ಜಿಲ್ಲಾ ಕೇಂದ್ರವನ್ನು ಒಳಗೊಂಡಿರುವ ಮಂಡ್ಯ ಕ್ಷೇತ್ರದಲ್ಲಿ ಈ ಬಾರಿ ಹೊಸಮುಖಗಳ ಅಬ್ಬರವೇ ಜೋರಾಗುವುದು ಖರೆ. ವಯಸ್ಸಿನ ಕಾರಣದಿಂದ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಚುನಾವಣಾ ಕಣದಿಂದ ದೂರ ಉಳಿಯುವುದು ಬಹುತೇಕ ಖಚಿತವಾಗಿದ್ದು, ತಮ್ಮ ಸ್ಥಾನವನ್ನು ಅಳಿಯ, ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್ ಅವರಿಗೆ ಬಿಟ್ಟುಕೊಡಲು ಹಾಗೂ ಅದಕ್ಕಾಗಿ ಜೆಡಿಎಸ್ ಟಿಕೆಟ್ ಕೊಡಿಸಲು ತಂತ್ರಗಾರಿಕೆ ನಡೆಸುತ್ತಿದ್ದಾರೆ. ಆದರೆ, ಅದು ಅಷ್ಟೊಂದು ಸುಲಭವಾಗಿಲ್ಲ. ಕಾರಣ, ‘ನಿತ್ಯ ಸಚಿವ’ ಕೆ.ವಿ.ಶಂಕರಗೌಡರ ಮೊಮ್ಮಗ, ಪಿಇಟಿ ಅಧ್ಯಕ್ಷರೂ ಆದ ಜಿಪಂ ಮಾಜಿ ಸದಸ್ಯ ಕೆ.ಎಸ್.ವಿಜಯಾನಂದ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಇಬ್ಬರೊಟ್ಟಿಗೆ ಮನ್ವುುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಹಾಗೂ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೆ.ರಾಧಾಕೃಷ್ಣ ಕೀಲಾರ, ಉದ್ಯಮಿ ಮಹಾಲಿಂಗೇಗೌಡ ಮುದ್ದನಘಟ್ಟ ಕೂಡ ಟಿಕೆಟ್ಗಾಗಿ ಕಸರತ್ತು ನಡೆಸುತ್ತಿದ್ದಾರೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ, ಸಂಘಟನೆಯನ್ನು ಬಲ ಪಡಿಸಿಕೊಳ್ಳುತ್ತಿರುವ ಬಿಜೆಪಿಯಲ್ಲಿಯೂ ಪ್ರಬಲ ಆಕಾಂಕ್ಷಿಗಳಿದ್ದಾರೆ. ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಪಕ್ಷದ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಜಿಪಂ ಮಾಜಿ ಸದಸ್ಯ ಚಂದಗಾಲು ಶಿವಣ್ಣ, ಇತ್ತೀಚೆಗೆ ಜೆಡಿಎಸ್ ತೊರೆದು ಕಮಲ ಹಿಡಿದಿರುವ ಅಶೋಕ್ ಜಯರಾಂ ಮತ್ತು ಮಾಜಿ ಅಧಿಕಾರಿ ಲಕ್ಷ್ಮೀ ಅಶ್ವಿನ್ಗೌಡ ಕೂಡ ರೇಸ್ನಲ್ಲಿದ್ದಾರೆ. ಇನ್ನು ಕಾಂಗ್ರೆಸ್ನಿಂದ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರವಿಕುಮಾರ್ ಗಣಿಗ ಮತ್ತು ಉದ್ಯಮಿ ರವಿ ಬೋಜೇಗೌಡ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಡಾ.ಕೃಷ್ಣ ಕೈ ಟಿಕೆಟ್ ಆಕಾಂಕ್ಷಿತರು. ಇವರ ನಡುವೆ, ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಅವರನ್ನು ಕರೆತರುವ ಪ್ರಯತ್ನವೂ ನಡೆಯುತ್ತಿದೆ ಎನ್ನುವ ಮಾತುಗಳಿವೆ. ರೈತ ಸಂಘದ ಅಭ್ಯರ್ಥಿಯಾಗಿ ಆರ್ಗ್ಯಾನಿಕ್ ಮಂಡ್ಯದ ಸಂಸ್ಥಾಪಕ ಎಸ್.ಸಿ.ಮಧುಚಂದನ್ ಕಣಕ್ಕಿಳಿಯುವುದು ಪಕ್ಕಾ.