More

    ಹೂಡಿಕೆಗೆ ಮುಂಜಾಗ್ರತೆಯೇ ಮದ್ದು…!

    # ನನ್ನ ಮಗನಿಗೆ 24 ವರ್ಷ. ಎಂಬಿಎ ಪದವೀಧರ. ಪ್ರತಿ ತಿಂಗಳು ರೂ. 30 ಸಾವಿರ ಸಂಬಳ ಬರುತ್ತದೆ. ಮ್ಯೂಚುವಲ್ ಫಂಡ್ ಎಸ್​ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ)ಯಲ್ಲಿ ಪ್ರತಿ ತಿಂಗಳು ರೂ. 4 ಸಾವಿರ ಹೂಡಬೇಕೆಂದು ಬಯಸಿದ್ದಾನೆ. ಆದರೆ ನಾನು ಇತ್ತೀಚೆಗೆ ಇನ್ಶೂರೆನ್ಸ್ ಕಂಪನಿಯೊಂದು ಬಿಡುಗಡೆ ಮಾಡಿರುವ ಎಸ್​ಐಐಪಿ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡಿದ್ದೇನೆ. ಯಾವುದು ಸರಿಯಾದ ನಿರ್ಧಾರ ದಯವಿಟ್ಟು ತಿಳಿಸಿ.

    | ಪ್ರಸನ್ನ ಎಸ್.ಜಿ.ಎಸ್. ತುಮಕೂರು

    ಹೂಡಿಕೆಗೆ ಮುಂಜಾಗ್ರತೆಯೇ ಮದ್ದು...!ಮಗನ ಹೂಡಿಕೆ ಸರಿಯಾಗಿರಬೇಕೆಂಬ ನಿಮ್ಮ ಕಾಳಜಿ ನನಗೆ ಇಷ್ಟವಾಯಿತು. ಹೂಡಿಕೆಗೆ ಮುಂಜಾಗ್ರತೆಯೇ ಮದ್ದು ಎನ್ನುವುದನ್ನು ಅರಿತಿದ್ದೀರಿ. ಮ್ಯೂಚುವಲ್ ಫಂಡ್ ಎಸ್​ಐಪಿ ಮೂಲಕ ಹೂಡಿಕೆ ಮಾಡುವುದು ಇತ್ತೀಚಿನ ದಿನಗಳ ಅತ್ಯಂತ ಜನಪ್ರಿಯ. ದೇಶದಲ್ಲಿ ಪ್ರತಿ ತಿಂಗಳು ರೂ. 8,000 ಕೋಟಿಗೂ ಹೆಚ್ಚು ಹಣ ಮ್ಯೂಚುವಲ್ ಫಂಡ್ ಎಸ್​ಐಪಿಯಲ್ಲಿ ಹೂಡಿಕೆಯಾಗುತ್ತಿದೆ. ಇದೀಗ ಇನ್ಶೂರೆನ್ಸ್ ಕಂಪನಿಗಳೂ ಅದರಲ್ಲಿ ಒಂದಿಷ್ಟು ಪಾಲು ಪಡೆದುಕೊಳ್ಳುವ ಪ್ರಯತ್ನದಲ್ಲಿವೆ. ನೀವು ಹೇಳಿರುವ ಇನ್ಶೂರೆನ್ಸ್ ಕಂಪನಿ ಹೊರತಂದಿರುವ ಎಸ್​ಐಐಪಿ ಹೂಡಿಕೆ ಯೋಜನೆ ಯುನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್ (ಯುಲಿಪ್) ಆಗಿದೆ. ಇದು ಇನ್ಶೂರೆನ್ಸ್ ಮತ್ತು ಹೂಡಿಕೆಯ ಸಮ್ಮಿಶ್ರಣ. ಎಸ್​ಐಐಪಿ ಪ್ಲಾನ್​ನಲ್ಲಿ ಪ್ರೀಮಿಯಂ ಅಲೋಕೇಷನ್ ಚಾರ್ಜ್ (ಪಿಎಸಿ) ವಿಧಿಸಲಾಗುತ್ತದೆ. ಎಲ್ಲಾ ಯುಲಿಪ್​ಗಳಲ್ಲಿ ಇರುವಂತೆ ಎಸ್​ಐಐಪಿ ಯೋಜನೆಯಲ್ಲೂ ಆರಂಭಿಕ 5 ವರ್ಷಗಳಲ್ಲಿ ಪ್ರೀಮಿಯಂ ಅಲೋಕೇಷನ್ ಚಾರ್ಜ್ ಜಾಸ್ತಿ (ಏಜೆಂಟ್ ಮೂಲಕ ಖರೀದಿಸಿದರೆ ಶೇ 8, ಆನ್​ಲೈನ್​ನಲ್ಲಿ ಖರೀದಿಸಿದರೆ ಶೇ 3) ಇದೆ. 6ನೇ ವರ್ಷದಿಂದ ಪಿಎಸಿ ಚಾರ್ಜ್ ಏಜೆಂಟ್ ಮೂಲಕ ಖರೀದಿಸಿದ್ದರೆ ಶೇ 3ರಷ್ಟು ಮತ್ತು ಆನ್​ಲೈನ್​ನಲ್ಲಿ ಖರೀದಿಸಿದ್ದರೆ ಶೇ 1ರಷ್ಟು ಇದೆ. ಇದಲ್ಲದೆ ಹೆಚ್ಚುವರಿಯಾಗಿ ನೀವು ಫಂಡ್ ಮ್ಯಾನೇಜ್ಮೆಂಟ್ ದರಗಳನ್ನು ಕಟ್ಟಬೇಕಾಗುತ್ತದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಅಂತಿಮವಾಗಿ ಹೂಡುವ ಮೊತ್ತ ಕಡಿಮೆಯಾಗುತ್ತದೆ. ಉದಾ: ನೀವು 1 ಲಕ್ಷ ರೂ. ವಾರ್ಷಿಕ ಪ್ರೀಮಿಯಂ ಪಾವತಿಸುತ್ತೀರಿ ಎಂದುಕೊಳ್ಳೋಣ. ಈ 1 ಲಕ್ಷದಲ್ಲಿ ಎಲ್ಲಾ ವೆಚ್ಚಗಳನ್ನು ಕಡಿತಗೊಳಿಸಿದರೆ 89,330 ರೂ. ಮಾತ್ರ ಅಂತಿಮ ಹೂಡಿಕೆ ಮೊತ್ತವಾಗುತ್ತದೆ. ಈ ದೊಡ್ಡ ಮೊತ್ತದ ಶುಲ್ಕ ದೀರ್ಘಾವಧಿಯಲ್ಲಿ ಹಣ ಒಟ್ಟುಗೂಡಿಸುವ ನಿಮ್ಮ ಪ್ರಯತ್ನಕ್ಕೆ ಹಿನ್ನಡೆ ಉಂಟುಮಾಡುತ್ತದೆ. ಆದರೆ ಮ್ಯೂಚುವಲ್ ಫಂಡ್​ನಲ್ಲಿ ಈ ಪರಿ ಶುಲ್ಕಗಳಿಲ್ಲ. ಈಕ್ವಿಟಿ ಫಂಡ್​ಗಳಲ್ಲಿ ಹೆಚ್ಚೆಂದರೆ ಶೇ 2.25 ಮತ್ತು ಡೆಟ್ ಫಂಡ್​ಗಳಲ್ಲಿ ಗರಿಷ್ಠ ಶೇ 2ರಷ್ಟು ಶುಲ್ಕ ವಿಧಿಸಲಾಗುತ್ತದೆ. ಅಂದರೆ ನೀವು 1 ಲಕ್ಷವನ್ನು ಡಿಸ್ಟ್ರಿಬ್ಯೂಟರ್ ಮೂಲಕ ಹೂಡಿದರೆ ಅಂತಿಮವಾಗಿ 97,750 ರೂ. ಹೂಡಿಕೆಯಾಗುತ್ತದೆ. ನೇರವಾಗಿ (ಡೈರೆಕ್ಟ್) 1 ಲಕ್ಷ ರೂ. ಹೂಡಿಕೆ ಮಾಡಿದರೆ ರೂ. 99000 ಹೂಡಿಕೆಯಾಗುತ್ತದೆ. ಮೇಲಿನ ಅಂಶಗಳನ್ನು ಪರಿಗಣಿಸಿದಾಗ ಮ್ಯೂಚುವಲ್ ಫಂಡ್ ಎಸ್​ಐಪಿ ಹೂಡಿಕೆಯೇ ಸೂಕ್ತ. ಆದರೆ 4 ಸಾವಿರ ರೂ. ಹೂಡಿಕೆ ಮಾಡಬೇಕೇ ಅಥವಾ ಕಡಿಮೆ ಹೂಡಿಕೆ ಮಾಡಬೇಕೇ ಎನ್ನುವುದು ನಿಮ್ಮ ರಿಸ್ಕ್ ಪೊ›ಫೈಲ್ (ಆರ್ಥಿಕ ಸ್ಥಿತಿಗತಿ) ಅವಲಂಬಿಸಿದೆ. ಮಗನಿಗೆ ಒಂದು ಪಿಪಿಎಫ್ ಖಾತೆ ಆರಂಭಿಸಲು ತಿಳಿಸಿ. ಪ್ರಮುಖ ಬ್ಯಾಂಕ್​ಗಳು, ಅಂಚೆ ಕಚೇರಿಯಲ್ಲಿ ಪಿಪಿಎಫ್ ಖಾತೆ ಆರಂಭಿಸಬಹುದು. ಜತೆಗೆ ಒಂದು ಟಮ್ರ್ ಇನ್ಶೂರೆನ್ಸ್ ಮತ್ತು ಹೆಲ್ತ್ ಇನ್ಶೂರೆನ್ಸ್ ಮಾಡಿಸಿಕೊಳ್ಳಲು ಹೇಳಿ. ಮಗನ ಭವಿಷ್ಯ ಉಜ್ವಲವಾಗಲಿ.

    # 5 ವರ್ಷಗಳ ಹಿಂದೆ ನನ್ನ ಮಗನ ಒಂದು ಪಿಪಿಎಫ್ ಖಾತೆ ತೆರೆದಿದ್ದು ಅದು ಚಾಲ್ತಿಯಲ್ಲಿದೆ. ಈಗ ಆತ ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದು ಅನಿವಾಸಿ ಭಾರತಿಯನಾಗಿದ್ದಾನೆ (ಎನ್​ಆರ್​ಐ). ಮೆಚ್ಯೂರಿಟಿ ತನಕ ಪಿಪಿಎಫ್ ಅಕೌಂಟ್ ಮುಂದುವರಿಸಬಹುದೇ? ಅಥವಾ ಈಗಲೇ ಮುಚ್ಚಬೇಕೇ? ಮಾಹಿತಿ ನೀಡಿ.

    | ಬಿಕೆಎಸ್ ಶಾಸ್ತ್ರಿ ಬೆಂಗಳೂರು

    ನಿಮ್ಮೆದುರು ಎರಡು ಆಯ್ಕೆಗಳಿವೆ. ಆಯ್ಕೆ 1- ಎನ್​ಆರ್​ಐಗಳು ಪಿಪಿಎಫ್ ಖಾತೆ ತೆರೆಯುವಂತಿಲ್ಲ. ಆದರೆ ನಿಮ್ಮ ಮಗ 5 ವರ್ಷಗಳ ಹಿಂದೆ ಪಿಪಿಎಫ್ ಖಾತೆ ಆರಂಭಿಸಿದ್ದು, ಒಂದು ವರ್ಷದ ಹಿಂದಷ್ಟೇ ಜರ್ಮನಿಯಲ್ಲಿ ವಾಸಿಸುತ್ತಿರುವುದರಿಂದ ಖಂಡಿತ ಮೆಚ್ಯೂರಿಟಿವರೆಗೆ ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮುಂದುವರಿಸಬಹುದು. ಪಿಪಿಎಫ್​ನಲ್ಲಿನ ಹೂಡಿಕೆಗೆ ಈ ಮೊದಲು ಸಿಗುತ್ತಿದ್ದ ಬಡ್ಡಿ ದರವೇ ಸಿಗಲಿದೆ. ಆದರೆ 15 ವರ್ಷಗಳ ಬಳಿಕ ಮತ್ತೆ ಪಿಪಿಎಫ್ ಹೂಡಿಕೆ ವಿಸ್ತರಣೆಗೆ ಎನ್​ಆರ್​ಐಗಳಿಗೆ ಅವಕಾಶವಿಲ್ಲ. ಆಯ್ಕೆ 2- ಪಿಪಿಎಫ್ ಖಾತೆ ಆರಂಭಿಸಿದ ಬಳಿಕ ವಿದೇಶದಲ್ಲಿ ವಾಸ ಮಾಡುವ ಸಂದರ್ಭ ಬಂದರೆ ಪಿಪಿಎಫ್ ಖಾತೆಯನ್ನು ಅವಧಿಗೆ ಮುನ್ನ ಮುಚ್ಚಲು ಡಿಸೆಂಬರ್ 2019ರಿಂದ ಅವಕಾಶ ಕಲ್ಪಿಸಲಾಗಿದೆ. ಹೊರದೇಶದಲ್ಲಿರುವವರಿಗೆ ಪಿಪಿಎಫ್ ಖಾತೆಯಲ್ಲಿ ಹಣ ತುಂಬಲು ಕಷ್ಟವಾಗಬಹುದು ಎಂದು ಈ ಆಯ್ಕೆ ನೀಡಲಾಗಿದೆ. ಪಾಸ್​ಪೋರ್ಟ್ ಮತ್ತು ವೀಸಾ, ಐಟಿ ರಿಟರ್ನ್ಸ್ ದಾಖಲೆಗಳನ್ನು ನೀಡಿ ಖಾತೆ ಮುಚ್ಚಬಹುದು. ಆದರೆ ಹೀಗೆ ಅವಧಿಗೆ ಮೊದಲು ಖಾತೆ ಮುಚ್ಚಿದಾಗ ನಿಮಗೆ ಲಭಿಸಿರುವ ಬಡ್ಡಿ ಲಾಭದಲ್ಲಿ ಶೇ 1ರಷ್ಟನ್ನು ಮುರಿದು ಕೊಡಲಾಗುತ್ತದೆ.

    # ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ನಲ್ಲಿ ಸಾಲ ಪಡೆದಿದ್ದೇನೆಂದು ಸಿಬಿಲ್ ರಿಪೋರ್ಟ್​ನಲ್ಲಿದೆ. ಅದು ನನಗೆ ಸಂಬಂಧಿಸಿಲ್ಲ. ಇದನ್ನು ಹೇಗೆ ಸರಿಪಡಿಸಲಿ?

    | ಶಾಸ್ತ್ರಿ ಬಾಗಲಕೋಟೆ

    ಮೊದಲಿಗೆ ಕ್ರೆಡಿಟ್ ರಿಪೋರ್ಟ್​ನಲ್ಲಿ ಯಾವ ತಪ್ಪಿದೆ ಎನ್ನುವ ಮಾಹಿತಿಯನ್ನು ಭರ್ತಿ ಮಾಡಿ ಸಿಬಿಲ್​ನ ಆನ್​ಲೈನ್ ವ್ಯಾಜ್ಯ ಪರಿಹಾರ ವೇದಿಕೆಗೆ ದೂರು ನೀಡಬೇಕು. ಆನ್​ಲೈನ್​ನಲ್ಲಿ ದೂರು ಸಲ್ಲಿಸಿದ ಕೂಡಲೇ ನಿಮಗೆ ವ್ಯಾಜ್ಯ ಪರಿಹಾರ ವೇದಿಕೆಯ ಕಂಪ್ಲೇಂಟ್ ಐಡಿ ನಂಬರ್ ಸಿಗುತ್ತದೆ. ಸಿಬಿಲ್ ನಿಮ್ಮ ಅರ್ಜಿಯನ್ನು ಬ್ಯಾಂಕ್​ಗೆ ಕಳುಹಿಸಿ ಲೋಪಗಳನ್ನು ಸರಿಪಡಿಸುವಂತೆ ಕೋರುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು 30 ದಿನ ಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: ಸಿಬಿಲ್ ಸಹಾಯವಾಣಿ – 02261404300, 02266384600

    ಬೆಂಗಳೂರಿನಲ್ಲಿ ಕಾರ್ಯಾಗಾರ

    ಇಂಡಿಯನ್ ಮನಿ ಡಾಟ್ ಕಾಂ ಸಿಇಒ ಸಿಎಸ್ ಸುಧೀರ್ ಸಾರಥ್ಯದಲ್ಲಿ ಒಂದು ದಿನದ ಫೈನಾನ್ಶಿಯಲ್ ಫ್ರೀಡಂ ಕಾರ್ಯಾಗಾರ ನಡೆಯಲಿದೆ. ಕಾರ್ಯಾಗಾರದಲ್ಲಿ ಹಣಕಾಸು ನಿರ್ವಹಣೆ, ಉಳಿತಾಯ, ಹೂಡಿಕೆ, ತೆರಿಗೆ ನಿರ್ವಹಣೆ ಬಗ್ಗೆ ವಿಸõತವಾಗಿ ತಿಳಿಸಿಕೊಡಲಾಗುತ್ತದೆ. ಪಾಲ್ಗೊಳ್ಳಲು ಇಚ್ಛಿಸುವವರು 8655097256 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿ.

    ಮಾರ್ಚ್ 31ರ ಒಳಗಾಗಿ ಮಾಡಬೇಕಿರುವ ಕೆಲಸಗಳು

    • ಪ್ಯಾನ್ ಕಾರ್ಡ್ ಅನ್ನು ಆಧಾರ್​ಗೆ ಲಿಂಕ್ ಮಾಡಿ
    • ಪ್ರಧಾನಮಂತ್ರಿ ವಯ ವಂದನಾ ಯೋಜನೆಗೆ ಮಾರ್ಚ್ 31 ಕಡೇ ದಿನ
    • ತಡವಾಗಿ ರಿಟರ್ನ್ ಸಲ್ಲಿಸಲು ಮಾ. 31 ಕಡೇ ದಿನ
    • ಪಿಎಂಎವೈ ಸಬ್ಸಿಡಿ ಎಂಐಜಿ-1, ಎಂಐಜಿ-2 ಕ್ಯಾಟಗರಿಯಲ್ಲಿ ಸಬ್ಸಿಡಿ ಪಡೆಯಲು ಮಾ. 31 ಕಡೇ ದಿನ

    ನೀವೂ ಪ್ರಶ್ನೆ ಕೇಳಬಹುದು

    ಮನಿ ಮಾತು ಅಂಕಣದಲ್ಲಿ ಆರ್ಥಿಕ ವಿಚಾರಗಳ ಬಗ್ಗೆ ಮಾಹಿತಿ ವಿಶ್ಲೇಷಣೆಗಳನ್ನು ನೀಡುವುದು ಮಾತ್ರವಲ್ಲ, ಓದುಗರ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಾಗುತ್ತದೆ. ಹೂಡಿಕೆ, ಉಳಿತಾಯ, ತೆರಿಗೆ, ವಿಮೆ, ಷೇರು ಮಾರುಕಟ್ಟೆ – ಹೀಗೆ ವಿತ್ತರಂಗಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕಳುಹಿಸಬಹುದು. ನಮ್ಮ ತಜ್ಞರ ತಂಡದವರು ಉತ್ತರ ನೀಡುತ್ತಾರೆ. ಪ್ರಶ್ನೆ ಕಳಿಸುವವರು ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ನಮೂದಿಸಿ. ಪ್ರಶ್ನೆ ಕಳಿಸಬೇಕಾದ ಇಮೇಲ್: [email protected]

    ಇಟಲಿಯಲ್ಲಿ ಕರೊನಾ ಅಟ್ಟಹಾಸ:ವೈರಸ್​ನಿಂದ ವಿಶ್ವದಲ್ಲೇ ಹೆಚ್ಚು ಸಾವು ದಾಖಲಾದ ದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts