More

    ಅಭಿವೃದ್ಧಿ ಬಳಿಕ ಸಂರಕ್ಷಣೆಗೆ ಆದ್ಯತೆ, ಗುಜ್ಜರಕೆರೆ ತೀರ್ಥಕೆರೆಯಾಗಿ ಉಳಿಸಲು ಆಗ್ರಹ

    ಭರತ್ ಶೆಟ್ಟಿಗಾರ್ ಮಂಗಳೂರು

    ವರ್ಷದ ಹಿಂದಿನ ತನಕ ನಡೆದಾಡಲು ಕಷ್ಟಪಡುತ್ತಿದ್ದ ಪುರಾತನ ಗುಜ್ಜರಕೆರೆ ಪರಿಸರಕ್ಕೆೆ ಅಭಿವೃದ್ಧಿ ಬಳಿಕ ಹೊಸ ಕಳೆ ಬಂದಿದೆ. ಬೆಳಗ್ಗೆ-ಸಾಯಂಕಾಲ ಅಡ್ಡಾಡಲು, ವಿಶ್ರಾಂತಿ ಪಡೆಯಲು ಇಲ್ಲಿಗೆ ಆಗಮಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೇ ಸದ್ಯ ಕೆರೆಯ ಸಂರಕ್ಷಣೆಗೂ ಅಡ್ಡಿಯಾಗಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.

    ವಿಹಾರಾರ್ಥವಾಗಿ ಬರುವವರು ಮಕ್ಕಳು, ದೊಡ್ಡವರೆನ್ನದೆ ಬಹುತೇಕ ಎಲ್ಲರೂ ಕೆರೆಗೆ ಇಳಿಯುತ್ತಿರುವುದು ಕಂಡು ಬರುತ್ತಿದೆ. ಕೆರೆ ತುಂಬ ಆಳವಿರುವುದರಿಂದ ಮಕ್ಕಳು ಮಾತ್ರವಲ್ಲ, ಹಿರಿಯರೂ ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಾಪಾಯ ಸಂಭವಿಸುವ ಭೀತಿಯಿದೆ. ಜತೆಗೆ ಮೀನಿಗೆ ಬಿಸ್ಕತ್ತು ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ಹಾಕುವುದರಿಂದ ನೀರು ಮತ್ತೆ ಕಲುಷಿತಗೊಂಡು, ಜಲಚರಗಳ ಜೀವಹಾನಿಗೂ ಕಾರಣವಾಗಬಹುದು ಎಂದು ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

    ಸಿಗರೇಟು ಚೂರುಗಳು ಕೆರೆಗೆ: ಕೆರೆಯ ವೀಕ್ಷಣೆಗೆ, ವಿಶ್ರಾಂತಿಗೆ ಬರುವ ಯುವಕರು ಸಿಗರೇಟು ಸೇದಲು ಕೆರೆಯ ಪ್ರದೇಶವನ್ನು ಆಶ್ರಯಿಸಿ, ಸಿಗರೇಟು ಚೂರುಗಳನ್ನು ಕೆರೆಗೆ ಹಾಕಿ ಮಲಿನಗೊಳಿಸುತ್ತಿರುವುದೂ ಸದ್ಯ ಕಂಡು ಬರುತ್ತಿದೆ. ಕೆರೆಯ ಈಶಾನ್ಯ ಮೂಲೆಯಲ್ಲಿ ಕಲುಷಿತ ನೀರು ಕೆರೆ ಸೇರುತ್ತಿದೆ. ಪರಿಣಾಮ ಹಸಿರುಗಟ್ಟಿದ ಕೊಳಚೆ ದಪ್ಪ ಪದರ ನೀರಿನ ಮೇಲೆ ತೇಲುತ್ತಿದ್ದು, ಪ್ಲಾಸ್ಟಿಕ್‌ಗಳು ಕೆರೆಯೊಡಲು ಸೇರುವುದನ್ನು ಕಾಣಬಹುದು.

    ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಕೆರೆಗೆ ಇಳಿಯಲು ಅಳವಡಿಸಿರುವ ಎಲ್ಲ ದ್ವಾರಗಳನ್ನು ಬೀಗ ಹಾಕಿ ಮುಚ್ಚುವ ವ್ಯವಸ್ಥೆ ಮಾಡಿ, ಯಾರೂ ಕೆರೆಗೆ ಅನಗತ್ಯ ಇಳಿಯದಂತೆ ತಡೆಯಬೇಕು. ಕೆರೆಯ ರಕ್ಷಣೆ, ಇತಿಹಾಸ, ಧಾರ್ಮಿಕ ಹಿನ್ನೆಲೆ ಕುರಿತಂತೆ ಜನರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕೆರೆಯ ಸುತ್ತಲೂ ಫಲಕಗಳನ್ನು ಅಳವಡಿಸಬೇಕು. ಹಾಗೂ ತೀರ್ಥ ಕೆರೆಯಾಗಿ ಸಂರಕ್ಷಿಸಬೇಕು ಎಂದು ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ ಒತ್ತಾಯಿಸಿದೆ.

    ಅಭಿವೃದ್ಧಿಯಾದ ಬಳಿಕವೂ ಗುಜ್ಜರ ಕೆರೆ ಮಲಿನವಾಗುತ್ತಿರುವುದು ಕಂಡು ಬರುತ್ತಿದೆ. ಮಕ್ಕಳು, ಹಿರಿಯರು ನೀರಿಗಿಳಿಯುವುದು ಅಪಾಯಕಾರಿಯಾಗಿ ಪರಿಣಮಿಸಬಹುದು. ಆದ್ದರಿಂದ ಜಿಲ್ಲಾಡಳಿತ, ಮಹಾನಗರಪಾಲಿಕೆ ತಕ್ಷಣ ಈ ಕುರಿತಂತೆ ಗಮನ ಹರಿಸಿ, ಮಂಗಳಾದೇವಿಯ ತೀರ್ಥ ಕೆರೆಯ ರಕ್ಷಣೆಗೆ ಮುಂದಾಗಬೇಕು.

    ನೇಮು ಕೊಟ್ಟಾರಿ, ಪ್ರ.ಕಾರ್ಯದರ್ಶಿ, ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ

    ಸ್ಮಾರ್ಟ್ ಸಿಟಿ ಯೋಜನೆಯಡಿ ಗುಜ್ಜರಕೆರೆ ಅಭಿವೃದ್ಧಿ ಪಡಿಸಲಾಗಿದ್ದು, ಅದರ ಸಂರಕ್ಷಣೆಗೂ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರು, ಪ್ರವಾಸಿಗರು ಸ್ಥಳದ ಇತಿಹಾಸ ಅರಿತು ಅದರಂತೆ ವರ್ತಿಬೇಕಾದ ಅಗತ್ಯವಿದೆ. ಮಲಿನ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.

    ಪ್ರೇಮಾನಂದ ಶೆಟ್ಟಿ, ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts