More

    ಸಾಧಕರ ಆತ್ಮವಿಶ್ವಾಸ ಹೆಚ್ಚಿಸುವ ಪ್ರಶಸ್ತಿ: ಹಂಪಿ ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಮತ

    ಮಂಡ್ಯ: ಪ್ರಶಸ್ತಿಗಳು ಸಾಧಕರ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜತೆಗೆ ಆ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡುವುದಕ್ಕೆ ಪ್ರೇರಣೆ ಕೊಡುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.
    ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ ಆಯೋಜಿಸಿದ್ದ ನಂಜಮ್ಮ ಮೋಟೇಗೌಡ ಕೃಷಿ ಪ್ರಶಸ್ತಿ ಹಾಗೂ ಕೆ.ಟಿ.ಶ್ರೀಕಂಠೇಗೌಡ ಶಿಕ್ಷಕ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಕೃಷಿಕ, ಶಿಕ್ಷಕ ಮತ್ತು ಕಾರ್ಮಿಕ ಮೂವರು ಯಾವ ಪ್ರದೇಶದಲ್ಲಿ ಸಂತೃಪ್ತರಾಗಿರುತ್ತಾರೋ, ಆ ಪ್ರದೇಶ ತನ್ನತಾನೆ ಸಾಂಸ್ಕೃತಿಕವಾಗಿ ಅಭಿವೃದ್ದಿ ಹೊಂದುತ್ತದೆ ಎಂದು ಅಭಿಪ್ರಾಯಪಟ್ಟರು.
    ಅತ್ಯಂತ ಪ್ರಧಾನವಾದ ಕ್ಷೇತ್ರ ಕೃಷಿ. ಆದರೆ ಅತ್ಯಂತ ನಿರ್ಲಕ್ಷಕ್ಕೆ ಒಳಗಾದ ಕ್ಷೇತ್ರವೂ ಕೃಷಿ ಕ್ಷೇತ್ರವಾಗಿದೆ. ಇದನ್ನು ಬಹಳ ನೋವಿನಿಂದ ಹೇಳಬೇಕಾಗಿದೆ. ಇಂದು ರೈತ ಏನೇ ಬೆಳೆದರೂ ಕೂಡ ಬೆಲೆ ಸಿಗುತ್ತದೆ ಎಂದು ಪೂರ್ವನಿರ್ಧಾರಿತವಾಗಿ ಇರುವುದಕ್ಕೆ ಸಾಧ್ಯವೇ ಇಲ್ಲ. ಬೆಳೆಯನ್ನು ಸಂತೋಷದಿಂದ ಬೆಳೆಯುತ್ತಾನೆ, ಅಲ್ಲಿ ಹೋಗಿ ದಲ್ಲಾಳಿಗಳ ಕೈಗೆ ಸಿಲುಕಿ ಒದ್ದಾಡುತ್ತಾನೆ. ಕೋಲಾರ ಜಿಲ್ಲೆ ಮುಳಬಾಗಿಲು ಭಾಗದಲ್ಲಿ ಟೊಮ್ಯಾಟೋ ಬೆಳೆದು ಎಷ್ಟೋ ಸಾರಿ ಕೆ.ಜಿ ಗೆ ಒಂದು, 2 ರೂ ನಿಗದಿಯಾಗಿ ಸಾಗಾಟದ ದರವೂ ಕೂಡ ಸಿಗದೆ ರಸ್ತೆಯಲ್ಲೇ ಸುರಿಯವುದನ್ನು ಕಂಡಿದ್ದೇವೆ. ಕೋವಿಡ್-19ರ 2 ವರ್ಷ ಮಾವಿನಹಣ್ಣನ್ನು ಕೊಳ್ಳುವವರು ಇಲ್ಲದೆ ರಸ್ತೆ ಬದಿ ಸುರಿದಿದ್ದನ್ನು ಗಮಿಸಿದ್ದೇವೆ ಎಂದು ವಿಷಾದಿಸಿದರು.
    ಇವತ್ತಿನ ವ್ಯವಸ್ಥೆಯಲ್ಲಿ ಹಗಲು ರಾತ್ರಿ ಸರಿಯಾಗಿ ಕರೆಂಟ್ ಇರಲ್ಲ. ರಾತ್ರಿ ಹೊತ್ತು ಸಿಂಗಲ್ ಫೇಸ್ ಕೊಡುತ್ತಾರೆ. ಆವಾಗ ಮನೆಬಿಟ್ಟು ಬ್ಯಾಟರಿ ಬೆಳಕಲ್ಲಿ ಹುಳ ಉಪ್ಪಟ್ಟೆಗಳಿಂದ ಕಚ್ಚಿಸಿಕೊಂಡು ಕಷ್ಟಪಟ್ಟು ನೀರು ಹಾಯಿಸಿ ಏನೋ ಮಾಡಿ ಬೆಳೆ ಬೆಳೆಯುತ್ತಾರೆ. ಆದರೆ ಬೆಲೆ ಕುಸಿತದ ಭೂತವನ್ನು ರೈತ ಎದುರಿಸಬೇಕಾಗುತ್ತದೆ. ಕೃಷಿ ಇಲ್ಲದೆ ನಮ್ಮ ಬದುಕು ನಿರಾಂತಕವಾಗಿ ಸಾಗುವುದೇ ಇಲ್ಲ. ಆದರೆ ಅದಕ್ಕೆ ನಾವು ಯಾವುದೇ ಪ್ರಾಧಾನ್ಯತೆ ಕೊಟ್ಟಿಲ್ಲ. ಇಂದು ಕೃಷಿಕ ಪ್ರಶಸ್ತಿಗಳು ರೈತರ ಹೃದಯದಲ್ಲಿ ಒಂದು ಸಣ್ಣ ಬೆಳಕಿನ ಕಿಡಿಯನ್ನು ಹೊತ್ತಿಸಿದರೆ ಅಷ್ಟೇ ಸಾಕು ಎಂದು ನಾನು ಭಾವಿಸಿದ್ದೇನೆ. ನಿಜವಾಗಲು ಪ್ರಶಸ್ತಿಗಳು ಸಾಧಕರಿಗೆ ಪ್ರೇರಣೆ ನೀಡುತ್ತವೆ ಎಂದು ತಿಳಿಸಿದರು.
    ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಸಂಘ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ವಿಧಾನ ಪರಿಷತ್ ಸದಸ್ಯ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಕೆ.ಟಿ.ಶ್ರೀಕಂಠೇಗೌಡ ಅವರು ತಮ್ಮ ತಂದೆ ತಾಯಿ ಅವರ ಹೆಸರಿನಲ್ಲಿ ಕೃಷಿ ಮತ್ತು ತಮ್ಮ ಹೆಸರಿನಲ್ಲಿ ಇಬ್ಬರಿಗೆ ಶಿಕ್ಷಕ ಪ್ರಶಸ್ತಿಗಳನ್ನು ನೀಡಲು ಸಂಕಲ್ಪಿಸಿ ಒಂದಿಷ್ಟು ಇಡಿಗಂಟನ್ನು ಬ್ಯಾಂಕ್‌ನಲ್ಲಿಟ್ಟಿದ್ದಾರೆ. ಬಂದ ಬಡ್ಡಿಹಣದಲ್ಲಿ ಕರ್ನಾಟಕ ಸಂಘದ ಮೂಲಕ ಪ್ರಶಸ್ತಿಗಳನ್ನು ನೀಡುತ್ತಿದ್ದಾರೆ ಎಂದು ನುಡಿದರು.
    ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ವಿಶ್ರಾಂತ ಪ್ರಾಚಾರ್ಯ ಡಾ.ಎಸ್.ಬಿ.ಶಂಕರಗೌಡ, ಜಾನಪದ ತಜ್ಞೆ ಡಾ.ಕೆಂಪಮ್ಮ, ಸಂಘದ ಪದಾಧಿಕಾರಿಗಳಾದ ಲೋಕೇಶ್ ಚಂದಗಾಲು, ಮೋಹನ್‌ಕುಮಾರ್ ಇತರರಿದ್ದರು.
    ಇದೇ ವೇಳೆ ಮದ್ದೂರು ತಾಲೂಕು ಕೆರೆಮೇಗಲದೊಡ್ಡಿ ಗ್ರಾಮದ ನಂದಿನಿ ಅವರಿಗೆ ನಂಜಮ್ಮ ಮೋಟೆಗೌಡ ಕೃಷಿ ಪ್ರಶಸ್ತಿ, ಹಾಸನದ ಸುಜಲ ಕೋಚಿಂಗ್ ಸೆಂಟರ್‌ನ ಸ್ಥಾಪಕ ಡಾ.ಎನ್.ಲೋಕೇಶ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕು ದಾಸಕೊಂಡಿಯ ಮಹಮದ್ ಆಶ್ರಪ್‌ಗೆ ಕೆ.ಟಿ.ಶ್ರೀಕಂಠೇಗೌಡ ಶಿಕ್ಷಕ ಪ್ರಶಸ್ತಿ ಜತೆಗೆ ಮೂವರಿಗೂ ತಲಾ 10 ಸಾವಿರ ರೂ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts