More

    ಬೈರುತ್​ ಸ್ಫೋಟ: 30 ಗಂಟೆ ಬಳಿಕ ಬಂದರು ಕಾರ್ಮಿಕ ರಕ್ತಸಿಕ್ತ ಸ್ಥಿತಿಯಲ್ಲಿ ಜೀವಂತ ಪತ್ತೆ!

    ಬೈರುತ್​: ಲೆಬನಾನ್​ ರಾಜಧಾನಿ ಬೈರುತ್​ ಬಂದರಿನಲ್ಲಿ ಬುಧವಾರ ಸಂಭವಿಸಿದ ಕೆಮಿಕಲ್​ ಸ್ಫೋಟ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಭೀಕರ ಸ್ಪೋಟದಲ್ಲಿ ಬದುಕುಳಿಯುವುದೆಂದರೆ ಮಹಾಪವಾಡವೇ ಸರಿ. ಸ್ಫೋಟದ ರಭಸಕ್ಕೆ ಸಮುದ್ರಕ್ಕೆ ಹಾರಿದ್ದ ಬಂದರು ಕೆಲಸಗಾರನೊಬ್ಬ ಬರೋಬ್ಬರಿ 30 ಗಂಟೆಗಳ ಬಳಿಕ ರಕ್ತಸಿಕ್ತವಾಗಿ ಜೀವಂತ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಅಚ್ಚರಿಯಾಗಿದೆ.

    ಬೈರುತ್​ ಬಂದರಿನ ಕಾರ್ಮಿಕ ಅಮಿನ್​ ಅಲ್​ ಜಹೇದ್​ ಬದುಕುಳಿದಾತ. ಸ್ಫೋಟದಲ್ಲಿ ಕಾಣೆಯಾಗಿರುವ ವ್ಯಕ್ತಿಗಳ ಪತ್ತೆಗಾಗಿ ಸೃಷ್ಟಿಸಿರುವ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಜಹೇದ್​ ಫೋಟೋವನ್ನು ಪೋಸ್ಟ್​ ಮಾಡಲಾಗಿದ್ದು, ಘಟನೆ ನಡೆದ 30 ಗಂಟೆಗಳ ಬಳಿಕ ಮೆಡಿಟರೇನಿಯನ್ ಸಮುದ್ರದಲ್ಲಿ ಜಹೇದ್​ ಜೀವಂತವಾಗಿ ಪತ್ತೆಯಾಗಿದ್ದಾರೆ. ಹಡಗಿನ ಡೆಕ್​ನಲ್ಲಿ ರಕ್ತಸಿಕ್ತವಾಗಿ ಜಹೇದ್​ ಬಿದ್ದಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.

    ಇದನ್ನು ಓದಿ: ಗೋಲ್ಡ್ ಲೋನ್ ಮಳಿಗೆಯಲ್ಲಿ ಕಳ್ಳತನಕ್ಕೆ ರಾತ್ರೋರಾತ್ರಿ ಎಂಟ್ರಿ, ಕೊನೇ ಕ್ಷಣದಲ್ಲಿ ಕೈಕೊಟ್ಟ ಪ್ಲ್ಯಾನ್‌

    ರಕ್ಷಣಾ ತಂಡ ಜಹೇದ್​ರನ್ನು ರಕ್ಷಿಸಿದ ಬೆನ್ನಲ್ಲೆ ಬೈರುತ್​ನಲ್ಲಿರುವ ರಫಿಕ್​ ಹರಿರಿ ಯೂನಿವರ್ಸಿಟಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಜಹೇದ್​ ಅವರ ಸ್ಥಿತಿ ಹಾಗೂ ಹೇಗೆ ಬದುಕುಳಿದರು? ಅದಕ್ಕಾಗಿ ಅವರು ಪಟ್ಟಂತಹ ಪಾಡೇನು ಎಂಬುದು ಸದ್ಯದ ಮಟ್ಟಿಗೆ ತಿಳಿದುಬಂದಿಲ್ಲ.

    ಸ್ಫೋಟದ ಬೆನ್ನಲ್ಲೇ ಅದರಿಂದ ಕಾಣೆಯಾದವರ ಪತ್ತೆಗಾಗಿ ಇನ್​ಸ್ಟಾಗ್ರಾಂ ಪೇಜ್​ ಅನ್ನು ಬೈರುತ್​ ಅಧಿಕಾರಿಗಳು ತೆರೆದಿದ್ದಾರೆ. ಇದರ ಮೂಲಕ ತಿಳಿಯುವುದೇನೆಂದರೆ ಸುಮಾರು 100ಕ್ಕೂ ಹೆಚ್ಚು ಜನರು ತಮ್ಮ ಕುಟುಂಬಗಳಿಗೆ ತಿಳಿಯದೇ ನಾಪತ್ತೆಯಾಗಿದ್ದಾರೆ. ಓರ್ವ ಹುಡುಗಿ ಸ್ಫೋಟ ಸಂಭವಿಸಿದ 24 ಗಂಟೆಗಳ ಬಳಿಕ ಜೀವಂತವಾಗಿ ಪತ್ತೆಯಾಗಿದ್ದಾಳೆ. ಅವಶೇಷಗಳಡಿ ಸಿಲುಕಿ ಜೀವನ್ಮರಣ ಸ್ಥಿತಿಯಲ್ಲಿದ್ದ ಆಕೆಯನ್ನು ರಕ್ಷಣಾ ತಂಡ ಕಾಪಾಡಿದೆ.

    ಘಟನೆ ಹಿನ್ನೆಲೆ ಏನು?
    ಬೈರುತ್​ ನಗರದ ಬಂದರಿನಲ್ಲಿ ದಾಸ್ತಾನು ಮಾಡಲಾಗಿದ್ದ 2700 ಟನ್​ ಅಮೊನಿಯಂ ನೈಟ್ರೇಟ್​ ಬ್ಲ್ಯಾಸ್ಟ್​ ಆಗಿ ಅವಘಡ ಸಂಭವಿಸಿದೆ. ಭೀಕರ ತೀವ್ರತೆ ಎಷ್ಟಿತ್ತೆಂದರೆ ಬೈರುತ್​ನಿಂದ 240 ಕಿ.ಮೀ. ದೂರದ ದ್ವೀಪದಲ್ಲೂ ಸ್ಫೋಟದ ಸದ್ದು ಕೇಳಿಸಿದೆ. ಸುಮಾರು 135 ಮಂದಿ ಸಾವಿಗೀಡಾಗಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇನ್ನು ಕೆಲವರು ಅವಶೇಷಗಳಡಿ ಸಿಲುಕಿ ನಾಪತ್ತೆಯಾಗಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ.

    ಇದನ್ನು ಓದಿ: ಪುಟ್ಟ ಮಗಳಿಗೆ ಅಪರೂಪದ ಕಾಯಿಲೆ; 1,100 ಕಿ.ಮೀ.ದೂರ ಬರಿಗಾಲಿನಲ್ಲಿ ನಡೆದ ಅಪ್ಪ, ನಿಂತಿಲ್ಲ ಇನ್ನೂ ಹೋರಾಟ

    ಸ್ಫೋಟ ಸಂಭವಿಸಿದ ಸ್ಥಳದಲ್ಲಿದ್ದ ಗೋಪುರಾಕಾರದ ಕಟ್ಟಡಗಳು ನೆಲಸಮವಾಗಿವೆ. ಇವು ಕೇವಲ ಕಟ್ಟಡಗಳಾಗಿರಲಿಲ್ಲ, ಬದಲಿಗೆ ಗೋಧಿ ಸೇರಿ ವಿವಿಧ ಧಾನ್ಯಗಳ ದಾಸ್ತಾನು ಗೋದಾಮುಗಳಾಗಿದ್ದವು. 1.20 ಲಕ್ಷ ಟನ್​ ದಾಸ್ತಾಮು ಸಾಮರ್ಥ್ಯ ಹೊಂದಿದ್ದವು. ಆದರೆ, ಸ್ಫೋಟದ ಸಮಯದಲ್ಲಿ ಅಲ್ಲಿ ಹೆಚ್ಚು ದಾಸ್ತಾನಿರಲಿಲ್ಲ ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ಬೈರುತ್​ ಭಯಾನಕ ಸ್ಫೋಟಕ್ಕೆ ಕುಸಿದದ್ದು ಬರೀ ಕಟ್ಟಡಗಳಲ್ಲ…, ಇಡೀ ದೇಶದ ಆಹಾರ ಭದ್ರತೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts