More

    ಕೋಳಿ ತ್ಯಾಜ್ಯ ಅವಾಂತರ, ಬೀದಿನಾಯಿಗಳ ಹಾವಳಿಗೆ ಜನ ತತ್ತರ, ಕಣ್ಮುಚ್ಚಿ ಕುಳಿದ ಅಧಿಕಾರಿಗಳು

    ವಿಜಯಪುರ: ಪಟ್ಟಣದಲ್ಲಿ ಸಂಗ್ರಹವಾಗುವ ಕೋಳಿ ತ್ಯಾಜ್ಯವನ್ನು ಹೊರವಲಯದ ಶಿಡ್ಲಘಟ್ಟ ರಸ್ತೆ ಅಂಚಿನಲ್ಲಿ ಎಸೆಯುತ್ತಿದ್ದು, ವಾತಾವರಣ ಕಲುಷಿತಗೊಂಡಿದೆ.

    ಬಹುತೇಕ ಕೋಳಿ ಅಂಗಡಿ ಮಾಲೀಕರು ಸಮರ್ಪಕವಾಗಿ ತ್ಯಾಜ್ಯ ವಿಲೇ ಮಾಡಲು ನಿರ್ಲಕ್ಷ್ಯವಹಿಸಿದ್ದಾರೆ. ಇಲ್ಲಿನ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿರುವುದರಿಂದ ಕೋಳಿ ಅಂಗಡಿ ಮಾಲೀಕರಿಗೆ ಭಯವಿಲ್ಲದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಜನ ಪ್ರದೇಶದಲ್ಲಿ ಗುಂಡಿ ತೆಗೆದು, ಕೋಳಿ ತ್ಯಾಜ್ಯ ಮುಚ್ಚಿ ವಿಲೇ ಮಾಡಬೇಕಾಗಿರುವುದು ನಿಯಮ. ಆದರೆ, ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಎಸೆದು ಹೋಗುತ್ತಿರುವುದರಿಂದ ಪರಿಸರ ಹಾಳಾಗುತ್ತಿದೆ. ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರು ಮೂಗುಮುಚ್ಚಿಕೊಂಡು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಹಳ ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತುಟಿಬಿಚ್ಚುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

    ಬೀದಿ ನಾಯಿಗಳ ಹಾವಳಿ: ಈ ರಸ್ತೆಯಲ್ಲೇ ಮೇಲೂರು, ಶಿಡ್ಲಘಟ್ಟ, ಚಿಂತಾಮಣಿ ಸೇರಿ ಹಲವು ಗ್ರಾಮ ಹಾಗೂ ಪಟ್ಟಣದ ಜನ ಸಂಚರಿಸುತ್ತಾರೆ. ತ್ಯಾಜ್ಯ ದುರ್ವಾಸನೆ ಬೀರುವ ಜತೆಗೆ ಇಲ್ಲಿನ ತ್ಯಾಜ್ಯಕ್ಕೆ ಮುಗಿಬೀಳುವ ಬೀದಿ ನಾಯಿಗಳಿಂದಲೂ ಸಾರ್ವಜನಿಕರು ಕಿರಿಕಿರಿ ಎದುರಿಸಬೇಕಾಗಿದೆ.

    ಈಗಾಗಲೇ ಪಟ್ಟಣದ ಎಲ್ಲ ಮಾಂಸ ಹಾಗೂ ಕೋಳಿ ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದು, ಪುರಸಭೆ ಕಸ ಸಾಗಿಸುವ ವಾಹನ ಬಳಸುವಂತೆ ಸೂಚಿಸಲಾಗಿದೆ. ಇಂತಹ ಪ್ರಕರಣದ ಕುರಿತು ಪೋಟೋ ಅಥವಾ ವಿಡಿಯೋ ದೃಶ್ಯಗಳಿದ್ದರೆ ಕೂಡಲೇ ಗಮನಕ್ಕೆ ತಂದರೆ ಅಕ್ರಮ ಎಸಗುವವರ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ.
    ಎ.ಬಿ.ಪ್ರದೀಪ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ

    ರಸ್ತೆ ಬದಿ ಎಲ್ಲೆಂದರಲ್ಲಿ ಕೋಳಿ ತ್ಯಾಜ್ಯ ಎಸೆಯುವುದರಿಂದ ಸುತ್ತಮುತ್ತಲ ನೂರಾರು ಬೀದಿ ನಾಯಿಗಳು ದಾಂಗುಡಿ ಇಡುತ್ತವೆ. ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರ ಮೇಲೂ ಎರಗುತ್ತವೆ. ಈ ಬಗ್ಗೆ ಅಧಿಕಾರಿಗಳು ಗಮನ ನೀಡಬೇಕು.
    ವಿ.ಎನ್.ರಮೇಶ್, ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts