More

    ಕಾಯಂ ಸಿಬ್ಬಂದಿ ಬಡ್ತಿಗೆ ರಾಜಕೀಯ ; ವಿವಿ ಸಿಂಡಿಕೇಟ್ ಸಭೆಯಲ್ಲಿ ಆತುರದ ನಿರ್ಧಾರ

    ತುಮಕೂರು: ತುಮಕೂರು ವಿವಿ ಕಾಯಂ ಬೋಧಕೇತರ ಸಿಬ್ಬಂದಿಗೆ ಪದೋನ್ನತಿ ನೀಡಲು ಜು.17ರ ಸಿಂಡಿಕೇಟ್ ಸಭೆಯಲ್ಲಿ ತೆಗೆದುಕೊಂಡಿರುವ ತೀರ್ಮಾನ ವಿವಿ ಆವರಣದಲ್ಲಿ ವಿವಾದ ಎಬ್ಬಿಸಿದೆ.

    ನೇಮಕಾತಿ ವರದಿ ಅನುಸಾರವಾಗಿ ಪದೋನ್ನತಿ ನೀಡಲು ಒಪ್ಪಿಗೆ ಸೂಚಿಸಿದ ಕೂಡಲೇ, ಅವಕಾಶ ವಂಚಿತರು ಕೋರ್ಟ್ ನಲ್ಲಿರುವ ವಿಚಾರ ಮುಂದಿಟ್ಟುಕೊಂಡು ಬಡ್ತಿ ತೀರ್ಮಾನ ನಿಯಮಬಾಹಿರ ಎಂದು ತಗಾದೆ ತೆಗೆದಿದ್ದಾರೆ.

    ವಿವಿಯಲ್ಲಿ 18 ಸಿಬ್ಬಂದಿಗೆ ಪದೋನ್ನತಿ ನೀಡಲು ತಯಾರಿ ನಡೆದಿತ್ತು, ವಿವಿಧ ಕಾರಣಕ್ಕೆ ವಿವಿ ತಯಾರಿಸಿರುವ ಬಡ್ತಿ ಪಟ್ಟಿಯಲ್ಲಿ ಹೆಸರಿಲ್ಲದ 25ಕ್ಕೂ ಹೆಚ್ಚು ಜನರು ಕಾನೂನು ಮೀರಿ ಬಡ್ತಿ ನೀಡಲಾಗುತ್ತಿದೆ ಎಂದು ದೂರಿ ಉನ್ನತ ಶಿಕ್ಷಣ ಇಲಾಖೆ, ಸಿಎಂ ಕಚೇರಿಗೂ ದೂರು ನೀಡಿದ್ದಾರೆ.

    ಹಿಂದಿನ ಸಿಂಡಿಕೇಟ್ ಸಭೆ ತೀರ್ಮಾನ ತಿರಸ್ಕಾರ: ಕೆಲ ವರ್ಷಗಳ ಹಿಂದೆಯೇ ಸಿಂಡಿಕೇಟ್ ಸದಸ್ಯರ ಸಭೆಯಲ್ಲಿ ಬಡ್ತಿ ವಿಷಯ ಪ್ರಸ್ತಾಪವಾಗಿದ್ದು, ಸಿಬ್ಬಂದಿಗೆ ಕೆಪಿಎಸ್‌ಸಿ ಮೂಲಕ ಪರೀಕ್ಷೆ ನಡೆಸಿ ಪದೋನ್ನತಿ ನೀಡಬೇಕು ಎಂದು ನಡಾವಳಿಯಾಗಿದೆ ಎನ್ನಲಾಗಿದೆ. ಅದನ್ನು ಪರಿಗಣಿಸದೆ ವಿವಿ ಮಟ್ಟದಲ್ಲಿಯೇ ಪರೀಕ್ಷೆ ನಡೆಸಲಾಗಿದೆ ಎಂಬುದು ಕೆಲವು ಅಭ್ಯರ್ಥಿಗಳ ದೂರು. ಸಿ ಆ್ಯಂಡ್ ಆರ್ ಪರಿನಿಯಮಗಳ ಪಾಲನೆಯಾಗಿಲ್ಲ, ಪ್ರಕರಣ ನ್ಯಾಯಾಲಯದಲ್ಲಿದೆ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸದೆ ಬಡ್ತಿ ನೀಡುವುದು ತಪ್ಪು ಎಂದು ವಿವಿಯ ಕೆಲ ಸಿಬ್ಬಂದಿ ವಾದವಾಗಿದ್ದು, ಸಿಂಡಿಕೇಟ್ ಸದಸ್ಯರು ಆತುರದ ನಿರ್ಧಾರ ವಿವಿಯಲ್ಲಿ ಗೊಂದಲಕ್ಕೆ ಕಾರಣವಾಗಿದೆ.

    ಏನಿದು ‘ಬಡ್ತಿ’ವಿವಾದ?: ವಿವಿ ಕಾಯಂ ಸಿಬ್ಬಂದಿಗೆ ಬಡ್ತಿ ನೀಡಲು ಜು.17ರ ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಪಟ್ಟಿಯಲ್ಲಿ ಹೆಸರಿಲ್ಲದ ಹೇಮಾವತಿ, ಪಿ.ಬಸವರಾಜು, ದಿವಿಜಾ, ಶಶಿ ಹಾಗೂ ಸಂಚಿತ ವೇತನ ಸಿಬ್ಬಂದಿ, ನಿಯಮಬಾಹಿರವಾಗಿ ಬಡ್ತಿ ನೀಡಲಾಗುತ್ತಿದೆ.
    ಈ ಬಗ್ಗೆ ಕೋರ್ಟ್‌ನಲ್ಲಿ ಪ್ರಕರಣವಿದೆ ಎಂಬುದನ್ನು ಸಿಂಡಿಕೇಟ್ ಸದಸ್ಯರ ಗಮನಕ್ಕೆ ತಂದಿರುವ ಹಿನ್ನೆಲೆಯಲ್ಲಿ ಮುಂದಿನ
    ಎಡವಟ್ಟುಗಳ ಬಗ್ಗೆ ಜಾಗೃತರಾಗಿರುವ ವಿವಿ ಆಡಳಿತ ಬಡ್ತಿ ಆದೇಶಕ್ಕೆ ತಡೆ ನೀಡಿದೆ.

    ಲಿಖಿತ ಮನವಿ ಸಲ್ಲಿಕೆ: ಪ್ರಕರಣ ನ್ಯಾಯಾಲಯದಲ್ಲಿರುವುದನ್ನು ಮುಚ್ಚಿಟ್ಟು ಜು.17ರ ಸಭೆಯಲ್ಲಿ ನಮ್ಮಿಂದ ಬಡ್ತಿಗೆ ಒಪ್ಪಿಗೆ ಪಡೆಯಲಾಗಿದೆ ಎಂದು ಸಹಿ ಮಾಡಿರುವ ಸಿಂಡಿಕೇಟ್ ಸದಸ್ಯರೇ ಹೊಸ ವರಸೆ ತೆಗೆದಿದ್ದಾರೆ. ಸಿಂಡಿಕೇಟ್ ಸಭೆಯಲ್ಲಿ ಮಾಹಿತಿ ಮುಚ್ಚಿಟ್ಟು ಒಪ್ಪಿಗೆ ಪಡೆದಿರುವುದು ಕಾನೂನುಬಾಹಿರವಾಗಿದ್ದು, ಈಗಿರುವ ಗೊಂದಲಗಳ ಬಗ್ಗೆ ಚರ್ಚಿಸಿ ಬಗೆಹರಿಸಲು ಕೂಡಲೇ ಮತ್ತೊಂದು ಸಭೆ ಕರೆದು ವಿಷಯ ಮಂಡಿಸಬೇಕು ಎಂದು ಕೋರಿ ವಿವಿಗೆ ಮಂಗಳವಾರ ಮೂವರು ಸಿಂಡಿಕೇಟ್ ಸದಸ್ಯರು ಲಿಖಿತವಾಗಿ ಮನವಿ ಸಲ್ಲಿಸಿದ್ದಾರೆ.

    ವಿವಿ ಶೈಕ್ಷಣಿಕ ಚಟುವಟಿಕೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅರ್ಹರಿಗೆ ಪದೋನ್ನತಿ ನೀಡಲು ವಿವಿ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಬಗ್ಗೆ ಆಕ್ಷೇಪಣೆಗಳಿದ್ದರೆ ಪರಿಶೀಲಿಸಿ ಕಾನೂನು ತಜ್ಞರ ಅಭಿಪ್ರಾಯ ಪಡೆದು, ವಿವಿ ಕಾಯ್ದೆ ಅನ್ವಯ ಕ್ರಮಕೈಗೊಳ್ಳಲಾಗುವುದು.
    ವೈ.ಎಸ್.ಸಿದ್ದೇಗೌಡ ಕುಲಪತಿ ವಿವಿ

    ಎಲ್ಲರಿಗೂ ಅನುಕೂಲವಾಗಲಿ ಎಂದು ಒಪ್ಪಿಗೆ ಸೂಚಿಸಿದ್ದೇವೆ. ಆದರೆ, ಕೆಲವು ಲೋಪದ ಬಗ್ಗೆ ಸಭೆಯ ನಂತರ ದೂರು ಬಂದಿವೆ. ಹಾಗಾಗಿ ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಡಿಪಿಎಆರ್, ರಾಜ್ಯ ಮೀಸಲಾತಿ ಪ್ರಕೋಷ್ಟದ ಅನುಮತಿ ಪಡೆದು ಸಿಂಡಿಕೇಟ್ ಸಭೆಯಲ್ಲಿ ಮಂಡಿಸಲು ಕೋರಿ, ಅಲ್ಲಿಯವರೆಗೂ ಬಡ್ತಿ ಆದೇಶಕ್ಕೆ ತಡೆ ನೀಡಬೇಕು. ನಮ್ಮ ಮನವಿ ಮೀರಿ ಆದೇಶ ಜಾರಿಯಾದರೆ ಭವಿಷ್ಯದ ಕಾನೂನು ಕ್ರಮಗಳಿಗೆ ಆದೇಶಿಸಿದವರೇ ಹೊಣೆ ಎಂಬುದನ್ನು ಲಿಖಿತವಾಗಿ ತಿಳಿಸಿದ್ದೇವೆ.
    ಮೂವರು ಸಿಂಡಿಕೇಟ್ ಸದಸ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts