More

    ವಿದ್ಯುತ್ ಶಾಕ್‌ಗೆ ಬಸಪ್ಪ ಬಲಿ: ಹಲವರ ಪ್ರಾಣ ಕಾಪಾಡಿದ ದೈವ

    ಮಂಡ್ಯ: ತಾಲೂಕಿನ ಬಸರಾಳು ಗ್ರಾಮದ ಮುತ್ತೇಗೆರೆ ರಸ್ತೆಯ ವಾಟರ್ ಟ್ಯಾಂಕ್ ಎದುರು ಸೋಮವಾರ ರಾತ್ರಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ಕಾಲಭೈರವೇಶ್ವರಸ್ವಾಮಿ ಬಸಪ್ಪ ಸ್ಥಳದಲ್ಲೇ ಮೃತಪಟ್ಟಿದೆ.
    ಹತ್ತು ವರ್ಷದ ಹಿಂದೆ ದೇವರಿಗೆ ಬಸವ ಬಿಡಲಾಗಿತ್ತು. ಅಂದಿನಿಂದ ಗ್ರಾಮಸ್ಥರ ಮೆಚ್ಚಿನ ಬಸಪ್ಪನಾಗಿ ಬೆಳೆಯುತ್ತಿತ್ತು. ಪ್ರತಿ ಮನೆಯಿಂದಲೂ ಬೆಲ್ಲ, ರಾಗಿಯನ್ನು ಊಟವಾಗಿ ನೀಡುತ್ತಿದ್ದರು. ಯಾವುದೇ ಜಮೀನಿಗೆ ಹೋಗಿ ಮೇವನ್ನು ತಿಂದರೂ ಮಾಲೀಕರು ಕೇಳುತ್ತಿರಲಿಲ್ಲ. ಸಾಧು ಸ್ವಭಾವದ ಬಸಪ್ಪ ತನ್ನ ಪಾಡಿಗೆ ಇರುತ್ತಿತ್ತು. ಇನ್ನು ಇದನ್ನು ‘ಭೈರವೇಶ್ವರನ ಆನೆ’ ಎಂದು ಕರೆಯಲಾಗುತ್ತಿತ್ತು.
    ಇನ್ನು ಸಂಕ್ರಾಂತಿ ಹಬ್ಬ ಗ್ರಾಮದಲ್ಲಿ ಎಲ್ಲ ಜಾನುವಾರುಗಳಿಗಿಂತ ಮೊದಲು ಬಸಪ್ಪನನ್ನು ಕಿಚ್ಚು ಹಾಯಿಸಲಾಗುತ್ತಿತ್ತು. ಇದಕ್ಕಾಗಿ ಒಂದು ದಿನ ಮುಂಚಿತವಾಗಿಯೇ ಹಿಡಿದು ಅಲಂಕಾರ ಮಾಡಲಾಗಿತ್ತು. ಬಸಪ್ಪ ಕೂಡ ಎಲ್ಲರೊಂದಿಗೆ ಹೊಂದಿಕೊಂಡಿತ್ತು. ಆದರೆ ದುರಾದೃಷ್ಟವಶಾತ್ ನಿಂತಿದ್ದ ವೇಳೆ ವಿದ್ಯುತ್ ತಂತಿ ತುಂಡಾಗಿ ಬಸಪ್ಪನ ಮೇಲೆ ಬಿದ್ದಿದೆ. ಪರಿಣಾಮ ಕೆಲ ಕ್ಷಣದಲ್ಲೇ ಮೃತಪಟ್ಟಿದೆ.
    ತಪ್ಪಿದ ಅಪಾಯ: ಬಸಪ್ಪ ಕೆಲವೊಮ್ಮೆ ಜನರನ್ನು ಬೆದರಿಸುವ ಘಟನೆಯೂ ನಡೆದಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಬಸಪ್ಪ ಬರುವ ಮುನ್ನ ವಾಟರ್ ಟ್ಯಾಂಕ್ ಎದುರು ಹಲವರು ನಿಂತಿದ್ದರು. ಬಸಪ್ಪ ಬರುವುದನ್ನು ಕಂಡು ಎಲ್ಲರೂ ದೂರಕ್ಕೆ ಹೋದರು. ಇದಾದ ಕೆಲವೊತ್ತಿನಲ್ಲಿಯೇ ವಿದ್ಯುತ್ ತಂತಿ ತುಂಡಾಗಿ ಬಸಪ್ಪನ ತಲೆ ಮೇಲೆಯೇ ಬಿದ್ದಿದೆ. ಇದರಿಂದಾಗಿ ಹಲವರು ಪ್ರಾಣಾಪಾಯದಿಂದ ಪಾರಾದರು. ಅಂತೆಯೇ ಘಟನೆ ಬಳಿಕ ವಿದ್ಯುತ್ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts