More

    ಜನಪರ ಕೆಲಸಕ್ಕಾಗಿ ಕಾಂಗ್ರೆಸ್ ಗೆ ಅಧಿಕಾರ

    ಚಿಕ್ಕಮಗಳೂರು: ಕಾಂಗ್ರೆಸ್ ಕೇವಲ ರಾಜಕೀಯ ಪಕ್ಷವಲ್ಲ. ದೇಶಕ್ಕಾಗಿ ಹಾಗೂ ಜನರಿಗಾಗಿಯೇ ಇರುವ ಪಕ್ಷ ಕಾಂಗ್ರೆಸ್. ದೇಶದಲ್ಲಿ ಜನಪರ ಕಾರ್ಯಕ್ರಮಗಳನ್ನು ರೂಪಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

    ತಾಲೂಕಿನ ಜೋಳದಾಳು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಬಿಜೆಪಿ ಶಾಸಕರನ್ನು ಮನೆಗೆ ಕಳುಹಿಸಿದ್ದೇವೆ. ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಂಸದರರನ್ನು ಮನೆಗೆ ಕಳುಹಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
    ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ದ್ವೇಷದ ರಾಜಕಾರಣ ನಡೆಯುತ್ತಿದೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ದ್ವೇಷದ ರಾಜಕಾರಣವನ್ನು ಕೊನೆಗಾಣಿಸಬೇಕಿದೆ. ಸಂವಿಧಾನವನ್ನು ಅಪಾಯದಂಚಿಗೆ ತಳ್ಳಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ಈ ಮೂಲಕ ದೇಶವನ್ನು ಹಾಗೂ ಸಂವಿಧಾನವನ್ನು ಉಳಿಸಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
    ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಬೆಲೆ ಏರಿಕೆ ಮಿತಿಮೀರಿದೆ ಜನ ಜೀವನ ನಡೆಸುವುದೇ ದುಸ್ತರವಾಗಿತ್ತು. ಇದನ್ನು ಮನಗಂಡ ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಜನರ ಬದುಕನ್ನು ಸುಧಾರಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
    ಎಲ್ಲ ಜಾತಿ, ಧರ್ಮದವರು ಅಣ್ಣ ತಮ್ಮಂದಿರಂತೆ ಸಾಮರ್ಥ್ಯದಿಂದ ಬದುಕಬೇಕು. ಅದೇ ರಾಮರಾಜ್ಯ. ನಮ್ಮ ದೇವರನ್ನು ನಾವು ಪೂಜೆ ಮಾಡುವ ಜೊತೆಗೆ ಬೇರೆಯವರ ದೇವರನ್ನು ಗೌರವಿಸಬೇಕು. ಆಗ ಸಮಾಜದಲ್ಲಿ ಸಾಮರಸ್ಯ ತಾನಾಗಿಯೇ ಮೂಡುತ್ತದೆ ಎಂದು ಹೇಳಿದರು.
    ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಪ್ರಸ್ತುತ ನಡೆಯುತ್ತಿರುವುದು ಲೋಕಸಭಾ ಚುನಾವಣೆಯಲ್ಲಿ ಬದಲಿಗೆ ಧರ್ಮಯುದ್ಧ. ಕೇಂದ್ರ ಸರ್ಕಾರದ ಸುಳ್ಳು ಹಾಗೂ ಕಾಂಗ್ರೆಸ್ ಪಕ್ಷದ ಜನಪರ ನಿಲುವುಗಳ ನಡುವೆ ಯುದ್ಧ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬರೀ ಸುಳ್ಳನ್ನೇ ಹೇಳಿಕೊಂಡು ಹತ್ತು ವರ್ಷ ತಳ್ಳಿದ್ದಾರೆ. ಬಡವರ ಉದ್ದಾರಕ್ಕಾಗಿ ಕೇಂದ್ರ ಸರ್ಕಾರ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ ಎಂದು ಕಿಡಿಕಾರಿದರು.
    ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ಬಿಜೆಪಿಯವರು ಕುತಂತ್ರ ತಿಳಿದು ನಾನು ಕಾಂಗ್ರೆಸ್ ಗೆ ಬಂದಿದ್ದೇನೆ. ಬಿಜೆಪಿ ಯುವಕರಲ್ಲಿ ಧರ್ಮದ ಅಮಲು ತುಂಬಿ ಚುನಾವಣೆ ಮಾಡುತ್ತಿದೆ. ಧರ್ಮದ ಆಧಾರದಲ್ಲಿ ಚುನಾವಣೆ ನಡೆಸುವುದನ್ನು ಬಿಟ್ಟರೆ ಅಭಿವೃದ್ಧಿ ವಿಚಾರದಲ್ಲಿ ಚುನಾವಣೆ ನಡೆಸುವುದು ಬಿಜೆಪಿಗೆ ಗೊತ್ತಿಲ್ಲ. ಈ ರೀತಿಯ ಮನಸ್ಥಿತಿಯ ಬಿಜೆಪಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಶಾಸಕಿ ನಯನಾ ಮೋಟಮ್ಮ, ಮಾಜಿ ಶಾಸಕ ಬಿ.ಬಿ.ನಿಂಗಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮತ್ತಿತರರಿದ್ದರು.

    ಐಟಿ, ಇಡಿ, ಸಿಬಿಐ ಕಳುಹಿಸಿ ಚುನಾವಣಾ ಬಾಂಡ್ ಪಡೆಯುವುದೇ ಬಿಜೆಪಿ ಕೆಲಸ. ಚುನಾವಣಾ ಬಾಂಡ್ ನಲ್ಲಿ 7.50 ಸಾವಿರ ಕೋಟಿ ರೂ. ಹಣ ದೋಚಿದ್ದಾರೆ. ಬಿಜೆಪಿ ಶ್ರೀಮಂತರಿಗಾಗಿಯೇ ಹುಟ್ಟಿದ ಪಕ್ಷವೇ ಹೊರತು ಬಡವರ ಪಕ್ಷವಲ್ಲ. ತಾನು ಹಿಂದೂ ಪರ ಎಂದು ಹೇಳಿಕೊಳ್ಳುವ ಬಿಜೆಪಿ ಹಿಂದೂ ರಾಷ್ಟ್ರವಾಗಿರುವ ನೇಪಾಳಕ್ಕೆ ನೀರನ್ನೆ ನೀಡದೆ ದಿಗ್ಬಂದನ ಹೇರಿದೆ. ಇದ್ಯಾವ ರೀತಿಯ ಹಿಂದುತ್ವ.
    ಕೆ.ಜೆ.ಜಾರ್ಜ್, ಇಂಧನ ಸಚಿವ

    ತನ್ನನ್ನು ತಾನು ಬಿಂಬಿಸಿಕೊಳ್ಳಲು ನರೇಂದ್ರ ಮೋದಿ ಅವರು ಯಾವ ರೀತಿಯ ಸುಳ್ಳನ್ನು ಬೇಕಾದರೂ ಹೇಳುತ್ತಾರೆ. ರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಡಿದವರು ಅಡ್ವಾನಿ ಹಾಗೂ ಮುರಳಿ ಮನೋಹರ ಜೋಶಿ. ಆದರೆ ನರೇಂದ್ರ ಮೋದಿ ಅವರು ತಾನೆ ಮಂದಿರ ನಿರ್ಮಾಣ ಮಾಡಿದ್ದು ಎಂದು ಬಿಂಬಿಸಿಕೊಳ್ಳುವ ಮೂಲಕ ಪ್ರಚಾರ ಪಡೆಯುವ ಕೆಲಸ ಮಾಡುತ್ತಿದ್ದಾರೆ.
    ಮೋಟಮ್ಮ, ಮಾಜಿ ಸಚಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts