More

    ಶ್ರದ್ಧೆ ಎಂಬ ಶಕ್ತಿಯ ಸೆಲೆ ಯಶಸ್ಸಿನ ನೆಲೆ

    ಶ್ರದ್ಧೆ ಎಂಬ ಶಕ್ತಿಯ ಸೆಲೆ ಯಶಸ್ಸಿನ ನೆಲೆಆಂಗ್ಲ ಭಾಷೆಯ ಪ್ರಸಿದ್ಧ ನಾಣ್ಣುಡಿ ಇದು -Success is a matter of laws & not of chance. ಅರ್ಥಾತ್ ಯಶಸ್ಸು ಕೆಲವು ನಿಯಮಗಳನ್ನು ಅವಲಂಬಿಸಿದೆ. ಹಾಗೇ ಸುಮ್ಮನೆ ಬರುವಂಥದ್ದಲ್ಲ. ಯಶಸ್ವಿ ವ್ಯಕ್ತಿಯಾಗ ಬಯಸುವವನು ಈ ನಿಯಮಗಳನ್ನು ತಿಳಿದು, ಪ್ರಯತ್ನದ ತೀವ್ರತೆಯನ್ನು ಜಾಸ್ತಿಗೊಳಿಸುತ್ತಾ, ಛಲದಿಂದ, ಸಿಂಹ ಪರಾಕ್ರಮದಿಂದ ಮುಂದುವರಿಯುತ್ತಾ ಗುರಿಮುಟ್ಟುವವರೆಗೂ ವಿರಮಿಸದೆ ಮುನ್ನಡೆಯುತ್ತಿದ್ದರೆ ಗೆಲುವು ಮತ್ತು ಅದರ ನೇರ ಫಲಗಳಾದ ತೃಪ್ತಿ, ಕೀರ್ತಿಗಳು ಕಟ್ಟಿಟ್ಟ ಬುತ್ತಿ. ಈ ಲಕ್ಷಣಗಳುಳ್ಳವನನ್ನೇ ಭಾರತೀಯ ಸಂಸ್ಕೃತಿ ‘ಧೀರ’ ಎಂದು ಕರೆಯುತ್ತದೆ, ಇಂಥ ಧೀರನಿಂದ ಮಾತ್ರವೇ ಭೋಗಿಸಲ್ಪಡಲು ಇಚ್ಛಿಸುತ್ತಾಳೆ ವಸುಂಧರೆ ಎಂಬ ಮಾತೂ ನಮ್ಮ ಸಂಸ್ಕೃತಿಯದ್ದೇ. ಕನಸುಣಿಗೆ ಮಾತ್ರ ಏನೂ ಸಿಗುವುದಿಲ್ಲ ಅಷ್ಟೇ. ಈ ನಿಯಮಗಳಲ್ಲಿ ಪ್ರಮುಖವಾದದ್ದೇ ಸಾಧಕನಿಗೆ ತಾನು ಕೈಗೊಂಡ ಕಾರ್ಯದಲ್ಲಿ ಅತೀವ ಶ್ರದ್ಧೆ ಇರಬೇಕು ಎನ್ನುವುದು.

    ಭಗವಾನ್ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ‘ಶ್ರದ್ಧೆ’ಯನ್ನು ರಾಜಮಾರ್ಗ ಎಂದು ಕರೆಯುತ್ತಾನೆ – ‘ಶ್ರದ್ಧಾ ಹಿ ಪರಮಾ ಗತಿಃ’. ಯಾವ ಮಾರ್ಗದಲ್ಲಿ ಪ್ರಯಾಣ ಸುಖಕರವೋ, ಆಯಾಸರಹಿತವೋ, ಬೇರೆಲ್ಲಾ ಮಾರ್ಗಗಳಿಗಿಂತ ಹೆಚ್ಚು ಆದ್ಯತೆಯುಳ್ಳದ್ದೋ ಅದನ್ನೇ ‘ರಾಜಮಾರ್ಗ’ ಎನ್ನುವುದು. ಇಡೀ ವ್ಯಕ್ತಿತ್ವವನ್ನೇ ಗುರಿಯೆಡೆಗೆ ತಿರುಗಿಸಿ ಅದರ ಚಿಂತನೆಯಲ್ಲೇ ಓತಪೋ›ತವಾಗಿ ಮುಳುಗುವಂತೆ ಮಾಡಿ, ಅದರಲ್ಲೇ ಮಗ್ನನನ್ನಾಗಿಸುವ ಅದಮ್ಯ ಪ್ರೇರಣೆ, ಉತ್ಸಾಹಗಳನ್ನೇ ಶ್ರದ್ಧೆ ಎಂದು ಕರೆಯುವುದು.

    ಇದನ್ನೂ ಓದಿ: ಕೋವಿಶೀಲ್ಡ್ ಕೊಡಬಾರದಿತ್ತು, ಭಾರತದಲ್ಲಿನ್ನು ವ್ಯಾಕ್ಸಿನ್​ ಅನಗತ್ಯ; ಲಸಿಕೆ ಅಡ್ಡಪರಿಣಾಮಗಳ ಕುರಿತು ದನಿ ಎತ್ತಿದ ಡಾಕ್ಟರ್​

    ಪ್ರತಿ ಮನುಷ್ಯನ ಮನಸ್ಸಿಗೆ ಒಂದು ಲಕ್ಷಣವಿದೆ. ಕೆಲವು ಮಾತುಗಳಿಂದ, ದೃಶ್ಯಗಳಿಂದ, ಘಟನೆಗಳಿಂದ ಅದು ಅದ್ಭುತವಾದ ಪ್ರೇರಣೆ ಪಡೆಯಬಲ್ಲದು, ಸ್ಪೂರ್ತಿ ಹೊಂದಬಲ್ಲದು. ಈ ಪ್ರೇರಣೆ ಸ್ಪೂರ್ತಿಗಳು ವಿದ್ವಂಸಕಾರಿಯಲ್ಲದಿದ್ದಲ್ಲಿ ಯಾರೂ ಇದನ್ನು ಭಂಗಪಡಿಸಬಾರದು. ಶ್ರೀ ರಾಮಕೃಷ್ಣರು ಇದಕ್ಕೆ ಇನ್ನಿಲ್ಲದ ಒತ್ತು ಕೊಡುತ್ತಿದ್ದರು. ಶ್ರದ್ಧೆಯನ್ನು ಮತ್ತಷ್ಟು ತೀವ್ರಗೊಳಿಸಿಕೊಳ್ಳುವಂತೆ ಸರ್ವರೀತಿಯಲ್ಲೂ ಪೋ›ತ್ಸಾಹಿಸಬೇಕು ಎನ್ನುತ್ತಿದ್ದರು. ಶ್ರದ್ಧೆಯ ಬಲವನ್ನು ಸಮರ್ಥಿಸಲು ಅವರು ಕೊಡುತ್ತಿದ್ದ ಹಲವು ಉದಾಹರಣೆಗಳಲ್ಲಿ ಪ್ರಮುಖವಾದದ್ದೇ ಹನುಮಂತ ರಾಮನಾಮದ ಮೇಲಿನ ಶ್ರದ್ಧೆಯಿಂದ ಕೇವಲ ಒಂದು ಸಲ ಅದನ್ನು ಉಚ್ಚರಿಸಿ ಸಮುದ್ರವನ್ನೇ ದಾಟಿಬಿಟ್ಟ ಆದರೆ ಸ್ವಯಂ ರಾಮನೇ ಸೇತುವೆಯನ್ನು ಕಟ್ಟಿ ದಾಟಬೇಕಾಯಿತು ಎನ್ನುವುದು. ಮಾನುಷ ಮನಸ್ಸಿನ ಈ ಸೂಕ್ಷ್ಮ ಲಕ್ಷಣವನ್ನು, ಶ್ರದ್ಧೆ ಎಂಬ ಪ್ರೇರಣೆ ತನ್ನಲ್ಲಿ ಒಡಮೂಡಿದಾಗ ಅದು ಹೇಗೆ ಅದ್ಭುತರೀತಿಯಲ್ಲಿ ತನ್ನ ಶಕ್ತಿ ಸಂವರ್ಧನೆಯನ್ನೇ ಸಾಧಿಸಿಬಿಡುತ್ತದೆ ಎಂಬುದನ್ನು ಗಮನಿಸಿದ ಭಾರತದ ಋಷಿಮುನಿಗಳು ಈ ಶ್ರದ್ಧೆಯನ್ನು ಜಾಗೃತಗೊಳಿಸುವ ಉಪಾಯವನ್ನು ಕಂಡುಹಿಡಿಯದೇ ಉಳಿಯಲಿಲ್ಲ. ಅವರ ಸಂಶೋಧನೆಯ ಪ್ರಕಾರ ಯಾರನ್ನು ಸಂಪೂರ್ಣವಾಗಿ ನಮ್ಮ ಹಿತಚಿಂತಕರು ಎಂದು ನಂಬಿರುತ್ತೇವೋ, ಯಾರನ್ನು ಮಹಾನ್ ಸಾಧಕರು ಎಂದು ಗೌರವಿಸುತ್ತಿರುತ್ತೇವೆಯೋ ಅವರ ಮಾತುಗಳನ್ನು ಸಂಶಯಕ್ಕೆಡೆಯಿಲ್ಲದಂತೆ ಸ್ವೀಕರಿಸುತ್ತೇವೆ. ಇವೆಲ್ಲಕ್ಕಿಂತ ಹೆಚ್ಚಾಗಿ ವ್ಯಕ್ತಿಯೊಬ್ಬ ಮಹಾನ್ ತಪಸ್ವಿ, ಜ್ಞಾನಿ ಮತ್ತು ಲವಲೇಶವೂ ಸ್ವಾರ್ಥವಿಲ್ಲದ ಮಹಾನ್ ತ್ಯಾಗಿ ಎಂದು ಮನಸ್ಸಿಗನ್ನಿಸಿಬಿಟ್ಟರೆ ಅವರ ಮಾತು, ಮಾರ್ಗದರ್ಶನಗಳಲ್ಲಿ ನಮಗೆ ಸಂಶಯವೇ ಮೂಡುವುದಿಲ್ಲ. ಮಗುವಿಗೆ ತಾಯಿಯ ಮಾತಿನಲ್ಲಿ ಅಪಾರಶ್ರದ್ಧೆ, ಎಂದಿಗೂ ಅದನ್ನು ಸಂಶಯಿಸುವುದಿಲ್ಲ; ವಯಸ್ಸಾದಂತೆ ಮೆಚ್ಚಿಕೊಂಡ ಗುರು ಮತ್ತು ಪ್ರಬುದ್ಧನಾದಂತೆ ತಪಸ್ವಿ, ಜ್ಞಾನಿ, ನಿಸ್ವಾರ್ಥಿ ಮಹಾತ್ಮನ ಮಾತುಗಳನ್ನು ಅನುಸರಿಸಲು ಪ್ರಯತ್ನಿಸುತ್ತೇವೆ. ಇಂತಹ ಮಹಾತ್ಮನ ಮಾತುಗಳನ್ನೇ ‘ಶಾಸ್ತ್ರ’ ಎಂದು ಕರೆಯುವುದು. ಅದು ಮಂಕುತಿಮ್ಮನ ಕಗ್ಗ ಆಗಬಹುದು, ಶ್ರೀ ರಾಮಕೃಷ್ಣ ವಚನವೇದ, ಸರ್ವಜ್ಞನ ವಚನಗಳು, ಭಗವದ್ಗೀತೆ ಯಾವುದೂ ಆಗಬಹುದು. ಇದನ್ನೆಲ್ಲಾ ಕ್ರೋಡೀಕರಿಸಿ ಶಂಕರಾಚಾರ್ಯರು ‘ವಿವೇಕಚೂಡಾಮಣೀ’ಯಲ್ಲಿ ಶ್ರದ್ಧೆಯನ್ನು ಈ ರೀತಿ ವ್ಯಾಖ್ಯಾನಿಸುತ್ತಾರೆ.

    ಇದನ್ನೂ ಓದಿ: ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!

    ಶಾಸ್ತ್ರಸ್ಯ ಗುರುವಾಕ್ಯಸ್ಯ ಸತ್ಯಬುದ್ಧಿಃ ಅವಧಾರಣಂ |

    ಸಾ ಶ್ರದ್ಧಾ ಕಥಿತಾ ಸದ್ಭಿಃ ಯಯಾ ವಸ್ತೂಪಲಭ್ಯತೇ ||

    ‘ಶಾಸ್ತ್ರವಾಕ್ಯ, ಗುರುವಾಕ್ಯಗಳ ಬಗ್ಗೆ ಇದು ನೂರಕ್ಕೆ ನೂರು ಸತ್ಯ ಎಂಬ ಯಾವ ಉತ್ಕಟ ನಂಬಿಕೆಯು ವಸ್ತುಲಾಭಕ್ಕೆ ಕಾರಣವಾಗುವುದೋ ಅದನ್ನೇ ಶ್ರದ್ಧೆ ಎನ್ನುವುದು.’

    ಶಂಕರರ ನಾಲ್ಕು ಜನ ಶಿಷ್ಯರಲ್ಲಿ ಸನಂದನ ಒಬ್ಬರು. ನದೀ ದಡದ ಆಚೆಗೆ ಏನೋ ಕೆಲಸದಲ್ಲಿ ಮಗ್ನರಾಗಿದ್ದ ಅವರನ್ನು ಶಂಕರರು ಒಮ್ಮೆ ಯಾವುದೋ ಕಾರಣಕ್ಕಾಗಿ ಬೇಗ ಬಾ ಎಂದು ಕರೆದರು. ಗುರುವಿನ ಧ್ವನಿಯಲ್ಲಿದ್ದ ಕಾತರತೆಯನ್ನು ಗಮನಿಸಿದ ಶಿಷ್ಯ ಪರಿಣಾಮ ಲೆಕ್ಕಿಸದೆ ನದಿ ನೀರಿನ ಮೇಲೆಯೇ ಓಡೋಡುತ್ತ ಧಾವಿಸಿ ಗುರುವನ್ನು ತಲುಪಿದರು. ಈ ಜಗತ್ತಿನಲ್ಲಿ ಮಹಾಶಕ್ತಿಯೊಂದು ನಿರಂತರ ಕಾರ್ಯನಿರತವಾಗಿದೆ, ವಿಚಿತ್ರ ರೀತಿಯಲ್ಲಿ ಅದು ಕಾರ್ಯನಿರ್ವಹಿಸುತ್ತಿರುತ್ತೆ. ಕೈಯಲ್ಲಿ ಬಿಡಿಗಾಸಿಲ್ಲದ ಭಿಕ್ಷುಕ ಸಂನ್ಯಾಸಿ ವಿವೇಕಾನಂದರನ್ನು ಪಶ್ಚಿಮಕ್ಕೆ ಕಳಿಸಿ ಮೂರೂವರೆ ವರ್ಷದಲ್ಲಿ ಅಲ್ಲಿ ಎರಡನೇ ಪುನರುತ್ಥಾನ (reniassence)ವನ್ನೇ ಅವರ ಮೂಲಕ ಮಾಡಿಸಿದ್ದು ಆ ಶಕ್ತಿಯೇ. ಇಂಥ ಹಲವು ಉದಾಹರಣೆಗಳನ್ನು ಕೊಡಬಹುದು. ಇದೇ ಶಕ್ತಿಯೇ ಸನಂದನ ನೀರಿನ ಮೇಲೆ ಧಾವಿಸಿ ಓಡಿಬರುತ್ತಿದ್ದಾಗ ಅವರು ಮುಳುಗದಿರಲೆಂದು ಹೆಜ್ಜೆಯಿಟ್ಟೆಡೆಯೆಲ್ಲಾ ಕಮಲವೊಂದು ಉದ್ಭವಿಸಿ ಆಧಾರ ಕೊಡುವಂತೆ ಮಾಡಿತು. ಪಾದವಿಟ್ಟೆಡೆಯೆಲ್ಲಾ ‘ಪದ್ಮ’ ಮೂಡಿದ್ದನ್ನು ನೋಡಿದ ಶಂಕರರು ಶಿಷ್ಯನಿಗೆ ‘ಪದ್ಮಪಾದ’ ಎಂದು ಹೆಸರಿಟ್ಟರು. ನರಸಿಂಹನನ್ನು ಮುಗ್ಧ ಭಕ್ತಿಯಿಂದ ಒಲಿಸಿಕೊಂಡು ಮುಂದೆ ಕಾಪಾಲಿಕರಿಂದ ಶಂಕರರನ್ನು ರಕ್ಷಿಸಿದ ಪದ್ಮಪಾದಾಚಾರ್ಯರು ಇವರೇ. ಹನುಮಂತನದ್ದು ಭಗವತ್ ಶ್ರದ್ಧೆ. ಭಗವತ್ ಶ್ರದ್ದೆಯೋ ಗುರುವಿನ ಮೇಲಿನ ಶ್ರದ್ಧೆಯೋ ಒಟ್ಟಿನಲ್ಲಿ ಅತೀವ ಶ್ರದ್ಧೆ ನಮ್ಮದಾಗಿಬಿಟ್ಟರೆ ಜೀವನ ಧನ್ಯ. ಅವನೇ ಧೀರರಲ್ಲಿ ಧೀರ ಎಂದು ಶ್ರೀ ರಾಮಕೃಷ್ಣರು ಉದ್ಘೋಷಿಸುತ್ತಾರೆ. ಈ ಶ್ರದ್ಧೆಯನ್ನು ನೂರ್ಮಡಿ, ಸಾಸಿರಮಡಿಗೊಳಿಸಿಕೊಳ್ಳುವಲ್ಲಿ ನಮ್ಮ ನಿರಂತರ ಪ್ರಯತ್ನವೂ ಇರಬೇಕು ಮತ್ತು ಶ್ರದ್ಧೆಗೆ ಭಂಗ ಬರುವ ಯಾವ ಸನ್ನಿವೇಶವನ್ನೂ ನಿರ್ಭಿಡೆಯಿಂದ ದೂರೀಕರಿಸುವ ದಾಷ್ಟರ್್ಯವೂ ನಮ್ಮದಾಗಿರಬೇಕು. ಅದು ಸ್ನೇಹಿತರೇ ಇರಲಿ, ಬಂಧುಗಳೇ ಇರಲಿ! ಮತ್ತೊಬ್ಬರ ಶ್ರದ್ಧೆಗೆ ಭಂಗ ತರಬಾರದೆನ್ನುವ ಸಾಂಸ್ಕೃತಿಕ ಬದ್ಧತೆಯೂ ನಾಗರಿಕ ಸಮಾಜದ ಪ್ರತಿಯೊಬ್ಬರಲ್ಲೂ ಇರಬೇಕು.

    ಇದನ್ನೂ ಓದಿ: ಮಂಡ್ಯದಲ್ಲಿ ಭೀಕರ ಮರ್ಡರ್​: ರುಂಡ ಕತ್ತರಿಸಿ, ಶವ ಪೀಸ್ ಪೀಸ್ ಮಾಡಿ ನಾಲೆಗೆಸೆದ ಹಂತಕರು

    ಇದೇ ಶಾಸ್ತ್ರಗಳು ಪ್ರತಿಯೊಬ್ಬ ಮನುಷ್ಯನ ಆಂತರ್ಯದಲ್ಲಿ ಹುದುಗಿರುವ ಶಕ್ತಿಸಮುದ್ರದ ಕುರಿತು ಕೂಡ ಹೇಳುತ್ತವೆ. ಭಗವತ್​ಶ್ರದ್ಧೆಯ ಇನ್ನೊಂದು ಮುಖವೇ ಆತ್ಮಶ್ರದ್ಧೆ. ಹನುಮಂತನಿಗೆ ರಾಮನಾಮದಲ್ಲಿ ಶ್ರದ್ಧೆ ಮೂಡುವುದಕ್ಕಿಂತ ಮೊದಲು ಜಾಂಬವಂತ ಅವನಲ್ಲಿ ಆತ್ಮಶ್ರದ್ಧೆಯನ್ನು ಬಡಿದೆಬ್ಬಿಸಿದ್ದ. ನಮ್ಮೊಳಗಿನ ಅಪಾರ ಶಕ್ತಿಯನ್ನು ಸಂಶಯಿಸದಿರುವುದೇ ಆತ್ಮಶ್ರದ್ಧೆ. ಉಪನಿಷತ್ತುಗಳಂತೂ ಆತ್ಮಶ್ರದ್ಧೆಗೇ ಹೆಚ್ಚಿನ ಒತ್ತನ್ನು ನೀಡುತ್ತವೆ. ಮಹಾತ್ಮ ನಚಿಕೇತ, ಬೃಹಸ್ಪತಿಯ ಮಗ ಕಚ, ಬ್ರಹ್ಮವಾದಿನಿ ಗಾರ್ಗಿ ಈ ಆತ್ಮಶ್ರದ್ಧೆಗೆ ಮೂರ್ತರೂಪರಾಗಿ ನಿಲ್ಲುತ್ತಾರೆ. ಭಗೀರಥ, ವಿಶ್ವಾಮಿತ್ರ, ವಾಲ್ಮೀಕಿಗಳೂ ಹಿಂದೆ ಸರಿಯುವುದಿಲ್ಲ. ಮನೆಯೊಳಗಿನ ಮತ್ತು ಹೊರಗಿನ ಸೂರ್ಯನ ಬೆಳಕುಗಳು ಒಂದೇ ಎಂಬಷ್ಟು ನಿಚ್ಚಳವಾಗಿದೆ ನಮ್ಮ ಆತ್ಮ ಮತ್ತು ಬ್ರಹ್ಮರ ನಡುವಿನ ಸಂಬಂಧ. ವೇದಾಂತದ ನಾಲ್ಕು ಮಹಾವಾಕ್ಯಗಳಲ್ಲಿ ಮೂರು ಆತ್ಮ-ಬ್ರಹ್ಮರ ಐಕ್ಯವನ್ನು ಕುರಿತೇ ಹೇಳುತ್ತದೆ. ಬ್ರಹ್ಮನಲ್ಲಿ ನಂಬಿಕೆಯಿದ್ದು ಆತ್ಮನನ್ನು ಅರ್ಥಾತ್ ತನ್ನನ್ನು ನಂಬದಿದ್ದಲ್ಲಿ ಅದು ತರ್ಕಾಭಾಸ. ನನ್ನ ಕೈಯಲ್ಲೇನಾಗುತ್ತೆ ಎಂದು ಸಂಶಯಿಸುವುದು ದೈವನಿಂದೆ(Heresy), ಇಡೀ ಉಪನಿಷತ್ ಸಾಹಿತ್ಯ ಒತ್ತು ಕೊಟ್ಟು ಉದ್ಘೋಷಿಸುವುದೇ ‘ಮನುಷ್ಯನೇ ನೀನು ಸರ್ವಜ್ಞ, ಸರ್ವಶಕ್ತಿಮಾನ್, ಅಜರ, ಅಮರ’ ಎಂದು. ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿಯ ಒಂಬತ್ತು ಸಂಪುಟಗಳಲ್ಲಿ ಓತಪೋ›ತವಾಗಿ ಹರಡಿರುವುದೇ ಮಾನುಷ ಶಕ್ತಿಗಳ ಕುರಿತು ಪ್ರಸ್ತಾಪ, ವಿವರಣೆ ಮತ್ತು ಅದನ್ನು ಜಾಗೃತಗೊಳಿಸುವ ಪರಿ. ಅವರ ‘ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ; ಬುದ್ಧಿಶಾಲಿಯೂ ಶಕ್ತಿಶಾಲಿಯೂ ಆದ ದುಷ್ಟನನ್ನಾದರೂ ಮೆಚ್ಚಿಕೊಳ್ಳುತ್ತೇನೆ ಆದರೆ ಬುದ್ಧಿ ಇಲ್ಲದ ಶಕ್ತಿ ಇಲ್ಲದ ಗುಡಿಗುಡಿ ಮನುಷ್ಯನನ್ನಲ್ಲ’ ಎಂಬ ಮಾತುಗಳೆಲ್ಲಾ ಇದರ ಪ್ರತಿಧ್ವನಿಗಳೇ.

    ನಮಗಿಂದು ಬೇಕಿರುವುದು ಶಕ್ತಿ! ಶಕ್ತಿ! ಉಪನಿಷತ್ತುಗಳ ಪ್ರತಿಪುಟಗಳಲ್ಲಿ ಮಾರ್ದನಿಸುವ ಒಂದು ಶಬ್ದವೇ ‘ಅಭೀಃ’- ಭಯಪಡಬೇಡ ಎಂದು. ಏಕೆ? ಹೆದರಬೇಕಾದ ಅವಶ್ಯಕತೆಯೇ ಇಲ್ಲ; ಮೃತ್ಯುವೇ ಇಲ್ಲದ, ಇತಿಮಿತಿಗಳಿಲ್ಲದ, ಯಾವುದನ್ನು ಬೆಂಕಿ ಸುಡಲಾರದೋ, ಕತ್ತಿ ಕತ್ತರಿಸಲಾರದೋ, ಜ್ಞಾನ ವೈಭವ ಪಾವಿತ್ರ್ಯಗಳ ಪಾರವಿಲ್ಲದ ಸಾಗರವೋ ಅದನ್ನು ಹೆದರಿಸುವಂಥದ್ದಾದರೂ ಯಾವುದು?!

    ಇದನ್ನೂ ಓದಿ: ವಿಜ್ಞಾನಿಗಳಿಂದಷ್ಟೇ ಅಲ್ಲ, ಕಾಲಜ್ಞಾನದಲ್ಲೂ ಭೂಕಂಪದ ಎಚ್ಚರಿಕೆ; ದೇಶಕ್ಕೆ ಕಾದಿದ್ಯಾ ಭಾರಿ ಗಂಡಾಂತರ?

    ದುರಂತ ದುರದೃಷ್ಟವೆಂದರೆ ಭಾರತೀಯ ತರುಣ ತರುಣಿಯರಿಗೆ ಇದರ ಬಗ್ಗೆ ಕನಿಷ್ಠ ಜ್ಞಾನವನ್ನೂ ಮೂಡಿಸುವಷ್ಟು ನಾವಿನ್ನೂ ಪ್ರಯತ್ನಮಾಡದಿರುವುದು. ಇದರ ಬಗ್ಗೆ ವಿವೇಕಾನಂದರ ಒತ್ತು ಎಷ್ಟು ಇತ್ತು ಎಂಬುದನ್ನು ‘ನಿಮ್ಮ ಪುರಾಣಗಳಲ್ಲಿನ ಮೂವತ್ತಮೂರು ಕೋಟಿ ದೇವತೆಗಳು, ಹೊರಗಿನವರು ನಿಮಗೆ ಪರಿಚಯಿಸಿದ ಎಲ್ಲಾ ದೇವದೇವತೆಯರಲ್ಲಿ ನಿಮಗೆ ಶ್ರದ್ಧೆ ಇದ್ದು ನಿಮ್ಮಲ್ಲಿ ನಿಮಗೆ ಶ್ರದ್ಧೆ ಇಲ್ಲದಿದ್ದರೆ ನಿಮಗೆ ಯಾವ ಭರವಸೆಯೂ ಇಲ್ಲ’ ಎಂಬ ಮತ್ತು ‘ಜಗತ್ತಿನ ಇತಿಹಾಸವೆನ್ನುವುದು ಆತ್ಮಶ್ರದ್ಧೆಯಿಂದೊಡಗೂಡಿದ ಕೆಲವೇ ವ್ಯಕ್ತಿಗಳ ಇತಿಹಾಸ’ ಎನ್ನುವ ಮಾತುಗಳಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ಉಪನಿಷತ್ತುಗಳು ಸಂಶಯಕ್ಕೆಡೆಯಿಲ್ಲದಂತೆ ‘ನಾನು’ ಎಂದರೆ ಏನು? ಅದರ ಸ್ವಭಾವ ಹೇಗಿದೆ? ಅದರ ಶಕ್ತಿ ಸಾಮರ್ಥ್ಯಗಳು ಎಷ್ಟು ಎಂಬ ವಿವರಣೆಯನ್ನು ನೂರಾರು ಪ್ರಶ್ನೆ ಮರುಪ್ರಶ್ನೆಗಳ ಮೂಲಕ, ಚರ್ಚೆ ತರ್ಕ ಪರೀಕ್ಷೆಗಳ ಮೂಲಕ ನಮ್ಮ ಮುಂದಿಡುತ್ತವೆ. ಆ ‘ನಾನು’ ಎನ್ನುವುದರೊಡನೆ ನಿರಂತರ ನಮ್ಮನ್ನು ಸಮೀಕರಿಸಿಕೊಳ್ಳುವುದೇ ಆತ್ಮಶ್ರದ್ಧೆ. ಆದರೆ ಪ್ರಸ್ತುತ ನಮ್ಮನ್ನು ನಾವು ಸಮೀಕರಿಸಿಕೊಳ್ಳುತ್ತಿರುವುದು ಶರೀರದೊಂದಿಗೆ. ಶರೀರ ನಮಗೆ ಸೇರಿದ ಒಂದು ವಸ್ತು. ಅದೊಂದು ಯಂತ್ರ, ಅತ್ಯಂತ ಉಪಯೋಗಕರವಾದ ಅದ್ಭುತ ಸಂಕೀರ್ಣ ವ್ಯವಸ್ಥೆ, ಯಾವ ಕಾಲಕ್ಕೂ ಅದನ್ನು ಕಡೆಗಣಿಸುವ ಹಾಗಿಲ್ಲ, ಉದಾಸೀನ ಮಾಡುವಹಾಗಿಲ್ಲ. ಹೇಗೆ ಶ್ರದ್ಧೆಯೆನ್ನುವುದು ಅದ್ಭುತ ಶಕ್ತಿಯೊಂದನ್ನು ನಮ್ಮಲ್ಲಿ ಜಾಗೃತಗೊಳಿಸಬಲ್ಲದೋ ಹಾಗೆಯೇ ಯಾವುದರ ಜೊತೆ ನಾವು ಸಮೀಕರಿಸಿಕೊಳ್ಳುತ್ತೇವೆಯೋ (Identification) ಅದು ಕೂಡ ನಮ್ಮಲ್ಲಿ ವಿಶೇಷ ಶಕ್ತಿಯೊಂದನ್ನು ಜಾಗೃತಗೊಳಿಸಬಲ್ಲದು. ಬಡರಾಷ್ಟ್ರದ ವ್ಯಕ್ತಿಯೊಬ್ಬ ಅಮೆರಿಕದೊಡನೆ ಗುರ್ತಿಸಿಕೊಂಡು ಆ ದೇಶದ ಪ್ರಜೆಯಾದಾಗ ಒಮ್ಮೆಲೇ ಅವನ ಶಕ್ತಿ ವಿಶೇಷವಾಗಿ ಸಂವರ್ಧನೆಯಾಗುವಂತೆ. ಅನಾದಿಕಾಲದಿಂದಲೂ ಭಾರತ ಪ್ರಪಂಚಕ್ಕೆ ಮಾಡಿರುವ ಅಸಂಖ್ಯಾತ ಉಪಕಾರಗಳಲ್ಲಿ ಮೇರುಸ್ಥಾನದಲ್ಲಿ ನಿಲ್ಲಬಲ್ಲದ್ದು ‘ಆತ್ಮ’ ಎಂಬ ಅದ್ಭುತ ಶಕ್ತಿಯ ಸೆಲೆಯೊಂದು ಮನುಷ್ಯನಲ್ಲಿ ಅತ್ಯಂತ ಸೂಕ್ಷ್ಮರೂಪದಲ್ಲಿ ಹುದುಗಿದೆಯೆಂದೂ ಮತ್ತು ಅದರೊಡನೆ ನಮ್ಮನ್ನು ಏಕೀಕರಣ ಅಥವಾ ಸಮೀಕರಿಸಿಕೊಳ್ಳುವುದರಿಂದ ಮನುಷ್ಯನ ಎಲ್ಲಾ ದೌರ್ಬಲ್ಯಗಳೂ ಮೂಲೆಗುಂಪಾಗುತ್ತವೆ ಎಂದೂ ಕಂಡುಹಿಡಿದು ಅದನ್ನು ತನ್ನ ನಾಗರಿಕತೆಯ ಮೂಲ ತತ್ವವನ್ನಾಗಿಸಿ ಅದರ ಪರಿಣಾಮವೆಂಬಂತೆ ಪ್ರತೀಕ್ಷೇತ್ರದಲ್ಲೂ ಅದ್ಭುತ ಸಾಧನೆಗಳನ್ನುಗೈದು ವಿಶ್ವವೇ ಇದನ್ನು ಅನುಕರಿಸುವಂತೆ ಮಾಡಿದ್ದು.

    ಈ ಪರಂಪರೆಯನ್ನು ಮತ್ತಷ್ಟು ವೃದ್ಧಿಸಿ, ಪುನರುಜ್ಜೀವಗೊಳಿಸಿದ ಕೀರ್ತಿ ಸಲ್ಲಬೇಕಾದ್ದೇ ಸ್ವಾಮಿ ವಿವೇಕಾನಂದರಿಗೆ. ಹೌದು! ‘ಶ್ರದ್ಧಾ ಹಿ ಪರಮಾ ಗತಿಃ’.

    (ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    ಇದನ್ನೂ ಓದಿ: ಭಾರತದಲ್ಲೂ ಶೀಘ್ರದಲ್ಲೇ ಭಾರಿ ಭೂಕಂಪ ಸಾಧ್ಯತೆ!; ತಜ್ಞರ ಎಚ್ಚರಿಕೆ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts