More

    ಚುರುಕಾಗಲಿದೆ ಪೂರ್ವ ಮುಂಗಾರು, ಸಂಜೆ ವೇಳೆ ಗುಡುಗು ಸಹಿತ ಮಳೆ ಖಚಿತ

    ಭರತ್ ಶೆಟ್ಟಿಗಾರ್ ಮಂಗಳೂರು
    ಮಕರ ಸಂಕ್ರಾತಿ ಬಳಿಕ ಉತ್ತರಾರ್ಧಗೋಳದತ್ತ ಸೂರ್ಯನ ಚಲನೆ ಆರಂಭವಾಗುತ್ತಿದ್ದಂತೆ, ಎಲ್ಲೆಡೆ ನಿಧಾನವಾಗಿ ಏರಲಾರಂಭಿಸಿದ ಸೆಕೆ ಪ್ರಸ್ತುತ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರಿಂದಾಗಿ ನಿರೀಕ್ಷೆಯಂತೆ ಕರ್ನಾಟಕದ ಕರಾವಳಿ ಸೇರಿದಂತೆ ದೇಶದ ಹಲವೆಡೆ ಪೂರ್ವ ಮುಂಗಾರು ಮಳೆ ಚುರುಕು ಪಡೆಯಲಿದೆ.

    ಮಾರ್ಚ್‌ನಿಂದ ಮೇ ಅಂತ್ಯದ ವರೆಗಿನ ಅವಧಿಯನ್ನು ಸಾಮಾನ್ಯವಾಗಿ ಪೂರ್ವ ಮುಂಗಾರು ಅವಧಿ ಎನ್ನಲಾಗುತ್ತದೆ. ಪಶ್ಚಿಮ ಮತ್ತು ದಕ್ಷಿಣ ಭಾರತಕ್ಕೆ ಏಪ್ರಿಲ್ ಅತಿ ಹೆಚ್ಚು ತಾಪಮಾನ ದಾಖಲಾಗುವ ಸೆಕೆಯ ತಿಂಗಳಾದರೆ, ಉತ್ತರ ಭಾರತಕ್ಕೆ ಮೇ ತಿಂಗಳು ಹೆಚ್ಚು ತಾಪಮಾನ ದಾಖಲಾಗುವ ತಿಂಗಳು. ತಾಪಮಾನ ಹೆಚ್ಚಳವಾಗುವುದರೊಂದಿಗೆ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಪೂರ್ವ ಮುಂಗಾರು ತನ್ನ ಚಟುವಟಿಕೆ ಆರಂಭಿಸುತ್ತದೆ ಎನ್ನುತ್ತದೆ ಹವಾಮಾನ ಇಲಾಖೆ.

    ಪ್ರಸ್ತುತ ಮಧ್ಯಭಾರತದಲ್ಲಿ ದಿನದ ತಾಪಮಾನ 40 ಡಿಗ್ರಿಯ ಆಸುಪಾಸಿನಲ್ಲಿದ್ದು, ಕರಾವಳಿಯಲ್ಲೂ 36 ಡಿಗ್ರಿ ವರೆಗೆ ಉಷ್ಣಾಂಶ ದಾಖಲಾಗುತ್ತಿದೆ. ವಾತಾವರಣದಲ್ಲಿ ಬಿಸಿ ಹೆಚ್ಚಳದಿಂದ ಸಮುದ್ರದಲ್ಲಿ ನೀರು ಆವಿಯಾಗಿ ದಟ್ಟ ಮೋಡಗಳ ರಚನೆಗೆ ಕಾರಣವಾಗುತ್ತದೆ. ಗಾಳಿಯ ಸಹಾಯದಿಂದ ಇದು ಎಲ್ಲೆಡೆ ಚಲಿಸಿ ಮಳೆ ಸುರಿಯುತ್ತದೆ. ಸಾಮಾನ್ಯವಾಗಿ ಪೂರ್ವ ಮುಂಗಾರಿನಲ್ಲಿ ಗುಡುಗು-ಮಿಂಚು ಅಬ್ಬರ ಹೆಚ್ಚಿರುತ್ತದೆ. ಮಾರ್ಚ್ 21ರಿಂದ ಕೇರಳ, ತಮಿಳುನಾಡು, ದಕ್ಷಿಣ ಮತ್ತು ಕರಾವಳಿ ಕರ್ನಾಟಕ ಭಾಗದಲ್ಲಿ ಪೂರ್ವ ಮುಂಗಾರು ಚಟುವಟಿಕೆ ಚುರುಕುಗೊಳ್ಳುವ ಸಾಧ್ಯತೆಯಿದೆ ಎಂದು ಸ್ಕೈಮೆಟ್ ಹವಾಮಾನ ಸಂಸ್ಥೆ ವರದಿಯಲ್ಲಿ ಉಲ್ಲೇಖಿಸಿದೆ.

    ಈಗಾಗಲೇ ಅಲ್ಲಲ್ಲಿ ಮಳೆ: ಕರಾವಳಿಯ ಅಲ್ಲಲ್ಲಿ ಈಗಾಗಲೇ ಸಾಯಂಕಾಲ ವೇಳೆ ಗುಡುಗು ಸಹಿತ ಮಳೆ ಸುರಿಯುತ್ತಿದೆ. ಪೂರ್ವಮುಂಗಾರಿನಲ್ಲಿ ಮುಖ್ಯವಾಗಿ ಘಟ್ಟದ ತಪ್ಪಲಿನ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಸುಬ್ರಹ್ಮಣ್ಯ, ಕಡಬ, ಬೆಳ್ತಂಗಡಿ, ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ, ಮಾಳ, ಬಜಗೋಳಿ ಆಸುಪಾಸಿನ ಪ್ರದೇಶದಲ್ಲಿ ಮಳೆಯಾಗಿದೆ. ಮುಂದಿನ ದಿನಗಳಲ್ಲೂ ಬಿರುಸಿನ ಮಳೆ ಸುರಿಯುವ ಸಾಧ್ಯತೆಯಿದೆ. ಇದು ಬೇಸಿಗೆಯ ನೀರಿನ ಸಮಸ್ಯೆಯನ್ನೂ ಸ್ವಲ್ಪ ಮಟ್ಟಿಗೆ ದೂರವಾಗಿಸುವ ಜತೆಗೆ, ಸಾಯಂಕಾಲ ತಣ್ಣನೆಯ ವಾತಾವರಣಕ್ಕೂ ಕಾರಣವಾಗಲಿದೆ.

     ವರ್ಷಾರಂಭದಲ್ಲಿ ಉತ್ತಮ ಮಳೆ: ಉಭಯ ಜಿಲ್ಲೆಗಳಲ್ಲಿ ಈ ಬಾರಿ ವರ್ಷಾರಂಭದಲ್ಲಿ ಉತ್ತಮ ಮಳೆ ಸುರಿದಿದೆ. ಜನವರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 4 ಮಿ.ಮೀ. ಮಳೆ ಸುರಿಯಬೇಕಾದಲ್ಲಿ 118 ಮಿ.ಮೀ. ಮಳೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ 2 ಮಿ.ಮೀ. ಮಳೆಯ ಬದಲು 97 ಮಿ.ಮೀ. ಮಳೆ ಸುರಿದಿದೆ. ಫೆಬ್ರವರಿಯಲ್ಲಿ ದ.ಕ 2 ಮಿ.ಮೀ ಸರಾಸರಿಯ ಬದಲು 13 ಮಿ.ಮೀ. ಮಳೆಯಾಗಿದ್ದು, ಉಡುಪಿಯಲ್ಲಿ 18 ಮಿ.ಮೀ. ಮಳೆ ಸುರಿದಿದೆ. ಇಲ್ಲಿವರೆಗೆ ಒಟ್ಟು ತಲಾ 131 ಮತ್ತು 118 ಮಿ.ಮೀ ಮಳೆ ಸುರಿದಿದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿ ತಿಳಿಸಿದೆ.

    ಮಾರ್ಚ್‌ನಿಂದ ಮೇ ವರೆಗೆ ಸುರಿಯುವ ಮಳೆಯೇ ಪೂರ್ವಮುಂಗಾರು. ಪ್ರಸ್ತುತ ಕರಾವಳಿ, ಮಳೆನಾಡು, ಮಹಾರಾಷ್ಟ್ರವರೆಗೂ ವಾತಾವರಣದ ಮೇಲ್ಪದರದಲ್ಲಿ ಟ್ರಫ್ ಹಾಗೂ ವಿಂಡ್ ಡಿಸ್ಕಂಟಿನ್ಯೂವಿಟಿ ಇದ್ದು, ಕೆಲವು ದಿನ ಮಳೆಯಾಗುವ ಸಾಧ್ಯತೆಯಿದೆ. ಬಿಟ್ಟುಬಿಟ್ಟು ಗುಡುಗು-ಮಿಂಚು ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ.
    – ಸುನೀಲ್ ಗಾವಸ್ಕರ್, ಕೆಎಸ್‌ಎನ್‌ಡಿಎಂಸಿ ಹವಾಮಾನ ತಜ್ಞ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts