More

    ಮೊದಲ ಮಳೆಗೇ ನಲುಗಿವೆ ಉಡುಪಿ ರಸ್ತೆಗಳು

    ಉಡುಪಿ: ಅದಮಾರು ಪರ್ಯಾಯೋತ್ಸವ ವೇಳೆ ಸುಂದರವಾಗಿ ಕಂಗೊಳಿಸಿದ್ದ ರಸ್ತೆಗಳು ಮೊದಲ ಮಳೆಗೇ ಕುಸಿಯಲು ಆರಂಭಿಸಿವೆ. ಅಲ್ಲಲ್ಲಿ ಗುಂಡಿಗಳು ಸೃಷ್ಟಿಯಾಗಿ ವಾಹನ ಸವಾರರಲ್ಲಿ ಆತಂಕ ಮೂಡಿದೆ. ಕಾಮಗಾರಿ ಅವ್ಯವಸ್ಥೆ ಬಗ್ಗೆ ನಗರಸಭೆ ಮತ್ತು ಜನಪ್ರತಿನಿಧಿಗಳ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಕಿನ್ನಿಮೂಲ್ಕಿ ಕೋರ್ಟ್ ರೋಡ್‌ನಲ್ಲಿ ಒಂದು ಅಡಿಯಷ್ಟು ರಸ್ತೆ ಕುಸಿದಿದ್ದು 10 ಮೀಟರ್‌ವರೆಗೂ ಬಿರುಕು ಮೂಡಿದೆ. ಎರಡು ಕಡೆ ಈ ರೀತಿ ರಸ್ತೆ ಕುಸಿಯಲು ಆರಂಭಿಸಿದೆ. ಗುಂಡಿಬೈಲು -ಅಂಬಾಗಿಲು -ಕಲ್ಸಂಕ ರಸ್ತೆಯೂ ಅರ್ಧ ಅಡಿಯಷ್ಟು ಕುಸಿತವಾಗಿದೆ.

    ಕೋಟಿ ರೂ. ವೆಚ್ಚದ ಕಾಮಗಾರಿ: ಜನವರಿಯಲ್ಲಿ ಅದಮಾರು ಮಠ ಪರ್ಯಾಯ ಮಹೋತ್ಸವ ಹಿನ್ನೆಲೆಯಲ್ಲಿ ನಗರದ ರಸ್ತೆಗಳಿಗೆ ಕಾಯಕಲ್ಪ ನೀಡಲಾಗಿತ್ತು. ಡಾಂಬರು ಅಳವಡಿಸಿ ಗುಂಡಿ ಮುಚ್ಚುವ ಕೆಲಸ ನಡೆದಿತ್ತು. 1.57 ಕೋಟಿ ರೂ. ವೆಚ್ಚದಲ್ಲಿ ನಗರ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ರಸ್ತೆಯ ಗುಂಡಿ ಮುಚ್ಚುವ ಜತೆಗೆ 2.30 ಕೋಟಿ ರೂ. ವೆಚ್ಚದಲ್ಲಿ ಕಿನ್ನಿಮೂಲ್ಕಿ ಕೋರ್ಟ್ ರೋಡ್, ಡಯಾನ ಸರ್ಕಲ್ ಮೊದಲಾದ ಪ್ರಮುಖ ರಸ್ತೆಗಳಿಗೆ ಡಾಂಬರು ಹಾಕಲಾಗಿತ್ತು. ಮಳೆ ಶುರುವಾದಾಗಿನಿಂದ ಕಾಮಗಾರಿಯ ನಿಜರೂಪ ಅನಾವರಣಗೊಳ್ಳುತ್ತಿದೆ.

    ರಸ್ತೆ ಕುಸಿಯಲು ಕಾರಣವೇನು ?: ಪರ್ಯಾಯ ತಯಾರಿ ಸಂದರ್ಭ ಇಲ್ಲಿನ ಪ್ರಮುಖ ರಸ್ತೆಗಳ ಅಡಿ ಯುಜಿಡಿ ಪೈಪ್‌ಲೈನ್ ಕಾಮಗಾರಿ ನಡೆದಿತ್ತು. ಈ ಕಾಮಗಾರಿ ಗುತ್ತಿಗೆ ವಹಿಸಿಕೊಂಡವರಿಂದ ಕೆಲಸ ವಿಳಂಬವಾಗಿತ್ತು ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ. ತಾಂತ್ರಿಕ ಆಯಾಮದಲ್ಲಿ ಕಾಮಗಾರಿ ನಡೆದು ಎರಡು ತಿಂಗಳ ಬಳಿಕ ಡಾಂಬರು ಅಳವಡಿಸಿ ಹೊಸ ರಸ್ತೆ ಮಾಡಬೇಕು. ಇದರಿಂದ ಒಳಭಾಗದ ಮಣ್ಣು ವ್ಯವಸ್ಥಿತವಾಗಿ ಹೊಂದಿಕೊಂಡಿರುತ್ತದೆ. ಬಳಿಕ ರಸ್ತೆ ನಿರ್ಮಿಸಬಹುದು. ಆದರೆ ಪರ್ಯಾಯ ಗಡಿಬಿಡಿ, ಒತ್ತಡದಲ್ಲಿ ಎರಡು ತಿಂಗಳು ಅವಕಾಶ ಕೊಡದೆ ಅದರ ಮೇಲೆಯೇ ಡಾಂಬರು ಅಳವಡಿಸಿರುವುದು ಅವ್ಯವಸ್ಥೆಗೆ ಕಾರಣ ಎನ್ನುತ್ತಿವೆ ನಗರಸಭೆ ಮೂಲಗಳು.

    ಕುಸಿದಿರುವ ರಸ್ತೆಗಳಿಂದ ಅಪಾಯ ಆಗದಂತೆ ತಾತ್ಕಾಲಿಕ ಕ್ರಮ ತೆಗೆದುಕೊಂಡಿದ್ದು, ಬ್ಯಾರಿಕೇಡ್ ಅಳವಡಿಸಲಾಗಿದೆ. ಗುತ್ತಿಗೆದಾರರಿಂದ ಇರಿಸಿಕೊಳ್ಳಲಾದ ಭದ್ರತಾ ಠೇವಣಿಯಲ್ಲಿ ಇದನ್ನು ಸರಿಪಡಿಸಲಾಗುವುದು. ಇದನ್ನು ಶೀಘ್ರ ಸರಿಪಡಿಸುವಂತೆ ಯುಜಿಡಿ ಕಾಮಗಾರಿ ಮತ್ತು ರಸ್ತೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
    ಮೋಹನ್‌ರಾಜ್ ಎಇಇ, ಉಡುಪಿ ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts