More

    ಬಾಲಕಿ ಅಪಹರಿಸಿ ಜಮೀನು ಬರೆಸಿಕೊಂಡ ಡಿಕೆ ಶಿವಕುಮಾರ್: ಮಾಜಿ ಪ್ರಧಾನಿ ದೇವೇಗೌಡ ಗಂಭೀರ ಆರೋಪ

    ಮೂಡಿಗೆರೆ: ಜಮೀನಿಗಾಗಿ ಸುಳ್ಳು ಕ್ರಯಪತ್ರ ಸೃಷ್ಟಿಸಿ ಬಾಲಕಿಯನ್ನು ಅಪಹರಣ ಮಾಡಿ ಡಿಸಿಎಂ ಡಿ.ಕೆ.ಶಿವಕುಮಾರ್ ಜಮೀನು ಬರೆಸಿಕೊಂಡಿದ್ದರು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಗಂಭೀರ ಆರೋಪ ಮಾಡಿದರು.

    ಬಿಜೆಪಿ-ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ಅಮೆರಿಕದಲ್ಲಿ ನೆಲೆಸಿರುವ ಗಂಗಮ್ಮ ತಿಮ್ಮಯ್ಯ ಎಂಬುವರ ಜಮೀನು ಬೆಂಗಳೂರಿನ ಬಿಡದಿಯಲ್ಲಿತ್ತು. ಜಮೀನಿನ ಸಂಬಂಧವಾಗಿ ಡಿ.ಕೆ.ಶಿವಕುಮಾರ್ ಸುಳ್ಳು ಕ್ರಯಪತ್ರ ತಯಾರಿಸಿದ್ದರು. ಗಂಗಮ್ಮ ತಿಮ್ಮಯ್ಯ ಆರಂಭದಲ್ಲಿ ಹೈಕೋರ್ಟ್ ಮೆಟ್ಟಿಲೇರಿದರು. ಬಳಿಕ ಸುಪ್ರೀಂಕೋರ್ಟ್​ನಲ್ಲಿ ದಾವೆ ಹೂಡಿ ಜಯ ಗಳಿಸಿದರು. ಇದರಿಂದ ಡಿ.ಕೆ.ಶಿವಕುಮಾರ್​ಗೆ ಮುಖಭಂಗವಾಯಿತು. ಆಗ ಜಮೀನು ಮಾಲೀಕರ 9 ವರ್ಷದ ಮಗಳನ್ನು ಅಪಹರಿಸಿ ಕಣ್ಣಿಗೆ ಬಟ್ಟೆ ಕಟ್ಟಿ ಗೃಹಬಂಧನದಲ್ಲಿರಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಮಗಳು ಬೇಕಿದ್ದರೆ ಜಮೀನು ನನ್ನ ಹೆಸರಿಗೆ ಬರೆದುಕೊಡು ಎಂದು ದುಂಬಾಲು ಬಿದ್ದರು. ಜಮೀನು ಮಾಲೀಕರು ವಿಧಿಯಿಲ್ಲದೆ ಜಮೀನು ಬರೆದುಕೊಟ್ಟು ಮಗಳನ್ನು ಕರೆದೊಯ್ದರು ಎಂದು ಮಾಹಿತಿ ನೀಡಿದರು. ಜಮೀನಿನ ಬಾಬ್ತು ಡಿ.ಕೆ.ಶಿವಕುಮಾರ್ ನೀಡಿದ 16 ಲಕ್ಷ ರೂ. ಮತ್ತು 4 ಲಕ್ಷ ರೂ. ಮೊತ್ತದ ಎರಡು ಚೆಕ್ ಬೌನ್ಸ್ ಆದವು. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನು ಉಳಿಸುವುದಿಲ್ಲ ಎಂದು ಬೆದರಿಕೆಯನ್ನೂ ಹಾಕಿದರು. ಮಗಳ ಅಪಹರಣದ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಸ್ಥಳೀಯರು ಹೇಳಿದರೂ ಜಮೀನು ಮಾಲೀಕರು ಒಪ್ಪಲಿಲ್ಲ. ನಾವು ಬೆಂಗಳೂರಿನ ಮತದಾರರಲ್ಲ. ಹಾಗಾಗಿ ನಮಗೆ ರಕ್ಷಣೆ ಇಲ್ಲ ಎಂದು ಹೇಳಿಹೋದರು. ಇದರ ಸಂಪೂರ್ಣ ದಾಖಲೆಯನ್ನು ವಕೀಲರೊಬ್ಬರು ನನಗೆ ನೀಡಿದ್ದಾರೆ. ಚುನಾವಣೆ ವೇಳೆ ಇದನ್ನು ಬಳಸಿಕೊಳ್ಳುವಂತೆಯೂ ತಿಳಿಸಿದ್ದಾರೆ. ನನ್ನ ಬಳಿ ಸಂಪೂರ್ಣ ದಾಖಲೆ ಇದೆ ಎಂದು ಮಾಜಿ ಪ್ರಧಾನಿ ವಿವರಿಸಿದರು.

    ಗ್ಯಾರಂಟಿಯಿಂದ ದಿವಾಳಿ: ಕಾಂಗ್ರೆಸ್​ನ 5 ಗ್ಯಾರಂಟಿಯಿಂದ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. 136 ಶಾಸಕರ ಪೈಕಿ 94 ಮಂದಿಗೆ ನಿಗಮ-ಮಂಡಳಿ ಹಾಗೂ ಸಚಿವ ಸ್ಥಾನ ನೀಡಿ ಆರ್ಥಿಕ ದಿವಾಳಿಗೆ ಸಿಎಂ ಸಿದ್ದರಾಮಯ್ಯ ಇನ್ನಷ್ಟು ಪುಷ್ಟಿ ನೀಡಿದ್ದಾರೆ ಎಂದು ದೇವೇಗೌಡ ವಾಗ್ದಾಳಿ ನಡೆಸಿದರು. ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ ಆರ್ಥಿಕ ಸಂಕಷ್ಟ ಅನುಭವಿಸಿ ಪಿಯರ್​ಲೆಸ್ ಕಂಪನಿಯಿಂದ 180 ಕೋಟಿ ರೂ. ಸಾಲ ಪಡೆದಿದ್ದರು. 1994ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ ಸಾಲವನ್ನು ಸಂಪೂರ್ಣ ತೀರಿಸಿ ಬೊಕ್ಕಸ ತುಂಬಿಸಿದ್ದೆ. ಆಗ ಎಲ್ಲ ಶಾಸಕರಿಗೂ ಅಧಿಕಾರ ನೀಡಲು ಅವಕಾಶವಿದ್ದರೂ ನಾನು ಅಧಿಕಾರ ನೀಡಲಿಲ್ಲ. ಈಗ ಎಲ್ಲ ಶಾಸಕರಿಗೂ ಅಧಿಕಾರ ನೀಡಲು ಅವಕಾಶ ಇಲ್ಲದಿದ್ದರೂ ಸಿದ್ದರಾಮಯ್ಯ, ನಿಗಮ-ಮಂಡಳಿಯಲ್ಲಿ ಸಂಪುಟ ದರ್ಜೆ ಸ್ಥಾನಮಾನ ನೀಡಿ ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ ಎಂದರು.

    ಉತ್ತರಪ್ರದೇಶದಲ್ಲಿ ಜವಾಹರಲಾಲ್ ನೆಹರು 16 ವರ್ಷ, ಇಂದಿರಾ ಗಾಂಧಿ 17 ವರ್ಷ, ರಾಜೀವ್ ಗಾಂಧಿ 6 ವರ್ಷ ಸಂಸದರಾಗಿದ್ದರು. ಈಗ ಗಾಂಧಿ ಕುಟುಂಬವನ್ನು ಉತ್ತರ ಪ್ರದೇಶದಿಂದಲೇ ಹೊರಹಾಕಲಾಗಿದೆ. ಸೋನಿಯಾ ಗಾಂಧಿ ರಾಜಸ್ಥಾನದಿಂದ ರಾಜ್ಯಸಭೆಗೆ, ರಾಹುಲ್ ಗಾಂಧಿ ಕೇರಳದಿಂದ ಲೋಕಸಭೆಗೆ ಹೋಗಬೇಕಾಯಿತು.


    | ಎಚ್.ಡಿ. ದೇವೇಗೌಡ ಮಾಜಿ ಪ್ರಧಾನಿ

     

    ಶ್ರೀರಾಮನವಮಿ ಆಚರಿಸಿ ಹೋಗುತ್ತಿದ್ದವರನ್ನ ಅಡ್ಡಗಟ್ಟಿ ಅನ್ಯಕೋಮಿನ ಯುವಕರಿಂದ ಬೆದರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts