More

    5,8,9ನೇ ತರಗತಿ ಪಬ್ಲಿಕ್ ಪರೀಕ್ಷೆ ಮುಂದೂಡಿಕೆ: ಸರ್ಕಾರಕ್ಕೆ ಸತತ 2ನೇ ವರ್ಷ ಮುಖಭಂಗವಾಗಿದ್ದು ಏಕೆ ಗೊತ್ತಾ?

    ಬೆಂಗಳೂರು ರಾಜ್ಯ ಸರ್ಕಾರವು 5,8 ಮತ್ತು 9ನೇ ತರಗತಿ ರಾಜ್ಯ ಪಠ್ಯಕ್ರಮ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಡೆಸುತ್ತಿದ್ದ ಮೌಲ್ಯಾಂಕನ ಪರೀಕ್ಷೆಗೆ ಸುಪ್ರೀಂಕೋರ್ಟ್ ಮಂಗಳವಾರ ತಡೆ ನೀಡಿರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯು ಮೌಲ್ಯಾಂಕನವನ್ನು ಮುಂದಿನ ಆದೇಶದವರೆಗೂ ಮುಂದೂಡಿದೆ.

    5,8ಮತ್ತು 9ನೇ ತರಗತಿಗೆ ಮಂಡಳಿ ಪರೀಕ್ಷೆ ನಡೆಸಬಹುದು ಎಂದು ರಾಜ್ಯ ಹೈಕೋರ್ಟ್‌ನ ವಿಭಾಗೀಯ ಪೀಠವು ನೀಡಿದ್ದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ರುಪ್ಸಾ ಸಂಘಟನೆಯು ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

    ಈ ಅರ್ಜಿಗಳನ್ನು ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪನ್ನು ರದ್ದುಪಡಿಸಿದೆ ಮತ್ತು ಪ್ರಕರಣವನ್ನು ವಿಭಾಗೀಯ ಪೀಠಕ್ಕೆ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಮಾ.13ರಿಂದ ನಡೆಯಬೇಕಾಗಿದ್ದ ಮೌಲ್ಯಾಂಕನವನ್ನು ಮುಂದಿನ ಆದೇಶದವರೆಗೂ ಮುಂದೂಡುವಂತೆ ಶಾಲೆಗಳಿಗೆ ಸೂಚಿಸಲಾಗಿದೆ ಎಂದು ಶಾಲಾ ಶಿಕ್ಷಣ ಆಯುಕ್ತರು ತಿಳಿಸಿದ್ದಾರೆ.

    ಶಿಕ್ಷಣ ಇಲಾಖೆ ಎಡಬಿಡಂಗಿತನಕ್ಕೆ ಪಾಲಕರ ಆಕ್ರೋಶ
    ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ. ಪರೀಕ್ಷಾ ನಿಯಮಗಳನ್ನು ಕಾನೂನು ವ್ಯಾಪ್ತಿಯಲ್ಲಿ ನಿರ್ಣಯ ಮಾಡದಿರುವ ಕಾರಣ ಮಕ್ಕಳು ಪೇಚಾಡುವಂತಾಗಿದೆ. ಎರಡು ವರ್ಷವಾದರೂ ಶಿಕ್ಷಣ ಇಲಾಖೆ ಬುದ್ಧಿಕಲಿತಿಲ್ಲ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಕಳೆದ ವಾರವಷ್ಟೇ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ಈ ವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಸಿದೆ. ಕಾನೂನು ಅಡಿಯಲ್ಲಿ ಪರೀಕ್ಷೆ ನಡೆಸದಿದ್ದರೆ, ಏಕೆ ಸುಮ್ಮನೆ ವಾದ ಮಾಡಬೇಕು. ಒಂದೇ ಬಾರಿಗೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರೆ, ಶಾಲಾ ಹಂತದಲ್ಲಿಯೇ ಪರೀಕ್ಷೆ ನಡೆಸಬಹುದಿತ್ತು ಎಂದು ಅಸಮಧಾನ ಹೊರ ಹಾಕಿದ್ದಾರೆ.

    ಆರ್‌ಟಿಇ-2009ರ ಪ್ರಕಾರ ಮಂಡಳಿ ಪರೀಕ್ಷೆ ಮಾಡಬಾರದು ಎಂಬ ಅಧಿನಿಯಮವಿದೆ. ಶಿಕ್ಷಣ ಇಲಾಖೆ ಮತ್ತು ಸಚಿವ ಮಧು ಬಂಗಾರಪ್ಪ ಅವರು ಕಾನೂನು ವಿರುದ್ಧವಾಗಿ ಹಠಕ್ಕೆ ಬಿದ್ದು ಮಂಡಳಿ ಪರೀಕ್ಷೆಗೆ ಮುಂದಾಗಿದ್ದರು. ಆದರೆ, ನಮ್ಮ ವಾದವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್, ಯಾವುದೇ ಕಾರಣಕ್ಕೂ ಮೌಲ್ಯಾಂಕನ ನಡೆಸಬಾರದು ಎಂದು ತೀರ್ಪು ನೀಡಿರುವುದನ್ನು ಸ್ವಾಗತಿಸುತ್ತೇವೆ.
    – ಲೋಕೇಶ್ ತಾಳಿಕಟ್ಟೆ, ರುಪ್ಸಾ ಸಂಘಟನೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts