More

    ಸಂಪಾದಕೀಯ: ಪೂರ್ವತಪಾಸಣೆಯೇ ಮದ್ದು

    ಭಾರತದಲ್ಲಿ ಸಾರ್ವಜನಿಕರ ಒಟ್ಟಾರೆ ಆರೋಗ್ಯ ಪರಿಸ್ಥಿತಿ ಹದಗೆಡುತ್ತಿರುವ ಆತಂಕಕಾರಿ ವಿಷಯವನ್ನು ಇತ್ತೀಚಿನ ವೈಜ್ಞಾನಿಕ ಅಧ್ಯಯನವೊಂದು ಬಹಿರಂಗಪಡಿಸಿದೆ. ಇದರಲ್ಲಿ ಕ್ಯಾನ್ಸರ್ ಮತ್ತು ಇತರ ಸಾಂಕ್ರಾಮಿಕವಲ್ಲದ ರೋಗಗಳ ಬೆಳವಣಿಗೆಯ ಪ್ರಮಾಣ ದೊಡ್ಡದಿದೆ. ಭಾರತವನ್ನು ‘ಕ್ಯಾನ್ಸರ್ ಕ್ಯಾಪಿಟಲ್ ಆಫ್ ವರ್ಲ್್ಡ ಎಂದೇ ಜಗತ್ತಿನಾದ್ಯಂತ ಬಣ್ಣಿಸಲಾಗುತ್ತಿದೆ. ಪ್ರತಿ ವರ್ಷ ಭಾರತದಲ್ಲಿ 10 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿದ್ದರೂ ಈ ಪ್ರಮಾಣ ಅಮೆರಿಕ, ಡೆನ್ಮಾರ್ಕ್, ಐರ್ಲೆಂಡ್, ಬೆಲ್ಜಿಯಂಗಿಂತ ಕಡಿಮೆಯೇ. ಅಮೆರಿಕದಲ್ಲಿ ಪ್ರತಿ 1 ಲಕ್ಷ ಜನರಲ್ಲಿ 300 ಜನರಿಗೆ ಕ್ಯಾನ್ಸರ್ ಇದ್ದರೆ ಭಾರತದಲ್ಲಿ ಪ್ರತಿ 1 ಲಕ್ಷ ಜನರಲ್ಲಿ 100 ಜನರಿಗೆ ಇದೆ. ಆದರೆ ಭಾರತದಲ್ಲಿ ಪರಿಸ್ಥಿತಿ ತೀವ್ರ ಗತಿಯಲ್ಲಿ ಅಪಾಯಕಾರಿ ದಿಸೆಯತ್ತ ಸಾಗುತ್ತಿದೆ ಎಂಬುದು ಚಿಂತೆಗೆ ಕಾರಣವಾಗಿರುವ ಅಂಶ. ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 2020ರಲ್ಲಿ 1.39 ದಶಲಕ್ಷ ಇದ್ದದ್ದು 2025ರ ವೇಳೆಗೆ 1.57 ದಶಲಕ್ಷಕ್ಕೆ ಏರಲಿದೆ. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಸಾಮಾನ್ಯವಾಗಿವೆ. ಪುರುಷರಲ್ಲಿ ಶ್ವಾಸಕೋಶ, ಬಾಯಿ, ಪ್ರೋಸ್ಟೇಟ್ ಕ್ಯಾನ್ಸರ್ ಸಾಮಾನ್ಯವಾಗಿವೆ. ಜಾಗತಿಕ ಮಟ್ಟದಲ್ಲಿ ಕ್ಯಾನ್ಸರ್ ಪ್ರಮಾಣ ಮಹಿಳೆಯರಿಗಿಂತ ಪುರುಷರಲ್ಲಿ ಶೇಕಡ 25ರಷ್ಟು ಜಾಸ್ತಿ. ಆದರೆ ಭಾರತದಲ್ಲಿ ಹೀಗಿಲ್ಲ. ಇಲ್ಲಿ ಮಹಿಳೆಯರಲ್ಲೇ ಹೆಚ್ಚು. ವಿಶ್ವಾದ್ಯಂತ ಕಾಡುತ್ತಿರುವ ಸ್ತನ ಕ್ಯಾನ್ಸರ್ 2040ರ ವೇಳೆಗೆ ಜಗತ್ತಿನಾದ್ಯಂತ 10 ಲಕ್ಷ ಮಹಿಳೆಯರನ್ನು ಬಲಿ ಪಡೆಯಬಹುದೆಂದು ಲ್ಯಾನ್ಸೆಟ್ ಆಯೋಗ ವರದಿ ನೀಡಿದೆ. ಇತರ ದೇಶಗಳಿಗಿಂತ ಕಡಿಮೆ ವಯಸ್ಸಿನಲ್ಲೇ ಭಾರತೀಯರಿಗೆ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿರುವುದು ಕೂಡ ಗಮನಿಸಬೇಕಾದ ವಿಷಯವೇ.

    ಇದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದು ಲೈಫ್​ಸ್ಟೈಲ್ ಮತ್ತು ಆಹಾರಪದ್ಧತಿ. ಭಾರತದಲ್ಲಿ ಶೇಕಡ 40ರಷ್ಟು ಕ್ಯಾನ್ಸರ್ ಪ್ರಕರಣಗಳು ತಂಬಾಕು ಸೇವನೆಗೆ ಸಂಬಂಧಿಸಿವೆ. ಇದರಿಂದ ಶ್ವಾಸಕೋಶ, ಬಾಯಿ, ಗಂಟಲು ಕ್ಯಾನ್ಸರ್ ಉಂಟಾಗುತ್ತದೆ. ಕಳಪೆ ಆಹಾರ ಮತ್ತು ದೈಹಿಕ ಚಟುವಟಿಕೆಯ ಕೊರತೆ ಶೇಕಡ 10ರಷ್ಟು ಪ್ರಕರಣಗಳಿಗೆ ಕಾರಣವಾಗುತ್ತಿವೆ. ಇದಕ್ಕೆ ಪರಿಣತ ವೈದ್ಯರು ಹಲವು ಪರಿಹಾರಗಳನ್ನು ಸೂಚಿಸುತ್ತಾರೆ. ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಬಾಯಿ, ಸ್ತನ, ಗರ್ಭಕಂಠದ ತಪಾಸಣೆಗೆ ಭಾರತದಲ್ಲಿ ಸಾಕಷ್ಟು ವ್ಯವಸ್ಥೆಯನ್ನು ಸರ್ಕಾರ ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳು ಮಾಡಿವೆ. ಆದರೆ ತಪಾಸಣೆಯ ಪ್ರಮಾಣ ಕೇವಲ ಶೇಕಡ 1ರಷ್ಟಿದೆ ಎಂಬುದು ನಾಚಿಕೆಗೇಡಿನ ಸಂಗತಿ. ಯಾವುದೇ ಕ್ಯಾನ್ಸರ್ ಇದ್ದರೂ ಮೊದಲ ಹಂತದಲ್ಲಿ ಪತ್ತೆಯಾದರೆ ಗುಣವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ತಡವಾದಷ್ಟೂ ಗುಣವಾಗುವ ಸಾಧ್ಯತೆ ಕ್ಷೀಣಿಸುತ್ತದೆ. ಈ ವಿಷಯವನ್ನು ವೈದ್ಯರು ಮತ್ತು ಮಾಧ್ಯಮಗಳು ಹಲವಾರು ಸಂದರ್ಭಗಳಲ್ಲಿ ಪ್ರಸ್ತುತಪಡಿಸುತ್ತಿದ್ದರೂ ಸಾರ್ವಜನಿಕರು ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂಬುದಕ್ಕೆ ಪೂರ್ವತಪಾಸಣೆಯ ಪ್ರಮಾಣ ಕೇವಲ ಶೇಕಡ 1ರಷ್ಟಿರುವುದೇ ಸಾಕ್ಷಿಯಾಗಿದೆ. ಜನರಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಆಗಬೇಕಿದೆ. ಮಾತ್ರವಲ್ಲದೇ ಆರೋಗ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಸ್ವಯಂ ಸೇವಾ ಸಂಸ್ಥೆಗಳು ಸಮರೋಪಾದಿಯಲ್ಲಿ ಈ ಕಾರ್ಯವನ್ನು ಪೂರೈಸುವ ಹೊಣೆ ಹೊತ್ತುಕೊಳ್ಳಬೇಕಿದೆ.

    ಬಾಲಕಿ ಅಪಹರಿಸಿ ಜಮೀನು ಬರೆಸಿಕೊಂಡ ಡಿಕೆ ಶಿವಕುಮಾರ್: ಮಾಜಿ ಪ್ರಧಾನಿ ದೇವೇಗೌಡ ಗಂಭೀರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts