯಲ್ಲಾಪುರ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ. ಗ್ರಾಮದ ಮಲ್ಲಪ್ಪ ಬಸವಲಿಂಗಪ್ಪ ಚನ್ನಬಸಣ್ಣನವರ ಎಂಬ ರೈತರಿಗೆ ಸೇರಿದ ಜಮೀನಿನಲ್ಲಿ ಸೋಯಾಬೀನ್ ಬಣವೆಗೆ ಸಿಡಿಲು ಬಡಿದಿದೆ. ಆರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸೋಯಾಬೀನ್ ಅನ್ನು ಬಣವೆ ಹಾಕಲಾಗಿತ್ತು. ಶುಕ್ರವಾರ ತಡರಾತ್ರಿ ಮಳೆ ಆರಂಭವಾಗಿ ಸಿಡಿಲು ಬಿದ್ದಿದೆ. ಮಳೆ ಬರುತ್ತಿದ್ದರೂ ಸಿಡಿಲಿನ ಬೆಂಕಿಯ ತೀವ್ರತೆ ಹೆಚ್ಚಾಗಿದ್ದುದರಿಂದ ಬಣವೆ ಸಂಪೂರ್ಣ ಸುಟ್ಟು ಬೂದಿಯಾಗಿದೆ. ಸ್ಥಳಕ್ಕೆ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಮುಂಗಾರಿನಲ್ಲಿ ಅತಿವೃಷ್ಟಿಯಾಗಿದ್ದರಿಂದ ಹಿಂಗಾರಿನಲ್ಲಿ ಬಿತ್ತನೆ ಮಾಡಿದ ಜೋಳ ಉತ್ತಮವಾಗಿ ತೆನೆ ಕಟ್ಟಿತ್ತು. 7ರಿಂದ 8 ಅಡಿಗಳಷ್ಟು ಎತ್ತರಕ್ಕೂ ಬೆಳೆದಿತ್ತು. ಇದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ನೀಗುವ ಆಸೆಯಿತ್ತು. ಮನೆಮಂದಿಗೆಲ್ಲ ವರ್ಷಪೂರ್ತಿ ಜೋಳದ ಬರ ನೀಗುವ ನಿರೀಕ್ಷೆಯಿತ್ತು. ಇದೀಗ ಮಳೆಯಿಂದ 19 ಎಕರೆಯಲ್ಲಿ ಬೆಳೆದ ಜೋಳವೆಲ್ಲ ನೆಲಕ್ಕುರುಳಿ ಬಿದ್ದಿದೆ. ಕಡಲೆಯ ಹುಳಿ ತೊಳೆದು ಹೋಗಿ ಕಾಳು ಜೊಳ್ಳಾಗಲಿವೆ. ಸರ್ಕಾರ ಕೂಡಲೆ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು. ಅಂದರೆ ಮಾತ್ರ ರೈತ ಅಲ್ಪಸ್ವಲ್ಪವಾದರೂ ಕಷ್ಟದಿಂದ ಪಾರಾಗಲು ಸಾಧ್ಯ.
    | ಮಲ್ಲಿಕಾರ್ಜುನ ವಾರ್ತೆ, ಜೋಳ ಬೆಳೆದ ಆಲದಕಟ್ಟಿ ಗ್ರಾಮದ ರೈತ


    ಈ ಸಮಯದಲ್ಲಿ ಮಳೆ ಆಗಬಾರದಿತ್ತು. ರೈತರು ಜೋಳದ ಬೆಳೆ ಮಳೆಯಿಂದ ನೆಲಕ್ಕುರುಳಿ ಹಾನಿಯಾಗಿರುವ ಮಾಹಿತಿ ಬಂದಿದೆ. ಹಾನಿಯ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
    | ಬಿ. ಮಂಜುನಾಥ, ಜಂಟಿ ಕೃಷಿ ನಿರ್ದೇಶಕ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts