ಚಿಕ್ಕೋಡಿ: ನಮಗೆ ಯಾವ ಅಧಿಕಾರ ಸಿಕ್ಕಿದೆ ಎನ್ನುವುದು ಮುಖ್ಯವಲ್ಲ. ದೊರೆತ ಅವಕಾಶವನ್ನು ಜನಪರ ಕಾರ್ಯಗಳಿಗೆ ವಿನಿಯೋಗ ಮಾಡುವುದು ಮುಖ್ಯ. ಇದು ಜನಪ್ರತಿನಿಧಿಗಳ ಆದ್ಯ ಕರ್ತವ್ಯವೂ ಆಗಿದೆ ಎಂದು ಮಾಜಿ ಸಚಿವ ಉಮೇಶ ಕತ್ತಿ ಹೇಳಿದ್ದಾರೆ.
ನಮಗೆ ಯಾವ ಅಧಿಕಾರ ಸಿಕ್ಕಿದೆ ಎನ್ನುವುದು ಮುಖ್ಯವಲ್ಲ. ದೊರೆತ ಅವಕಾಶವನ್ನು ಜನಪರ ಕಾರ್ಯಗಳಿಗೆ ವಿನಿಯೋಗ ಮಾಡುವುದು ಮುಖ್ಯ. ಇದು ಜನಪ್ರತಿನಿಧಿಗಳ ಆದ್ಯ ಕರ್ತವ್ಯವೂ ಆಗಿದೆ ಎಂದು ಮಾಜಿ ಸಚಿವ ಉಮೇಶ ಕತ್ತಿ ಹೇಳಿದ್ದಾರೆ.
ತಮ್ಮ 60ನೇ ಜನ್ಮದ ದಿನದ ನಿಮಿತ್ತ ಮನೆದೇವರಾದ ಚಿಕ್ಕೋಡಿ ತಾಲೂಕಿನ ಶಿರಗಾಂವ ಬಸವೇಶ್ವರ ದೇವಸ್ಥಾನಕ್ಕೆ ಶನಿವಾರ ಕುಟುಂಬ ಸಮೇತ ಆಗಮಿಸಿ ಪೂಜಾಭಿಷೇಕ ನೆರವೇರಿಸಿ ಮಾತನಾಡಿದರು.
ನನ್ನ 35 ವರ್ಷದ ರಾಜಕಾರಣದಲ್ಲಿ 8 ಬಾರಿ ಶಾಸಕ ಹಾಗೂ ಎರಡು ಬಾರಿ ಸಚಿವನಾಗಿ ಅಧಿಕಾರ ವಹಿಸಿ ಜನಪರ ಕಾರ್ಯ ಮಾಡಿದ್ದೇನೆ. ಅಧಿಕಾರ ಶಾಶ್ವತವಲ್ಲ, ಮಾಡಿದ ಕಾರ್ಯ ಶಾಶ್ವತವೆಂದು ನಂಬಿ ಕೆಲಸ ಮಾಡುತ್ತಿದ್ದೇನೆ. ಉತ್ತರ ಕರ್ನಾಟಕದ ಕುರಿತು ನಾನು ಪ್ರಸ್ತಾಪ ಮಾಡಿದಾಗಲೆಲ್ಲ ಪರ-ವಿರೋಧಗಳು ಎದುರಾದವು. ಅದು ಸಹಜ. ಆದರೆ, ಉತ್ತರ ಕರ್ನಾಟಕದ ಜನರಿಗೆ ಒಳ್ಳೆಯದಾಗಬೇಕು ಎನ್ನುವ ಉದ್ದೇಶ ನನ್ನ ಹೋರಾಟದ ಹಿಂದಿದೆ. ಅಧಿಕಾರ ಇರಲಿ, ಇಲ್ಲದಿರಲಿ ಯಾವುದೇ ಕಾರಣಕ್ಕೂ ಪ್ರಾದೇಶಿಕ ಅಸಮತೋಲನದ ವಿರುದ್ಧ ನನ್ನ ಹೋರಾಟ ನಿಲ್ಲುವುದಿಲ್ಲ ಎಂದರು.
ವಿನಾಕಾರಣ ಜನರಿಗೆ, ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ತೊಂದರೆ ಕೊಡಬಾರದು ಎನ್ನುವ ಉದ್ದೇಶದಿಂದ ನಾನು ಮೊದಲಿನಿಂದಲೂ ವಿಶೇಷವಾಗಿ ಜನ್ಮದಿನ ಆಚರಿಸಿಕೊಳ್ಳುವುದಿಲ್ಲ. ಬದಲಿಗೆ ಕುಟುಂಬಸ್ಥರೊಂದಿಗೆ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯುತ್ತೇನೆ. ಜನರ ಕಲ್ಯಾಣಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು.
ಸಹೋದರಿಯರಾದ ಪೂರ್ಣಿಮಾ, ಹರ್ಷಾ ಕಣವಿ, ಮಗಳು ಸ್ನೇಹಾ, ಅಳಿಯ ನಿತಿನ್, ಸೊಸೆ ಶ್ರುತಿ ನಿಖಿಲ್ ಕತ್ತಿ, ಮೊಮ್ಮಕ್ಕಳಾದ ಆರ್ಯನ್, ಆರೈನಾ, ಆರವ, ಅಯಾಂಚ್ ಹಾಗೂ ಬೆಂಗಳೂರು ವಿವಿಯ ವಿಶ್ರಾಂತ ಕುಲಪತಿ ಪ್ರಭುದೇವ ಇತರರು ಇದ್ದರು.
ರೈತರ ಬಂಧುವಿಗೆ ಅಭಿಮಾನಿಗಳ ಸತ್ಕಾರ
ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಉಮೇಶ ಕತ್ತಿ ಅವರನ್ನು ಅಭಿಮಾನಿಗಳು ಸತ್ಕರಿಸಿ, ಹುಟ್ಟುಹಬ್ಬದ ಶುಭಾಷಯ ಕೋರಿದರು. ಸಂಕೇಶ್ವರ ಹಿರಾ ಶುಗರ್ ನಿರ್ದೇಶಕ ಸುರೇಶ ಬೆಲ್ಲದ, ಚಿಕ್ಕೋಡಿ ಪುರಸಭೆ ಹಿರಿಯ ಸದಸ್ಯ ಶ್ಯಾಮ ರೇವಡೆ ಡಾ.ಅಜಿತ ಚರಾಟೆ, ವಕೀಲ ಮಹಾದೇವ ಬೆಂಡವಾಡೆ, ಎಂ.ಎಸ್. ಈಟಿ, ದುಂಡಪ್ಪ ಕೋಟೆಪ್ಪಗೋಳ, ಗುತ್ತಿಗೆದಾರ ಗುಲಾಬ ಜಮಾದಾರ, ಮಹಾದೇವ ಜಿವಣಿ, ಬಸಲಿಂಗ ಕಾಡೇಶಗೋಳ, ಸದಾಶಿವ ಶಿರಗೂರ, ರಾಜೇಶ ಶಿರಗೂರ ಹಾಗೂ ಅಭಿಮಾನಿಗಳು ಇದ್ದರು.