More

    ಹೊಸ ಕೃಷಿ ಕಾಯ್ದೆಗೆ ದೇಶದ ಬಹುತೇಕರ ಬೆಂಬಲ: ಮಾಧ್ಯಮ ಸಂಸ್ಥೆ ನಡೆಸಿದ ಸಮೀಕ್ಷೆ, ಪ್ರತಿಭಟನೆ ಕೈಬಿಡುವಂತೆ ಹೆಚ್ಚಿನವರ ಪ್ರತಿಕ್ರಿಯೆ

    ನವದೆಹಲಿ: ಮೂರು ಹೊಸ ಕೃಷಿ ಕಾಯ್ದೆಗಳನ್ನು ದೇಶದ ಬಹುತೇಕ ಜನರು ಬೆಂಬಲಿಸಿದ್ದು, ಇವನ್ನು ಹಿಂಪಡೆಯ ಬೇಕು ಎಂಬ ಬೇಡಿಕೆಯನ್ನು ರೈತರು ಕೈಬಿಡಬೇಕು ಎಂಬ ಆಶಯ ಸಮೀಕ್ಷೆಯಿಂದ ವ್ಯಕ್ತವಾಗಿದೆ. ಒಟ್ಟಾರೆ ಶೇ. 53.60 ಮಂದಿ ಕಾಯ್ದೆಗಳನ್ನು ಜಾರಿಗೊಳಿಸಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಶೇ. 56.59 ಜನರು ರೈತರು ಪ್ರತಿಭಟನೆಯನ್ನು ಹಿಂಪಡೆಯಲು ಇದು ಸಕಾಲ ಎಂದಿದ್ದಾರೆ.

    ಮಾಧ್ಯಮ ಸಂಸ್ಥೆಯೊಂದು ದೇಶದ 22 ರಾಜ್ಯಗಳಲ್ಲಿ ಈ ಸಮೀಕ್ಷೆ ನಡೆಸಿದ್ದು, 2,400ಕ್ಕೂ ಹೆಚ್ಚು ಮಂದಿ ಇದಕ್ಕೆ ಸ್ಪಂದಿಸಿದ್ದಾರೆ. ಹೊಸ ಕಾಯ್ದೆಗಳಿಂದ ಬೆಳೆಗಳಿಗೆ ಉತ್ತಮ ಬೆಲೆ ದೊರೆಯಲಿದೆ. ಎಪಿಎಂಸಿ ಹೊರಗೂ ಕೃಷಿ ಉತ್ಪನ್ನ ಮಾರಾಟ ಮಾಡಲು ನೀಡಿರುವ ಅವಕಾಶವು ಸಮರ್ಪಕವಾದ ನಿರ್ಧಾರ ಎಂದು ಶೇ. 73 ಮಂದಿ ಪ್ರತಿಕ್ರಿಯಿಸಿದ್ದಾರೆ. ಕಾಯ್ದೆಗಳನ್ನು ವಿರೋಧಿಸುತ್ತಿರುವ ಹಿಂದೆ ರಾಜಕೀಯದ ಕುಮ್ಮಕ್ಕು ಇದೆ ಎಂದು ಶೇ. 48.7 ಮಂದಿ ಅಭಿಪ್ರಾಯಟ್ಟಿದ್ದು, ಶೇ. 52.69 ಮಂದಿ ರೈತರು ಕಾಯ್ದೆ ರದ್ದತಿಗೆ ಮಾಡಿರುವ ಆಗ್ರಹವನ್ನು ಕೈಬಿಡುವುದು ಒಳಿತು ಎಂದಿದ್ದಾರೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ರದ್ದು ಮಾಡಬಾರದು ಎಂಬ ರೈತರ ಬೇಡಿಕೆಗೆ ಶೇ. 53.94 ಮಂದಿ ಸಹಮತ ವ್ಯಕ್ತಪಡಿಸಿದ್ದಾರೆ. ಕೃಷಿ ವಲಯದಲ್ಲಿನ ಸುಧಾರಣೆ ಮತ್ತು ಅತ್ಯಾಧುನಿಕಗೊಳಿಸುವ ಸರ್ಕಾರದ ನಿರ್ಧಾರವನ್ನು ಒಟ್ಟಾರೆ ಶೇ. 70 ಜನರು ಅನುಮೋದಿಸಿದ್ದು, ದಕ್ಷಿಣ ಭಾರತದ ರಾಜ್ಯಗಳಲ್ಲಿ ಈ ಅಂಶಕ್ಕೆ ಶೇ. 74, ಉತ್ತರದ ರಾಜ್ಯಗಳಲ್ಲಿ ಶೇ. 63.77, ಪಶ್ಚಿಮ ಭಾಗದಲ್ಲಿ ಶೇ. 62.90 ಬೆಂಬಲ ವ್ಯಕ್ತವಾಗಿದೆ.

    ಸರ್ಕಾರದ ಪತ್ರದಲ್ಲಿ ಹೊಸದೇನೂ ಇಲ್ಲ: ಸರ್ಕಾರ ನೀಡಿರುವ ಪತ್ರದಲ್ಲಿ ಹೊಸದೇನೂ ಇಲ್ಲ ಎಂದು ರೈತರ ಮುಖಂಡರು ಹೇಳಿದ್ದಾರೆ. ಮಾತುಕತೆಗೆ ಸಿದ್ಧವೆಂದು ಸರ್ಕಾರ ಆಹ್ವಾನ ನೀಡುತ್ತದೆ. ಆದರೆ, ಸಮಸ್ಯೆ ಪರಿಹಾರಕ್ಕೆ ನಿರ್ದಿಷ್ಟವಾದ ಪರಿಹಾರ ಸೂಚಿಸುವುದಿಲ್ಲ ಎಂದು ಟೀಕಿಸಿದ್ದಾರೆ. ಸರ್ಕಾರ ನೀಡಿರುವ ಪತ್ರದಲ್ಲಿ ಹಳೆಯ ಅಂಶಗಳನ್ನೆ ಉಲ್ಲೇಖಿಸಿ ಮುಂದಿನ ಸುತ್ತಿನ ಮಾತುಕತೆಗೆ ದಿನಾಂಕ ಗೊತ್ತುಮಾಡಲು ಸಹಕಾರ ಕೋರಿದೆ. ಇಂಥ ಪತ್ರದಿಂದ ಯಾವ ಪ್ರಯೋಜನವೂ ಇಲ್ಲವೆಂಬುದು ಗೊತ್ತಿದ್ದರೂ ವೃತಾ ಪ್ರಯತ್ನ ಮಾಡಿದೆ. ಈ ಪತ್ರಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಚರ್ಚೆ ಮಾಡುತ್ತಿದ್ದೇವೆ ಎಂದು ಭಾರತೀಯ ಕಿಸಾನ್ ಸಂಘದ ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಕೃಷಿ ಸಚಿವಾಲಯ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್​ವಾಲ್ ಪ್ರತಿಭಟನೆ ನಡೆಸುತ್ತಿರುವ ರೈತರ 40 ಸಂಘಕ್ಕೆ ಈ ಪತ್ರ ಬರೆದಿದ್ದರು.

    3 ದಿನದ ಉಪವಾಸ ಆರಂಭ

    ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು 3 ದಿನಗಳ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಸಿಂಘು ಗಡಿಯಲ್ಲಿ ಮೊದಲ ತಂಡದ 11 ಮಂದಿ ಸೋಮವಾರ ಉಪವಾಸ ಧರಣಿ ನಡೆಸಿದರು. ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡ ಕಾರಣ ಸಿಂಘು, ಔಚಂದಿ, ಪಿಯಾವು, ಮನಿಯಾರಿ ಮತ್ತು ಮಂಗೇಶ್, ಟಿಕ್ರಿ, ಧನ್ಸಾ ಗಡಿಗಳನ್ನು ಬಂದ್ ಮಾಡಲಾಗಿತ್ತು. ಝುತಿಕಾರ ಗಡಿಯಲ್ಲಿ ಮಾತ್ರ ದ್ವಿಚಕ್ರ ವಾಹನ ಹಾಗೂ ಪದಾಚಾರಿಗಳ ಸಂಚಾರಕ್ಕೆ ಅವಕಾಶ ಇತ್ತು.

    ಕೃಷಿ ಕಾಯ್ದೆ ವಿರುದ್ಧ ಕೇರಳ ನಿರ್ಣಯ

    ಮೂರು ಹೊಸ ಕೃಷಿ ಕಾಯ್ದೆ ವಿರೋಧಿಸಿ ನಿರ್ಣಯ ಕೈಗೊಳ್ಳಲು ನಿರ್ಧರಿಸಿರುವ ಕೇರಳದ ಎಡರಂಗ ನೇತೃತ್ವದ ಸರ್ಕಾರ ಇದಕ್ಕಾಗಿ ಬುಧವಾರ ವಿಶೇಷ ಅಧಿವೇಶನ ಕರೆದಿದೆ. ಈ ಗೊತ್ತುವಳಿಯನ್ನು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬೆಂಬಲಿಸುವ ಸಾಧ್ಯತೆ ಇದೆ. ರೈತರ ಪ್ರತಿಭಟನೆಯನ್ನು ನಮ್ಮ ಸರ್ಕಾರ ಬೆಂಬಲಿಸುತ್ತಿದೆ. ಈ ನಿಟ್ಟಿನಲ್ಲಿ ನಿರ್ದಿಷ್ಟವಾಗಿ ಚರ್ಚೆ ನಡೆಸಲೆಂದೇ ಒಂದು ದಿನದ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಹಣಕಾಸು ಸಚಿವ ಥಾಮಸ್ ಐಸಾಕ್ ಹೇಳಿದ್ದಾರೆ.

    20 ಮಂದಿ ಬರಬೇಕಾದ ಮದುವೆಗೆ ಬಂದದ್ದು 10 ಸಾವಿರ! ಈಗ ಈ ಕುತೂಹಲದ ಮದುವೆಯದ್ದೇ ಚರ್ಚೆ

    ದುಬೈನಲ್ಲಿ ಕೆಲಸ ಕಳೆದುಕೊಂಡ ಭಾರತೀಯ ರಾತ್ರೋರಾತ್ರಿ ಕೋಟ್ಯಧಿಪತಿಯಾದ! ಅದೃಷ್ಟವೆಂದರೆ ಇದೇ ನೋಡಿ

    ವಾಪಸ್​ ಬಂದ್ರು ರಂಗೀಲಾ ಬೆಡಗಿ ಊರ್ಮಿಳಾ ಮಾತೊಂಡ್ಕರ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts