More

    ಸಮಾಧಿಯಿಂದ ವಿವಾಹಿತ ಮಹಿಳೆ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

    ರಾಣೆಬೆನ್ನೂರ: ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶವಸಂಸ್ಕಾರ ನೆರವೇರಿಸಿದ್ದ ಯುವತಿಯೊಬ್ಬಳ ಪ್ರಕರಣ ನಂತರ ದೂರಿನ ಹಿನ್ನೆಲೆಯಲ್ಲಿ ಆಕೆಯ ಶವವನ್ನು ಶುಕ್ರವಾರ ಹೊರ ತೆಗೆದು ಪರೀಕ್ಷೆ ನಡೆಸಲಾಯಿತು.

    15-7-2020ರಂದು ನಗರದ ಗೌಳಿಗಲ್ಲಿಯ ಸೋನಿಯಾ ನಿರಂಜನ ಗೌಳಿ (20) ಪತಿಯ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡದೇ ನಗರದ ಹುಲ್ಲತ್ತಿ ರಸ್ತೆಯ ರುದ್ರಭೂಮಿಯಲ್ಲಿ ಶವ ಸಂಸ್ಕಾರ ನೆರವೇರಿಸಿದ್ದರು.

    ಆದರೆ, ‘ಸೋನಿಯಾಳದ್ದು ಆತ್ಮಹತ್ಯೆ ಅಲ್ಲ. ಇದೊಂದು ಕೊಲೆ’ ಎಂದು ಅಪರಿಚಿತ ವ್ಯಕ್ತಿಯೊಬ್ಬರು ಶಹರ ಠಾಣೆಗೆ ಪತ್ರ ಬರೆದಿದ್ದರು. ಅಲ್ಲದೆ, ಮೃತಳ ಪಾಲಕರೂ ಕೊಲೆ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಅ. 22ರಂದು ಶಹರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣವನ್ನು ಕೊಲೆ ಎಂದು ದೂರು ದಾಖಲಿಸಿಕೊಳ್ಳಲಾಗಿತ್ತು. ಅದೇ ದಿನ ಆಕೆಯ ಪತಿ ನಿರಂಜನ ಹಾಲೇಶ ಗೌಳಿ (28)ಯನ್ನು ಪೊಲೀಸರು ಬಂಧಿಸಿದ್ದರು.

    ತಹಸೀಲ್ದಾರ್ ನೇತೃತ್ವದಲ್ಲಿ ಪರೀಕ್ಷೆ: ಪ್ರಕರಣ ತಿರುವು ಪಡೆದುಕೊಂಡ ಹಿನ್ನೆಲೆಯಲ್ಲಿ ತಹಸೀಲ್ದಾರ್ ಬಸನಗೌಡ ಕೋಟೂರು ನೇತೃತ್ವದಲ್ಲಿ ಹಾಗೂ ಮೃತಳ ಕುಟುಂಬಸ್ಥರ ಸಮ್ಮುಖದಲ್ಲಿ ಹಾವೇರಿ ಜಿಲ್ಲಾಸ್ಪತ್ರೆಯ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು, ಸೋನಿಯಾಳ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದರು. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿವಿಧ ಹಂತದಲ್ಲಿ ಪರೀಕ್ಷೆ ನಡೆಸಲಾಯಿತು.

    ಡಿವೈಎಸ್ಪಿ ಟಿ.ವಿ. ಸುರೇಶ, ಸಿಪಿಐ ಎಂ.ಐ. ಗೌಡಪ್ಪಗೌಡ್ರ, ಪಿಎಸ್​ಐ ಪ್ರಭು ಕೆಳಗಿನಮನಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

    ಮೃತ ಸೋನಿಯಾಳ ತಾಯಿ ಮಗಳನ್ನು ಕೊಲೆ ಎನ್ನುವ ಶಂಕೆ ಮೇಲೆ ದೂರು ನೀಡಿದ ಹಿನ್ನೆಲೆಯಲ್ಲಿ ಮೃತಳ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರಿಂದ ವರದಿ ಬಂದ ಬಳಿಕ ಸ್ಪಷ್ಟತೆ ಸಿಗಲಿದೆ. ತಜ್ಞರ ವರದಿ ಆಧಾರದ ಮೇಲೆ ಮುಂದಿನ ತನಿಖೆ ನಡೆಸಲಾಗುವುದು.

    | ಟಿ.ವಿ. ಸುರೇಶ, ಡಿವೈಎಸ್ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts