More

    ಆಲೂಗಡ್ಡೆ ಬಿತ್ತನೆ ಬೀಜ ಬೆಲೆ ಏರಿಕೆ; ಒಂದು ಮೂಟೆಗೆ 1400 ರಿಂದ 1700 ರೂ.ಗೆ ಮಾರಾಟ

    ಎನ್.ವೆಂಕಟೇಶ್, ಚಿಕ್ಕಬಳ್ಳಾಪುರ

    ಕಳೆದ ಕೆಲ ದಿನಗಳಿಂದಲೂ ಬಿತ್ತನೆ ಆಲೂಗಡ್ಡೆ ಬೆಲೆಯು ನಿರಂತರವಾಗಿ ಏರಿಕೆಯತ್ತ ಸಾಗಿದ್ದು ವ್ಯಾಪಾರಸ್ಥರಲ್ಲಿ ಸಂತಸ ಮೂಡಿಸಿದೆ.
    ಮಾಂಡೌಸ್ ಚಂಡ ಮಾರುತದ ಪ್ರಭಾವದಿಂದ ನಿರಂತರ ಜಡಿ ಮಳೆ, ಮೋಡ ಮುಸುಕಿದ ವಾತಾವರಣವಿದ್ದ ಸಂದರ್ಭದಲ್ಲಿ ಮೂಟೆಯ ಬೆಲೆ 600ರಿಂದ 800ಕ್ಕೆ ಕುಸಿದಿತ್ತು. ಬೇಡಿಕೆಯೂ ಇರಲಿಲ್ಲ. ಕಳೆದ ವರ್ಷ 2900 ರಿಂದ 3900 ರೂ.ಗಳವರೆಗೆ ಮಾರಿದ್ದ ವ್ಯಾಪಾರಸ್ಥರು ಈ ಬಾರಿಯ ಮಂಕಾದ ವಹಿವಾಟಿಗೆ ನಷ್ಟ ಅನುಭವಿಸಿದ್ದು, ಸಂಕಷ್ಟದ ಬಗ್ಗೆ ಅಳಲು ತೋಡಿಕೊಂಡಿದ್ದರು. ಆದರೆ, ಇದೀಗ ಮೂಟೆಯ ದರ 1400ರಿಂದ 1700 ರೂ.ಗಳಿಗೆ ಜಿಗಿದಿದೆ. ಜನವರಿಯವರೆಗೂ ಬಿತ್ತನೆಗೆ ಅವಕಾಶವಿ ರುವುದರಿಂದ ಮುಂಬರುವ ದಿನಗಳಲ್ಲೂ ಬೆಲೆ ಮತ್ತಷ್ಟು ಏರಿಕೆ ಅಗುವ ಸಾಧ್ಯತೆ ಇದೆ. ಇದು ವ್ಯಾಪಾರಸ್ಥರ ಸಂತಸಕ್ಕೆ ಕಾರಣವಾಗಿದೆ.

    ಸಾಧನೆಯ ಸಹಜ ನಿರೀಕ್ಷೆ
    ಈ ಭಾಗದಲ್ಲಿ ಬೆಳೆಯುವ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಆಲೂಗಡ್ಡೆ ಬೆಳೆ ಸಹ ಒಂದು. ಪ್ರತಿ ವರ್ಷ ಅಕ್ಟೋಬರ್‌ನಿಂದ ಡಿಸೆಂಬರ್ ರವರೆಗೆ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಿ, ಒಳ್ಳೆಯ ಇಳುವರಿ ಪಡೆಯಲಾಗುತ್ತದೆ. ಇಲ್ಲಿನ ಆಲೂಗಡ್ಡೆಯು ರಾಜ್ಯ ಮಾತ್ರವಲ್ಲದೇ ಆಂಧ್ರ, ತೆಲಂಗಾಣ, ತಮಿಳುನಾಡು, ಆಂಧ್ರ ಸೇರಿದಂತೆ ವಿವಿಧ ಭಾಗಗಳಿಗೆ ಪೂರೈಕೆಯಾಗುತ್ತದೆ.

    ಈಗಲೇ ಬಿತ್ತನೆ ವಿಳಂಬ
    ಅಕ್ಟೋಬರ್ ಆಲೂಗಡ್ಡೆ ಬಿತ್ತನೆಗೆ ಸೂಕ್ತ ಕಾಲ. ಆದರೆ, ಜಿಲ್ಲೆಯಲ್ಲಿ ನಿರಂತರವಾಗಿ ಬೆಳೆಗೆ ಹವಾಮಾನ ವೈಪರೀತ್ಯದಿಂದ ಇಲ್ಲಿಯವರೆಗೂ ನಿರೀಕ್ಷೆಗೆ ಅನುಗುಣವಾಗಿ ಸಾಧನೆ ಕಂಡು ಬಂದಿಲ್ಲ. ಅನುಕೂಲಕರವಲ್ಲದ ಪರಿಸ್ಥಿತಿಯಿಂದ ಬಿತ್ತನೆಯನ್ನು ಮುಂದೂಡಿಕೊಂಡು ಬಂದಿದ್ದು, ಅಲ್ಲಲ್ಲಿ ಅಧಿಕ ತೇವಾಂಶದಿಂದ ಬಿತ್ತನೆ ಆಲೂಗಡ್ಡೆ ಕೊಳೆತು
    ಹೋಗಿದೆ. ಹಲವರು ಈಗಾಗಲೇ ಪರ್ಯಾಯ ಬೆಳೆಗಳ ಮೊರೆ ಹೋಗಿದ್ದಾರೆ.

    ನಷ್ಟದ ಲೆಕ್ಕಾಚಾರ
    ಇಲ್ಲಿಯವರೆಗೂ ಬಿತ್ತನೆ ಆಲೂಗಡ್ಡೆಯ ಮೂಟೆಗಳು ನಿರೀಕ್ಷೆಗೆ ಅನುಗುಣವಾಗಿ ಖರೀದಿಯಾಗಿಲ್ಲ. 60 ಕ್ಕೂ ಹೆಚ್ಚು ಲೋಡ್ ದಾಸ್ತಾನು ಹಾಗೆಯೇ ಇದೆ. ಈ ಭಾಗದ ವ್ಯಾಪಾರಿಗಳು ಹೆಚ್ಚಿನ ಬೇಡಿಕೆ ಮತ್ತು ಗುಣಮಟ್ಟವಿರುವ ಜಲಂಧರ್, ಚಂಬಲ್ ನಿಂದ ಬಿತ್ತನೆ ಬೀಜಗಳನ್ನು ತರಿಸಿದ್ದಾರೆ. ಆದರೆ, ಎರಡು ತಿಂಗಳು ಮಾರಾಟವಾಗದ ಹಿನ್ನೆಲೆಯಲ್ಲಿ ಮೊಳಕೆಯೊಡೆದ ಬಿತ್ತನೆ ಬೀಜವು ಹಾಳಾಗಿದೆ. ಗುಣಮಟ್ಟ ಕುಸಿದಿದೆ. ಇದರಿಂದ ವ್ಯಾಪಾರಿಗಳಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಕಳೆದ ವರ್ಷ ಒಳ್ಳೆಯ ಲಾಭ ಸಿಕ್ಕಿದ ಹಿನ್ನೆಲೆಯಲ್ಲಿ ಈ ಬಾರಿಯೂ ಸಾಲದ ಹಣದಲ್ಲಿ ಬಂಡವಾಳ ಹೂಡಿ, ಬಿತ್ತನೆ ಬೀಜವನ್ನು ವ್ಯಾಪಾರಕ್ಕಿಟ್ಟಿದ್ದರು. ಆದರೆ, ಹವಾಮಾನ ವೈಪರೀತ್ಯದಿಂದ 4 ಸಾವಿರ ರೂ. ಗಳಿಗೆ ಮೂಟೆ ಬಿಕರಿಯಾಗುವ ನಿರೀಕ್ಷೆ ಹುಸಿಯಾಗಿದ್ದು, ಕಳೆದ 20 ದಿನಗಳ ಹಿಂದೆ ಕನಿಷ್ಠ ದರ 600 ರೂ.ಗಳಿಗೆ ಕುಸಿದಿತ್ತು. ಆದರೆ, ಎರಡು ಪಟ್ಟು ಹೆಚ್ಚಾಗಿದೆ. ಮತ್ತಷ್ಟು ಏರಿಕೆಯಾಗುವ ಮಾತುಗಳು ಕೇಳಿ ಬರುತ್ತಿವೆ.


    ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ, ಬಿತ್ತನೆ ಆಲೂಗಡ್ಡೆ ಮೂಟೆಗಳನ್ನು ತರಿಸಲಾಗಿದೆ. ಆದರೆ, ಇಲ್ಲಿಯವರೆಗೂ ವಹಿವಾಟು ಮಾತ್ರ ನಿರೀಕ್ಷೆಗೆ ಅನುಗುಣವಾಗಿ ನಡೆದಿಲ್ಲ. ಬಿಸಾಡುವಂತಹ ಪರಿಸ್ಥಿತಿ ಬಂದಿದೆ. ಎರಡು ದಿನಗಳಿಂದ ಮೂಟೆ ದರ 1500 ರೂ.ಗಳಿಗೆ ಏರಿಕೆಯಾಗಿದ್ದರೂ ನಷ್ಟ ಸರಿದೂಗುವ ನಿರೀಕ್ಷೆ ಇಲ್ಲ.

    ನಾರಾಯಣಸ್ವಾಮಿ,ಬಿತ್ತನೆ ಆಲೂಗಡ್ಡೆ ವ್ಯಾಪಾರಿ, ಚಿಕ್ಕಬಳ್ಳಾಪುರ

    ಇಷ್ಟೊತ್ತಿಗಾಗಲೇ ಆಲೂಗಡ್ಡೆ ಬಿತ್ತನೆಯಲ್ಲಿ ಉತ್ತಮ ಸಾಧನೆಯಾಗಬೇಕಾಗಿತ್ತು. ಆದರೆ, ಹವಾಮಾನ ವೈಪರೀತ್ಯವು ಕಾಡಿತು. ಈ ವಾರದಲ್ಲಿ ಬಿತ್ತನೆಗೆ ಸಿದ್ಧತೆ ಹಮ್ಮಿಕೊಳ್ಳಲಾಗಿದೆ. ಇದರ ನಡುವೆ ಬಿತ್ತನೆ ಆಲೂಗಡ್ಡೆ ಮೂಟೆ ದರ ಹೆಚ್ಚಳವಾಗಿದೆ.

    ಮುನಿರಾಜು, ರೈತ, ಚಿಕ್ಕಬಳ್ಳಾಪುರ

    ಆಲೂಗಡ್ಡೆ ಬಿತ್ತನೆಗೆ ಜನವರಿಯವರೆಗೆ ಕಾಲಾವಕಾಶ ಇದೆ. ಇದಕ್ಕೆ ಮುಂಬರುವ ದಿನಗಳಲ್ಲಿ ದರ ಹೆಚ್ಚಳದ ನಿರೀಕ್ಷೆ ಇದೆ. ಆದರೆ, ಈ ಬಾರಿ ವ್ಯಾಪಾರದಲ್ಲಿ ತುಂಬಾ ನಷ್ಟ ಉಂಟಾಗಿದೆ.

    ಶೇಖರ್, ಆಲೂಗಡ್ಡೆ ಬಿತ್ತನೆ ಬೀಜ ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts