More

    ಕರೊನೋತ್ತರ ಪ್ರಚಾರ ತಂತ್ರ; ಪ್ರಿ-ರಿಲೀಸ್ ಇವೆಂಟ್ ಎಂಬ ಹೊಸ ಮಂತ್ರ

    | ಚೇತನ್ ನಾಡಿಗೇರ್ ಬೆಂಗಳೂರು

    ಕನ್ನಡ ಚಿತ್ರರಂಗಕ್ಕೆ ಇದು ಹೊಸದೇನಲ್ಲ. ಈ ಹಿಂದೆಯೂ ಬೆಂಗಳೂರಿನಿಂದ ಹೊರಗೆ ಬೇರೆ ಊರುಗಳಲ್ಲಿ ಸಾವಿರಾರು ಜನರ ಮಧ್ಯದಲ್ಲಿ ಈ ಆಡಿಯೋ ಬಿಡುಗಡೆ ಸಮಾರಂಭಗಳು, ಪ್ರಚಾರ ರ್ಯಾಲಿಗಳು, ಪತ್ರಿಕಾಗೋಷ್ಠಿಗಳು ನಡೆಯುತ್ತಿದ್ದವು. ಅದಕ್ಕೀಗ ಹೊಸ ಹೆಸರು ಸಿಕ್ಕಿದೆ. ಅದೇ ಪ್ರೀ-ರಿಲೀಸ್ ಇವೆಂಟ್.

    ಈ ಪ್ರೀ-ರಿಲೀಸ್ ಇವೆಂಟ್ ಎನ್ನುವುದು ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಆಗಿದೆ. ಹಾಗೆ ಟ್ರೆಂಡ್ ಆಗುವುದಕ್ಕೂ ಕಾರಣವಿದೆ. ಮುಂಚೆಲ್ಲಾ ಹಾಡುಗಳ ಬಿಡುಗಡೆಯನ್ನು ಬೇರೆ ಊರುಗಳಲ್ಲಿ ಬಿಡುಗಡೆ ಮಡುವ ಪರಿಪಾಠವಿತ್ತು. ಈ ಮೂಲಕ, ಬೆಂಗಳೂರಲ್ಲದೆ ಬೇರೆ ನಗರಗಳಿಗೆ ಹೋಗಿ ಅಲ್ಲಿನ ಅಭಿಮಾನಿಗಳನ್ನು ಭೇಟಿ ಮಾಡುವ ಮತ್ತು ಅಲ್ಲೆಲ್ಲ ಚಿತ್ರಗಳ ಪ್ರಚಾರ ಮಾಡುವ ಪ್ರಯತ್ನಗಳಾಗುತ್ತಿದ್ದವು. ಈಗ ಚಿತ್ರದ ಹಾಡುಗಳೆಲ್ಲ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗುತ್ತಿವೆ. ಇದರಿಂದಾಗಿ ಹಾಡುಗಳ ನೆಪದಲ್ಲಿ ಬೇರೆ ಊರುಗಳಿಗೆ ಹೋಗಿ ಚಿತ್ರ ಪ್ರಚಾರ ಮಾಡುವ ಮತ್ತು ಅಭಿಮಾನಿಗಳನ್ನು ಭೇಟಿ ಮಾಡುವ ಸಂಪ್ರದಾಯ ನಿಂತೇಹೋಗುತ್ತಿದ್ದಂತೆ ಹುಟ್ಟಿಕೊಂಡಿದ್ದು ಈ ಪ್ರೀ-ರಿಲೀಸ್ ಇವೆಂಟ್ ಎಂಬ ಹೊಸ ಪ್ರಚಾರ ತಂತ್ರ.

    ಆತ್ಮ ಅದೇ, ದೇಹ ಹೊಸದು: ಇಲ್ಲಿ ಆತ್ಮ ಹಳೆಯದು, ದೇಹ ಮಾತ್ರ ಹೊಸದು. ಈ ಆಡಿಯೋ ಸಮಾರಂಭಗಳೇ ಹೊಸ ರೂಪದಲ್ಲಿ ಪ್ರೀ-ರಿಲೀಸ್ ಇವೆಂಟ್​ಗಳಾಗಿ ರೂಪಾಂತರಗೊಂಡಿವೆ. ಬೃಹತ್ ವೇದಿಕೆಗಳಲ್ಲಿ ಅದೇ ಮಾತು, ಹಾಡು, ಹರಟೆ, ನೃತ್ಯ, ಮನರಂಜನೆ, ಹಾಡು ಅಥವಾ ಟ್ರೇಲರ್ ಬಿಡುಗಡೆ, ಧನ್ಯವಾದ ಸಮರ್ಪಣೆ ಇಲ್ಲೂ ಮುಂದುವರೆದಿದೆ. ಹಾಗಿರುವಾಗ ಏನು ವ್ಯತ್ಯಾಸ ಎಂಬ ಪ್ರಶ್ನೆ ಬರಬಹುದು. ವ್ಯತ್ಯಾಸವನ್ನು ಪಕ್ಕಕ್ಕಿಟ್ಟು ನೋಡಿದರೆ, ಇಲ್ಲಿ ಉದ್ದೇಶ ಒಂದೇ. ಅದುವೇ ಚಿತ್ರದ ಪ್ರಚಾರ.

    ‘ಪೊಗರು’ ಚಿತ್ರದಿಂದ ಶುರು: ಲಾಕ್​ಡೌನ್ ನಂತರ ಮೊದಲಿಗೆ ಇಂಥದ್ದೊಂದು ಕಾರ್ಯಕ್ರಮವನ್ನು ಆಯೋಜಿಸಿದ್ದು ‘ಪೊಗರು’ ಚಿತ್ರತಂಡ. ದಾವಣಗೆರೆಯಲ್ಲಿ ಪ್ರೀ-ರಿಲೀಸ್ ಇವೆಂಟ್ ಮಾಡಿ ಟ್ರೇಲರ್ ಬಿಡುಗಡೆ ಮಾಡಲಾಯಿತು. ಆ ನಂತರ ‘ರಾಬರ್ಟ್’ ಚಿತ್ರತಂಡದವರು ಹೈದರಾಬಾದ್ ಮತ್ತು ಹುಬ್ಬಳ್ಳಿಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿ, ಅಲ್ಲಿ ಚಿತ್ರದ ಪ್ರಚಾರ ಮಾಡಿದರು. ತೀರಾ ಇತ್ತೀಚೆಗೆ, ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ತಂಡದವರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ‘ಯುವಸಂಭ್ರಮ’ ಹೆಸರಲ್ಲಿ ಒಂಬತ್ತು ಜಿಲ್ಲೆಗಳಿಗೆ ಭೇಟಿ ಕೊಟ್ಟು ಚಿತ್ರವನ್ನು ಭರ್ಜರಿಯಾಗಿ ಪ್ರಚಾರ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ‘ಕೋಟಿಗೊಬ್ಬ 3’ ಮತ್ತು ‘ಸಲಗ’ ಚಿತ್ರಗಳ ಪ್ರೀ-ರಿಲೀಸ್ ಇವೆಂಟ್​ಗಳು ಕ್ರಮವಾಗಿ ಚಿತ್ರದುರ್ಗ ಮತ್ತು ಹೊಸಪೇಟೆಗಳಲ್ಲಿ ನಡೆಯಲಿವೆ.

    ಜನರ ಬಳಿಗೆ ಸಿನಿಮಂದಿ: ಇನ್ನೇನು ಸಿನಿಮಾ ಬಿಡುಗಡೆಗೆ ಕೆಲವೇ ದಿನ ಬಾಕಿ ಇರುವಾಗಲೇ ಚಿತ್ರತಂಡಗಳು ಇಂಥ ಬೃಹತ್ ಕಾರ್ಯಕ್ರಮಗಳ ಮೂಲಕ ಚಿತ್ರಗಳನ್ನು ನಾಡಿನ ಜನರ ಮಡಿಲಿಗೆ ಹಾಕುತ್ತಿವೆ. ಈ ಇವೆಂಟ್​ಗಳಿಂದ ಆಗುತ್ತಿರುವ ಒಂದು ಅನುಕೂಲವೆಂದರೆ, ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿಗೆ ಸೀಮಿತವಾಗಿದ್ದ ಚಿತ್ರರಂಗದ ಕಾರ್ಯಕ್ರಮಗಳು, ಗಡಿ ದಾಟಿ ಹೊರಗೂ ನಡೆಯುವುದಕ್ಕೆ ಪ್ರಾರಂಭವಾಗಿವೆ. ಇದರಿಂದಾಗಿ ಚಿತ್ರರಂಗದ ಮತ್ತು ಅಭಿಮಾನಿಗಳ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಿದ್ದು, ಇದರ ಪರಿಣಾಮ ಚಿತ್ರದ ಕಲೆಕ್ಷನ್ ಮೇಲೂ ಆಗುತ್ತಿದೆ ಎಂದರೆ ತಪ್ಪಿಲ್ಲ. ಹಾಗಾಗಿಯೇ, ಪ್ರೀ-ರಿಲೀಸ್ ಇವೆಂಟ್ ಎನ್ನುವುದು ಸದ್ಯ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಕ್ರೇಜ್ ಆಗಿದೆ. ಮುಂದಿನ ಇನ್ನೆರೆಡು ತಿಂಗಳುಗಳಲ್ಲಿ ಐದಾರು ಇವೆಂಟ್​ಗಳು ನಡೆಯುತ್ತಿದ್ದು, ಬಹುಶಃ ಕರೊನಾ ಎರಡನೆಯ ಅಲೆಯ ಸಮಸ್ಯೆ ಎದುರಾಗದಿದ್ದರೆ, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾದರೆ ಆಶ್ಚರ್ಯವಿಲ್ಲ.

    ಸಿನಿಮಂದಿ ಸಾಮಾಜಿಕ ಜವಾಬ್ದಾರಿ ಮೆರೆಯಲಿ

    ಕರೊನಾ ಎರಡನೇ ಅಲೆ ಹೆಚ್ಚುತ್ತಿರುವುದರಿಂದ ಈ ಇವೆಂಟ್​ಗಳಿಂದ ಏನಾದರೂ ಸಮಸ್ಯೆ ಹೆಚ್ಚಾಗಬಹುದಾ ಎಂಬ ಭಯ ಎಲ್ಲರನ್ನೂ ಕಾಡುತ್ತಿದೆ. ಇತ್ತೀಚೆಗೆ ನಡೆದ ‘ಯುವಸಂಭ್ರಮ’ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಸೇರಿದ್ದರು. ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳಿರಲಿಲ್ಲ. ಇದರಿಂದಾಗಿ ಕರೊನಾ ಉಲ್ಬಣಗೊಳ್ಳುವ ಭಯ ಇದ್ದೇ ಇದೆ. ಈ ವಿಷಯವಾಗಿ ಆರೋಗ್ಯ ಸಚಿವ ಕೆ. ಸುಧಾಕರ್ ಸಹ ಮಾತನಾಡಿದ್ದು, ನಟರು ಸಾಮಾಜಿಕ ಜವಾಬ್ದಾರಿ ಮೆರೆಯಬೇಕು ಎಂದಿದ್ದಾರೆ. ಚಿತ್ರತಾರೆಯರು ತಾವು ಮಾಸ್ಕ್ ಧರಿಸಿ, ತಮ್ಮ ಅಭಿಮಾನಿಗಳಿಗೂ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡಿಕೊಳ್ಳಬೇಕು ಎಂದಿದ್ದಾರೆ. ಇದು ಸರಿಯಾಗಿ ಪಾಲನೆಯಾಗದಿದ್ದಲ್ಲಿ, ಮುಂದಿನ ದಿನಗಳಿಗೆ ಈ ಇವೆಂಟ್ ಮತ್ತು ಯಾತ್ರೆಗೆ ತಾತ್ಕಾಲಿಕವಾಗಿ ಬ್ರೇಕ್ ಬೀಳುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts