More

    ವಿರೋಧಾಭಾಸ ತೊರೆಯದೇ ಫ್ರಾನ್ಸ್​ಗೆ ಶಾಂತಿ ಕನಸು

    ಜಗದಗಲಫ್ರಾನ್ಸ್ ಹೊತ್ತಿ ಉರಿಯುತ್ತಿದೆ..
    ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಐದು ಕಾಯಂ ಸದಸ್ಯ ರಾಷ್ಟ್ರಗಳಲ್ಲೊಂದಾದ ಮತ್ತು ಜಗತ್ತಿನ ಐದು ಅಧಿಕೃತ ಅಣ್ವಸ್ತ್ರ ರಾಷ್ಟ್ರಗಳಲ್ಲೊಂದಾದ ಈ ಪಶ್ಚಿಮ ಯೂರೋಪಿಯನ್ ದೇಶ ಹೊತ್ತಿ ಉರಿಯುವುದು ಇದೇ ಮೊದಲಲ್ಲ. ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಎಂಬ ನಾಗರಿಕ ಮಾನವಕುಲದ ಮೂರು ದಾವಿದೀವಿಗೆಗಳಿಂದ 1789ರಲ್ಲಿ ಕ್ರಾಂತಿ ಕಿಡಿ ಹೊತ್ತಿದಾಗಿನಿಂದ ಆ ದೇಶ ಮತ್ತೆ ಮತ್ತೆ ಹೊತ್ತಿ ಉರಿದಿದೆ. 1830 ಮತ್ತು 1848ರಲ್ಲಿ ಮತ್ತೆರಡು ಕ್ರಾಂತಿಗಳು, 1871ರಲ್ಲಿ ಏಕೀಕೃತ ಜರ್ಮನಿಯಿಂದ ಯುದ್ಧದಲ್ಲಿ ಪರಾಭವ, ಪ್ಯಾರಿಸ್ ಕಮ್ಯೂನ್ ಎಂಬ ಹೆಸರಿನಲ್ಲಿ ಜಗತ್ತಿನ ಮೊದಲ ಕಮ್ಯೂನಿಸ್ಟ್ ವ್ಯವಸ್ಥೆಯ ಉದ್ಭವ ಮತ್ತು ಮೂರೇ ತಿಂಗಳಲ್ಲಿ ಪತನ- ಇವೆಲ್ಲವೂ ಫ್ರಾನ್ಸ್ ಅನ್ನು ಸಾಕಷ್ಟು ಉರಿಸಿಯೇ ಇತಿಹಾಸ ಸೇರಿದವು. 1968ರಲ್ಲಿ ವ್ಯಾಪಕ ವಿದ್ಯಾರ್ಥಿ ದಂಗೆಗಳು, 2005ರಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲೆಳಸಿದ ಇಬ್ಬರು ಯುವಕರು ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟದ್ದರ ಪ್ರತಿಕ್ರಿಯೆಯಾಗಿ ಭುಗಿಲೆದ್ದ ಜನಾಂಗೀಯ ಗಲಭೆಗಳು, ಮತ್ತೀಗ ಪೋಲ್ಯಾಂಡ್​ನ ನಂಬರ್ ಪ್ಲೇಟ್ ಇದ್ದ ಕಾರನ್ನು ಬಸ್ ಲೇನ್​ನಲ್ಲಿ ಓಡಿಸುತ್ತಾ, ಟ್ರಾಫಿಕ್ ಪೊಲೀಸರ ಸೂಚನೆಯನ್ನು ಕಡೆಗಣಿಸಿ ಓಡಲೆತ್ನಿಸಿ ಅಲ್ಜೀರಿಯಾ ಮೊರಾಕ್ಕೋ ಮೂಲದ ಹದಿನೇಳು ವರ್ಷದ ನಾಹೇಲ್ ಮೆಝುೂಕ್ ಪೊಲೀಸರ ಗುಂಡಿಗೆ ಬಲಿಯಾಗಿದ್ದಕ್ಕೆ ಪ್ರತಿಕ್ರಿಯೆಯಾಗಿ ಉತ್ತರ ಆಫ್ರಿಕನ್ ವಲಸಿಗ ಸಮುದಾಯದಿಂದ ದೇಶವ್ಯಾಪಿ ಲೂಟಿ ಮತ್ತು ಅಗ್ನಿಸ್ಪರ್ಶ ಇವುಗಳ ನಡುವೆ 2015ರಲ್ಲಿ ಪ್ರವಾದಿ ಮಹಮದ್​ರ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ ‘ಶಾರ್ಲಿ ಹೆಬ್ದೋ’ ಪತ್ರಿಕೆಯ ಐವರು ಪತ್ರಕರ್ತರ ಹತ್ಯೆ ಮತ್ತು 2021ರಲ್ಲಿ ಅದೇ ಚಿತ್ರಗಳನ್ನು ತನ್ನ ತರಗತಿಯಲ್ಲಿ ತೋರಿಸಿದ ಶಾಲಾ ಅಧ್ಯಾಪಕ ಸ್ಯಾಮ್ಯುಯೆಲ್ ಪ್ಯಾಟಿಯವರ ಭೀಕರ ಶಿರಚ್ಛೇದನವನ್ನೂ ಈ ದೇಶ ಕಂಡು ನಡುಗಿತು.

    ಏಳು ಕೋಟಿ ಜನಸಂಖ್ಯೆಯ ಈ ಉದಾರವಾದಿ ದೇಶದಲ್ಲಿ ಮತ್ತೆಮತ್ತೆ ಹೀಗೇಕೆ ನಡೆಯುತ್ತದೆ? ಇದಕ್ಕೆ ಉತ್ತರ ಸಂಕೀರ್ಣವಾದುದು. ಅದನ್ನು ಪಡೆಯಲು ನಾವು ಇತಿಹಾಸ ಮತ್ತದು ತನ್ನಲ್ಲಿ ಅನಿವಾರ್ಯವಾಗಿ ಅಂತರ್ಗತಗೊಳಿಸಿಕೊಂಡು ಸಾಗುತ್ತಿರುವ ರಾಜಕೀಯ ಹಾಗೂ ಸಾಮಾಜಿಕ ಜಿಂತನೆಗಳು ಮತ್ತವು ರೂಪಿಸುತ್ತಿರುವ ಕಾನೂನುಗಳನ್ನು ಜರಡಿಯಾಡಬೇಕು. ಆಗ ನಮಗೆ ಸಿಗುವ ಚಿತ್ರ ಫ್ರಾನ್ಸ್ ಅಂದರೆ ವಿರೋಧಾಭಾಸ!

    ಆಧುನಿಕ ಇತಿಹಾಸದಲ್ಲಿ ಫ್ರಾನ್ಸ್ ಅನ್ನು ಗುರುತಿಸಬೇಕಾದ್ದು ಒಂದು ಅಗ್ರಗಣ್ಯ ವಸಾಹತುಶಾಹಿ ರಾಷ್ಟ್ರವಾಗಿ. 1789ರ ಕ್ರಾಂತಿಯ ಮೂಲಕ ತಾವು ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆ ಎಂಬ ಮೂರು ಸವೋದಾತ್ತ ಮೌಲ್ಯಗಳನ್ನು ಜಗತ್ತಿಗೆ ಕಾಣಿಕೆಯಾಗಿ ನೀಡಿದ್ದಾಗಿ ಫ್ರೆಂಚರು ಹೇಳಿಕೊಳ್ಳುತ್ತಾರೆ. ಅದು ನಿಜವೇ. ಆದರೆ ಆ ಮೌಲ್ಯಗಳನ್ನು ಫ್ರೆಂಚರು ಪಾಲಿಸಿಕೊಂಡು ಬಂದಿರುವುದು ತಂತಮ್ಮ ನಡುವೆ ಮಾತ್ರ. ನಾಲ್ಕು ಬೃಹತ್ ಖಂಡಗಳಲ್ಲಿ ಹರಡಿದ್ದ ಮತ್ತು ಮೂರು ಮಹಾಸಾಗರಗಳಲ್ಲಿ ಇನ್ನೂ ಅಲ್ಲಲ್ಲಿ ಉಳಿದುಕೊಂಡಿರುವ ತಮ್ಮ ವಸಾಹತುಗಳ ಜನತೆಗಳೊಂದಿಗೆ ವ್ಯವಹರಿಸುವಾಗ ಅದೇ ಮೂರು ಉದಾತ್ತ ಮೌಲ್ಯಗಳನ್ನು ಫ್ರೆಂಚರು ಗಾಳಿಗೆ ತೂರಿಬಿಡುತ್ತಾರೆ! ಉತ್ತರ, ಪಶ್ಚಿಮ, ಮಧ್ಯ ಆಫ್ರಿಕಾದ ವಿಶಾಲ ವಸಾಹತು ಸಾಮ್ರಾಜ್ಯದ ಜನತೆಯನ್ನು ಫ್ರೆಂಚ್ ಗಣರಾಜ್ಯ ಆಳಿದ್ದು ಸೇನಾಶಕ್ತಿಯ ಮೂಲಕ. ಆ ಜನರಿಗೆ ಫ್ರೆಂಚರು ದಶಕಗಳವರೆಗೆ ಯಾವ ಸ್ವಾತಂತ್ರ್ಯವನ್ನೂ ನೀಡಲಿಲ್ಲ, ಅವರನ್ನು ಸಮಾನರಾಗಿಯೂ ಕಾಣಲಿಲ್ಲ. ಇನ್ನು ಆ ಕಪ್ಪು, ಕಂದು ಜನರನ್ನು ಸಹೋದರರನ್ನಾಗಿಸಿಕೊಂಡದ್ದುಂಟೇ?

    ದ್ವಿತೀಯ ಜಾಗತಿಕ ಸಮರದ ನಂತರ ಏಶಿಯಾ ಮತ್ತು ಆಫ್ರಿಕಾಗಳಲ್ಲಿ ಮುಖ್ಯವಾಗಿ ಇಂಡೀಚೀನಾ ಮತ್ತು ಅಲ್ಜೀರಿಯಾಗಳ ಜನತೆ ಸ್ವಾತಂತ್ರ್ಯಕ್ಕಾಗಿ ಫ್ರೆಂಚ್ ಸೇನೆಯೊಂದಿಗೆ ವರ್ಷಗಳ ಕಾಲ ಶಸ್ತ್ರಸಜ್ಜಿತ ಹೋರಾಟ ನಡೆಸಬೇಕಾಯಿತು. ‘ಫ್ರೆಂಚ್ ಗಣರಾಜ್ಯ’ ಕೊನೆಗೂ ಆ ದೇಶಗಳಿಂದ ಕಾಲ್ತೆಗೆದದ್ದು ತನ್ನ ಸೇನೆ ಯುದ್ಧರಂಗದಲ್ಲಿ ನಿರ್ಣಾಯಕವಾಗಿ ಸೋತಾಗ ಮತ್ತು ತಾಳಿಕೊಳ್ಳಲಾಗದಷ್ಟು ಅಂತಾರಾಷ್ಟ್ರೀಯ ಒತ್ತಡ ಬಿದ್ದಾಗ. ಅದು ದೊಡ್ಡ ವಸಾಹತುಗಳ ಕಥೆಯಾಯಿತು. ಫ್ರೆಂಚರನ್ನು ರಾಜಕೀಯವಾಗಿ ಹಾಗೂ ಸೇನಾಬಲದಿಂದ ಸೋಲಿಸಲಾಗದ ಪಾಂಡಿಚೆರಿ, ತಾಹಿತಿ, ರಿಯೂನಿಯನ್, ಫ್ರೆಂಚ್ ಗಯಾನಾ, ಗ್ವಾದೆಲೌಪ್ ಮತ್ತು ಮಾರ್ತಿನಿಕ್​ಗಳಂತಹ ಪುಟ್ಟ ವಸಾಹತುಗಳ ಬಗ್ಗೆ ಫ್ರೆಂಚರು ಬಾರಿಸತೊಡಗಿದ್ದೇ ಬೇರೆ ಬಗೆಯ ಮೋಹನ ಮುರಳಿ. ‘ನಮ್ಮದು ಅಂತ ಯಾವ ವಸಾಹತುವೂ ಇಲ್ಲ. ಯೂರೋಪ್​ನಲ್ಲಿರುವುದು ಮೆಟ್ರೋಪಾಲಿಟನ್ ಫ್ರಾನ್ಸ್, ಜಗತ್ತಿನ ಇತರೆಡೆಗಳಲ್ಲೆಲ್ಲಾ ಇರುವುದು ನಮ್ಮ ದೇಶದ ಸಾಗರೋತ್ತರ ಪ್ರದೇಶಗಳು. ಅಲ್ಲಿರುವ ಜನರೂ ಫ್ರೆಂಚ್ ನಾಗರಿಕರೇ’ ಎಂದು ವಸಾಹತೀಕರಣಕ್ಕೆ ಹೊಸದೊಂದು ಆಯಾಮ ನೀಡಲು ಫ್ರಾನ್ಸ್ ಹೊರಟಿತು. ವಸಾಹತುಗಳಿಗೆ ಸ್ವಾತಂತ್ರ್ಯ ನೀಡುವ ಒತ್ತಡದಿಂದ ತಪ್ಪಿಸಿಕೊಳ್ಳಲು ಫ್ರೆಂಚರು ಹೂಡಿದ ಹೂಟ ಇದು. ಈ ನೌಟಂಕಿಯನ್ನೇ ಪೋರ್ತಗಲ್ ಸಹಾ ಆಡಹೋಗಿ ಗಿನಿ, ಅಂಗೋಲಾ ಮತ್ತು ಜೊಜಾಂಬಿಕ್​ಗಳ ಸ್ವಾತಂತ್ರ್ಯವನ್ನು 1970ದ ದಶಕದ ಮಧ್ಯಭಾಗದವರೆಗೂ ತಳ್ಳಿಕೊಂಡು ಬಂದದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

    ತನ್ನ ಹೊಸ ವಾದ ಪ್ರಾಮಾಣಿಕವಾದುದು ಎಂದು ಜಗತ್ತಿಗೆ ತೋರಿಸಲು ಫ್ರಾನ್ಸ್ ತನ್ನೆಲ್ಲಾ ವಸಾಹತುಗಳ ಜನತೆಗೂ ರಾಜಕೀಯ, ಆರ್ಥಿಕ ಹಾಗೂ ವಾಸ್ತವ್ಯದ ಅಧಿಕಾರಗಳನ್ನು ನೀಡಹೊರಟಿತು. ಫ್ರೆಂಚ್ ಮನೋಭಾವದ ಮತ್ತೊಂದು ವಿರೋಧಾಭಾಸ ಮುಖ ಅನಾವರಣಗೊಂಡದ್ದು ಇಲ್ಲಿ.

    ಈ ನೀತಿಯ ಪ್ರಕಾರ ವಸಾಹತುಗಳಿಗೂ ಫ್ರೆಂಚ್ ಶಾಸನಸಭೆಯಲ್ಲಿ ಪ್ರಾತಿನಿಧ್ಯ ನೀಡಿತು. ಫ್ರೆಂಚ್ ಪಾರ್ಲಿಮೆಂಟ್​ಗೆ, ದೇಶದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗಳು ನಡೆಯುವಾಗ ಈ ವಸಾಹತುಗಳಲ್ಲೂ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ, ಅಲ್ಲಿನ ಜನ ಮತ ಚಲಾಯಿಸುತ್ತಾರೆ. ಜತೆಗೆ ಈ ವಸಾಹತುಗಳ ಜನರು ‘ಮೆಟ್ರೋಪಾಲಿಟನ್ ಫ್ರಾನ್ಸ್’ ಅಲ್ಲದೇ ಯಾವುದೇ ‘ಫ್ರೆಂಚ್ ಸಾಗರೋತ್ತರ ಪ್ರದೇಶ’ದಲ್ಲಿ ನೌಕರಿ ಮಾಡಲು, ನೆಲೆಸಲು ಅವಕಾಶವಿದೆ. ತೊಂದರೆಯಾದದ್ದು ಇಲ್ಲಿ. ಯಾವುದೇ ಫ್ರೆಂಚ್ ಪ್ರದೇಶದಲ್ಲಿ ನೆಲೆಸುವ ಅವಕಾಶ ದೊರೆತಾಗ ಸಾಹಸಿ ಮನೋಭಾವದ, ಅನ್ವೇಷಕ ಪ್ರವೃತ್ತಿಯ ಬೆರಳೆಣಿಕೆಯ ಜನರ ಹೊರತಾಗಿ ಮೆಟ್ರೋಪಾಲಿಟನ್ ಫ್ರಾನ್ಸ್​ನ ಯಾವುದೇ ನಿವಾಸಿ ದೂರದ ಫ್ರೆಂಚ್ ಓವರ್​ಸೀಸ್ ಟೆರಿಟರಿಗೆ ಹೋಗಬಯಸುವುದು ಅಸಂಭವ. ಬದಲಾಗಿ ಅಲ್ಲಿನ ಜನರೆಲ್ಲಾ ಯೂರೋಪ್​ಗೆ ಬರಲು ಬಯಸುತ್ತಾರೆ. ಹಿಂದೂ ಮಹಾಸಾಗರದ ರಿಯೂನಿಯನ್ ದ್ವೀಪಗಳ ನಿವಾಸಿಯೊಬ್ಬ ಪೆಸಿಫಿಕ್ ಸಾಗರದಲ್ಲಿರುವ ತಾಹಿತಿ ದ್ವೀಪಕ್ಕೆ ಹೋಗಿ ನೆಲೆಸುತ್ತಾನೆಯೇ? ಆತನ ಗುರಿಯೂ ಮೆಟ್ರೋಪಾಲಿಟನ್ ಫ್ರಾನ್ಸ್ ಆಗುವುದು ಸಹಜ. ಹೀಗಾಗಿ ಎಲ್ಲ ವಸಾಹತುಗಳಿಂದ ಫ್ರಾನ್ಸ್​ಗೆ ಜನ ವಲಸೆ ಬರತೊಡಗಿದರು. ಸ್ವಾತಂತ್ರ್ಯ ಗಳಿಸಿಕೊಳ್ಳುವ ಮೊದಲು ಸಹಸ್ರಾರು ವಿಯೆಟ್ನಾಮಿಗಳೂ ಫ್ರಾನ್ಸ್​ಗೆ ಹೋಗಿ ನೆಲೆಸಿದ್ದಾಗಿತ್ತು.

    ಇಲ್ಲಿ ಪಾಂಡಿಚೆರಿಯದ್ದೊಂದು ವಿಶಿಷ್ಟ ಕಥೆ. ಭಾರತದ ಭೌಗೋಳಿಕ ವ್ಯಾಪ್ತಿಯಲ್ಲಿನ ತನ್ನ ವಸಾಹತುಗಳನ್ನು ಸ್ವತಂತ್ರ ಭಾರತಕ್ಕೆ ಶಾಂತಿಯುತವಾಗಿ ವರ್ಗಾಯಿಸುವ ಒಪ್ಪಂದಕ್ಕೆ ಫ್ರೆಂಚ್ ಸರ್ಕಾರ 1954ರಲ್ಲಿ ಸಹಿ ಹಾಕುವಾಗ ಪಾಂಡಿಚೆರಿಯ ಯಾವುದೇ ನಿವಾಸಿ ತನ್ನ ಫ್ರೆಂಚ್ ಪೌರತ್ವವನ್ನು ಉಳಿಸಿಕೊಳ್ಳಬಯಸಿದರೆ ಅದಕ್ಕೆ ಅವಕಾಶವಿರಬೇಕೆಂಬ ಬೇಡಿಕೆಯನ್ನು ಭಾರತ ಸರ್ಕಾರದ ಮುಂದಿಟ್ಟಿತು. ಅದನ್ನು ನವದೆಹಲಿ ಒಪ್ಪಿಕೊಂಡ ಪರಿಣಾಮವಾಗಿ ಪಾಂಡಿಚೆರಿ, ಕಾರೈಕಲ್, ಮಾಹೆ ಮತ್ತು ಯಾನಾಂನಗಳ ಸುಮಾರು ಎಂಟುನೂರು ಕುಟುಂಬಗಳು ಫ್ರೆಂಚ್ ಪೌರತ್ವವನ್ನು ಉಳಿಸಿಕೊಂಡಿವೆ. ಭಾರತದ ನೆಲದಲ್ಲಿದ್ದೂ ಅವರು ಫ್ರೆಂಚ್ ನಾಗರಿಕರು. ಇವರ ಮಕ್ಕಳು ಫ್ರಾನ್ಸ್​ಗೆ ಹೋಗಿ ಉಚಿತ ಶಿಕ್ಷಣ ಪಡೆಯುವ, ನೌಕರಿ ಹಿಡಿಯುವ, ನೆಲೆಸುವ ಅಥವಾ ನೌಕರಿಯಿಂದ ನಿವೃತ್ತಿ ಹೊಂದಿ ಇಲ್ಲಿಗೆ ಹಿಂತಿರುಗಿ ಭಾರಿ ಮೊತ್ತದ ಪಿಂಚಣಿಯೊಂದಿಗೆ ಐಷಾರಾಮಿ ಜೀವನ ನಡೆಸುವ ಅವಕಾಶವಿದೆ. ಅವರ ಹಿತಾಸಕ್ತಿಗಳನ್ನು ನೋಡಿಕೊಳ್ಳಲು ಪಾಂಡಿಚೆರಿಯಲ್ಲಿ (ಈಗ ಪುದುಚೇರಿ) ಫ್ರೆಂಚ್ ಕಾನ್ಸುಲೇಟ್ (ಉಪ ರಾಯಭಾರ ಕಚೇರಿ) ಇದೆ. ಪಾಂಡಿಚೆರಿ, ವಿಯೆಟ್ನಾಂ, ಫ್ರೆಂಚ್ ಪಾಲಿನೇಶಿಯಾ ಮುಂತಾದ ಪೌರ್ವಾತ್ಯ ಮಾಜಿ/ಹಾಲಿ ವಸಾಹತುಗಳಿಂದ ಫ್ರಾನ್ಸ್​ನಲ್ಲೇ ಉಳಿದುಕೊಂಡವರ ಸಂಖ್ಯೆಯೂ ಗಣನೀಯವಾಗಿದೆ. ಜನಗಣತಿ, ಜನಾಂಗೀಯತೆಯನ್ನು ಗುರುತಿಸಲು ಫ್ರೆಂಚ್ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಆದಾಗ್ಯೂ ವಿಶ್ವಾಸಾರ್ಹ ಸರ್ವೆಕ್ಷಣೆಗಳ ಪ್ರಕಾರ ಮೆಟ್ರೋಪಾಲಿಟನ್ ಫ್ರಾನ್ಸ್​ನ

    ಏಳು ಕೋಟಿ ಜನಸಂಖ್ಯೆಯಲ್ಲಿ ಏಶಿಯನ್ ಮೂಲದವರ ಪ್ರಮಾಣ 1.7%. ಆಫ್ರಿಕಾದ ಛಾಡ್, ಕ್ಯಾಮೆರೂನ್, ನೈಜರ್, ರ್ಬುನಾ ಫಾಸೋ, ಮಾಲಿ, ಮಾರಿಟನಿಯಾ, ಸೆನೆಗಲ್, ಮೊರಾಕ್ಕೋ, ಅಲ್ಜೀರಿಯಾ, ಟ್ಯುನೀಸಿಯಾ ಮುಂತಾದ ದೇಶಗಳು ಸ್ವತಂತ್ರಗೊಳ್ಳುವುದಕ್ಕೆ ಮೊದಲೇ ಅವುಗಳಿಂದ ಫ್ರಾನ್ಸ್​ಗೆ ವಲಸೆ ಹೋಗಿ ಅಲ್ಲೇ ಶಾಶ್ವತವಾಗಿ ನೆಲೆಸಿದವರ ಪ್ರಮಾಣ 3.3%. ಅಂದರೆ ಇಂದಿನ ಫ್ರಾನ್ಸ್​ನಲ್ಲಿ ಇವರ ಸಂಖ್ಯೆ ಸುಮಾರು ಮೂವತೆôದು ಲಕ್ಷ. ಸಂವಿಧಾನದ ಪ್ರಕಾರ ಇವರೂ, ಸ್ಥಳೀಯ ಶ್ವೇತವರ್ಣೀಯರೂ ಸಮಾನರು. ಆದರೆ ದೈನಂದಿನ ವ್ಯವಹಾರಗಳು ಹಾಗೆ ನಡೆಯುವುದಿಲ್ಲ. ನೌಕರಿಗಳಲ್ಲಿ, ಸಾಮಾಜಿಕ ಸ್ಥಾನಮಾನಗಳಲ್ಲಿ ಅಷ್ಟೇಕೆ ಅಂಗಡಿಗಳಲ್ಲಿ, ಉಪಾಹಾರ ಗೃಹಗಳಲ್ಲಿ, ಇನ್ನೂ ಮುಂದೆ ಹೋದರೆ ಕಟಕಟೆಗಳಲ್ಲಿ, ಒಟ್ಟಾರೆ ಶ್ವೇತವರ್ಣಿಯರ ದೃಷ್ಟಿಕೋನದಲ್ಲಿ, ಇವರಿಗೆ ಕೆಳಗಿನ ಸ್ಥಾನ ಸಿಗುವುದು ಇವರ ಮೈಬಣ್ಣವೊಂದರಿಂದಷ್ಟೇ ಅಲ್ಲ.

    ಬ್ರಿಟನ್ ಸಹ ತನ್ನ ಮಾಜಿ ವಸಾಹತುಗಳ ಜನರಿಗೆ ತನ್ನಲ್ಲಿಗೆ ಬಂದು ನೆಲೆಸುವ ಅವಕಾಶವನ್ನು 1950-60ರ ದಶಕಗಳಲ್ಲಿ ನೀಡಿದ್ದುಂಟು. ಹಾಗೆ ಹೋದವರು ತಮ್ಮ ಮೂಲ ಸಂಪ್ರದಾಯಗಳನ್ನು, ಆಚಾರವಿಚಾರಗಳನ್ನು ಪಾಲಿಸಿಕೊಂಡೇ ಹೋಗುವುದಕ್ಕೆ ಯಾವ ಅಡ್ಡಿಯೂ ಇಲ್ಲ. (ಇದು ಬೇರೆಯೇ ಬಗೆಯ ಸಮಸ್ಯೆಯನ್ನು ಸೃಷ್ಟಿಸಿದೆ, ನಿಜ. ಇದು ಬೇರೆಯೇ ವಿಷಯ). ಆದರೆ ಫ್ರಾನ್ಸ್​ನ

    ವಾಸ್ತವವೇ ಬೇರೆ. ಅಲ್ಲಿ ನೆಲೆಸುವ ಹೊರಗಿನ ವ್ಯಕ್ತಿ ಫ್ರೆಂಚ್ ಜನಾಂಗದ, ಆ ನೆಲದ ಆಚಾರವಿಚಾರಗಳನ್ನು ತನ್ನದಾಗಿಸಿಕೊಳ್ಳಬೇಕು ಅಂದರೆ ಆತ ಫ್ರೆಂಚ್ ಆಗಬೇಕು! ಭಾರತೀಯ ಉಪಖಂಡ, ಆಗ್ನೇಯ ಏಶಿಯಾದ ವಲಸಿಗರು ಬಹುತೇಕ ಉದಾರವಾದಿ ಹಿನ್ನೆಲೆಯವರಾದ್ದರಿಂದ ಹಾಗೂ ಬಹುತೇಕರು ಕ್ರಿಶ್ಚಿಯಾನಿಟಿಯನ್ನು ಅಪ್ಪಿಕೊಂಡಿರುವುದರಿಂದ ಫ್ರೆಂಚ್ ಸಮಾಜದಲ್ಲಿ ಮಿಳಿತಗೊಳ್ಳುವುದು ಅವರಿಗೆ ಕಷ್ಟವಾಗದು. ಆದರೆ ಉತ್ತರ ಆಫ್ರಿಕಾದ ಮುಸ್ಲಿಂ ಸಮಾಜಗಳಿಂದ ಬಂದಿರುವವರ ಸಮಸ್ಯೆಯೇ ಬೇರೆ. ತಲೆಮಾರುಗಳು ಕಳೆದರೂ ಫ್ರೆಂಚ್ ಸಮಾಜದೊಳಗೆ ಒಂದಾಗುವುದು ಅವರಿಗಿನ್ನೂ ಸಾಧ್ಯವಾಗಿಲ್ಲ. ಅದು ಸಾಧ್ಯವಾಗದೇ ಅವರಿಗೆ ಫ್ರೆಂಚ್ ಸಮಾಜ ಸಮಾನತೆ ನೀಡುವುದಿಲ್ಲ. ಈ ಜನ ತಮ್ಮ ಮೂಲ ನೆಲಕ್ಕೆ ಇಂದು ಅಪರಿಚಿತರು, ಈಗಿನ ವಾಸದ ನೆಲಕ್ಕೆ ಪರಕೀಯರು. ಇದರಿಂದಾಗಿ ಸದಾ ಅನಾಥಭಾವ, ಪರಕೀಯಪ್ರಜ್ಞೆ, ಅವಮಾನ, ಆತಂಕದಲ್ಲಿ ನರಳುವ ಈ ಜನ ಆ ಎಲ್ಲಾ ನಕಾರಾತ್ಮಕ ಭಾವನೆಗಳನ್ನು ಹೊರಹಾಕಲು ನೆಪವೊಂದು ಸಿಕ್ಕಿದಾಗ ತಮ್ಮ ಮೇಲೇ ನಿಯಂತ್ರಣ ಕಳೆದುಕೊಳ್ಳುತ್ತಾರೆ. ಇಂದಿನ ಅಶಾಂತಿಗೆ ಇದು ಅರ್ಧ ಕಾರಣ. ಇನ್ನರ್ಧ ಕಾರಣ ವಲಸಿಗ ಕಾರ್ವಿುಕರಲ್ಲಿದೆ.

    ಫ್ರಾನ್ಸ್ ವಿವಿಧ ಬಗೆಯ ಕುಶಲಕರ್ವಿುಗಳು ಹಾಗೂ ಕೆಳ ಹಾಗೂ ಮಧ್ಯಮ ವರ್ಗದ ನೌಕರರ ಕೊರತೆಯಿಂದ ಬಳಲುತ್ತಿದೆ. ಇದರಿಂದಾಗಿ ಮಾಜಿ ಫ್ರೆಂಚ್ ವಸಾಹತುಗಳಾದ ಮೊರಾಕ್ಕೋ, ಅಲ್ಜೀರಿಯಾ ಮತ್ತು ಟ್ಯುನೀಸಿಯಾದ ಅರೆಶಿಕ್ಷಿತ ಯುವಜನತೆ ಮೆಡಿಟರೇನಿಯನ್ ಸಮುದ್ರ ಲಂಘಿಸಿ ಫ್ರಾನ್ಸ್​ಗೆ ಕಾಲಿಡುವುದು 1970ರ ದಶಕದಲ್ಲೇ ಆರಂಭವಾಯಿತು. ಸ್ವದೇಶದಲ್ಲೇ ಫ್ರೆಂಚ್ ಭಾಷೆ ಕಲಿತಿದ್ದ ಇವರಿಗೆ ನೌಕರಿ ಗಳಿಸಿಕೊಳ್ಳುವುದು ಇತರ ವಲಸಿಗರಿಗಿಂತ ಹೆಚ್ಚು ಸುಲಭವಾಗಿತ್ತು. ಅದೇ ಸ್ಥಿತಿ ಮುಂದುವರಿದು ಇಂದು ದೇಶದ ಒಟ್ಟು ಜನಸಂಖ್ಯೆಯಲ್ಲಿ ಇವರ ಪ್ರಮಾಣ 10%. ಅಂದರೆ ಇಂದು ಫ್ರಾನ್ಸ್​ನ ಹತ್ತು ಜನರಲ್ಲಿ ಒಬ್ಬ ಉತ್ತರ ಆಫ್ರಿಕಾದ ವಲಸಿಗ! ಇವರೆಲ್ಲರೂ ಸಾರಾಸಗಟಾಗಿ ಮುಸ್ಲಿಮರು. ಫ್ರೆಂಚ್ ಸಮಾಜದ ಉದಾರವಾದಿ ಮೌಲ್ಯಗಳನ್ನು ಅಂತರ್ಗತಗೊಳಿಸಿಕೊಳ್ಳಲು ಇವರ ಕಟ್ಟಾ ಧಾರ್ವಿುಕತೆ ಇವರಿಗೆ ಅವಕಾಶ ನೀಡುವುದಿಲ್ಲ. ಹೀಗಾಗಿ ಇವರದು ಸದಾ ಅಸಂತೋಷದ, ಒಳಗುದಿಯ ಬದುಕು. ಒಂದು ಸಣ್ಣ ಕಿಡಿಗೆ ಭುಗಿಲೇಳುವಷ್ಟು ಹತಾಶೆ ಹಾಗೂ ಕ್ರೋಧ ಇವರಲ್ಲಿ ಮನೆಮಾಡಿಕೊಂಡಿರುತ್ತದೆ. ವಿರೋಧಾಭಾಸವೆಂದರೆ ಫ್ರಾನ್ಸ್​ಗೆ ಈ ಜನರೂ ಬೇಕು, ಜತೆಗೆ ತನ್ನ ಉದಾರವಾದಿ ಮೌಲ್ಯಗಳೂ ಪಾಲನೆಯಾಗಬೇಕು! ನೆಂಟನ ಮೇಲೆ ಪ್ರೀತಿ, ಅಕ್ಕಿಯ ಮೇಲೆ ಆಸೆ!

    ಈ ವಿರೋಧಾಭಾಸ ಇಂದು ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಚಾಳಿಯವನೆಂದು ಹೇಳಲಾಗುವ, ಜೂನ್ 27ರಂದೂ ಅದನ್ನೇ ಮಾಡಿದ ನಾಹೇಲ್ ಮೆಝುೂಕ್​ನ ಹತ್ಯೆಯೊಂದಿಗೆ ಅನಾವರಣಗೊಂಡಿದೆ. ಫ್ರಾನ್ಸ್ ಶತಮಾನಗಳ ವಿರೋಧಾಭಾಸವನ್ನು ತೊರೆದು ಒಂದು ನಿರ್ದಿಷ್ಟ ರಾಷ್ಟ್ರೀಯ ಮುಖವನ್ನು ಜಗತ್ತಿಗೆ ತೋರಬೇಕಿದೆ. ಅದಾಗದಿದ್ದರೆ 2005, 2015, 2020 ಮತ್ತು ಈಗಿನ 2023ಕ್ಕೆ ಇನ್ನಷ್ಟು ದುರಂತಪೂರ್ಣ ವರ್ಷಗಳನ್ನು ಸೇರಿಸುತ್ತಾ ಹೋಗಬೇಕಾಗುತ್ತದೆ. ಮೆಝುೂಕ್​ನಿಗಾಗಿ ಸಂಯಮ ಕಳೆದುಕೊಂಡಿರುವವರ ಜತೆಗೇ ಅವನನ್ನು ಕೊಂದ ಸಂಚಾರಿ ಪೊಲೀಸ್ ಪೇದೆಗಾಗಿ ನಾಲ್ಕೇ ದಿನಗಳಲ್ಲಿ ಒಂದು ಮಿಲಿಯನ್ ಯೂರೋಗಳನ್ನು ಸಂಗ್ರಹಿಸಿದವರೂ ಇಂದು ಫ್ರಾನ್ಸ್​ನಲ್ಲಿದ್ದಾರೆ. ಅಂದರೆ ಫ್ರೆಂಚ್ ಸಮಾಜ ಸ್ಪಷ್ಟವಾಗಿ ಸೀಳಿದೆ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಮೈಸೂರು ಸ್ಯಾಂಡಲ್‌ ಸೋಪ್‌ಗೆ ಬ್ರ್ಯಾಂಡ್ ಮೌಲ್ಯ: ಎಂ.ಬಿ. ಪಾಟೀಲ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts