More

    ಕಲುಷಿತ ನೀರು ಕುಡಿದು ನಾಗಸಮುದ್ರ ಗ್ರಾಮಸ್ಥರು ಅಸ್ವಸ್ಥ

    ಮೊಳಕಾಲ್ಮೂರು: ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಕಳೆದೆರಡು ದಿನದಲ್ಲಿ 56 ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಗ್ರಾಮದ ಕೆಲ ವಾರ್ಡ್​ಗಳಲ್ಲಿ ಚರಂಡಿ ಪಕ್ಕದಲ್ಲೇ ಕುಡಿಯುವ ನೀರಿನ ಪೈಪ್​ಲೈನ್ ಹಾದು ಹೋಗಿದ್ದು, ಗೇಟ್ ವಾಲ್ವ್ ಸೋರಿಕೆಯಿಂದ ಕೊಳಚೆ ನೀರು ಮಿಶ್ರಣಗೊಂಡಿದೆ. ಇಲ್ಲಿನ ಬಸವನಬಾವಿ, ಮಾರಮ್ಮನ ಗುಡಿ ಊರಿಗೆ ಹೊಂದಿಕೊಂಡಿರುವ ಕೆರೆ ಹಿಂಭಾಗದ ಕೆಲ ನಿವಾಸಿಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಬುಧವಾರ 33 ಜನ, ಗುರುವಾರ 23 ವಾಂತಿಭೇದಿ ಪ್ರಕರಣ ಪತ್ತೆಯಾಗಿವೆ.

    ಕಳೆದೆರಡು ದಿನಗಳಲ್ಲಿ ಅಸ್ವಸ್ಥರ ಪೈಕಿ ಆರು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್​ಗೆ ಕಳುಹಿಸಲಾಗಿದೆ. ಉಳಿದವರು ನಾಗಸಮುದ್ರ ಹಾಗೂ ರಾಂಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿ ಸಾಮೂಹಿಕ ಆರೋಗ್ಯ ತಪಾಸಣೆ ಕೈಗೊಂಡಿದ್ದಾರೆ.

    ಕಲುಷಿತ ನೀರು ಕುಡಿದು ನಾಗಸಮುದ್ರ ಗ್ರಾಮಸ್ಥರು ಅಸ್ವಸ್ಥ

    ಜೆಜೆಎಂ ಕುಡಿಯುವ ನೀರಿನ ಕಾಮಗಾರಿ ಪೈಪ್​ಲೈನ್ ಅಳವಡಿಸುವ ವೇಳೆ ಹಳೆಯ ಪೈಪ್​ಗಳಿಗೆ ಹಾನಿಯಾಗಿದ್ದರಿಂದ ಈ ಘಟನೆ ಸಂಭವಿಸಿರುವ ಶಂಕೆ ಇದೆ. ಪರೀಕ್ಷೆಗೆ ಕಳಿಸಿದ ನೀರು ಮಾದರಿಯಲ್ಲಿ ಕಲುಷಿತ ಎಂದು ವರದಿ ಬಂದಿರುವ ಕಾರಣ ಟ್ಯಾಂಕರ್ ಮತ್ತು ನೀರಿನ ತೊಟ್ಟಿ, ಚರಂಡಿ ಸ್ವಚ್ಛತೆ ಹಾಗೂ ಪ್ರತಿ ಮನೆಗಳಲ್ಲಿ ಕುದಿಸಿ ಆರಿಸಿದ ನೀರು ಕುಡಿಯಲು ಜಾಗೃತಿ ಮೂಡಿಸಲಾಗಿದೆ.

    ಗ್ರಾಮಕ್ಕೆ ಶಾಸಕ ಎನ್.ವೈ. ಗೋಪಾಲಕೃಷ್ಣ ಭೇಟಿ ನೀಡಿ, ಗ್ರಾಮಸ್ಥರ ಯೋಗ ಕ್ಷೇಮ ವಿಚಾರಿಸಿದರು. 10 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆಯಿದೆ. ಮನೆಗಳಿಗೆ ಸಂಪರ್ಕ ಇರುವ ಕುಡಿಯುವ ನೀರಿನ ಪೈಪ್​ಲೈನ್ ಬದಲಾಯಿಸಿ, ಚರಂಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಡಿಎಚ್​ಒ ಡಾ. ಆರ್ ರಂಗನಾಥ್ ಸ್ಥಳಕ್ಕೆ ಭೇಟಿ ನೀಡಿದ್ದರು.

    ಗ್ರಾಮದಲ್ಲಿ 1620 ಮನೆಗಳಿದ್ದು, 7500 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯಕ್ಕೆ ಒತ್ತು ನೀಡಲಾಗಿದೆ. ಆರೋಗ್ಯ ಸುಧಾರಣೆಗೆ ಗ್ರಾಮಸ್ಥರಿಗೆ ಮಾತ್ರೆ ಹಾಗೂ ಸೂಕ್ತ ಚಿಕಿತ್ಸಾ ಕ್ರಮ ಕೈಗೊಳ್ಳಲಾಗಿದೆ.

    ಡಾ.ಮಧುಕುಮಾರ್, ತಾಲೂಕು ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts