More

    5 ಆಸ್ಪತ್ರೆಗೆ ತೆರಳಿದರೂ ಗರ್ಭಿಣಿಗೆ ಸಿಗದ ಚಿಕಿತ್ಸೆ

    ಮಂಗಳೂರು/ಉಪ್ಪಿನಂಗಡಿ: ನೆಲ್ಯಾಡಿಯ ಗರ್ಭಿಣಿ ಚಿಕಿತ್ಸೆಗಾಗಿ ದಿನಪೂರ್ತಿ ಅಲೆದಾಡಿದ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಹಾಗೂ ತಕ್ಷಣ ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ.
    ಸೋಮವಾರ ವೆನ್ಲಾಕ್‌ಗೆ ಭೇಟಿ ನೀಡಿದ ಅವರು, ಗರ್ಭಿಣಿಯರಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಸತಾಯಿಸಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಕೋವಿಡ್ ಸೋಂಕಿತರಾಗಿದ್ದರೂ ಖಾಸಗಿ ಆಸ್ಪತ್ರೆಗಳು ಗರ್ಭಿಣಿಯರಿಗೆ ಚಿಕಿತ್ಸೆ ನೀಡದೆ ಬೇರೆಡೆಗೆ ಕಳುಹಿಸುವಂತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಮಹಿಳೆಗೆ ಚಿಕಿತ್ಸೆ ನೀಡದವರನ್ನು ಸೇವೆಯಿಂದ ಅಮಾನತು ಮಾಡಲೂ ಹಿಂಜರಿಯುವುದಿಲ್ಲ ಎಂದು ತಿಳಿಸಿದರು.

    ಪ್ರಕರಣ ವಿವರ: ನೆಲ್ಯಾಡಿ ಗ್ರಾಮದ ದರ್ಖಾಸು ನಿವಾಸಿ ಕೂಲಿ ಕಾರ್ಮಿಕ ಆನಂದ ಅವರ ಪತ್ನಿ 9 ತಿಂಗಳ ಗರ್ಭಿಣಿ ಗೀತಾ(27) ತುಸು ಜ್ವರ ಹಾಗೂ ಹೊಟ್ಟೆಯೊಳಗೆ ಮಗುವಿನ ಚಲನವಲನ ಕಡಿಮೆ ಇದೆ ಎನ್ನುವ ಕಾರಣಕ್ಕಾಗಿ ಅಕ್ಕನೊಂದಿಗೆ ಶನಿವಾರ ಬೆಳಗ್ಗೆ ನೆಲ್ಯಾಡಿ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿಂದ ಕೊಕ್ಕಡ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅಲ್ಲಿಯೂ ವೈದ್ಯರಿಲ್ಲದ ಕಾರಣಕ್ಕೆ 108 ಆಂಬುಲೆನ್ಸ್ ಮೂಲಕ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಹೋಗಿದ್ದು, ಅಲ್ಲಿಂದ ಲೇಡಿಗೋಶನ್ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕಳಿಸಿದ್ದರು. ವೆನ್ಲಾಕ್, ಲೇಡಿಗೋಶನ್ ಆಸ್ಪತ್ರೆಗಳಿಗೆ ಅಲೆದಾಡಿ ತಡರಾತ್ರಿ 12.30ರ ತನಕ ವೆನ್ಲಾಕ್ ಜಗುಲಿಯಲ್ಲಿ ಕಳೆದರೂ ಚಿಕಿತ್ಸೆ ಸಿಕ್ಕಿರಲಿಲ್ಲ. ಬಳಿಕ ಮನೆಯವರು ನೆಲ್ಯಾಡಿಯಿಂದ ವಾಹನದಲ್ಲಿ ತೆರಳಿ ಅವರನ್ನು ಮನೆಗೆ ಕರೆತಂದಿದ್ದರು.

    ಸಂತ್ರಸ್ತೆ ಮನೆಗೆ ಕಡಬ ತಹಸೀಲ್ದಾರ್ ಭೇಟಿ
    ಕಡಬ ತಹಸೀಲ್ದಾರ್ ಜಾನ್‌ಪ್ರಕಾಶ್ ರೋಡ್ರಿಗಸ್ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಮಹಿಳೆಯನ್ನು ಸೋಮವಾರ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ, ಸ್ಕಾೃನಿಂಗ್‌ಗೆ ಒಳಪಡಿಸಲಾಗಿದೆ. ಜ್ವರ ಕಡಿಮೆಯಾಗಿದ್ದು, ಆರೋಗ್ಯವಾಗಿದ್ದಾರೆ. ಅಗತ್ಯ ವೈದ್ಯಕೀಯ ನೆರವಿಗೆ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
    ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್‌ಮಲೆ ಜತೆಗಿದ್ದರು. ಮಹಿಳೆಯ ಮನೆಯನ್ನು ಸಂಪರ್ಕಿಸುವ ಕಚ್ಚಾ ರಸ್ತೆ ಕೆಸರಿನಿಂದ ಕೂಡಿದ್ದು, ತಹಸೀಲ್ದಾರ್ ವಾಹನ ಮುಂದಕ್ಕೆ ಸಾಗಲು ಅಸಾಧ್ಯವಾದ ಕಾರಣ ಅವರು 1 ಕಿ.ಮೀ. ಕಾಲ್ನಡಿಗೆಯಲ್ಲಿಯೇ ಕ್ರಮಿಸಿದರು.

    ಪ್ರಕರಣದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಆದೇಶದಂತೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಉನ್ನತ ಮಟ್ಟದ ತನಿಖೆ ಈಗಾಗಲೇ ಆರಂಭಗೊಂಡಿದೆ. ಜುಲೈ 21ರಂದು ಸಂತ್ರಸ್ತ ಮಹಿಳೆಯ ಮನೆಯವರನ್ನು ತನಿಖಾ ತಂಡದ ಮಂದೆ ಹಾಜರಾಗಿ ಹೇಳಿಕೆ ನೀಡಲು ತಿಳಿಸಲಾಗಿದೆ.
    – ಡಾ.ರತ್ನಾಕರ್, ಜಿಲ್ಲಾ ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts